ಶನಿವಾರ, ಮೇ 28, 2022
30 °C

ಹೊಸ ವರ್ಷದ ಸಂಕಲ್ಪ: ಈ ಬಾರಿ ನಮ್ಮ ತಯಾರಿ ಹೇಗಿರಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವರ್ಷ ಬಂದಿದೆ. ಕೋವಿಡ್‌ನಂಥ ಬಿಕ್ಕಟ್ಟಿನ ಸಂದರ್ಭದಲ್ಲೂ ಈ ವರ್ಷವನ್ನು ನವೋತ್ಸಾಹದಿಂದ ಬರಮಾಡಿಕೊಳ್ಳಬೇಕಿದೆ. ಹೊಸ ವರ್ಷಕ್ಕೆ ನಮ್ಮ ತಯಾರಿ ಹೇಗಿರಬೇಕು ಎಂಬ ಸಂದೇಶವನ್ನು ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ಹಂಚಿಕೊಂಡಿದ್ದಾರೆ.

ಜೀವನಗಾಥೆಗೆ ಫಲಶ್ರುತಿಯಾಗಲಿ...

ಇಪ್ಪತ್ತೆರಡು ಬಾಗಿಲು ತೆರೆಯುತ್ತಾ ಇದೆ. ಈಗ ಭವಿಷ್ಯ, ಚರಾಚರ ಜೀವಜಗತ್ತಿಗೆ ಹಿತವನ್ನುಂಟು ಮಾಡಲೆಂದು ಕಾಯುವ ಕೃಪಾಶಕ್ತಿಯನ್ನು ವಿನಯದಿಂದ ಪ್ರಾರ್ಥಿಸೋಣ. ಒಂದು ಶಕುನದ ಹಕ್ಕಿ ಕೂಡ ಶುಭ ನುಡಿಯುವುದು ಎಂಬುದು ನಮ್ಮ ನಂಬಿಕೆ. ಇಂಥ ಶುಭ ನುಡಿಯೆ ನಮ್ಮ ಜೀವನಗಾಥೆಗೆ ಜೀವಶ್ರುತಿಯಾಗಲಿ..

ಕೊರೊನಾದಂಥ ದುಷ್ಟ ಸಾಂಕ್ರಾಮಿಕಗಳು ದಮನಗೊಳ್ಳಲಿ...ನಮ್ಮ ಕಣ್ಮುಂದೆ ಉತ್ಸಾಹಿ ತರುಣ ತರುಣಿಯರು ನಗು ನಗುತ್ತಾ ಓಡಾಡಿ. ನಮ್ಮ ನಾಡು ನುಡಿಯ ಅಭಿಮಾನ ವೃದ್ಧಿಸಲಿ. ಪ್ರತಿಯೊಂದು ಜೀವಿಯೂ ಮತ್ತೊಂದು ಜೀವದ ಹಿಗ್ಗು ಹಿಗ್ಗಿಸುವಲ್ಲೇ ಬಾಳ್ವೆಯ ಸಾರ್ಥಕತೆ ಎಂಬುದು ಈವತ್ತು ನಮ್ಮ ಏಕಾಂತದ ಧ್ಯಾನವಾಗುವುದಾದರೆ ಶುಭವು ತನಗೆ ತಾನೇ ತೆರೆದುಕೊಳ್ಳುತ್ತದೆ.
-ಸ್ವಸ್ತಿ ಅನ್ನಿರಿ...ಅಸ್ತು ಅನ್ನುವೆ.

ಎಚ್.ಎಸ್.ವೆಂಕಟೇಶಮೂರ್ತಿ,ಕವಿ

***

‘ಅದ್ದೂರಿ ಆಚರಣೆ ತ್ಯಜಿಸಿ’

ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ಎದುರಿಸಿದ್ದೇವೆ. ಎರಡು ವರ್ಷಗಳ ಅವಧಿಯಲ್ಲಿ ಹಲವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೆಲವರು ರೋಗದ ತೀವ್ರತೆಗೆ ಮೃತಪಟ್ಟಿದ್ದಾರೆ. ದೇಶದಲ್ಲಿ 2020ರ ಜನವರಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. 2021ರ ಜನವರಿಯಲ್ಲಿ ಕೊರೊನಾ ರೂಪಾಂತರಿ ಡೆಲ್ಟಾ ಪತ್ತೆಯಾಯಿತು. ಈಗ ಓಮೈಕ್ರಾನ್ ಕಾಣಿಸಿಕೊಂಡಿದೆ. 2022ರ ವರ್ಷಪೂರ್ತಿ ಕೋವಿಡ್ ಇರುವ ಸಾಧ್ಯತೆಯಿದೆ. ಜನವರಿ, ಫೆಬ್ರುವರಿ ತಿಂಗಳಲ್ಲಿ ಸೋಂಕು ಜಾಸ್ತಿಯಾಗಬಹುದು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳು, ಹಬ್ಬಗಳು, ಜಾತ್ರೆಗಳನ್ನು ಸರಳವಾಗಿ ಆಚರಿಸಬೇಕು. ರಾಜಕೀಯ ಸೇರಿದಂತೆ ವಿವಿಧ ಬಹಿರಂಗ ಸಭೆ–ಸಮಾರಂಭಗಳಿಗೂ ನಿರ್ಬಂಧ ಅಗತ್ಯ. ಜ್ವರ, ಕೆಮ್ಮು ಸೇರಿದಂತೆ ಕೋವಿಡ್‌ನ ವಿವಿಧ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಕುಟುಂಬದ ಸದಸ್ಯರಿಗೆ ರಕ್ಷಣೆ ನೀಡಬಹುದು. ಎಲ್ಲರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಮುಖಗವಸು (ಮಾಸ್ಕ್) ಮೊಬೈಲ್ ರೀತಿ ಸದಾ ನಮ್ಮ ಜೊತೆಗೆ ಇರಬೇಕು. ಮನೆಯಿಂದ ಹೊರಗಡೆ ಹೋಗುವಾಗ ಮುಖಗವಸು ಧರಿಸುವುದನ್ನು ಮರೆಯಕೂಡದು.

ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

***

 

ಮನಸ್ಸು ಶುದ್ಧಿಯಾಗಿ ಇಟ್ಟುಕೊಳ್ಳೋಣ

ಆರೋಗ್ಯವೇ ಭಾಗ್ಯ. ನಮಗೆ ಅನಾರೋಗ್ಯವಾದರೆ ಇಡೀ ಕುಟುಂಬವೇ ಭಯದ ವಾತಾವರಣದಲ್ಲಿ ಇರುತ್ತದೆ. ಕೆಲಸಕ್ಕೆ ಅಡ್ಡಿಯಾಗುತ್ತದೆ. ಪ್ರಸ್ತುತ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡು ಎಂದು ದೇವರಲ್ಲಿ ಬೇಡಿಕೊಳ್ಳುವಂತಾಗಿದೆ. ಆರೋಗ್ಯದ ಮುಂದೆ ಎಷ್ಟು ಕೋಟಿ ಹಣವಿದ್ದರೂ ನಗಣ್ಯ. ಸಂಚಾರಿ ವಿಜಯ್‌, ಅಪ್ಪು ಸೇರಿದಂತೆ ಹೋದ ವರ್ಷ ನಾವು ಬಹಳಷ್ಟು ಜನರನ್ನು ಆಕಸ್ಮಿಕವಾಗಿ ಕಳೆದುಕೊಂಡೆವು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಮಾಸ್ಕ್‌ ಎನ್ನುವುದು ಫ್ಯಾಷನ್‌ ಅಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಲಿ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ದೈಹಿಕ ಶುದ್ಧತೆ ಜತೆಗೆ ಮನಸ್ಸಿನೊಳಗೂ ನಮ್ಮನ್ನು ನಾವು ಶುದ್ಧಿಯಾಗಿಟ್ಟುಕೊಳ್ಳುವುದು ಮುಖ್ಯ. ಒಳ್ಳೆಯದನ್ನೇ ಯೋಚನೆ ಮಾಡೋಣ. ಕೆಟ್ಟ ಆಲೋಚನೆಗಳನ್ನು ಮಾಡದೆ, ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ ಅವರ ಕಾಲೆಳೆಯುವುದನ್ನು ಬಿಟ್ಟು ಒಳ್ಳೆಯದನ್ನು ಬಯಸೋಣ. ಜೊತೆಯಲ್ಲಿರುವವರನ್ನು ಖುಷಿಯಾಗಿಟ್ಟುಕೊಳ್ಳೋಣ. ನಾವು ಎಲ್ಲಿ ವಾಸ ಮಾಡುತ್ತಿದ್ದೇವೆಯೋ, ಆ ಜಾಗವನ್ನು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ನಾನು ಎನ್ನುವವರಿಗೆ ಆಯಸ್ಸು ಕಡಿಮೆ ಎಂದು ನಮ್ಮ ತಂದೆ ಹೇಳುತ್ತಿದ್ದರು. ನಾನು ಅನ್ನುವುದಕ್ಕಿಂತ ನಾವು ಎಂದು ಬಾಳಿ ಬದುಕಿದರೆ ಉತ್ತಮ. ಇದು ನಮ್ಮೆಲ್ಲರ ಸಂಕಲ್ಪವಾಗಿರಲಿ.

ರಚಿತಾ ರಾಮ್‌, ನಟಿ

***

ಅಸಹನೆ, ಗುದ್ದಾಟ ಬಿಟ್ಟುಬಿಡಿ

ಸಂಕಷ್ಟದಿಂದ ಕೂಡಿದ್ದ 2021 ಕಳೆದುಹೋಗಿದೆ. ಕೆಲವು ಮನುಷ್ಯ ನಿರ್ಮಿತ ಕಷ್ಟಗಳು ಇದ್ದರೆ, ಇನ್ನು ಕೆಲವು ನೈಸರ್ಗಿಕವಾಗಿ ಬಂದಿದ್ದವು. ಪ್ರಕೃತಿ ವಿಕೋಪಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಮನುಷ್ಯನ ತಪ್ಪಿನಿಂದಾಗುವ ಕಷ್ಟಗಳು ಬರದಂತೆ ನೋಡಿಕೊಳ್ಳಬೇಕು. ಹೊಸ ವರ್ಷದಲ್ಲಿ ಅಂತಹ ಸಂಕಲ್ಪವನ್ನು ತೊಡೋಣ.

ಅಸಹನೆ, ಗುದ್ದಾಟ ಬಿಟ್ಟುಬಿಡಿ. ನಮ್ಮ ನಮ್ಮಲ್ಲೇ ಕಿತ್ತಾಟ ಬೇಡ. ಇವನನ್ನು ಕಡಿ, ಅವನನ್ನು ಹರಿ ಎಂಬ ದ್ವೇಷ ಸಾಕು. ಈ ದೇಶ ನನಗೆ ಮಾತ್ರ ಸೇರಿದ್ದು, ಉಳಿದವರನ್ನು ಹೊರಗೆ ಓಡಿಸಿ ಎಂಬ ಅರಚಾಟ ನಿಲ್ಲಲಿ. ಜಾತಿ, ಧರ್ಮಗಳ ಹೆಸರಿನಲ್ಲಿ ಸಿಟ್ಟು, ಕೋಪ ತೋರಿಸುವುದರಿಂದ ಯಾವುದೇ ಲಾಭವಿಲ್ಲ. ಧರ್ಮಗಳ ನಡುವೆ ದ್ವೇಷದ ದಾರಿಯಲ್ಲಿ ಹೋದರೆ ಈ ದೇಶಕ್ಕೆ ವಿನಾಶ ಕಾದಿದೆ. ಭಾರತವು ಎಲ್ಲ ಧರ್ಮ, ಜಾತಿಗಳ ಜನರಿಗೆ ಸೇರಿದ್ದು ಎಂಬ ಮನೋಭಾವ ಬೆಳೆಯಲಿ.

ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿ ಇರಬೇಕು. ಅವರಿಗೆ ರಕ್ಷಣೆ, ವಿದ್ಯೆ, ಆರೋಗ್ಯ ಕೊಡುವುದು ನಮ್ಮ ಕರ್ತವ್ಯ. ಅಂತಹ ಸಂಕಲ್ಪ ಕೈಗೊಂಡರೆ ಈ ದೇಶಕ್ಕೆ ಸರಿಸಾಟಿಯಾದ ದೇಶ ಜಗತ್ತಿನ‌ಲ್ಲಿ ಬೇರೊಂದಿಲ್ಲ. 2022 ನೆಮ್ಮದಿ ತರಲಿ, ಎಲ್ಲರಿಗೂ ಶುಭವಾಗಲಿ.

ಪಂಡಿತ್ ರಾಜೀವ ತಾರಾನಾಥ್,ಸರೋದ್‌ ವಾದಕ

***

‘ಬಹು ಕೌಶಲಗಳನ್ನು ವೃದ್ಧಿಸಿಕೊಳ್ಳಿ’

ಕೋವಿಡ್ ಕಾಣಿಸಿಕೊಂಡ ಬಳಿಕ ಕಾರ್ಯಕ್ಷೇತ್ರದ ವಾತಾವರಣ, ಕೆಲಸದ ಸ್ವರೂಪ ಸಂಪೂರ್ಣ ಬದಲಾಗಿದೆ. ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಲವಾದ ಹೊಡೆತ ಬಿದ್ದಿದೆ. ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಆಸನಗಳ ನಿರ್ಬಂಧದಿಂದ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿತು. ಕೋವಿಡ್‌ ದೂರವಾಗದಿರುವುದರಿಂದ ಇನ್ನಷ್ಟು ದಿನ ಸವಾಲುಗಳ ನಡುವೆಯೇ ಸಾಗಬೇಕಾಗಿದೆ. ಹಾಗಂತ ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ. ಯಾವುದೇ ಒಂದು ಉದ್ಯೋಗಕ್ಕೆ ನೆಚ್ಚಿಕೊಳ್ಳಬಾರದು. ಬಹು ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ಆಗ ಉದ್ಯೋಗ ಕಳೆದುಕೊಂಡರೂ ಬೇರೆ ಕಸುಬು ಮಾಡಬಹುದು. ನಾನು ಅಭಿನಯದ ಜೊತೆಗೆ ಅಡುಗೆ, ವಾಹನ ಚಾಲನೆ, ಮಕ್ಕಳಿಗೆ ಪಾಠ ಸೇರಿದಂತೆ ವಿವಿಧ ಕೌಶಲಗಳನ್ನು ಬೆಳೆಸಿಕೊಂಡಿದ್ದೇನೆ. ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಯಲ್ಲಿ ನಿರತನಾಗಿರುತ್ತೇನೆ. ಜಗತ್ತಿನಲ್ಲಿನ ಆಗುಹೋಗುಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯ. ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಯಾವುದೇ ಕೆಲಸವಾದರೂ ಸಣ್ಣದು, ದೊಡ್ಡದು ಎಂಬ ಭಾವನೆ ನಮ್ಮಲ್ಲಿ ಇರಬಾರದು. ನಾವು ಮಾಡುವ ಕೆಲಸದಲ್ಲಿಯೇ ಆತ್ಮತೃಪ್ತಿ ಕಂಡುಕೊಳ್ಳಬೇಕು.

ಅರುಂಧತಿ ನಾಗ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ

***

ಏನೇ ಬಂದರೂ ಎದುರಿಸಿದರೆ ಬದುಕು ಸುಂದರ

ಭಯವಿಲ್ಲದೇ ಬದುಕಬೇಕು. ಕೊರೊನಾ, ರೂಪಾಂತರಿ ವೈರಾಣು ಓಮೈಕ್ರಾನ್–ಹೀಗೆ ಒಂದರ ಹಿಂದೆ ಮತ್ತೊಂದು ಬರ್ತಾನೆ ಇರುತ್ತವೆ. ಅದಕ್ಕೆ ಹೆದರಬಾರದು. ಧೈರ್ಯದಿಂದ ಎದುರಿಸಬೇಕು. ಓಮೈಕ್ರಾನ್‌ ಬಂದ ಎಷ್ಟೋ ಜನ ಈಗ ಚೇತರಿಸಿಕೊಂಡು ಆರಾಮಾಗಿದ್ದಾರೆ. ಏನೂ ಆಗಲ್ಲ. ಮಾಸ್ಕ್‌, ಸೋಷಿಯಲ್ ಡಿಸ್ಟೆನ್ಸ್‌ ಇತ್ಯಾದಿ ಮುನ್ನೆಚ್ಚರಿಕೆಗಳನ್ನು ಬಳಸಬೇಕು. ಏನೇ ಬಂದರೂ ಎದುರಿಸಬೇಕು. ಫಿಟ್‌ ಆಗಿರಬೇಕು. ಫಿಟ್‌ನೆಸ್‌ ಎಂದರೆ ಬರೀ ದೈಹಿಕವಾಗಿ ಅಲ್ಲ. ಮಾನಸಿಕವಾಗಿಯೂ ಸದೃಢವಾಗಿರಬೇಕು. ಸದಾ ಖುಷಿಯಾಗಿರಬೇಕು. ಯಾರ ಬಗ್ಗೆ ಮತ್ತು ಯಾವುದೇ ವಿಷಯಗಳ ಕುರಿತು ಸಂದೇಹಗಳನ್ನು ಮನದಲ್ಲಿಟ್ಟುಕೊಳ್ಳಬಾರದು. ಆತ್ಮವಿಶ್ವಾಸದಿಂದ ಬಾಳಬೇಕು. ಆಗ ಬದುಕು ಸುಂದರವಾಗುತ್ತದೆ.

ಅಶ್ವಿನಿ ನಾಚಪ್ಪ, ಅಂತರರಾಷ್ಟ್ರೀಯ ಅಥ್ಲೀಟ್ ಮತ್ತು ಕೋಚ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು