ಬುಧವಾರ, ಮೇ 19, 2021
27 °C

ಪ್ರೊ.ಎಂ.ಎ.ಹೆಗಡೆ ದಂಟ್ಕಲ್: ತಳಸ್ಪರ್ಶಿ ಅಧ್ಯಯನಕಾರ, ಮೆಚ್ಚಿನ ಗುರು

ಕಾಶ್ಯಪ ಪರ್ಣಕುಟಿ Updated:

ಅಕ್ಷರ ಗಾತ್ರ : | |

Prajavani

ಕನ್ನಡ ನಾಡು ಕಂಡ ಬಹುಶ್ರುತ ವಿದ್ವಾಂಸರಲ್ಲಿ ಪ್ರೊ.ಎಂ.ಎ.ಹೆಗಡೆ ದಂಟ್ಕಲ್ ಒಬ್ಬರು. ಆಕರ್ಷಕ ಮಾತುಗಳಿಂದ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಚುಂಬಕ ಶಕ್ತಿ ಅವರದು. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು. ಅವರು ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಿಗೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರು ಆಗಿದ್ದವರು.

ಸಿದ್ದಾಪುರ ತಾಲ್ಲೂಕಿನ ಜೋಗಿನಮನೆ ಅವರ ಸ್ವಂತ ಊರಾಗಿದ್ದರೂ ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ಕಾರಣಕ್ಕೆ ಬೆಳೆದಿದ್ದು ಅಜ್ಜಿಮನೆ ದಂಟ್ಕಲ್‍ನಲ್ಲಿ. ಹೀಗಾಗಿ, ಅವರ ಹೆಸರಿನೊಂದಿಗೆ ಅಜ್ಜಿಯ ಊರಿನ ಹೆಸರು ಸೇರಿಕೊಂಡಿತು.

ವಿಚಿತ್ರ ಎಂದರೆ ಪ್ರಾಧ್ಯಾಪಕ ವೃತ್ತಿ ಸೇರಿದ ಸುಮಾರು ಹತ್ತು ವರ್ಷಗಳವರೆಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಪರಿಚಯವೇ ಆಗಿರಲಿಲ್ಲ. ಕಾಲೇಜಿನಲ್ಲಿ ಬೋಧನೆ ಹೊರತಾಗಿ ಉಳಿದ ಸಮಯದಲ್ಲಿ ಸ್ವ–ಅಧ್ಯಯನದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದರು. ಪರಿಣಾಮವಾಗಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಸಾಹಿತ್ಯಗಳ ತಳಸ್ಪರ್ಶಿ ಅಧ್ಯಯನ ಅವರಿಂದ ನಡೆದಿತ್ತು.

ಚಿಂತನ–ಮಂಥನದ ಮೂಲಕ ವಿದ್ವಾಂಸರ ವಲಯಕ್ಕೆ ಪದಾರ್ಪಣೆ ಮಾಡಿದ್ದರು. 70ರ ದಶಕದಲ್ಲಿ ಅವರು ಬರೆದ ಗ್ರಂಥವನ್ನು ಪ್ರಕಾಶಕರು ಮನ್ನಿಸಲಿಲ್ಲ. ‘ಭಾರತೀಯ ತತ್ವಶಾಸ್ತ್ರ ಪರಿಚಯ’ ಎಂಬ ಉದ್ಗ್ರಂಥವನ್ನು ಪ್ರಭಾಕರ ಜೋಶಿ ಅವರ ಜತೆ ಸೇರಿ ಪ್ರಕಟಿಸಿದ್ದರು. ನಂತರದ ದಿನಗಳಲ್ಲಿ ಅವರು ಬರೆದ ಎಲ್ಲ ಗ್ರಂಥಗಳು ನಿರಾಯಾಸವಾಗಿ ಪ್ರಕಟಗೊಂಡಿದ್ದು ಈಗ ಇತಿಹಾಸ.

ಭಾಷಾಶಾಸ್ತ್ರ ಬೋಧಿಸುವುದಕ್ಕಾಗಿ ‘ಅಲಂಕಾರತತ್ವ’ ಪುಸ್ತಕ ಪ್ರಕಟಿಸಿದರು. ಅದು ಶಿಕ್ಷಕರಿಗೂ ಸಹಕಾರಿ ಆಯಿತು. ಮಧುಸೂದನ ಸರಸ್ವತಿ ಅವರ ‘ಭಗವದ್ಭಕ್ತಿ ರಸಾಯನಂ’ ಎಂಬ ಕ್ಲಿಷ್ಟಕರ ಗ್ರಂಥವನ್ನು ಸರಳ ಕನ್ನಡಕ್ಕೆ ಅನುವಾದಿಸಿದ್ದು ಅವರ ಸೃಜನಶೀಲ ಪ್ರತಿಭೆಗೆ ಉದಾಹರಣೆ. ನವರಸಗಳೊಂದಿಗೆ ಹತ್ತನೇಯದಾಗಿ ಭಕ್ತಿರಸ ಸೇರುತ್ತದೆಂಬ ಅವರ ಪ್ರತಿಪಾದನೆ ಚೇತೋಹಾರಿ ಆಗಿದ್ದರ ಜತೆಗೆ ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ಎಂದು ರಂಗನಾಥ ಶರ್ಮ ಕೊಂಡಾಡಿದ್ದರು.

ಷೋಡಶ ಸಂಸ್ಕಾರಗಳ ಕುರಿತ ಅವರ ಚಿಂತನೆ, ವಿಶ್ಲೇಷಣೆಯ ‘ಹಿಂದೂ ಸಂಸ್ಕಾರಗಳು’ ಗ್ರಂಥದಲ್ಲಿ ಅಭಿವ್ಯಕ್ತವಾಗಿದೆ. ಸಂಸ್ಕಾರ ಯಾಂತ್ರಿಕವಾಗದೆ ಅರ್ಥಪೂರ್ಣವಾಗಿರಬೇಕು ಎಂಬುದನ್ನು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರತಿಪಾದಿಸಿದ್ದಾರೆ.

ವಿದ್ವಾಂಸ ಬಿ.ಕೆ.ಮೋತಿಲಾಲ ಅವರ ಗ್ರಂಥವನ್ನು ‘ಶಬ್ದ ಮತ್ತು ಜಗತ್ತು’ ಎಂದು ಕನ್ನಡಕ್ಕೆ ಅನುವಾದಿಸಿ ವಿದ್ವಾಂಸರ ಸಾಲಿಗೆ ಸೇರ್ಪಡೆಯಾಗಿದ್ದರು. ಆದಿಶಂಕರರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಗಳ ಅನುವಾದ, ವಿವರಣೆಯೊಂದಿಗೆ ‘ಪರಮಾನಂದಸುಧಾ’ ಎಂಬ ಪುಸ್ತಕ ಹೆಗಡೆಯವರನ್ನು ಅಗ್ರಪಂಕ್ತಿಗೆ ಏರಿಸಿತು.

ಕ್ಲಿಷ್ಟಕರ ವೇದಾಂತಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ವಿವರಿಸುವ ಕಲೆಯಲ್ಲಿ ಹೆಗಡೆ ಸಿದ್ಧಹಸ್ತರು. ಬಾಲ್ಯದಿಂದಲೇ ಯಕ್ಷಗಾನದ ಆಕರ್ಷಣೆ, ಸಹೋದರ ಮಾವ ದಂಟ್ಕಲ್ ಪಟೇಲರಿಂದ ಪ್ರೇರಣೆ, ಕೆರೆಮನೆ ಶಂಭು ಹೆಗಡೆ ಅವರ ಶಿಷ್ಯನಾದ ಪರಿಣಾಮ ವಿದ್ಯಾರ್ಥಿ ಆಗಿದ್ದಾಗಲೇ ರಂಗಪ್ರವೇಶಿಸಿದ್ದರು. ತಾಳಮದ್ದಲೆ ಅರ್ಥಧಾರಿಯಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರ ಜತೆಗೆ
ಯಕ್ಷಗಾನ ಕಲೆಯ ಎಲ್ಲ ಅಂಗೋಪಾಂಗಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಯಕ್ಷಕವಿಯಾಗಿ, ಕಲಾವಿದರ ಪಾಲಿಗೆ ಯಕ್ಷಗುರುವಾಗಿ ಛಾಪು ಮೂಡಿಸಿದ ಕಲಾಶಕ್ತಿಗೆ ನಮನ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು