ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಸಾಂಸ್ಕೃತಿಕ ನೀತಿ ಜಾರಿಯಾಗಲಿ

Last Updated 30 ಜೂನ್ 2013, 19:59 IST
ಅಕ್ಷರ ಗಾತ್ರ

ಸಾಂಸ್ಕೃತಿಕ ನೀತಿ ರೂಪಿಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೇಳಿಕೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಅವುಗಳಲ್ಲಿ ಪ್ರಮುಖವಾದುದು `ಸಾಂಸ್ಕೃತಿಕ ನೀತಿಯ ಕೊರತೆ'.

1995 ರಿಂದ 2000ನೇ ಇಸವಿಯವರೆಗೂ ಸಂಸ್ಕೃತಿ ಇಲಾಖೆಯಲ್ಲಿ ನಾನು ನಿರ್ದೇಶಕನಾಗಿದ್ದಾಗ  ಸಾಂಸ್ಕೃತಿಕ ನೀತಿಯ ಅವಶ್ಯಕತೆಯ ಪರಿಕಲ್ಪನೆ ಮೂಡಿತ್ತು. 1998-99 ರ ಅವಧಿಯಲ್ಲಿ ಅಂದಿನ ಅಕಾಡೆಮಿಗಳ ಅಧ್ಯಕ್ಷರುಗಳಾದ ಕೆ.ಮರುಳಸಿದ್ದಪ್ಪ. ಶಾಂತರಸ, ಎಚ್.ಜೆ.ಲಕ್ಕಪ್ಪಗೌಡ, ಸಿ.ಚಂದ್ರಶೇಖರ್ ಹಾಗೂ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಕಾ.ತ.ಚಿಕ್ಕಣ್ಣ ಅವರನ್ನು ಸೇರಿಸಿಕೊಂಡು  ಒಂದು ವಾರ ಸುದೀರ್ಘ ಚರ್ಚೆಯ ನಂತರ, 80 ಪುಟಗಳ  ಸಮಗ್ರ `ಸಾಂಸ್ಕೃತಿಕ ನೀತಿ'ಯ ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ  ಅಂದಿನ ಸರ್ಕಾರ  ಅನುಮೋದನೆ ನೀಡಲಿಲ್ಲ.

ನಂತರ, 2012ರ ಜೂನ್‌ನಲ್ಲಿ ಸಾಂಸ್ಕೃತಿಕ ನೀತಿಯ ಕರಡು ಪರಿಶೀಲನಾ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ  ಸಮಿತಿಯು ಇಲ್ಲಿಯವರೆಗೂ ಒಮ್ಮೆಯೂ ಸಭೆ ಸೇರಿರುವುದಿಲ್ಲ. ಈ ಮಧ್ಯೆ ಸರ್ಕಾರದ ಮತ್ತೊಂದು ಆದೇಶದಲ್ಲಿ `ಸಾಂಸ್ಕೃತಿಕ ನೀತಿ ಕರಡು ಪರಿಶೀಲನಾ ಸಮಿತಿ' ಎಂಬ ಆದೇಶವನ್ನು ಮಾರ್ಪಡಿಸಿ, `ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ' ಎಂಬುದಾಗಿ ಆದೇಶ ಹೊರಡಿಸಲಾಗಿದೆ. ಇದು ನಿಜಕ್ಕೂ ಆಶ್ಚರ್ಯಕರವಾದುದು.

ಈಗಾಗಲೇ ಸಮಗ್ರವಾದ ಕರಡು ನೀತಿ ಇಲಾಖೆಯಲ್ಲಿ ಲಭ್ಯವಿರುವುದರಿಂದ ಅದನ್ನೇ ಪುನರ್‌ಪರಿಶೀಲಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸುವುದು ಸೂಕ್ತವೆಂದು ನನ್ನ ಅಭಿಪ್ರಾಯ. ಅಗತ್ಯವಿದ್ದಲ್ಲಿ ನೀತಿಯ ರಚನೆಯಲ್ಲಿ ಭಾಗಿಗಳಾಗಿದ್ದ ಅಕಾಡೆಮಿಗಳ ಹಿಂದಿನ ಅಧ್ಯಕ್ಷರುಗಳ ಸಲಹೆ ಮತ್ತು ಮಾರ್ಗದರ್ಶನಗಳನ್ನು ಪಡೆದುಕೊಳ್ಳುವುದು ಸೂಕ್ತ. ಹೊಸದಾಗಿ ಮತ್ತೆ ನೀತಿ ನಿರೂಪಿಸುವ ಅವಶ್ಯಕತೆ ಉದ್ಭವಿಸುವುದಿಲ್ಲ.

ಹೀಗಾಗಿ, `ಸಾಂಸ್ಕೃತಿಕ ಕರಡು ಪರಿಶಿಲನಾ ಸಮಿತಿ'ವ್ಯಾಪ್ತಿಯನ್ನು ವಿಸ್ತರಿಸಿ, ಸದರಿ ಸಮಿತಿಗೆ ಹಿರಿಯ ತಜ್ಞರು ಹಾಗೂ ಗಣ್ಯರ ಹೆಸರುಗಳನ್ನು ಸೇರ್ಪಡೆಮಾಡಿ ಸಮಿತಿಯನ್ನು ಪುನರ್‌ರಚಿಸಿ, ಆದಷ್ಟು ಶೀಘ್ರವಾಗಿ `ಸಮಗ್ರ ಸಾಂಸ್ಕೃತಿಕ ನೀತಿ' ಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT