ಆಳುವವರಿಂದಲೇ ಸಂವಿಧಾನಕ್ಕೆ ಅಪಚಾರ

7
ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಆತಂಕ

ಆಳುವವರಿಂದಲೇ ಸಂವಿಧಾನಕ್ಕೆ ಅಪಚಾರ

Published:
Updated:
ಧಾರವಾಡದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ವಿ.ಗೋಪಾಲಗೌಡ ಮಾತನಾಡಿದರು. ಮಹಾದೇವ ಹೊರಟ್ಟಿ, ಡಾ.ಪ್ರಕಾಶ ಭಟ್‌, ರಂಜಾನ್ ದರ್ಗಾ, ಡಾ. ಸಿ.ಎಸ್.ಪಾಟೀಲ, ಚಂದ್ರಕಾಂತ ಬೆಲ್ಲದ ಇದ್ದಾರೆ.

ಧಾರವಾಡ: ‘ಭಾರತ ಬಹುಮತೀಯ ರಾಷ್ಟ್ರ ಎಂದು ಸಂವಿಧಾನ ಹೇಳಿದೆಯೇ ಹೊರತು, ಹಿಂದೂ ರಾಷ್ಟ್ರ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಹಿಂದೂ ರಾಷ್ಟ್ರ ಎಂದು ಹೇಳಿಕೆ ನೀಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗುವ ಕೆಲಸ ಆಳುವವರಿಂದಲೇ ನಡೆಯುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬುಧವಾರ ಇಲ್ಲಿ ಆತಂಕ ವ್ಯಕ್ತಪಡಿಸಿದರು.

ಬಸವಶಾಂತಿ ಮಿಷನ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ, ವಿಶ್ವಶಾಂತಿ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಅಧಿಕಾರದ ಚುಕ್ಕಾಣಿ ಹಿಡಿದ ಇಂದಿನ ರಾಜಕೀಯ ವ್ಯವಸ್ಥೆ ಸಂವಿಧಾನಬದ್ಧವಾಗಿ ನಡೆಯುತ್ತಿಲ್ಲ. ಭಾರತ ಬಹುಸಂಖ್ಯಾತರ ಹಿಂದೂ ದೇಶ ಎಂಬ ವಿಚಾರದ ವಿಷಬೀಜ ಬಿತ್ತುತ್ತಾ ಜನತೆಯ ದಾರಿ ತಪ್ಪಿಸುತ್ತಿದೆ ಎಂದರು.

‘ಸರಿಯಾಗಿ ಆಡಳಿತ ನಡೆಸದ ಜನಪ್ರತಿನಿಧಿಗಳು ನಿರುದ್ಯೋಗ ಸೃಷ್ಟಿಸಿದ್ದಾರೆ. ಇದರಿಂದಾಗಿ ಯುವಕರು ಗೂಂಡಾಗಿರಿ ನಡೆಸುತ್ತಿದ್ದಾರೆ. ಉಗ್ರವಾದಿಗಳು, ಭಯೋತ್ಪಾದಕರಾಗುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ, ಆಸ್ತಿ ಹಂಚಿಕೆಯಲ್ಲಿ ಅನ್ಯಾಯ ನಡೆಯುತ್ತಿರುವುದರಿಂದ ಎಲ್ಲೆಡೆ ಅಶಾಂತಿ ನೆಲೆಸಿದೆ’ ಎಂದರು.

ಜಾತಿ ಹಾಗೂ ವರ್ಗ ರಹಿತ ಸಮಾಜದ ಬಗ್ಗೆ ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದರು. ಆದರೆ, ಅಸಮಾನತೆಯ ಧೋರಣೆ ಹೆಚ್ಚಾಗಿರುವುದರಿಂದ ಜಗತ್ತಿನೆಲ್ಲೆಡೆ ಅಶಾಂತಿ ತಾಂಡವವಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಹಿಂಸೆ ತಗ್ಗಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಪ್ರತಿಯೊಬ್ಬರೂ ವಿಫಲರಾಗಿದ್ದಾರೆ. ಅಷ್ಟು ಮಾತ್ರವಲ್ಲ; ಹಿಂಸೆ, ಭ್ರಷ್ಟಾಚಾರ, ಅಧಿಕಾರಶಾಹಿ, ದಬ್ಬಾಳಿಕೆಗೆ ಅವರೇ ಕಾರಣರಾಗಿರುವುದು ತೀರಾ ಶೋಚನೀಯ ಸಂಗತಿ’ ಎಂದು ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

* ‘ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ 19 ವರ್ಷಗಳಲ್ಲಿ ನೀಡಿದ ತೀರ್ಪುಗಳು ಎಷ್ಟು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ’
– ನ್ಯಾ. ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !