ಶನಿವಾರ, ನವೆಂಬರ್ 28, 2020
21 °C

ತಾಳಮದ್ದಲೆಯ ‘ಸಂಯಮ’ ಸಾಮಗರು

ಜಬ್ಬಾರ್ ಸಮೊ ಸಂಪಾಜೆ Updated:

ಅಕ್ಷರ ಗಾತ್ರ : | |

ವಾಸುದೇವ ಸಾಮಗರ ಅಪ್ಪಯ್ಯ ರಾಮದಾಸ ಸಾಮಗರು ಪರಂಪರೆ ಯನ್ನು ಬಿಟ್ಟು ಈಚೆಗೆ ಬಂದವರಲ್ಲ. ಆದರೆ, ವಾಸುದೇವ ಸಾಮಗರು ಪುರಾಣವನ್ನು ತಂದು ಸಮಕಾಲೀನ ಗೊಳಿಸುವುದರಲ್ಲಿ ನಿಸ್ಸೀಮ. ಹೀಗೆ ಸಮಕಾಲೀನಗೊಳಿಸುವಾಗ ಕೆಲವೊಮ್ಮೆ ಅದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿತ್ತು, ತೀರಾ ಹಸಿಹಸಿಯಾಗಿ ಕಾಣುತ್ತಿತ್ತು. ಅದನ್ನು ಒಟ್ಟಂದದಲ್ಲಿ ಅವಲೋಕಿಸಿದಾಗ ವಾಸುದೇವ ಸಾಮಗರ ಸೃಜನಶೀಲತೆ ಅದ್ಭುತ ಅನುಭವಕ್ಕೆ ನಿಲುಕುತ್ತಿತ್ತು. ಯಕ್ಷಗಾನವನ್ನು ಧ್ಯಾನಿಸುವ ಪರಂಪರೆಯೊಂದು ಕಳಚಿದ ವಿಷಾದ ನನ್ನನ್ನು ಕಾಡುತ್ತಿದೆ.

ವಾಸುದೇವ ಸಾಮಗರ ‘ಸಂಯಮಂ’ ಸಂಚಾರಿ ಯಕ್ಷಗಾನ ತಾಳ ಮದ್ದಲೆ ತಂಡದಲ್ಲಿ ನಾನು ಒಂದೂವರೆ ವರ್ಷ ತಿರುಗಾಟ ಮಾಡಿದ್ದೆ. ಹೆಬ್ರಿ ಗಣೇಶ, ವಾಸುದೇವ ಸಾಮಗ, ವಿಟ್ಲ ಶಂಭು ಶರ್ಮ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ನಾವೆಲ್ಲ ಒಟ್ಟಿಗೆ ತಿರುಗಾಟ ಮಾಡಿದ್ದೆವು. ರಾಮದಾಸ ಸಾಮಗರ ಜೊತೆ 30ಕ್ಕೂ ಹೆಚ್ಚು ತಾಳಮದ್ದಲೆಗಳಲ್ಲಿ ಅರ್ಥ ಹೇಳಿದ್ದೆ. ನಂತರ ಸಾಮಗ ಮನೆತನದ ದೊಡ್ಡ ಕೊಂಡಿಯಾಗಿ ನನಗೆ ಸಿಕ್ಕವರು ವಾಸುದೇವ ಸಾಮಗರು.

ವಾಸುದೇವರು ಉದಾರಿ, ಲೌಕಿಕ ಸ್ವಾರ್ಥ ಇಲ್ಲದ ಮನುಷ್ಯ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತೆ ತಮಗೆ ಸಿಕ್ಕ ಪ್ರಶಸ್ತಿಯ ಮೊತ್ತವನ್ನು ಯಕ್ಷಗಾನ ಕ್ಷೇತ್ರಕ್ಕೇ ಹಿಂದಿರುಗಿಸುತ್ತಿದ್ದರು. ಅನೇಕ ಕಲಾವಿದರಿಗೆ ಆಶ್ರಯ ಕೊಟ್ಟು, ಯಕ್ಷಗಾನ ತಾಳಮದ್ದಲೆಯನ್ನು ಜನಪ್ರಿಯಗೊಳಿಸಿದವರು. ನನ್ನ, ಸಾಮಗರ ಮತ್ತು ಸಿದ್ಧಕಟ್ಟೆ ಚನ್ನಪ್ಪ ಶೆಟ್ಟರದು ತ್ರಿಕೋನಾತ್ಮಕ ಸಂಬಂಧ. ಕುಂದಾಪುರ, ಬೈಂದೂರು, ಉತ್ತರ ಕನ್ನಡ ಹೀಗೆ ತಾಳಮದ್ದಲೆ ತಂಡದ ತಿರುಗಾಟ ಮಾಡು ತ್ತಿದ್ದೆವು. ನನ್ನ ‘ವಾಲಿ’ – ಅವರ ‘ಸುಗ್ರೀವ’, ಅವರ ‘ಕೃಷ್ಣ’ –ನನ್ನ ‘ಕೌರವ’, ಅವರ ‘ಭೀಷ್ಮ’ – ನನ್ನ ‘ಕೌರವ’ ಈ ಜೋಡಿಯ ಅರ್ಥಗಾರಿಕೆ ಕೇಳಲೆಂದೇ ಕುಂದಾಪುರ, ಬೈಂದೂರು ಕಡೆ ಗಳಲ್ಲಿ ತಾಳಮದ್ದಲೆ ಮಾಡಿಸುತ್ತಿದ್ದರು.

ವಾಸುದೇವ ಸಾಮಗರು ಸೃಜನಶೀಲ ಕಲಾವಿದ. ಅರಳು ಹುರಿದಂತೆ ಮಾತು. ಅವರ ಅಪ್ಪಯ್ಯನಿಗೂ ವಿಶೇಷ ಶೈಲಿ ಇತ್ತು. ಅದರ ಮತ್ತೊಂದು ಸ್ವರೂಪ ದಲ್ಲಿ ವಾಸುದೇವ ಸಾಮಗರು ಕಾಣಿಸಿಕೊಂಡರು. ಕಾರ್ಯಕ್ರಮ ಸಂಘಟಿಸುವವರಿಗೆ ಸಾಮಗರು ಯಾವತ್ತೂ ತಲೆ
ನೋವಾದವರಲ್ಲ. ಅತಿಥಿ ಕಲಾವಿದ ರಾಗಿ ಭಾಗವಹಿಸುವ ಇವರು ಮೈಕ್‌ ಹೊಂದಿಸಲು, ವೇದಿಕೆ ಸಿದ್ಧಪಡಿಸಲು ನೆರವಾಗಿ, ಹಾಗೆಯೇ ಅರ್ಥ ಹೇಳಲು ಕುಳಿತುಕೊಳ್ಳುತ್ತಿದ್ದರು.

ದುರಾಸೆ, ಹಣದ ಆಸೆ ಅವರಲ್ಲಿ ಕಾಣಿಸಲೇ ಇಲ್ಲ. ಕಳೆದ ವರ್ಷ ಮುಂಬೈಗೆ ಹೋಗುವಾಗ ನಡೆದ ಸಣ್ಣ ಅಪಘಾತದ ನಂತರ ದೈಹಿಕವಾಗಿ ಅವರು ಕುಗ್ಗಿದರು. ಆದರೆ ಆತ್ಮವಿಶ್ವಾಸ ತಗ್ಗಿರಲಿಲ್ಲ. ಅವರ ಯೋಚನೆಯಷ್ಟೇ ಹರಿತತೆ, ಅವರ ಶರೀರಕ್ಕೂ ಇತ್ತು. ಯಾವ ಸಂದರ್ಭದಲ್ಲೂ ಬದುಕನ್ನು ಮಕ್ಕಳ ಆಟಿಕೆಯಾಗಿ ಸ್ವೀಕರಿಸಿದವರು. ಕೋವಿಡ್ ಅವರಿಗೆ ಬಾಧಿಸದಿದ್ದರೆ ಇನ್ನಷ್ಟು ಕಾಲ ಬದುಕುತ್ತಿದ್ದರು. ಅಷ್ಟು ಸುಲಭದಲ್ಲಿ ಬಿದ್ದು ಹೋಗುವ ಜೀವ ಅದಾಗಿರಲಿಲ್ಲ.

– ಲೇಖಕರು ತಾಳಮದ್ದಲೆ ಅರ್ಥಧಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು