ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಉಳಿಸಿದ ಹಣ ಗಳಿಸಿದ ಹಣ

Last Updated 24 ಫೆಬ್ರುವರಿ 2021, 19:32 IST
ಅಕ್ಷರ ಗಾತ್ರ

‘ಎಲ್‍ಜೆಸ್ ಸ್ನ್ಯಾಕಿಸ್’ಅನ್ನು ಅನುಷ್ಕಾ ಜೈಸಿಂಗ್‌ಒಂದು ದಶಕದ ಹಿಂದೆ ಪ್ರಾರಂಭಿಸಿದರು. ಕಾರ್ಪೊರೇಟ್ ವಲಯಕ್ಕೆ ಲಘು ಆಹಾರ ಪೂರೈಕೆಯಲ್ಲಿ ಪರಿಣತಿಯೊಂದಿಗೆ, ತಿಂಡಿಗಳ ತಯಾರಿಕೆ ಮತ್ತು ಮಾರಾಟದ ಈ ಬ್ರ್ಯಾಂಡ್ ಶುರುವಾಯಿತು. ಕಾರ್ಪೊರೇಟ್‍ ವಲಯಕ್ಕೆ ಅಗತ್ಯವಿರುವ ಎಲ್ಲ ಬಗೆಯ ತಿಂಡಿಗಳನ್ನು ಪೂರೈಸಬೇಕು ಎಂಬುದು ಈ ಬ್ರ್ಯಾಂಡ್‌ನ ಬಯಕೆಯಾಗಿತ್ತು.

ತಮ್ಮ ಅನುಭವವನ್ನು ಹಂಚಿಕೊಳ್ಳುವ ಅನುಷ್ಕಾ, ‘ಮಾನವ ಸಂಪನ್ಮೂಲ ವಿಭಾಗದಲ್ಲಿ ಹತ್ತು ವರ್ಷ ಕೆಲಸ ಮಾಡಿದ ನಂತರ, ನನ್ನದೇ ಆದ ಉದ್ಯಮವೊಂದನ್ನು ಪ್ರಾರಂಭಿಸಲು ನಿರ್ಧರಿಸಿದೆ. ಸಿಂಧಿ ಮೂಲ, ತಿಂಡಿಪೋತ ಡಿಎನ್‍ಎ, ಭಾರತೀಯ ಮನಸ್ಸು ಮತ್ತು ಆತ್ಮ ಹೊಂದಿರುವ ನನಗೆ ಮನಸ್ಸಿನಲ್ಲಿ ಮೂಡಿದ ಆಲೋಚನೆಯನ್ನು ಅಡುಗೆಯ ರೂಪಕ್ಕೆ ತರುವುದು ಗೊತ್ತಿತ್ತು’ ಎಂದು ಹೇಳುತ್ತಾರೆ. 2009ರ ಸುಮಾರಿನಲ್ಲಿ ಸಿಂಧಿ ಆಹಾರ ಪದ್ಧತಿಯ ಕೆಲವು ರುಚಿಕರ ತಿಂಡಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿರಲಿಲ್ಲ.

ತಿಂಡಿಗಳ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಕೆಲಸ ನಿಭಾಯಿಸುವುದು ಎಂದು ನಿರ್ಧರಿಸಿದ ನಂತರ ಅನುಷ್ಕಾ, ‘ಸ್ನ್ಯಾಕ್ ಕಿಯೋಸ್ಕ್’ ಪರಿಕಲ್ಪನೆಯೊಂದಿಗೆ 2009ರ ಡಿಸೆಂಬರ್‌ನಲ್ಲಿ ತಮ್ಮ ಉದ್ಯಮ ಆರಂಭಿಸಿದರು. ನಾಲ್ಕರಿಂದ ಐದು ಬಗೆಯ ರೆಡಿ-ಟು-ಫ್ರೈ ತಿಂಡಿಗಳನ್ನು ಮಾರಾಟ ಮಾಡುವ ಬೀದಿಬದಿಯ ಕಿಯೋಸ್ಕ್‌ ಆರಂಭಿಸಿದ ಎಂಟು ತಿಂಗಳಲ್ಲಿ ಅವರು ತಮ್ಮ ಕಿಯೋಸ್ಕ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿದರು. ಮುನ್ನೂರು ಚದರ ಅಡಿ ಜಾಗದಲ್ಲಿ ಕೇವಲ ಮೂರು ಜನ ಉದ್ಯೋಗಿಗಳೊಂದಿಗೆ ಉದ್ಯಮ ಆರಂಭಿಸಿದ ಅನುಷ್ಕಾ, ಹೆಚ್ಚಿನ ಭರವಸೆಯೊಂದಿಗೆ 2010ರಲ್ಲಿ ಕಾರ್ಪೊರೇಟ್ ಜಗತ್ತಿಗೆ ಅಡುಗೆ ಮಾಡಿಕೊಡುವ ಕೆಲಸ ಶುರು ಮಾಡಿದರು. ‘ಮತ್ತೆ ಹಿಂದಿರುಗಿ ನೋಡುವ ಪ್ರಮೇಯ ಬಂದಿಲ್ಲ’ ಎಂದು ಅನುಷ್ಕಾ ಹೇಳುತ್ತಾರೆ.

ಅನುಷ್ಕಾ ತಾವು ಉದ್ಯಮಿಯಾಗಿ ಬದಲಾಗಿದ್ದರ ಹಿಂದೆ ಉದ್ಯೋಗಸೃಷ್ಟಿಯ ಉದ್ದೇಶ ಇರುವುದನ್ನೂ ಹೇಳುತ್ತಾರೆ. ‘ನಮ್ಮ ಗುರಿ 100ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು - ಸಮಾಜದಲ್ಲಿ ಹಿಂದಕ್ಕೆ ಉಳಿದಿರುವ ವರ್ಗಗಳಿಂದ ಜನರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ತರಬೇತಿ ನೀಡುವುದು. ಜೊತೆಗೆ, ಅಂತಹ ಸಮುದಾಯಗಳ ದುಡಿಯುವ ತಾಯಂದಿರಿಗೆ ಹೊಂದುವ ಕೆಲಸದ ಆಯ್ಕೆಗಳನ್ನು ಒದಗಿಸುವ ಉದ್ದೇಶವೂ ಇತ್ತು. 2019ರ ಡಿಸೆಂಬರ್ ವೇಳೆಗೆ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ತಿಂಡಿಗಳನ್ನು ಪೂರೈಸುವ ಉದ್ಯಮವಾಗಿ ನಮ್ಮ ಬ್ರ್ಯಾಂಡ್‌ ಬೆಳೆದು ನಿಂತಿತ್ತು’ ಎಂದು ಅನುಷ್ಕಾ ಹೇಳುತ್ತಾರೆ. 2019ರಲ್ಲಿ ಅನುಷ್ಕಾ ಅವರು ಗ್ರಾಹಕರಿಗೆ ನೇರವಾಗಿ ತಿಂಡಿಗಳನ್ನು ಪೂರೈಸಲು ಶುರು ಮಾಡಿದರು.

ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಉದ್ಯಮ ಎದುರಿಸಿದ ಸವಾಲುಗಳ ಬಗ್ಗೆಯೂ ಅವರು ಅನುಭವ ಹಂಚಿಕೊಳ್ಳುತ್ತಾರೆ. ‘ಸಾಂಕ್ರಾಮಿಕವು ಎಲ್‍ಜೆಸ್ ಸ್ನ್ಯಾಕಿಸ್ ಮೇಲೆ ತೀವ್ರ ಪರಿಣಾಮ ಬೀರಿತು. ಉದ್ಯೋಗಿಗಳೆಲ್ಲ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದ ನಂತರ ನಮ್ಮ ಕಾರ್ಪೊರೇಟ್ ಅಡುಗೆ ವ್ಯವಹಾರವು ಸ್ಥಗಿತಗೊಂಡಿತು. ಯಶಸ್ವಿ ವ್ಯಕ್ತಿಗಳು ಕೆಲಸವನ್ನು ಭಿನ್ನವಾಗಿ ಮಾಡಿ ತೋರಿಸುತ್ತಾರೆ ಎಂಬ ಮಾತಿನಂತೆ ನಾವು ನಮ್ಮ ವ್ಯವಹಾರಕ್ಕೆ ಪುನಶ್ಚೇತನ ನೀಡಲು ಮುಂದಾದೆವು. ನಾವು ಫ್ರೋಜನ್ ಆಹಾರ ವಿಭಾಗದಲ್ಲಿ ಹೊಸ ಅವಕಾಶಗಳನ್ನು ಕಂಡುಕೊಂಡೆವು. ಸಮೋಸಾ, ರೋಲ್ಸ್, ಮೊಮೊಸ್‍ನಂತಹ ಬಗೆಬಗೆಯ ಫ್ರೋಜನ್ ತಿಂಡಿಗಳನ್ನು ತಯಾರಿಸಲು ಪ್ರಾರಂಭಿಸಿದ್ದೇವೆ ಮತ್ತು ದಿನಕ್ಕೆ ಅರ್ಧ ಟನ್‌ನಷ್ಟು ಇಂತಹ ತಿಂಡಿಗಳನ್ನು ತಯಾರಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದೇವೆ. ಬೆಂಗಳೂರಿನಾದ್ಯಂತ ವಿತರಕರು ಮತ್ತು ವಿತರಣಾ ಪಾಲುದಾರರನ್ನು ಹೊಂದಿದ್ದೇವೆ. ಇದಲ್ಲದೆ, ನಾವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ತಮಿಳುನಾಡಿನಲ್ಲಿ ಪಾಲುದಾರರನ್ನು ಅರಸುತ್ತಿದ್ದೇವೆ’ ಎಂದರು.

ತಮ್ಮ ಔದ್ಯಮಿಕ ಪಯಣದಲ್ಲಿ ಪತಿಯಿಂದ ದೊರೆತ ಬೆಂಬಲಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವ ಅನುಷ್ಕಾ, ಇತರ ಉದ್ಯಮಿಗಳಿಗೆ ಸರಳವಾದ, ಆದರೆ ಜೀವನವನ್ನು ಬದಲಿಸುವ ಸಂದೇಶವನ್ನು ಹೊಂದಿದ್ದಾರೆ. ‘ಉದ್ಯಮದ ಮೊದಲ ದಿನದಿಂದಲೂ ನಿಮ್ಮ ಆದಾಯವನ್ನು ಕ್ರಮಬದ್ಧವಾಗಿ ಬಳಸುವ ಕೆಲಸ ಮಾಡಿ. ಏಕೆಂದರೆ ಉಳಿಸಿದ ಹಣ ನೀವು ಗಳಿಸಿದ ಹಣವೂ ಹೌದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT