ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಸರ್ಕಾರವೇ ಹೊಣೆ

Last Updated 18 ಜೂನ್ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ವ್ಯಾಪ್ತಿಯಲ್ಲಿರುವ ಅಕಾಡೆಮಿಗಳ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ರಾಜೀನಾಮೆ ಕೇಳಿದ್ದು, ಇದರಿಂದಾಗಿ ಸಾಂಸ್ಕೃತಿಕ ವಲಯದಲ್ಲಿ ಆತಂಕ ಹಾಗೂ ಅಸಮಾಧಾನಗಳಿಗೆ ಕಾರಣವಾಗಿದೆ.

ಇಂತಹ ಪರಿಸ್ಥಿತಿಗೆ ಈ ಹಿಂದಿನ ಸರ್ಕಾರವೇ ನೇರವಾಗಿ ಕಾರಣ. ಅದಕ್ಕಿಂತ ಮುಂಚೆ ಸಾಂಸ್ಕೃತಿಕ ವಲಯದ ಪ್ರಾಧಿಕಾರ ಗಳಿಗಾಗಲೀ, ಅಕಾಡೆಮಿಗಳಿಗಾಗಲೀ ಹಿಂದಿನ ಸರ್ಕಾರಗಳು ಆಯಾಕ್ಷೇತ್ರದ ಗಣ್ಯರನ್ನು ಜಾತ್ಯತೀತ ನೆಲೆಯಲ್ಲಿ, ಪಕ್ಷಾತೀತ ವಾಗಿ ಗುರುತಿಸಿ, ಪ್ರತಿಭಾನ್ವಿತರನ್ನು ನೇಮಿಸುವ ಕ್ರಮವನ್ನು ಅನುಸರಿಸುತ್ತಿದ್ದುದು ಒಂದು ಸಂಪ್ರದಾಯವಾಗಿತ್ತು. ಹೀಗೆ ಮಾಡುವಾಗ ಆಯಾ ಇಲಾಖೆಯ ಮುಖ್ಯಸ್ಥರು ಹಾಗೂ ಸಾಂಸ್ಕೃತಿಕ ವಲಯದ ಗಣ್ಯರ ಸಲಹೆಗಳನ್ನು ಪಡೆದು ಕೊಳ್ಳುತ್ತಿದ್ದವು.

ಆದರೆ ಬಾಹ್ಯಶಕ್ತಿಗಳ ನಿಯಂತ್ರಣದಲ್ಲಿದ್ದ ಈ ಹಿಂದಿನ ಸರ್ಕಾರ ಯಾವ ನಿರ್ಧಾರವನ್ನೂ ಸ್ವತಂತ್ರವಾಗಿ ತೆಗೆದು ಕೊಳ್ಳಲಾಗದ ಅಸಹಾಯಕ ಸ್ಥಿತಿಗೆ ತಲುಪಿ ಸಂಘ ಪರಿವಾರದ ಹುಕುಂನಂತೆ ನಡೆದುಕೊಂಡಿದೆ. ಪ್ರಾಧಿಕಾರಗಳು, ಅಕಾಡೆಮಿಗಳ ನೇಮಕದಲ್ಲಿ ಪ್ರತಿಭಾನ್ವಿತರಿಗೆ ಮನ್ನಣೆ ನೀಡದೆ, ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಜತೆ ಗುರುತಿಸಿ ಕೊಂಡವರನ್ನೇ ನೇಮಕ ಮಾಡಿದ್ದು ತಿಳಿದಿರುವ ವಿಷಯ.

ನಿಗಮ, ಮಂಡಳಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ನೇಮಕ ಅಥವಾ ನಾಮಕರಣ ಮಾಡಬೇಕಾದರೆ ಆಡಳಿತ ಪಕ್ಷಗಳು ತಮಗೆ ಬೇಕಾದವರನ್ನು ನೇಮಿಸಿಕೊಳ್ಳು ವುದು ಸಹಜ. ಆದರೆ ಸಾಂಸ್ಕೃತಿಕ ವಲಯದ ಅಕಾಡೆಮಿ, ಪ್ರಾಧಿಕಾರಗಳ ನೇಮಕದಲ್ಲೂ ರಾಜಕೀಯ ಬೆರೆಸುವುದು ಎಷ್ಟು ಸಮಂಜಸ? ಇದನ್ನು ಒಪ್ಪಬಹುದೇ? ಇದು ಸರ್ಕಾರದ ವೈಫಲ್ಯವಲ್ಲವೇ? ಇಲ್ಲಿ ನಾವು ನಿರೀಕ್ಷಿಸುವುದು ಪಕ್ಷಾತೀತ ಹಾಗೂ ಜಾತ್ಯತೀತ ನಿಲುವುಗಳು ಮತ್ತು ನಿರ್ಧಾರಗಳನ್ನು.

ಇಂತಹ ನಿರ್ಧಾರಗಳು ಆಡಳಿತ ಕೇಂದ್ರ ವಿಧಾನಸೌಧದಲ್ಲಿ ಆಗಬೇಕು. ಚಾಮರಾಜಪೇಟೆ ಅಥವಾ ಮಲ್ಲೇಶ್ವರದಲ್ಲಿ ಅಲ್ಲ ಎಂಬುದನ್ನು ನಮ್ಮ ಹಿಂದಿನ ದೊರೆಗಳು ಮನಗಂಡಿದ್ದರೆ ಇವತ್ತು ರಾಜೀನಾಮೆ ಕೇಳುವ ಸ್ಥಿತಿ ಒದಗುತ್ತಿರಲಿಲ್ಲ. ಈಗ ಪ್ರಾಧಿಕಾರಗಳ ಮತ್ತು ಅಕಾಡೆಮಿಗಳ ಪುನರ್‌ರಚನೆಯಲ್ಲಿ ಇಂದಿನ ಸರ್ಕಾರ ಯಾವುದೇ ಅವಘಡಗಳಿಗೆ ಅವಕಾಶ ಇಲ್ಲದಂತೆ ಮುನ್ನೆಚ್ಚರಿಕೆ ವಹಿಸುವುದು ಎಂದು ಆಶಿಸಬಹುದೇ?
-ವೈ.ಕೆ. ಮುದ್ದುಕೃಷ್ಣ, ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT