ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ದಾವಣಗೆರೆಯ ಗಾಜಿನಮನೆಗೆ ಬೇಕು ಇನ್ನಷ್ಟು ಮೆರುಗು

Last Updated 8 ಸೆಪ್ಟೆಂಬರ್ 2020, 0:47 IST
ಅಕ್ಷರ ಗಾತ್ರ

ದಾವಣಗೆರೆ: ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಶಾಂತಿಸಾಗರ (ಸೂಳೆಕೆರೆ)ವನ್ನು ನೋಡಬೇಕೆಂದರೆ ದಾವಣಗೆರೆ ಜಿಲ್ಲೆಗೆ ಬರಬೇಕಾಗುತ್ತದೆ. ಹಾಗೆಯೇ ದೇಶದ ಅತಿದೊಡ್ಡ ಗಾಜಿನಮನೆಯ ಅಂದ ಸವಿಯಬೇಕೆಂದರೂ ಇಲ್ಲಿಗೇ ಬರಬೇಕು.

ಸಂತೆಬೆನ್ನೂರಿನ ಸುಂದರ ಪುಷ್ಕರಣಿ, ಹರಿಹರದ ಹರಿಹರೇಶ್ವರ ದೇಗುಲ, ಆನಗೋಡಿನ ಪ್ರಾಣಿ ಸಂಗ್ರಹಾಲಯ ಹಾಗೂ ಸಸ್ಯೋದ್ಯಾನಗಳು ಇಲ್ಲಿಯ ಇನ್ನಷ್ಟು ಪ್ರೇಕ್ಷಣೀಯ ಸ್ಥಳಗಳು. ಉಕ್ಕಡಗಾತ್ರಿ, ತೀರ್ಥರಾಮೇಶ್ವರದಂಥ ಧಾರ್ಮಿಕ ಕ್ಷೇತ್ರಗಳು ಹಲವು ಇಲ್ಲಿವೆ. ಆದರೆ ಈಚೆಗೆ ವೀಕೆಂಡ್‌ಗೆ ಮೆಚ್ಚಿನ ಸ್ಥಳವೆಂದು ಹೆಸರು ಮಾಡುತ್ತಿರುವ ಸ್ಥಳ ದಾವಣಗೆರೆ ನಗರದ ಕುಂದವಾಡ ಕೆರೆಯ ಬಳಿ ನಿರ್ಮಿತವಾಗಿರುವ ಗಾಜಿನಮನೆ.

8 ಎಕರೆಯ ಸುಂದರ ಉದ್ಯಾನದಲ್ಲಿ ತಲೆಎತ್ತಿ ನಿಂತಿರುವ ಭವ್ಯವಾದ ಗಾಜಿನಮನೆಯನ್ನು ನೋಡುವುದೇ ಒಂದು ಅಂದ. ಹೊರಗೆ ನಿಂತರೆ ಪಾರದರ್ಶಕ ಗಾಜಿನ ಅಳವಡಿಕೆಗಳ ವಾಸ್ತುಶಿಲ್ಪ ಮುದ ನೀಡುತ್ತದೆ. ಒಳಗೆ ಅಡಿ ಇಡುತ್ತಿದ್ದಂತೆ ಧ್ವನಿ ಮಾರ್ದನಿಗೊಳ್ಳುವ ತಂತ್ರ ಮಕ್ಕಳಿಂದ ಹಿಡಿದು ಹಿರಿಯರೆಲ್ಲರಿಗೂ ಖುಷಿ ನೀಡುತ್ತದೆ.

2014-15ನೇ ಸಾಲಿನಲ್ಲಿ ಶಾಮನೂರು ಶಿವಶಂಕರಪ್ಪ ಸಚಿವರಾಗಿದ್ದಾಗ ₹ 5 ಕೋಟಿ ವೆಚ್ಚದಲ್ಲಿ ಆರಂಭವಾದ ಕಾಮಗಾರಿ 2018ರಲ್ಲಿ ಮುಕ್ತಾಯಗೊಂಡಿತ್ತು. ₹ 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗಾಜಿನಮನೆಯು 108 ಮೀಟರ್‌ ಉದ್ದ, 68 ಮೀಟರ್‌ ಅಗಲ, 18 ಮೀಟರ್ ಎತ್ತರವಿದೆ. ಇದು ದೇಶದಲ್ಲಿರುವ ಗಾಜಿನಮನೆಗಳಲ್ಲೇ ದೊಡ್ಡದು ಎಂದು ಗುರುತಿಸಲಾಗಿದೆ. 2018ನೇ ಸಾಲಿನ ‘ಝಾಕ್‌’ ರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಗಿದೆ. ಜಿಮ್‌, ಮಕ್ಕಳ ಪಾರ್ಕ್‌ಗಳೂ ಇವೆ. ದಿನಕ್ಕೆ ಸರಾಸರಿ 200ರಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರದ ಕೊನೆಯ ದಿನ ಹಾಗೂ ರಜೆಯ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಸಾವಿರ ದಾಟುತ್ತದೆ.

ಗಾಜಿನಮನೆಯ ಮತ್ತೊಂದು ವಿಶೇಷವೆಂದರೆ ಸುತ್ತಲೂ ಇರುವ ಉದ್ಯಾನಗಳಲ್ಲಿರುವ ವಿದೇಶಿ ಸಸ್ಯಗಳು ಹಾಗೂ ಬೋನ್ಸಾಯ್‌ ಸಸ್ಯಗಳು. ಆಲಂಕಾರಿಕ ಗಿಡಗಳಿಗೆ ತರಹೇವಾರಿ ಆಕಾರಗಳನ್ನು ನೀಡಿರುವುದು ಉದ್ಯಾನಕ್ಕೆ ಸೊಬಗು ನೀಡಿದೆ. ಕಳೆದ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವಗಳಂದು ಗಾಜಿನಮನೆಯಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಗಳಂದು 50,000ಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ.

ಪ್ರವೇಶ ಶುಲ್ಕವನ್ನು ಕಳೆದ ವರ್ಷದಿಂದ ನಿಗದಿ ಮಾಡಲಾಗಿದೆ. ವಯಸ್ಕರಿಗೆ ₹ 20, ಮಕ್ಕಳಿಗೆ ₹ 10 (10ವರ್ಷ ಮೇಲಿನವರಿಗೆ), ಕ್ಯಾಮೆರಾ ಬಳಸುವುದಿದ್ದರೆ ₹ 100, ಪ್ರೀ, ಪೋಸ್ಟ್‌ ವೆಡ್ಡಿಂಗ್‌ ವಿಡಿಯೊ ಕ್ಯಾಮೆರಾ ಚಿತ್ರೀಕರಣ ದಿನಕ್ಕೆ ₹ 10,000, ಚಲನಚಿತ್ರ ಚಿತ್ರೀಕರಣ ದಿನಕ್ಕೆ ₹ 25,000, ಕಿರುತೆರೆ ಧಾರಾವಾಹಿ, ಕಿರುಚಿತ್ರ ಚಿತ್ರೀಕರಣ ದಿನಕ್ಕೆ ₹ 10,000, ಪೊಲೀಸ್‌ ಇಲಾಖೆಯ ಅನುಮತಿಯ ಮೇರೆಗೆ ಡ್ರೋಣ್‌ ಕ್ಯಾಮೆರಾ ಚಿತ್ರೀಕರಣಕ್ಕೆ ₹ 5000 ದರ ನಿಗದಿಗೊಳಿಸಲಾಗಿದೆ.

ಇಂಥ ಸುಂದರ ಗಾಜಿನಮನೆ ಇರುವುದು ನಗರದಿಂದ 6 ಕಿ.ಮೀ ದೂರದಲ್ಲಿ. ಆದರೆ ಇಲ್ಲಿಗೆ ಹೋಗಲು ನೇರವಾದ ಬಸ್‌ ವ್ಯವಸ್ಥೆ ಇಲ್ಲದಿರುವುದು ಹಾಗೂ ಹೋಗುವ ಎರಡು ದಾರಿಗಳೂ ಗುಂಡಿ ಬಿದ್ದಿರುವುದು ಪ್ರಮುಖ ಕೊರತೆಯಾಗಿ ಕಾಡುತ್ತಿದೆ. ಅಪಾರ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣವಾಗಿದ್ದರೂ ಅದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಆಗದಿರುವುದರಿಂದ ಸ್ಥಳೀಯ ಪ್ರವಾಸೋದ್ಯಮಕ್ಕೆ ಹಿನ್ನಡೆಯಂತಾಗಿದೆ.

ಸದ್ಯ ಮಳೆಗಾಲವಾಗಿರುವುದರಿಂದ ಗಾಜಿನಮನೆ ಸ್ವಚ್ಛವಾಗಿ ಕಾಣುತ್ತದೆ. ಆದರೆ ಬೇಸಿಗೆಯಲ್ಲಿ ಮಾತ್ರ ದೂಳು ಆವರಿಸುತ್ತದೆ. ಇದನ್ನು ಸ್ವಚ್ಛಗೊಳಿಸಲು ಸದ್ಯ ನಿರ್ವಹಣೆ ಮಾಡುತ್ತಿರುವ ತೋಟಗಾರಿಕೆ ಇಲಾಖೆಯ ಬಳಿಯೂ ಸೂಕ್ತ ಉಪಕರಣಗಳು ಇಲ್ಲ. ಗುತ್ತಿಗೆ ಕಾರ್ಮಿಕರೇ ಸಾಧ್ಯವಾದಷ್ಟು ಸ್ವಚ್ಛತೆ ಮಾಡುತ್ತಿದ್ದಾರೆ.

‘ಇಲ್ಲಿಗೆ ಬರುವ ದಾರಿ ತುಂಬಾ ಹದಗೆಟ್ಟಿದೆ. ದ್ವಿಚಕ್ರವಾಹನದಲ್ಲಂತೂ ಓಡಾಡುವುದೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗುತ್ತದೆ. ವ್ಯವಸ್ಥಿತ ರಸ್ತೆ ನಿರ್ಮಾಣವಾದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಇನ್ನು ಸುರಕ್ಷತಾ ವ್ಯವಸ್ಥೆಯನ್ನೂ ಬಲಪಡಿಸಬೇಕಿದೆ. ಸುತ್ತಲೂ ಖಾಲಿ ಲೇಔಟ್‌ಗಳೇ ಇರುವುದರಿಂದ ಪ್ರದೇಶ ನಿರ್ಜನವಾಗಿರುತ್ತದೆ. ಪುಂಡರು ಮದ್ಯಪಾನ ಮಾಡಿ ಗಾಜಿನ ಮನೆಯ ಆವರಣ ಹೊಕ್ಕು ಎಲ್ಲಾದರೂ ಕುಳಿತುಬಿಡುತ್ತಾರೆ. ಅವರನ್ನು ಸಂಜೆ 5.30ರ ನಂತರ ಹುಡುಕಿ ಹೊರಕಳುಹಿಸುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ’ ಎಂದು ತೋಟಗಾರಿಕಾ ಇಲಾಖೆಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

‘ಸದ್ಯಕ್ಕೆ ಪ್ರವೇಶ ಶುಲ್ಕ ಬಿಟ್ಟರೆ ಆದಾಯ ಏನೂ ಇಲ್ಲ. ಗಾಜಿನಮನೆ ನಿರ್ವಹಣೆಗೆ ತೋಟಗಾರಿಕೆ ಇಲಾಖೆಯಿಂದ ವರ್ಷಕ್ಕೆ ₹ 30 ಲಕ್ಷ ನೀಡಲಾಗುತ್ತಿದೆ. 8–10 ಗಾರ್ಡನರ್‌ಗಳು ಹಾಗೂ ಉಳಿದ ಕೂಲಿ ಕಾರ್ಮಿಕರು, ವಿದ್ಯುತ್‌ಶುಲ್ಕಗಳಿಗೇ ಇದು ಸಾಲುತ್ತಿಲ್ಲ. ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ ₹ 1 ಕೋಟಿ ಅಗತ್ಯವಿದೆ. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುತ್ತಿದೆ. ಆದರೂ ಮಂಜೂರಾಗಿಲ್ಲ. ಅಗತ್ಯವಾದಷ್ಟು ಅನುದಾನ ಲಭ್ಯವಾದರೆ ಮಾತ್ರ ಗಾಜಿನಮನೆ ಹಾಗೂ ಉದ್ಯಾನವನ್ನು ಇನ್ನಷ್ಟು ಸುಂದರವಾಗಿಸಿ, ಪ್ರವಾಸಿಗರು ಬರುವಂತೆ ಮಾಡಬಹುದು. ನಿರ್ವಹಣೆಗೆ ಅಗತ್ಯವಾದ ಯಂತ್ರಗಳನ್ನು ಖರೀದಿಸಬೇಕಿದೆ. ಸಂಜೆಯ ವೇಳೆ ಹಾಗೂ ವೀಕೆಂಡ್‌ಗಳಲ್ಲಿ ಸಾವಿರಾರು ಜನ ಬರುವುದರಿಂದ ಬ್ಯಾರಿಕೇಡ್‌, ಲೈಟಿಂಗ್‌ ವ್ಯವಸ್ಥೆ ಇದ್ದರೆ ರಾತ್ರಿ 8ರವರೆಗೂ ತೆರೆಯಬಹುದು. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇರುವಂತೆ ಇದಕ್ಕೇ ಪ್ರತ್ಯೇಕ ಉಪನಿರ್ದೇಶಕರು ಹಾಗೂ ಐವರು ಕಾಯಂ ಸಿಬ್ಬಂದಿ ನೀಡುವಂತೆ ಪ್ರಸ್ತಾವವನ್ನೂ ಕಳುಹಿಸಲಾಗಿದೆ. ರಸ್ತೆ ಮಾಡಿಸಿಕೊಡಬೇಕಿದೆ. ನಿತ್ಯ ಬಸ್‌ಗಳು ಎದುರಿಗೇ ಬಂದು ನಿಲ್ಲುವಂತೆ ಮಾಡಿದರೆ ಗಾಜಿನಮನೆ ಖ್ಯಾತ ಪ್ರವಾಸಿತಾಣವಾಗುವುದರಲ್ಲಿ ಸಂಶಯವಿಲ್ಲ’ ಎಂದು ಅವರು ತಿಳಿಸಿದರು.

‘ಗಾಜಿನಮನೆಗೆ ಹೋಗುವ ರಸ್ತೆಯ ದುಃಸ್ಥಿತಿ ಬಗ್ಗೆ ಅರಿವಿದೆ. ರಸ್ತೆ ಹಾಗೂ ಇತರ ಮೂಲಸೌಕರ್ಯಗಳನ್ನು ಪ್ರವಾಸೋದ್ಯಮ ಇಲಾಖೆಯ ಅನುದಾನದಡಿ ಮಾಡಿಸಿಕೊಡುವ ಅವಕಾಶವಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮನವಿ ಪ್ರಸ್ತಾವ ಕಳುಹಿಸಿಕೊಟ್ಟರೆ ಪ್ರಯತ್ನಿಸಬಹುದು. ಆದರೆ ಸದ್ಯ ಕೋವಿಡ್‌ ಸಂಕಷ್ಟ ಪರಿಸ್ಥಿತಿಯಲ್ಲಿ ಯಾವುದೇ ಅನುದಾನ ಮಂಜೂರಾಗುವ ನಿರೀಕ್ಷೆಯಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಸಹಾಯಕ ನಿರ್ದೇಶಕ ಫಾಲಾಕ್ಷಿ ಬಿ. ತಿಳಿಸಿದರು.

‘ಸ್ಮಾರ್ಟ್‌ ಸಿಟಿ’ ಕಾಮಗಾರಿಯ ಅಡಿ ಗಾಜಿನಮನೆಗಾಗಿ ₹ 5 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ಇ–ಶೌಚಾಲಯಗಳನ್ನು ಅಳವಡಿಸಲಾಗಿದೆ. ಸಂಗೀತ ಕಾರಂಜಿ, ಅಕ್ವೇರಿಯಂ ಸೇರಿದಂತೆ ಉಳಿದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಫುಡ್‌ ಪಾರ್ಕ್, ಕ್ಯಾಂಟೀನ್‌ ಮೊದಲಾದವನ್ನು ನಿರ್ಮಿಸಿ ಎಂಬ ಪ್ರವಾಸಿಗರ ಬೇಡಿಕೆಗಳು ಯಾವಾಗ ಅನುಷ್ಠಾನಕ್ಕೆ ಬರುತ್ತವೆಯೋ ಕಾಯ್ದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT