ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥೇಮ್ಸ್ ನದಿಯ ತೀರದಲ್ಲಿ...

Last Updated 3 ಜುಲೈ 2019, 19:30 IST
ಅಕ್ಷರ ಗಾತ್ರ

ನನ್ನ ಮಗಳು ಮತ್ತು ಅಳಿಯ, ಲಂಡನ್‌ನಲ್ಲಿ ಇರುವುದರಿಂದ ಇತ್ತೀಚೆಗೆ ಲಂಡನ್‌ ಪ್ರವಾಸ ಮಾಡಿ ಬಂದೆ. ಪ್ರವಾಸದ ವೇಳೆ ಲಂಡನ್ ಬ್ರಿಡ್ಜ್, ಲಂಡನ್ ಐ, ಶಾರ್ಡ್ ಕಟ್ಟಡ, ಅಕ್ವೇರಿಯಂ, ಅರಮನೆ ಇನ್ನೂ ಅನೇಕ ತಾಣಗಳನ್ನು ಸುತ್ತಾಡಿ ಬಂದೆ. ಆದರೆ, ಇಡೀ ಪ್ರವಾಸದಲ್ಲಿ ಹೆಚ್ಚು ನೆನಪಲ್ಲಿ ಉಳಿದಿದ್ದು, ಥೇಮ್ಸ್ ನದಿ ಮತ್ತು ದಂಡೆ, ಸುರಂಗದಲ್ಲಿ ಸುತ್ತಾಡಿದ್ದು, ಜತೆಗೆ ಡೋವರ್‌ ಕ್ಲಿಪ್‌, ಗ್ರೀನ್‌ವಿಚ್‌ ಟೈಮ್ ಮ್ಯೂಸಿಯಂನಂತಹ ತಾಣಗಳು.

ಥೇಮ್ಸ್ ನದಿಗೆ ಅನತಿ ದೂರದಲ್ಲಿ ನನ್ನ ಮಗಳ ಮನೆ ಇದೆ. ಪಂಟೂನ್ ಡಾಕ್ ಎಂಬ ಮೆಟ್ರೊ ನಿಲ್ದಾಣದ ಸಮೀಪ. ಹೀಗೆ ಆ ಮನೆಯ ಬಾಲ್ಕನಿಯಲ್ಲಿ ನಿಂತರೆ ಥೇಮ್ಸ್‌ ನದಿ ಕಾಣುತ್ತಿತ್ತು. ವಿಶಾಲವಾದ ನದಿಯಲ್ಲಿ ಹರಿದಾಡುವ ಹಡಗು, ಕ್ರೂಸರ್‌ಗಳು, ದೋಣಿಗಳನ್ನು ನೋಡುವುದೇ ಸೊಬಗು. ಲಂಡನ್ ನಗರವನ್ನು ಇಬ್ಬಾಗಿಸುವ ಈ ನದಿ ದಂಡೆಯಲ್ಲಿ ವಾಕಿಂಗ್ ಪಾತ್ ರೀತಿಯ ದೊಡ್ಡ ರಸ್ತೆ ಇದೆ. ರಸ್ತೆ ಬದಿಯಲ್ಲೇ ಅನೇಕ ಸುಂದರ ಉದ್ಯಾನಗಳಿವೆ.

ಲಂಡನ್ ಪ್ರವಾಸದಲ್ಲಿ ಮೊದಲಿಗೆ ನನ್ನನ್ನು ಆಕರ್ಷಿಸಿದ ಸ್ಥಳ ಥೇಮ್ಸ್ ಬ್ಯಾರಿಯರ್(ಅಣೆಕಟ್ಟು). ಇದು ಥೇಮ್ಸ್ ನದಿಗೆ ಕಟ್ಟಿರುವ ಸಣ್ಣ ಅಣೆಕಟ್ಟು. ‘ಅಣೆಕಟ್ಟು ಇದ್ದರೂ ನದಿ ಮೇಲೆ ಹಡಗು, ಕ್ರೂಸರ್ ಹೇಗೆ ಸಂಚರಿಸುತ್ತವೆ’ ಎನ್ನುವುದು ನನ್ನ ಕುತೂಹಲ. ಭೂ ವಿಜ್ಞಾನಿಯಾದ ನಾನು, ಡ್ಯಾಮ್‌ಗಳಲ್ಲಿ ಕೆಲಸ ಮಾಡಿದ್ದ ಕಾರಣ, ಈ ಸ್ಥಳದ ಬಗ್ಗೆ ಹೆಚ್ಚು ಆಸಕ್ತಿ ಮೂಡಿತು. ಅದಕ್ಕಾಗಿಯೇ ಆ ಸ್ಥಳವನ್ನು ನೋಡಲು ಹೊರಟೆ.

ಈ ಸಣ್ಣ ಅಣೆಕಟ್ಟು ಮೆಟ್ರೊ ನಿಲ್ದಾಣದ ಹತ್ತಿರವಿದೆ. ನಿಲ್ದಾಣ ಹಾಗೂ ಅಣೆಕಟ್ಟಿನ ನಡುವೆ ಒಂದು ಸುಂದರ ಉದ್ಯಾನವಿದೆ. ಸಮುದ್ರದಲ್ಲಿ ಉಬ್ಬರ ಹೆಚ್ಚಾದಾಗ ಹಿನ್ನೀರನ್ನು ತಡೆಯುವುದಕ್ಕೆ ಈ ಅಣೆಕಟ್ಟು ನಿರ್ಮಿಸಿದ್ದಾರೆ. ಗೇಟ್ ಮುಚ್ಚಿದಾಗ ಅಣೆಕಟ್ಟು ಆಗುತ್ತದೆ. ಗೇಟ್ ತೆಗೆದಾಗ, ಈ ಜಾಗದಲ್ಲಿ ದೋಣಿ, ಹಡಗುಗಳು ಓಡಾಡುತ್ತವೆ. ಇದೇ ಅಣೆಕಟ್ಟಿನ ವಿಶೇಷ ಎಂದು ಗೊತ್ತಾಯಿತು.

ಲಂಡನ್ ನಗರದ ‘ಫೂಟ್‌ಟನಲ್‌(ಸುರಂಗ)’ ನನ್ನನ್ನು ಹೆಚ್ಚು ಆಕರ್ಷಿಸಿದ ಮತ್ತೊಂದು ಸ್ಥಳ. ಥೇಮ್ಸ್ ನದಿ ತಳದಿಂದ 50 ಅಡಿ ಆಳದಲ್ಲಿ ಈ ಸುರಂಗವಿದೆ. 1902ರಲ್ಲಿ ಇದನ್ನು ನಿರ್ಮಾಣ ಮಾಡಿದ್ದಾರೆ. ಆಗ ನದಿ ದಾಟಲು ಜನರು ಇದನ್ನು ಬಳಸುತ್ತಿದ್ದರು. ಈಗ ನದಿಯ ಎರಡು ದಂಡೆಯಲ್ಲಿ ಸುರಂಗ ತಲುಪಲು ಲಿಫ್ಟ್‌ ವ್ಯವಸ್ಥೆ ಇದೆ. ಸುರಂಗದಲ್ಲಿ ಬೆಳಕಿನ ವ್ಯವಸ್ಥೆಯೂ ಇದೆ. ಲಂಡನ್‌ಗೆ ಪ್ರವಾಸಕ್ಕೆ ಬಂದವರು ಇಲ್ಲಿ ಸೈಕಲ್‌ನಲ್ಲಿ ಅಡ್ಡಾಡುತ್ತಾರೆ.

ಡೋವರ್‌ ಕ್ಲಿಫ್ಸ್‌ ಸುತ್ತಾ..

ಡೋವರ್‌ಕ್ಲಿಫ್ಸ್‌, ಡೋವರ್ ಪೋರ್ಟ್ ಮತ್ತು ಡೋವರ್ ಕ್ಯಾಸಲ್ – ಈ ಎಲ್ಲ ಪ್ರವಾಸಿ ತಾಣಗಳು ಡೋವರ್ ರೈಲು ನಿಲ್ದಾಣಕ್ಕೆ ಹತ್ತಿರವಿದೆ. ಲಂಡನ್ ನಗರದಿಂದ ವೇಗದ ರೈಲಿನಲ್ಲಿ (ಹೈಸ್ಪೀಡ್ ರೈಲು) ಡೋವರ್‌ಗೆ ಹೋಗಬಹುದು. ಸುಮಾರು ಒಂದೂವರೆ ಗಂಟೆ ಪ್ರಯಾಣದ ದಾರಿ. ಡೋವರ್ ರೈಲು ನಿಲ್ದಾಣದಲ್ಲಿಳಿದು ಟ್ಯಾಕ್ಸಿ ಮಾಡಿಕೊಂಡು ಡೋವರ್ ಕ್ಲಿಫ್ಸ್‌ , ಡೋವರ್ ಫೋರ್ಟ್ ಮತ್ತು ಡೋವರ್ ಕ್ಯಾಸಲ್ ನೋಡಿ ಬರಬಹುದು.

ಡೋವರ್ ಕ್ಲಿಫ್ಸ್‌ನಲ್ಲಿ ಸಮುದ್ರದಂಡೆಯಲ್ಲಿ ಒಂದು ಮನೆಯಿದೆ. ಒಂದು ಕಲ್ಲಿನ ಕಂಬದ ಸ್ಮಾರಕವಿದೆ. ಸುಮಾರು 30 ರಿಂದ 50 ಅಡಿ ಇರುವ ಬಿಳಿಗೋಡೆಯಂತೆ ಕಾಣುವ ಪ್ರಪಾತಗಳನ್ನು ಅಲ್ಲಲ್ಲಿ ನೋಡಬಹುದು. ಒಂದು ಬೆಟ್ಟವನ್ನು ಲಂಬಾಂತರವಾಗಿ ಕತ್ತರಿಸಿದರೆ ಹೇಗಿರುತ್ತದೋ ಹಾಗೆ ಈ ರಚನೆ ಕಾಣುತ್ತದೆ. ಅಲ್ಲಿ ನಿಂತು ಕೆಳಗೆ ನೋಡಿದರೆ ಸಮುದ್ರ ಹಾಗೂ ಹಿಂಭಾಗದಲ್ಲಿ ಭತ್ತದ ಬೆಳೆ ಕಾಣುತ್ತದೆ.

ಡೋವರ್ ಪೋರ್ಟ್, ಇಂಗ್ಲಿಷ್ ಚಾನೆಲ್‌ನಲ್ಲಿದೆ (ಕಾಲುವೆ). ಈ ಚಾನೆಲ್ ದಾಟಿದರೆ ಏಷ್ಯಾಖಂಡ ಸಿಗುತ್ತದೆ. ವಿಶಾಲವಾದ ಪೋರ್ಟ್‌ನಲ್ಲಿ ಪ್ರಯಾಣಕ್ಕೆ ಸಿದ್ಧವಾಗಿರುವ ಹಡಗುಗಳು ಕಾಣುತ್ತವೆ. ಈಗಾಗಲೇ ಸಾಮಗ್ರಿಗಳನ್ನು ಹೊತ್ತು ಸಮುದ್ರದಲ್ಲಿ ಹೋಗುತ್ತಿರುವ ಹಡಗುಗಳನ್ನು ನೋಡಬಹುದು.

ಇವೆಲ್ಲವನ್ನೂ ನೋಡಿಕೊಂಡು ರೈಲ್ವೆ ನಿಲ್ದಾಣಕ್ಕೆ ಹಿಂದಿರುಗುವಾಗ ಡೋವರ್ ಕ್ಯಾಸೆಲ್ ಸಿಗುತ್ತದೆ. ದೂರದಿಂದಲೇ ಈ ತಾಣ ನೋಡಿ, ಡೋವರ್ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಲಂಡನ್‌ಗೆ ವಾಪಸ್ ಆದೆವು. ಇಷ್ಟೆಲ್ಲ ನೋಡಲು ಅರ್ಧ ದಿನ ಸಾಕು.

ಈಗ ಲಂಡನ್‌ನಲ್ಲಿ ವಿಶ್ವ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳು ಅಲ್ಲಿ ಸೇರಿದ್ದಾರೆ. ನೀವು ಕ್ರಿಕೆಟ್ ನೋಡಲು ಲಂಡನ್‌ಗೆ ಹೋಗಿದ್ದರೆ, ಈ ಮೇಲಿನ ಎಲ್ಲ ತಾಣಗಳನ್ನು ಸುತ್ತಾಡಿ ಬನ್ನಿ.

ಹೋಗುವುದು ಹೇಗೆ

ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಸೌಲಭ್ಯವಿದೆ. ಒಟ್ಟು ಹತ್ತು ಗಂಟೆ ಪ್ರಯಾಣ. ಅಲ್ಲಿ ಸ್ಥಳೀಯ ಟೂರ್ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಂಪ್ಯೂಟರ್ – ಗೂಗಲ್ ಬಳಸುವ ಅಭ್ಯಾಸವಿದ್ದವರು, ವೈಯಕ್ತಿಕವಾಗಿ, ಸುಲಭವಾಗಿ ಪ್ರವಾಸ ಮಾಡಬಹುದು. ಎಲ್ಲ ಕಡೆ ಪ್ರಯಾಣಿಸಲು ಉತ್ತಮವಾದ ರೈಲು, ಬಸ್ ಮತ್ತು ವಿಮಾನಗಳ ಸೌಲಭ್ಯವಿದೆ. ಏಪ್ರಿಲ್‌ನಿಂದ ನವೆಂಬರ್‌ವರೆಗೆ ಲಂಡನ್ ಪ್ರವಾಸಕ್ಕೆ ಸೂಕ್ತ ಸಮಯ. ಈ ಸಮಯದಲ್ಲೂ ತುಸು ಚಳಿ ಇರುತ್ತದೆ. ಹಾಗಾಗಿ ಬೆಚ್ಚಗಿನ ಉಡುಪು ಕೊಂಡೊಯ್ಯಿರಿ. ಜರ್ಕಿನ್, ಥರ್ಮಲ್‌ನಂತಹ ವಸ್ತುಗಳಿದ್ದರೆ ಒಳ್ಳೆಯದು.

ಊಟ-ವಸತಿ

ಪ್ರವಾಸಿಗರಿಗಾಗಿ ಸರ್ವೀಸ್ ಅಪಾರ್ಟ್‌ಮೆಂಟ್‌ಗಳಿವೆ. ಸಾಕಷ್ಟು ಭಾರತೀಯ ಶೈಲಿಯ ಆಹಾರ ಪೂರೈಸುವ ಹೋಟೆಲ್‌ಗಳಿವೆ. ಬಾಂಬೆ ಬ್ರೆಸಿಯರ್, ಮಸಾಲ ಝೋನ್, ಕೆಎಫ್‌ಸಿ, ಮೆಕ್ ಡೊನಾಲ್ಡ್‌ಗಳಂತಹ ಹೋಟೆಲ್‌ಗಳೂ ಇವೆ. ಈಸ್ಟ್ ಹ್ಯಾಮ್‌ನಲ್ಲಿ ಇಂಡಿಯಾ ಮಾರ್ಕೆಟ್ ಇದೆ. ದಕ್ಷಿಣ ಭಾರತೀಯ ತಿನಿಸು ಸಿಗುವ ಹೋಟೆಲ್‌ಗಳಿವೆ. ಸಮೀಪದಲ್ಲೇ ಒಂದು ದೇವಸ್ಥಾನವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT