ಬುಧವಾರ, ಏಪ್ರಿಲ್ 21, 2021
23 °C

ಡಿ.ಉಮಾಪತಿ ಬರಹ | ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ

ಡಿ.ಉಮಾಪತಿ Updated:

ಅಕ್ಷರ ಗಾತ್ರ : | |

ಗೋಧ್ರಾ ಬಳಿ ಸಾಬರಮತಿ ಎಕ್ಸ್‌ಪ್ರೆಸ್‌ ಬೋಗಿಗೆ ಬೆಂಕಿ ಬಿದ್ದು ಕರಸೇವಕರ ಮರಣದ ನಂತರದ ಹಿಂಸೆಯ ಕಿಚ್ಚು ಗುಜರಾತಿನ ಉದ್ದಗಲಕ್ಕೆ ಹಬ್ಬಿತ್ತು. ಬಹುಸಂಖ್ಯಾತರ ‘ತಂಟೆಗೆ ಬಂದ’ ಅಲ್ಪಸಂಖ್ಯಾತರ ಮಾರಣಹೋಮ ನಡೆದಿತ್ತು.

ದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದ್ದ ದಿನಗಳು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲನೆಯ ಪಾಠ ಹೇಳಿದ್ದರು. ಅವರ ಮನಸ್ಸು ಕದಡಿಹೋಗಿತ್ತು. ಸಂಸತ್ ಭವನದ ಕಚೇರಿಯಲ್ಲಿ ಕುಳಿತು ಬಿಳಿ ಕಾಗದ ಕೈಗೆತ್ತಿಕೊಂಡವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಬರೆಯತೊಡಗಿದರು. ಜೊತೆಗಿದ್ದವರು ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್. ವಾಜಪೇಯಿ ಆತ್ಮೀಯರಲ್ಲಿ ಒಬ್ಬರು ಸಿಂಗ್. ರಾಜೀನಾಮೆ ಬರೆಯುತ್ತಿದ್ದ ಕೈ ಹಿಡಿದು ತಡೆದರು. ದುರುಗುಟ್ಟಿದ ಪ್ರಧಾನಿಯ ಮನ ಒಲಿಸಿದರು. ಇಬ್ಬರೂ ಪ್ರಧಾನಿ ನಿವಾಸಕ್ಕೆ ತೆರಳಿದರು.

ಕೆಲ ದಿನಗಳ ನಂತರ ವಾಜಪೇಯಿ, ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ, ಸಚಿವರಾದ ಅರುಣ್ ಶೌರಿ ಹಾಗೂ ಜಸ್ವಂತ್ ಸಿಂಗ್ ಅವರನ್ನು ಹೊತ್ತಿದ್ದ ವಿಶೇಷ ವಿಮಾನ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಾಗಿ ಗೋವೆಯತ್ತ ಹಾರುತ್ತಿತ್ತು. ಮಾತು ಗುಜರಾತ್ ಹಿಂಸಾಚಾರದತ್ತ ತಿರುಗಿತ್ತು. 'ಗುಜರಾತ್ ಕಾ ಕ್ಯಾ ಕರನಾ ಹೈಯ್' (ಗುಜರಾತಿನ ವಿಷಯ ಏನು ಮಾಡೋಣ) ವಾಜಪೇಯಿ ಅವರಿಂದ ತೂರಿ ಬಂದಿತ್ತು ಪ್ರಶ್ನೆಯ ಬಾಣ. ಹಠಾತ್ತನೆ ಆವರಿಸಿದ ಮೌನವನ್ನು ಮತ್ತೆ ಅಟಲ್ ಅವರೇ ಮುರಿದರು. ‘ಗುಜರಾತಿನ ಕುರಿತು ಆಲೋಚಿಸಬೇಕಿದೆ’ (ಗುಜರಾತ್ ಕೇ ಬಾರೇ ಮೇಂ ಸೋಚನಾ ಚಾಹೀಯೇ) ಎಂದರು. ಆಡ್ವಾಣಿ ಮೇಲೆದ್ದು ವಾಶ್‌ರೂಮಿನತ್ತ ನಡೆದರು.

‘ಅವರನ್ನೊಮ್ಮೆ ಕೇಳಿ ನೋಡಿ, ಏನು ಮಾಡೋಣ ಅಂತ...’ (ಪೂಛಿಯೇ ಫಿರ್ ಕ್ಯಾ ಕರ್ನಾ ಹೈಯ್) ಎಂದು  ಅಡ್ವಾಣಿಯವರನ್ನು  ಕೇಳುವಂತೆ ಜಸ್ವಂತ್‌ಗೆ ಸೂಚನೆ ನೀಡಿದರು. ಜಸ್ವಂತ್‌ ಸಿಂಗ್ ಅವರಿಗೆ ಆಡ್ವಾಣಿ ಹೇಳಿದ್ದು ಒಂದೇ ಮಾತು- ಪಕ್ಷದಲ್ಲಿ ಕೋಲಾಹಲವೇ ಭುಗಿಲೆದ್ದುಬಿಟ್ಟೀತು (ಬವಾಲ್ ಖಡಾ ಹೋ ಜಾಯೇಗಾ).

ಮತ್ತೊಂದು ಸಂದರ್ಭ. ವಾಜಪೇಯಿ ಮತ್ತು ಅಡ್ವಾಣಿ ಇಬ್ಬರಿಗೂ ನಿಕಟವರ್ತಿಯಾಗಿದ್ದ ಪ್ರಮೋದ್‌ ಮಹಾಜನ್  ತಕ್ಷಣವೇ ಪ್ರಧಾನಿ ನಿವಾಸಕ್ಕೆ ಧಾವಿಸುವಂತೆ ಜಸ್ವಂತ್ ಅವರಿಗೆ ತುರ್ತಾಗಿ ದೂರವಾಣಿ ಕರೆ ಮಾಡಿದರು. ಪ್ರಧಾನಿ ಮತ್ತೆ ರಾಜೀನಾಮೆ ನೀಡಲು ಹೊರಟಿದ್ದಾರೆ ಸಂಭಾಳಿಸಿ ಎಂದಿದ್ದರು. ಎರಡನೆಯ ಸಲ ಮನ ಒಲಿಸಿದ್ದರು ಜಸ್ವಂತ್. 

ಖುದ್ದು ಜಸ್ವಂತ್ ಸಿಂಗ್ ಅವರು 2009ರ ಆಗಸ್ಟ್‌ ತಿಂಗಳಲ್ಲಿ ಬಹಿರಂಗಪಡಿಸಿದ್ದ ಸತ್ಯವಿದು. ರಾಜಧರ್ಮ ಪಾಲಿಸಲಿಲ್ಲವೆಂದು ನರೇಂದ್ರ ಮೋದಿ ವಿರುದ್ಧ ವಾಜಪೇಯಿ ಕತ್ತಿ ಹಿರಿದಿದ್ದರು.  ಎರಡು ಬಾರಿಯೂ ಅದನ್ನು ಒರೆಗೆ ಮರಳಿಸಿ ತಮ್ಮ  ಅಂದಿನ ‘ಪ್ರಿಯಶಿಷ್ಯ’ನ ಕೊರಳು ಕಾದಿದ್ದರು ಆಡ್ವಾಣಿ. ಆದರೆ ಇಂದಿನ ವಸ್ತುಸ್ಥಿತಿಯೇ ಬೇರೆ.

ತಮ್ಮ ವಿರುದ್ಧ ಸಿಟ್ಟಿಗೆದ್ದು ರಾಜೀನಾಮೆ ನೀಡಲು ಮುಂದಾಗಿದ್ದ ವಾಜಪೇಯಿ ಅವರ ಉದಾರವಾದಿ ಮಾದರಿಯನ್ನೇ ತಬ್ಬಿಕೊಳ್ಳುವ ಮಾತನ್ನು ಪ್ರಧಾನಿಯಾದ ಹೊಸತರಲ್ಲಿ ಮೋದಿ ಆಡಿದ್ದುಂಟು.  ಶಕ್ತಿ ರಾಜಕಾರಣದ  ವಿಪರೀತ  ವಿಡಂಬನೆಗಳ ಸಾಲಿಗೆ ಸೇರುವುದೆಂದು ಅಂದು ಈ ಬೆಳವಣಿಗೆಯ ವ್ಯಾಖ್ಯಾನ ಮಾಡಲಾಗಿತ್ತು. ಆಪತ್ತಿನಲ್ಲಿ ತಮ್ಮ ತಲೆ ಕಾಯ್ದ ಆಡ್ವಾಣಿ ಅವರನ್ನು ಮೋದಿ ಇದು ಮೂಲೆಗೆ ಸರಿಸಿದ್ದಾರೆ. ಕತ್ತಿ ಹಿರಿದಿದ್ದ ವಾಜಪೇಯಿ ಅವರಿಗೆ ಭಾರತರತ್ನವನ್ನು ನೀಡಬೇಕಾಯಿತು. ಇತಿಹಾಸ ಸೃಷ್ಟಿಸಿದ ಈ ವ್ಯಂಗ್ಯ ವಾಜಪೇಯಿ ಮತ್ತು ಅಡ್ವಾಣಿ ಇಬ್ಬರ ದೊಡ್ಡತನವನ್ನೂ ಸಾರಿತ್ತು.

ಅಚ್ಚ ಹಿಂದುತ್ವದ ಬಿಗಿ ಎರಕದೊಳಗೂ ಆಗಾಗ ಮೈಕೊಡವುತ್ತಿದ್ದರು ವಾಜಪೇಯಿ. ಒಂದು ಕಾಲಕ್ಕೆ ರಾಜಕೀಯವಾಗಿ ಅಸ್ಪೃಶ್ಯ ಎನಿಸಿದ್ದ ಬಿಜೆಪಿಯತ್ತ 23ಕ್ಕೂ ಹೆಚ್ಚು ಪಕ್ಷಗಳನ್ನು ಸೆಳೆದಿದ್ದರು. ಕಾಲ ಕಾಲಕ್ಕೆ ಅವುಗಳನ್ನು ರಮಿಸಿ ಒಲಿಸಿ ಸಮ್ಮಿಶ್ರ ಸರ್ಕಾರಗಳ ಯುಗದ ಸಾಮ್ರಾಟನಂತೆ ಹೊಳೆದರು. ಪೂರ್ಣಾವಧಿ ಸರ್ಕಾರ ನೀಡಿದ ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ ಎನಿಸಿಕೊಂಡರು. ಅಬ್ಬರದ ಕಟ್ಟರ್ ಹಿಂದುತ್ವವು ಮಧ್ಯಮವರ್ಗದ ಜನಸಮುದಾಯವನ್ನು ಬಿಜೆಪಿಯಿಂದ ದೂರ ಸರಿಸುತ್ತದೆ ಎಂಬ ಸೂಕ್ಷ್ಮವನ್ನು ಅವರು ಬಲ್ಲವರಾಗಿದ್ದರು.

ಮೆದು ಹಿಂದೂವಾದದ ಮೆತ್ತೆ ಮತ್ತು ಜೇಬುಗಳನ್ನು ಝಣಝಣಿಸುವ ಉದಾರ ಬಂಡವಾಳಶಾಹಿ ವ್ಯವಸ್ಥೆಯನ್ನು ಮೆಚ್ಚುವ ಮಧ್ಯಮವರ್ಗದ ನಾಡಿಮಿಡಿತ ಅವರಿಗೆ ತಿಳಿದಿತ್ತು.  ಇಸ್ಲಾಂ ಧರ್ಮೀಯರ ಬುರುಡೆ ಟೋಪಿ ಧರಿಸಿ ಸಾಧಕ ಬಾಧಕಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವೂ ಅವರಿಗಿತ್ತು.

ಆಡ್ವಾಣಿ ಅವರ ರಾಮ ರಥಯಾತ್ರೆಯನ್ನು ಸೇರಿಕೊಳ್ಳಲು 1991ರಲ್ಲಿ ಅಯೋಧ್ಯೆಗೆ ಹೊರಟಿದ್ದ ಬಜರಂಗದಳದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಹೇಳಿದ್ದ ಮಾತು- ‘ನೆನಪಿರಲಿ, ನೀವು ಭಜರಂಗಿಗಳು ಹನುಮಂತನ ಅನುಯಾಯಿಗಳು, ನೀವು ಹೋಗುತ್ತಿರುವುದು ಅಯೋಧ್ಯೆಗೇ ವಿನಾ ಲಂಕೆಗೆ ಅಲ್ಲ’.

90ರ ಇಳಿವಯಸ್ಸಿನ ವಾಜಪೇಯಿ ದೆಹಲಿಯ ಕೃಷ್ಣಮೆನನ್ ಮಾರ್ಗದ ಆರನೆಯ ಬಂಗಲೆಯಲ್ಲಿ ಎಸ್.ಪಿ.ಜಿ. ಪಹರೆಯ ಏಕಾಂಗಿತನದಲ್ಲಿ ತೀವ್ರ ಅಸ್ವಸ್ಥರಾಗಿ ಮಲಗಿ ವರ್ಷಗಳೇ ಉರುಳಿದವು. ನೆನಪು ಅವರಿಗೆ ಕೈ ಕೊಟ್ಟಿತ್ತು. ಬಂದವರನ್ನು ಗುರುತು ಹಿಡಿಯುವ ಪರಿಸ್ಥಿತಿ ಇರಲಿಲ್ಲ. ಭಾರತರತ್ನ ಪ್ರಶಸ್ತಿ ದೊರೆತಾಗ ಸಂಭ್ರಮಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ.

ಅಭಿಮಾನಿಗಳು ಅಪ್ರತಿಮ ರಾಷ್ಟ್ರವಾದಿ, ಸಾಟಿಯಿಲ್ಲದ ಸಂವಹನಕಾರ, ಶಾಂತಿಯ ಪ್ರತಿಪಾದಕ, ಸಫಲ ಪ್ರಧಾನಿ ಎಂದು ವಾಜಪೇಯಿ ಅವರನ್ನು ಕೊಂಡಾಡುತ್ತಾರೆ. ಬಿಜೆಪಿಯಂತಹ ಹಿಂದುತ್ವ ಪ್ರತಿಪಾದನೆಯ ಪಕ್ಷದಲ್ಲಿದ್ದರೂ ಮಿತ್ರಪಕ್ಷಗಳು ಅವರನ್ನು ಸೆಕ್ಯೂಲರ್ ಎಂದೇ ಭಾವಿಸಿದ್ದವು. 

ಸರಳವ್ಯಕ್ತಿಯಾಗಿದ್ದ ಅವರು ಪ್ರಧಾನಿ ಹುದ್ದೆ ಇಂದಿನ ದಿನಗಳಲ್ಲಿ ಅಂಟಿಸಿಕೊಂಡಿರುವ ಆಡಂಬರ, ಅತಿರಂಜನೆ, ದಿವ್ಯ- ಭವ್ಯತೆಯಿಂದ ದೂರ ಇದ್ದರು. ಹಿಂದು-ಮುಸ್ಲಿಂ ಭೇದ ಭಾವ ಪಾಲಿಸುತ್ತಿರಲಿಲ್ಲ. ಹೀಗಾಗಿಯೇ 'ಆದ್ಮೀ ಠೀಕ್ ಹೈ, ಮಗರ್ ಗಲತ್ ಪಾರ್ಟೀ ಮೇಂ ಹೈ’ ಎಂದಿದ್ದರು  ಸರ್ದಾರ್ ಖುಷ್ವಂತ್‌ಸಿಂಗ್. ಖುಷ್ವಂತ್ ಅವರ ಮಾತುಗಳನ್ನು ನಗುನಗುತ್ತಲೇ ನಿರಾಕರಿಸಿದ್ದರು ವಾಜಪೇಯಿ. 

ಬಾಬರಿ ಮಸೀದಿ ಕೆಡವಿದ್ದು ದುಃಖದ ಬೆಳವಣಿಗೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಮಸೀದಿ ಕೆಡವಿದ ನಕಾರಾತ್ಮಕ ವರ್ಚಸ್ಸಿನಿಂದ ತಮ್ಮ ಪಕ್ಷವನ್ನು ಬಹುತೇಕ ಯಶಸ್ವಿಯಾಗಿ ಹೊರಗೆಳೆದಿದ್ದರು. ಈ ಕೆಲಸ ಅವರ ಕೈಯಿಂದ ಮಾತ್ರವೇ ಸಾಧ್ಯವಿತ್ತು. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಘಪರಿವಾರದ  ಕಟ್ಟರ್‌ವಾದಿಗಳ  ಒತ್ತಡಕ್ಕೆ ಸೊಪ್ಪು ಹಾಕಲಿಲ್ಲ. ನಿಷ್ಠುರ ಕಟ್ಟಿಕೊಂಡಿದ್ದರು. ಮುಸಲ್ಮಾನರ ತುಷ್ಟೀಕರಣದ ಕುರಿತ ಆರೋಪಕ್ಕೆ ಅವರು ನೀಡಿದ್ದ ಸಮಜಾಯಿಷಿ-

‘ಇದರಲ್ಲಿ ಹೊಸದೇನೂ ಇಲ್ಲ... ಇಫ್ತಾರ್ ಔತಣಕೂಟಗಳು  ಮೊದಲಿನಿಂದಲೂ ನಡೆಯುತ್ತ ಬಂದಿವೆ.  ಮುಸಲ್ಮಾನರು ಈ ದೇಶದ ನಾಗರಿಕರೇ ವಿನಾ ವೋಟ್ ಬ್ಯಾಂಕ್ ಅಲ್ಲ. ಅವರು ಕೂಡ ಈ ದೇಶದದ್ದೇ ಸಂತಾನ’.

ವಾಜಪೇಯಿ ರಸಿಕತನ ಹೆಸರುವಾಸಿ. ರಸಮಯ ಬದುಕಿನ ಸುಖದ ಗಳಿಗೆಗಳು ಸೋರಿ ಹೋಗಲು ಬಿಡದೆ ಸವಿಯುತ್ತಿದ್ದ ರಸಿಕರು ಅವರದು. ತಮ್ಮ ಯೌವನದ ಗುಟ್ಟೇನು ಎಂದು ಕೇಳಿದವರಿಗೆ, ಅಂತಹ ಗುಟ್ಟುಗಳನ್ನೆಲ್ಲ ಬಿಟ್ಟು ಕೊಡಲು ಬರುವುದಿಲ್ಲ ಎಂದು ಕಣ್ಣುಮಿಟುಕಿಸಿ ನಕ್ಕವರು. ಗುಂಪಿನ ನಡುವೆಯೂ ಏಕಾಕಿತನ ಅನುಭವಿಸಿದವರು. ಬದುಕಿನುದ್ದಕ್ಕೂ ಅವಿವಾಹಿತರಾಗಿಯೇ ಉಳಿದರು.‘ಯಾಕೆ ಲಗ್ನ ಮಾಡಿಕೊಳ್ಳಲಿಲ್ಲ’ ಎಂದರೆ ಘಟನಾ ಚಕ್ರದ ಪ್ರವಾಹದಲ್ಲಿ ವಿವಾಹಕ್ಕೆ ಮುಹೂರ್ತವೇ ಸಿಗಲಿಲ್ಲ ಎಂಬ ಉತ್ತರ ನೀಡಿದ್ದರು.

‘ಅಫೇರ್‌ಗಳು (ಪ್ರೇಮ) ಇದ್ದವೇ’ ಎಂಬ ಮತ್ತೊಂದು ಪ್ರಶ್ನೆಗೆ ‘ಪ್ರೇಮ ಪ್ರಕರಣಗಳ ಚರ್ಚೆಯನ್ನು ಮಾಡಲು ಬರುವುದಿಲ್ಲ’ ಎಂದು ಗಹಗಹಿಸಿದ್ದರು. ಮಿತ್ರರಾಗಿದ್ದ ಕೌಲ್ ದಂಪತಿಗಳ ಜೊತೆಗೆ ಒಂದೇ ಮನೆಯಲ್ಲಿ ದೀರ್ಘಕಾಲ ಬದುಕಿದ್ದರು. ಶ್ರೀಮತಿ ಕೌಲ್ ಅವರ ಮಗಳು ನಮಿತಾ ಅವರನ್ನು ತಮ್ಮ ಮಗಳೆಂದು ದತ್ತು ತೆಗೆದುಕೊಂಡಿದ್ದರು. ನಮಿತಾ ಅವರ ಪತಿ ರಂಜನ್ ಭಟ್ಟಾಚಾರ್ಯರು ವಾಜಪೇಯಿ ಅಳಿಯನೆಂದು ಪ್ರಧಾನಿ ಕಚೇರಿಯಲ್ಲಿ ಸುದ್ದಿ ಮಾಡಿದ್ದ ದಿನಗಳಿದ್ದವು.

ಭಟ್ಟಂಗಿತನ ಎಂಬುದು ಗಂಭೀರ ವ್ಯಾಧಿಯ ಮುಖ್ಯ ಲಕ್ಷಣ. ರಾಜಕೀಯ ಪಕ್ಷವೊಂದರ ಆಂತರಿಕ ಜನತಂತ್ರ ಶಿಥಿಲಗೊಂಡು ಸಮಾಧಿಯಾಗುವ ನಿಚ್ಚಳ ಸೂಚನೆ. ಈ ಕಾಯಿಲೆ ಕಾಂಗ್ರೆಸ್‌ಗೆ ಮಾತ್ರ ಸೀಮಿತ ಅಲ್ಲ. ಬಿಜೆಪಿಯನ್ನು ಅಂದೂ ಕಾಡಿತ್ತು ಇಂದೂ ಬಿಡದೆ ಬಲವಾಗಿ ಬೆನ್ನು ಬಿದ್ದಿದೆ, ಕಾಡುತ್ತಿದೆ.

ವಾಜಪೇಯಿ ಪ್ರಧಾನಿಯಾಗಿದ್ದ ದಿನಗಳಲ್ಲಿ ಅವರ ವ್ಯಕ್ತಿತ್ವದ ಆರಾಧನೆಗೆ ಕೊನೆ ಮೊದಲಿರಲಿಲ್ಲ. ಅವರೊಬ್ಬ ‘ಉತ್ತಮ ಕವಿ’ ಎಂದು ಬಹುಮಂದಿಗೆ ಗೊತ್ತಾಗಬೇಕಾದರೆ ಅವರು ಪ್ರಧಾನಿಯೇ ಆಗಬೇಕಾಯಿತು. ಅವರ ಕವಿತೆಗಳು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಅನುವಾದಗೊಂಡವು. ಸುಪ್ರಸಿದ್ದ ಗಾಯಕರು ಅವುಗಳನ್ನು ಹಾಡಿದರು. ಖ್ಯಾತ ಕಲಾವಿದೆಯರು ನರ್ತಿಸಿದರು.

ವಾಜಪೇಯಿ ಕೇವಲ ‘ಮುಖವಾಡ’ ಎಂದು ಖಾಸಗಿ ಸಂಭಾಷಣೆಯಲ್ಲಿ ನಾಲಿಗೆ ಜಾರಿಸಿದ್ದರು ಸ್ವದೇಶಿ ಜಾಗರಣ ಮಂಚ್‌ನ ಗೋವಿಂದಾಚಾರ್ಯ. ಈ ಅಪರಾಧಕ್ಕೆ ವಿಧಿಸಲಾದ ಅವರ ವನವಾಸ ಈಗಲೂ ಮುಗಿದಿಲ್ಲ. ಪಕ್ಷದ ರಾಷ್ಟ್ರೀಯ ಮಂಡಳಿಯ ಸಭೆಯೊಂದರಲ್ಲಿ ಬಿಜೆಪಿಯ ಆನೆ ಬಲದ ಮೂಲವೆಂದರೆ ವಾಜಪೇಯಿ, ವಾಜಪೇಯಿ ಹಾಗೂ ವಾಜಪೇಯಿ ಎಂದು ಭಜನೆ ಮಾಡಿದ್ದವರು ಅಂದಿನ ಮಂತ್ರಿ ಮತ್ತು ಇಂದಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು. ಆದರೂ ‘ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’ ಎಂದ ಕಾಂಗ್ರೆಸ್ಸಿನ ದೇವಕಾಂತ ಬರೂವ ಭಟ್ಟಂಗಿತನದಲ್ಲಿ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ್ದರು.

‘ಭಾರತ ಪ್ರಕಾಶಿಸುತ್ತಿದೆ’ ಎಂಬ ವಾಜಪೇಯಿ ಸರ್ಕಾರದ ಪ್ರಚಾರವನ್ನು ಜನ ನಂಬಲಿಲ್ಲ. ಪರಿಣಾಮವಾಗಿ 2004ರಲ್ಲಿ ಸೋತ ಬಿಜೆಪಿಯ ಭೀಷ್ಮ ಕಾಲಕ್ರಮೇಣ ‘ಬಾಣಗಳ ಹಾಸಿಗೆ’ಗೆ ಒರಗಿದವರು ಮೇಲೇಳಲಿಲ್ಲ.

ಇನ್ನಷ್ಟು: 

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು