ಬುಧವಾರ, ಜೂನ್ 23, 2021
30 °C

'ಫಾರಿನ್‌ ಟೂರ್‌' ಪ್ರವಾಸಿಗರಿಗೊಂದು ಕೈಪಿಡಿ

ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ಮಧ್ಯಮ ವರ್ಗದವರು ತಮ್ಮ ಗಳಿಕೆಯ ಇತಿಮಿತಿಯಲ್ಲೇ ವಿದೇಶ ಪ್ರವಾಸ ಕೈಗೊಳ್ಳುವ ಮಾರ್ಗದರ್ಶನ ನೀಡುತ್ತದೆ ‘ಫಾರಿನ್‌ ಟೂರ್‌’ ಕೃತಿ. ಲೇಖಕ ರವಿಶಂಕರ್‌ ಕೆ. ಭಟ್‌ ಅವರು ಕುಟುಂಬ ಸಮೇತ 7 ದಿನಗಳ ಕಾಲ ಮಲೇಷ್ಯಾ ಪ್ರವಾಸ ಕೈಗೊಂಡ ಅನುಭವವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ವಿದೇಶ ಪ್ರವಾಸಕ್ಕೆ ಬೇಕಾದ ಮಾನಸಿಕ ಸಿದ್ಧತೆ, ಬೇಕಾದ ದಾಖಲೆಗಳ ಹೊಂದಾಣಿಕೆ, ಕಾನೂನು ಪ್ರಕ್ರಿಯೆಗಳು, ಕಡಿಮೆ ಪ್ರಮಾಣದ ಸರಕುಗಳು, ಪ್ರಯಾಣ ಸಂಸ್ಥೆಯ ಸಂಪರ್ಕ, ವಾಸ್ತವ್ಯ ವ್ಯವಸ್ಥೆ, ಆಯಾ ವಯಸ್ಸಿನವರಿಗೆ ಬೇಕಾದ ಅಗತ್ಯಗಳು ಎಲ್ಲವನ್ನೂ ಪಿನ್‌ ಟು ಪಿನ್ ಅಂತಾರಲ್ಲಾ ಹಾಗೆ ವಿವರಿಸಿದ್ದಾರೆ.

ಪುಟ್ಟ ಮಗುವಿನಿಂದ ಹಿರಿಯ ನಾಗರಿಕರವರೆಗೂ ಈ ತಂಡದಲ್ಲಿದ್ದದು ವಿಶೇಷ. ಹೀಗಾಗಿ, ಎಲ್ಲ ವಯೋಮಾನದವರನ್ನು ನಿಭಾಯಿಸುವ ಅನುಭವ ಪಾಠವೂ ಈ ಕೃತಿಯಲ್ಲಿ ದಾಖಲಾಗಿದೆ.

ಲಗೇಜ್‌ಗೆ ಸ್ಥಳ ಬುಕ್‌ ಮಾಡುವಾಗ ಸಣ್ಣ ಎಡವಟ್ಟಿನಿಂದ ಸಾವಿರಾರು ರೂಪಾಯಿ ಕಳೆದುಕೊಂಡದ್ದು, ವೀಸಾದಲ್ಲಿರುವ ಹೆಸರಿಗೂ ವಿಮಾನ ಟಿಕೆಟ್‌ನಲ್ಲಿರುವ ಹೆಸರಿಗೂ ಒಂದೆರಡು ಅಕ್ಷರ ವ್ಯತ್ಯಾಸದಿಂದ ಪ್ರಯಾಣವೇ ರದ್ದಾಗುವ ಅಪಾಯ, ಕೊನೆಗೂ ಅದನ್ನು ಸರಿಪಡಿಸಿದ ಪ್ರಸಂಗ ಕೃತಿಯಲ್ಲಿ ಸ್ವಾರಸ್ಯಕರವಾಗಿ ತೆರೆದಿಡಲಾಗಿದೆ. ಪ್ರವಾಸದ ಅವಧಿಯಲ್ಲಿ ವಿಮಾನ ಟಿಕೆಟ್‌ ದರ ನೆಲಕ್ಕಿಳಿದದ್ದು ಅವರ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಯಿತು.

ಮಲೇಷ್ಯಾದಲ್ಲಿ ಆಹಾರದ ವ್ಯತ್ಯಾಸ ಆಗದಂತೆ ನೋಡಿಕೊಂಡದ್ದು ಲೇಖಕರ ಸಾಹಸವೇ ಸರಿ. ಬಹುತೇಕ ಆಹಾರ ಸಾಮಗ್ರಿಯನ್ನು ಇಲ್ಲಿಂದಲೇ ಪ್ಯಾಕ್‌ ಮಾಡಿಕೊಂಡು ಅಲ್ಲಿ ಸಿದ್ಧಪಡಿಸಿಕೊಂಡಿದ್ದು, ಹಾಲು, ಮೊಸರು ಹುಡುಕಲು ಸ್ವಲ್ಪ ಪರದಾಡಿದ್ದು, ಕೊನೆಗೂ ಎಲ್ಲರಿಗೂ ಸಮತೋಲಿತ ಆಹಾರ ಸಿಕ್ಕಿದ್ದು... ಇಂಥ ಒಂದೊಂದು ಘಟನೆಯನ್ನೂ ಹಾಸ್ಯಮಯವಾಗಿ ನಿರೂಪಿಸಿದ್ದಾರೆ.

ಇಂಟರ್‌ನ್ಯಾಷನಲ್‌ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಿಕೊಳ್ಳುವ ವಿಧಾನ, ಮಲೇಷ್ಯಾದ ಸಾರಿಗೆ, ಸಂಪರ್ಕ ವ್ಯವಸ್ಥೆಯ ಬಗ್ಗೆ ವಿಸ್ತಾರವಾದ ವಿವರಣೆ ಇದೆ. ಹೊಸ ಮೊಬೈಲ್‌ ಸಿಮ್‌ ಪಡೆಯುವುದರಿಂದ ಹಿಡಿದು, ಮೆಟ್ರೊ, ಮಾನೋ, ಹೈಸ್ಪೀಡ್‌ ರೈಲು, ಬಸ್‌, ಟ್ಯಾಕ್ಸಿಯ ವಿವರಗಳಿವೆ. ಟ್ಯಾಕ್ಸಿಯವರಿಂದ ಟೋಪಿ ಹಾಕಿಸಿಕೊಂಡಿದ್ದನ್ನೂ ದಾಖಲಿಸಿದ್ದಾರೆ. ಹೀಗಾಗಿ ಈ ಅನುಭವಗಳು ಓದುಗರಿಗೆ ಮಾರ್ಗದರ್ಶಿ ಆಗಬಲ್ಲವು. ಒಬ್ಬರಿಗೊಬ್ಬರು ಕೈತಪ್ಪಿ ಹೋಗದಂತೆ ನೋಡಿಕೊಳ್ಳುವ ಸೂಕ್ಷ್ಮತೆ, ಎಂಥ ಸಂದರ್ಭದಲ್ಲೂ ಗಾಬರಿಗೊಳ
ಗಾಗದಂತಿರುವ ಎಚ್ಚರವನ್ನೂ ಕೃತಿಯಲ್ಲಿ ಕೊಟ್ಟಿದ್ದಾರೆ.

ಮುಸ್ಲಿಂ ರಾಷ್ಟ್ರದಲ್ಲಿರುವ ಸಹಬಾಳ್ವೆ, ಬಹುತೇಕ ಕಡೆ ಸಿಗುವ ತಮಿಳು ಮೂಲದ ಜನರು, ಬಾಟು ಕೇವ್ಸ್‌ನಲ್ಲಿರುವ ರಾಮಾಯಣ ಕಲಾಕೃತಿಗಳ ದರ್ಶನದ ವಿವರಣೆ ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ಪ್ರವಾಸಿ ತಾಣದಲ್ಲಿ ವಿಧಿಸುವ ಶುಲ್ಕದ ವಿವರವೂ ಇಲ್ಲಿದೆ.

ಇಡೀ ಕೃತಿಯಲ್ಲಿ ಎದ್ದು ಕಾಣುವುದು ವಿದೇಶ ಪ್ರವಾಸ ಹೋಗುವ ಮತ್ತು ಬರುವ ಪ್ರಕ್ರಿಯೆ. ಸಿದ್ಧತೆ ಮತ್ತು ವ್ಯವಸ್ಥೆ. ನಮ್ಮಲ್ಲಿಗೂ ಅಲ್ಲಿಗೂ ಇರುವ ಜೀವನಶಿಸ್ತಿನ ವ್ಯತ್ಯಾಸವನ್ನು ಕೊಂಚಮಟ್ಟಿಗೆ ಸ್ಪರ್ಶಿಸಿದ್ದಾರೆ.

ಪುಸ್ತಕದ ಅಲ್ಲಲ್ಲಿ ಕೊಟ್ಟ ಚಿತ್ರಗಳು, ಕೊನೆಯಲ್ಲಿ ಕೊಟ್ಟಿರುವ ವರ್ಣ ಚಿತ್ರಗಳು ಕೌಲಾಲಂಪುರದ ತಾಜಾ ಸನ್ನಿವೇಶವನ್ನು ಕಟ್ಟಿಕೊಡುತ್ತವೆ. ಒಟ್ಟಿನಲ್ಲಿ ಒಮ್ಮೆ ಓದಿಸಿಕೊಂಡು ಹೋಗುವ ಕೃತಿ. ಕೌಲಾಲಂಪುರ ಮಾತ್ರವಲ್ಲ ಯಾವುದೇ ವಿದೇಶ ಪ್ರವಾಸಕ್ಕೂ ಮುನ್ನ ಬೇಕಾದ ಮಾರ್ಗದರ್ಶನವನ್ನು ಕೃತಿ ಕೊಡುತ್ತದೆ.

ಕೃತಿ: ಫಾರಿನ್‌ ಟೂರ್‌
ಲೇ: ರವಿಶಂಕರ್‌ ಕೆ.ಭಟ್‌
ಪ್ರಕಾಶಕರು: ನದಿ ಪ್ರಕಾಶನ, ಬೆಂಗಳೂರು

nadiprakashana@gmail.com

ಪುಟಗಳು : 112
ಬೆಲೆ: ₹ 130

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು