ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

Last Updated 23 ಜುಲೈ 2022, 19:30 IST
ಅಕ್ಷರ ಗಾತ್ರ

ಅಂತರಾಳದಲ್ಲಿ ಮಗುವಿನ ಮುಗ್ಧತೆಯನ್ನು ಎಂದೂ ಕಳೆದುಕೊಂಡಿರದ ಜಿ. ರಾಜಶೇಖರ ನಮ್ಮ ಕಾಲದ ಸಂಕೀರ್ಣ ಸಂಕಟಗಳಿಗೆ ಕೋಪ ಮತ್ತು ಅನುಕಂಪದಿಂದ ಸ್ಪಂದಿಸುತ್ತಿದ್ದ ಮಾಗಿದ ಪ್ರಜ್ಞೆಯ ಪ್ರತೀಕವಾಗಿದ್ದರು. ಮುಗ್ಧತೆ ಅವರ ಸಹಜ ಸ್ವಭಾವವಾಗಿದ್ದರಿಂದ ತೋರುಗಾಣಿಕೆಯ ಅಪ್ರಾಮಾಣಿಕರ ಬಗ್ಗೆ, ರಾಜಕೀಯ ರಾಜೀತನದ ಲಾಭಕೋರರ ಬಗ್ಗೆ ಅವರ ಪ್ರತಿರೋಧವಿತ್ತು. ಒಳ್ಳೆಯತನ, ಬೌದ್ಧಿಕ ನಿಷ್ಠುರತೆ ಮುಖವಾಡವಾಗಿರುವ ಪ್ರಪಂಚದಲ್ಲಿ ಅವರು ಪ್ರಬುದ್ಧ ಓದನ್ನು ಅನುಭವದ ಕುಲುಮೆಯಲ್ಲಿ ಪರೀಕ್ಷಿಸಿಯೇ ಸತ್ಯವನ್ನು ನಂಬಿದವರು.

ನಂಬಿದ ಸಿದ್ಧಾಂತಕ್ಕೆ ಅವರು ಗುಲಾಮರಾದವರಲ್ಲ. ಸ್ವವಿಮರ್ಶೆಯಿಲ್ಲದೆ ಯಾವುದನ್ನೂ ಅವರು ಸಮರ್ಥಿಸಲು ಹೋದವರಲ್ಲ. ನಿರಂತರ ಬದಲಾವಣೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಲೇ ತನ್ನ ಲೋಕಗ್ರಹಿಕೆಯಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಲಿದ್ದರೂ ಜೀವದಯೆಯನ್ನು ಬಿಟ್ಟವರಲ್ಲ. ತಿರುಚಬಹುದಾದ ಸಾಕ್ಷಿ ಮತ್ತು ಹಟಮಾರಿ ತರ್ಕಗಳನ್ನು ಮೀರಿದ ಮಾನವೀಯತೆ ಅವರ ಜೀವನ ದರ್ಶನವಾಗಿತ್ತು. ಪ್ರಬುದ್ಧತೆಯ ನಡುವೆ ಮುಗ್ಧತೆಯನ್ನು ಕಾಪಿಟ್ಟುಕೊಂಡಿದ್ದ ಅವರ ಪಾರದರ್ಶಕ ಒಳಗಣ್ಣಿಗೆ ಯಾರಿಗೂ ಕಾಣದ ಸತ್ಯ ಗೋಚರಿಸುತ್ತಿತ್ತು.

ಕನ್ನಡದ ನೆಲದಲ್ಲಿ ಜೀವಹಿಂಸೆಯ ಮೀಮಾಂಸೆಯನ್ನು ಅವರಷ್ಟು ತೀವ್ರ ಪ್ರತಿಭಟನೆಯ ರಿಸ್ಕಿನಲ್ಲಿ ಕಥಿಸಿದ ಮತ್ತೊಬ್ಬನನ್ನು ನಾನು ಕಂಡಿಲ್ಲ. ಭಾರತದ ಬಹುತ್ವದ ಬೆಳಕಿನಲ್ಲಿ ಹಿಂಸೆಯ ವಿರಾಟ ವಿಕಾರಗಳ ಸ್ವರೂಪವನ್ನೂ ಅವುಗಳಿಂದ ಬಿಡುಗಡೆ ಹೊಂದಲು ಸಾಧ್ಯವಿರುವ ಮಾರ್ಗೋಪಾಯಗಳನ್ನೂ ದಣಿವಿರದ ಬದ್ಧತೆಯಿಂದ ಚರ್ಚಿಸಿದ್ದ ಅವರೊಬ್ಬ ಸೋಸಿಯಲ್ ಆಕ್ಟಿವಿಸ್ಟ್. ಜೀವಹಿಂಸೆಯ ಹಲವು ರೂಪಗಳಾದ ಕೋಮುವಾದ, ಪರಿಸರ ನಾಶ, ಪ್ರಭುತ್ವದ ಕ್ರೌರ್ಯ, ಯುದ್ಧ ಪಿಪಾಸೆ, ವಿಮರ್ಶೆಯ ವಿವೇಕವನ್ನು ಕಳೆದುಕೊಂಡ ಸಿದ್ಧಾಂತಗಳ ಹಟಮಾರಿತನ, ಆಧುನಿಕತೆಯ ವಿಕಾರಗಳನ್ನು ಸಾಹಿತ್ಯಕ ಪಠ್ಯ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ತಮ್ಮ ಖಚಿತವಾದ ನಿಲುವನ್ನು ವ್ಯಕ್ತಪಡಿಸಲು ಯಾವೊತ್ತೂ ಅವರು ಹಿಂಜರಿದವರಲ್ಲ.

ನಂಬಿದ್ದ ಮಾರ್ಕ್ಸ್‌ವಾದವನ್ನು ತಾತ್ವಿಕ ಅಮೂರ್ತ ಆಶಯದಲ್ಲಿ ಕಂದಾಚಾರಿಯಾಗಿ ಕಣ್ಮುಚ್ಚಿ ಅನುಸರಿಸದೆ ಆಳ್ವಿಕೆಯ ವಾಸ್ತವದಲ್ಲಿ ಪ್ರಕಟವಾದ ಅದರ ಹಿಂಸಾಕಾಂಡವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರು. ಗಾಂಧಿ ವಿಚಾರಧಾರೆಯತ್ತ ವಾಲುತ್ತಿದ್ದದ್ದು ಅವರಿಗೆ ಮುಜುಗರದ ಪ್ರಶ್ನೆಯಾಗಲಿಲ್ಲ. ಒಂದು ಸಮುದಾಯದ ವ್ಯಕ್ತಿ ಮಾಡಿದ ತಪ್ಪಿಗಾಗಿ ಅವನ ಜಾತಿಯನ್ನೊ ಧರ್ಮವನ್ನೊ ಅಮಾನುಷವಾಗಿ ಆಕ್ರಮಿಸುವುದನ್ನು ಖಂಡಿಸಲು ಮರೆಯಲಿಲ್ಲ. ಅಧಿಕಾರ ಹಿಡಿಯಲು ಇತಿಹಾಸವನ್ನೊ ಧರ್ಮವನ್ನೊ ತಮ್ಮ ರಾಜಕೀಯ ಸಂಘಟನೆಗೆ ಮಾತ್ರ ಉಪಯೋಗಿಸಿಕೊಳ್ಳುವ ಶಕ್ತಿಗಳ ಬಗ್ಗೆ ಎಚ್ಚರಿಸುವ ಹೊಣೆಗಾರಿಕೆಯಿಂದ ನುಣುಚಿಕೊಂಡವರಲ್ಲ. ಸಾಹಿತ್ಯ ಕೃತಿಯೊಂದರ ಜೀವನಾಡಿಯ ಮಿಡಿತವನ್ನು ಸ್ಪಷ್ಟವಾಗಿ ಆಲಿಸಬಲ್ಲ, ವ್ಯಕ್ತಿಯ ಗುಣಾವಗುಣಗಳನ್ನು ವಿಶ್ಲೇಷಿಸಬಲ್ಲ ಕನ್ನಡದ ಕೆಲವೇ ಚಿಂತಕರಲ್ಲಿ ಅವರೂ ಒಬ್ಬರು.

ರಾಜಶೇಖರ ನನಗೆ ಪರಿಚಯವಾದದ್ದು ಎಂ. ರಾಜಗೋಪಾಲ ಅವರ ಮೂಲಕ. ಅವರನ್ನು ಮೊದಲು ನಾನು ನೋಡಿದ್ದು ಉಡುಪಿಯ ಎಲ್.ಐ.ಸಿ. ಆಫೀಸಿನಲ್ಲಿ. ಉಡುಪಿಯನ್ನು ಹಾದು ಹೋಗುವಾಗ ಅವರನ್ನು ಭೇಟಿ ಮಾಡದೆ ನಾನು ಮುಂದೆ ಸಾಗುತ್ತಿರಲಿಲ್ಲ. ನಾವು ಮೂವರು ಕ್ಯಾಂಟೀನಿನಲ್ಲಿ ಕೂತು ಚಹಾ ಹೀರುತ್ತ ಸಾಹಿತ್ಯ ಸಲ್ಲಾಪ ನಡೆಸಿದ್ದು ಅದೆಷ್ಟು ಸಲವೊ. ‘ನಿಮ್ಮ ಕಥಾ ಸಂಕಲನಕ್ಕೆ ಮುನ್ನುಡಿ ಮತ್ತು ಕಾದಂಬರಿಗೆ ಬೆನ್ನುಡಿ ಬರೆದ ನಾನು ಒಬ್ಬ ಲೇಖಕನ ಬಗ್ಗೆ ಹೀಗೆ ಎರಡು ಸಲ ಬರೆಯಬಾರದೆಂಬ ನನ್ನ ನಿಯಮವನ್ನು ನಾನೇ ಮುರಿಯುವಂತಾಯ್ತು’ ಎಂದು ನಕ್ಕಿದ್ದರು.

ಸಾದಾ ಉಡಪನ್ನು ಧರಿಸುತ್ತಿದ್ದ ಅವರು ಯಾವ ಕುರ್ಚಿಯ ಮೇಲೆ ಕೂತು ‘ನೌಕರಿ’ಯನ್ನು ಆರಂಭಿಸಿದ್ದರೊ ಅದೇ ಸವೆದ ಮರದ ಕುರ್ಚಿಯಲ್ಲೆ ನಿವೃತ್ತರಾಗಿದ್ದರು! ಪದೋನ್ನತಿಯನ್ನು ನಿರಾಕರಿಸಿ, ವರ್ಗಾವಣೆಯಿಲ್ಲದೆ ಸೇವೆ ಸಲ್ಲಿಸಿದ ಅವರು ಪಡೆಯುತ್ತಿದ್ದ ಸಂಬಳಕ್ಕೆ ಸಂತೃಪ್ತರಾಗಿ ಸಂತನಂತಿದ್ದರು. ಎದುರಲ್ಲಿ ಸಿಕ್ಕವರನ್ನು ನೋಡದೇ ಮುಂದೆ ನಡೆಯುತ್ತಿದ್ದ, ಮುಖದಲ್ಲಿ ನಗುವೂ ದುಬಾರಿಯಾದ ಅವರನ್ನು ಹಲವರು ಅಹಂಕಾರಿ ಎಂದು ಅಪಾರ್ಥ ಮಾಡಿಕೊಂಡದ್ದುಂಟು. ಸಭ್ಯತೆಯನ್ನು ಅಭಿನಯಿಸಿ ಗೊತ್ತಿರದ ಅವರ ವರ್ತನೆ ಒರಟಾಗಿ ಕಂಡದ್ದುಂಟು. ಚಿಕ್ಕಮಕ್ಕಳಿಗೆ ಪ್ರಬಂಧ ಬರೆದುಕೊಟ್ಟು, ಬೀದಿಯ ನಾಯಿಗೆ ಬಿಸ್ಕತ್ ಹಂಚಲು ಮರೆಯದ ಅವರ ಸಾತ್ವಿಕತೆ, ಔಪಚಾರಿಕ ಸಮಾಜದ ಕಣ್ಣಲ್ಲಿ ವಿಲಕ್ಷಣವಾಗಿ ಕಂಡರೆ ಅಚ್ಚರಿಯಿಲ್ಲ. ಉಡುಪಿ, ಹೆಗ್ಗೋಡು, ಪುತ್ತೂರು ಕಾರ್ಯಕ್ರಮಗಳಲ್ಲಿ ಅವರೊಟ್ಟಿಗೆ ಕಳೆದ ಕ್ಷಣಗಳು ನನ್ನೊಳಗಿನ ನಕ್ಷತ್ರಗಳಾಗಿ ಮಿನುಗುತ್ತಿವೆ.

ಗೋಮಾಂಸದ ಕುರಿತಾದ ಮತೀಯ ಗಲಾಟೆಯ ಸಂದರ್ಭದಲ್ಲಿ ಆಹಾರ ಪದ್ಧತಿ ಮತ್ತು ಗೋವಧೆಯ ವಾದವಿವಾದ ನಡೆಯುತ್ತಿದ್ದಾಗ ರಾಜಶೇಖರ ತಮ್ಮ ನಿಲುವನ್ನು ಪ್ರಕಟಿಸಬೇಕೆಂದು ಅವರನ್ನು ಸಂದರ್ಶಿಸಿದವರು ಕೇಳಿದರು. ತನ್ನ ತಾಯಿ ಹಸುವನ್ನು ಕಟ್ಟಿ, ಅದರ ಹಾಲನ್ನು ಮಾರಿ ಬಂದ ಹಣದಿಂದ ನಮ್ಮನ್ನು ಬೆಳೆಸಿದಳೆಂದೂ ಹಸಿವಿನಿಂದ ತಮ್ಮನ್ನು ಕಾಪಾಡಿದ ಹಸುವನ್ನು ನಿರ್ದಯವಾಗಿ ಕಾಣಲು ಹೇಗೆ ಸಾಧ್ಯ ಎಂದೂ ಉತ್ತರಿಸಿದ್ದರು. ಅನ್ನಕ್ಕೆ ಕಾರಣವಾದ ಪ್ರಾಣಿಯನ್ನು ತರ್ಕದ ಶಿಲುಬೆಗೇರಿಸಲು ತನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದರು.

ರಾಜಶೇಖರ ಮುಸ್ಲಿಮರ ಪರ ಮೃದು ಧೋರಣೆಯನ್ನು ಇಟ್ಟುಕೊಂಡೇ ಬರೆಯುತ್ತಾರೆ ಎಂಬ ಮಾತಿದೆ. ಅದಕ್ಕೆ ಅವರ ಪ್ರತಿಕ್ರಿಯೆ ಹೀಗಿದೆ: ‘ಹಿಂದೂಗಳ ಹಾಗೆಯೇ ಮುಸ್ಲಿಮರ ನಡುವೆಯೂ ಕೋಮುವಾದದ ಸಂಘಟನೆಗಳು ಕೆಲಸ ಮಾಡುತ್ತಿರುವುದನ್ನು ನಾನು ಅಲ್ಲಗಳೆಯುತ್ತಿಲ್ಲ. ಅವು ಕಡಿಮೆ ಅಪಾಯಕಾರಿ ಎಂದೂ ತಿಳಿದಿಲ್ಲ. ಆದರೆ ಭಾರತದಲ್ಲಿ ಇಂದು ಹಿಂದೂ ಕೋಮವಾದವೇ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. ಸದ್ಯದಲ್ಲಿ ಅದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಆಶ್ಚರ್ಯವಿಲ್ಲ. ಆದರೆ ಮುಸ್ಲಿಮ್ ಕೋಮುವಾದ ಈ ದೇಶದಲ್ಲಿ ಎಂದೂ ಅಧಿಕಾರದ ಹತ್ತಿರ ಕೂಡ ಬರುವುದು ಸಾಧ್ಯವಿಲ್ಲ. ಅದೂ ಅಲ್ಲದೆ ಸ್ವತಃ ಒಬ್ಬ ಹಿಂದೂವಾಗಿ, ನಾನು ಹೆಚ್ಚು ಕಾಳಜಿಯಿಂದ ಯೋಚಿಸುವುದು, ನನ್ನ ಧರ್ಮದ ಅನುಯಾಯಿಗಳಲ್ಲಿ ಬೆಳೆಯುತ್ತಿರುವ ಕೋಮುವಾದದ ಬಗ್ಗೆ...’ (ಜಿ. ರಾಜಶೇಖರ, ಬಹುವಚನ ಭಾರತ; ‘ಅಭಿನವ’ ಬೆಂಗಳೂರು).

ಎರಡು-ಮೂರು ವರ್ಷ ಹಿಂದಿನ ನೆನಪು. ರಾಜಶೇಖರರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾದಾಗ ಅವರನ್ನು ಭೇಟಿ ಮಾಡಿದೆ. ರಕ್ತ ಹೆಪ್ಪುಗಟ್ಟಿದ ಮೆದುಳಿನ ಭಾಗವನ್ನು ಆಪರೇಷನ್ ಮಾಡಿದ್ದರು. ಗುರುತು ಸಿಗದಷ್ಟು ಇಳಿದು
ಹೋಗಿದ್ದ ಅವರು ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಂಡು ಮನೆಗೆ ವಾಪಸ್ಸಾಗುತ್ತೇನೆ ಎಂದು ತಮ್ಮನ್ನು
ತಾವೇ ನಂಬಿಸಿಕೊಳ್ಳುವಂತೆ ಆತ್ಮವಿಶ್ವಾಸದ ಮಾತಾಡಿದರು; ಆಸ್ಪತ್ರೆಯ ಹಾಸಿಗೆ ಮೇಲೆ ಕೂತು ಏನೊ ಭಾಷಾಂತರಿಸಲು ಯತ್ನಿಸುತ್ತಿದ್ದರು.

ಅನಾರೋಗ್ಯದಿಂದ ನರಳುತ್ತ ರಚಿಸಿದ ಗಂಗಾಧರ ಚಿತ್ತಾಲರ ಕೊನೆಯ ಪದ್ಯಗಳನ್ನು ನೆನಪಿಸಿಕೊಂಡರು. ಚಿತ್ತಾಲರು ಒಂದು ಪದ್ಯದಲ್ಲಿ ಬರೆದಿದ್ದ ‘ಜೀವಕ್ಕೆ ಬಿಗಿದ ಘಟಸರ್ಪವಾಯಿತು ದೇಹ’ ಎಂಬ ಸಾಲನ್ನು ತಮಗೆ ಅನ್ವಯಿಸಿಕೊಂಡರು. ನೋವಿನ ಅರ್ಥವೇನು ಎನ್ನುವ ಚಿತ್ತಾಲರ ಪ್ರಶ್ನೆ ಅವರನ್ನೂ ಕಾಡಿತ್ತು. ‘ಈ ಸೃಷ್ಟಿಗೆ ತಾನು ಪರಕೀಯ; ದೇವರಿಲ್ಲವಾದ್ದರಿಂದ ತನ್ನ ಬದುಕು ಮತ್ತು ನೋವು ಕೂಡ ಅರ್ಥಹೀನ’ ಎಂಬ ಅಸ್ತಿತ್ವವಾದಿ ತಾತ್ವಿಕತೆಯೇ ಚಿತ್ತಾಲರ ಕೊನೆಯ ಪದ್ಯಗಳ ಮೂಲ ಸತ್ವವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ತಾನು ಅನುಭವಿಸಿದ ಕಾಯಿಲೆಯಿಂದ ದೇಹಧರ್ಮದ ಮಹತ್ವ ಮನದಟ್ಟಾಗಿದೆ ಎಂದಿದ್ದರು.

ಅಭಿಪ್ರಾಯ ಭೇದವಿಟ್ಟುಕೊಂಡೂ ಸೌಹಾರ್ದದಿಂದ ಬದುಕುವ ಕನಸನ್ನು ಕಾಣುತ್ತಿದ್ದ ರಾಜಶೇಖರ, ಜೀವಹಿಂಸೆಯ ಬಹುರೂಪತೆಯನ್ನು ಪ್ರತಿಭಟಿಸಲು ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಜಗತ್ತಿನ ಸಾಂಸ್ಕೃತಿಕ ಸಂವಾದಗಳಲ್ಲಿ ಶೋಧಿಸಿ ಸ್ವಸ್ಥಸಮಾಜ ಕಟ್ಟಲು ಮಂಡಿಸಿದರು. ವೈಯಕ್ತಿಕ ನಂಬಿಕೆಗೆ ವಿರೋಧವೆನಿಸಿದರೂ ಪರರ ನಂಬಿಕೆಯನ್ನು ಗೌರಿವಿಸುವ ಮಾನವೀಯತೆಯ ವಿಷಯದಲ್ಲಿ ಶಿವರಾಮ ಕಾರಂತರ ಪರಂಪರೆಗೆ ಸೇರಿದವರು ಅವರು. ರಾಜಶೇಖರರ ನಿರ್ಗಮನದಿಂದ ನಮ್ಮ ಕಾಲದಲ್ಲಿ ಜಾಗ್ರತ ಪ್ರಜ್ಞೆಯ ವಿಮರ್ಶೆಯ ವಿವೇಕದ ಕೊಂಡಿಯೊಂದು ಕಳಚಿಹೋದದ್ದು ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT