ಬುಧವಾರ, ಜೂನ್ 23, 2021
26 °C

ಸ್ಟ್ರೆಸ್ ಮರೆಸುವ ಪ್ರವಾಸಿ ತಾಣ ಇಟಲಿಯ ಸ್ಟ್ರೇಸಾ...

ಎಸ್. ಪಿ. ವಿಜಯಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಒಂದಾನೊಂದು ಕಾಲದಲ್ಲಿ ರೈತರು, ಮೀನುಗಾರರಂತಹ ಸಮುದಾಯದವರ ಹೊಟ್ಟೆಪಾಡಿಗೆ ಆಸರೆಯ ಹಳ್ಳಿಯಾಗಿತ್ತು ಸ್ಟ್ರೇಸಾ, ಈಗ ಇಟಲಿ ದೇಶದ ಅತಿದೊಡ್ಡ ಪ್ರವಾಸಿ ತಾಣವಾಗಿದೆ.

ನಾವು ಸ್ವಿಟ್ಜರ್‌ಲೆಂಡ್‌ ಪ್ರವಾಸದ ವೇಳೆ ಸೇಂಟ್ ಮೊರಿಟ್ಜ್ ಪರ್ವತ ತಪ್ಪಲಿನ ಪುಟ್ಟ ಊರಿನಿಂದ ‌ಸೆರ್‍ಮಾಟ್ ಎಂಬ ಎತ್ತರದ ಪರ್ವತಶ್ರೇಣಿಯ ಮತ್ತೊಂದು ಹಳ್ಳಿಗೆ ಹೋಗುವಾಗ ಈ ಸ್ಟ್ರೇಸಾ ಹಳ್ಳಿಯನ್ನು ದಾಟಬೇಕಿತ್ತು. ಈ ಹಳ್ಳಿ ಇರುವುದು ಇಟಲಿ ದೇಶದಲ್ಲಿ.

ಹಳ್ಳಿ ಎಂದರೆ ನಮ್ಮ ಹಳ್ಳಿಗಳಂತಲ್ಲ. ಇವುಗಳ ಸ್ವರೂಪ, ಚೆಲುವು, ಭವ್ಯತೆಯನ್ನು ಕಂಡೇ ಅರಿಯಬೇಕು. ಈ ಪಯಣಪೂರ್ತಿ ಸಾಗುವುದು ಆಲ್ಫ್ಸ್‌ ಪರ್ವತಶ್ರೇಣಿಯ ಹಿಮಾಚ್ಛಾದಿತ ತಪ್ಪಲಿನಲ್ಲಿ. ಅಗಾಧವಾದ ಪರ್ವತಗಳನ್ನು ಕೊರೆದು ಮಾಡಿರುವ ಉದ್ದುದ್ದದ ಸುರಂಗಗಳು, ಎತ್ತರದ ತಿರುವುಗಳಲ್ಲೂ ಟಾರ್ ರಸ್ತೆಗಳು, ಭಾರಿ ಕಣಿವೆಗಳು, ಎಡಬದಿಗೆ ನೀಲಬಣ್ಣದ ನೂರು ಕಿ.ಮೀ. ಉದ್ದದ ಸರೋವರ, ಬಲಬದಿಗೆ ಮುಗಿಲೆತ್ತರದ ಪರ್ವತ, ಅಬ್ಬಾ! ಸುಮಾರು ಏಳೆಂಟು ಗಂಟೆಗಳ ಈ ಪಯಣದುದ್ದಕ್ಕೂ ಇಂಥದ್ದೇ ಪ್ರಕೃತಿ ಸಿರಿ ಕಣ್ಣನ್ನು ತಂಪಾಗಿಸುತ್ತದೆ.

ಇಟಲಿಯ ಆಲ್ಫ್ಸ್‌ ಪರ್ವತ ಶ್ರೇಣಿಯ ಸೆರಗಿನಡಿ ನಾವು ಹಾದುಹೋದ ಪ್ರದೇಶವನ್ನು ಬೆಲಿಂಜೋನಾ ಪಾಸ್ ಎನ್ನುತ್ತಾರೆ. ಈ ಹಾದಿಯಲ್ಲಿ ಸಾಗುತ್ತಾ, ಸುಂದರ ಪರಿಸರವನ್ನು ಆಸ್ವಾದಿಸುವಾಗಲೇ ಸ್ಟ್ರೇಸಾ ಹಳ್ಳಿಯನ್ನು ಪ್ರವೇಶಿಸಿದ್ದೆವು.

ಸ್ಟ್ರೇಸಾದಲ್ಲಿ ಬಲಕ್ಕೆ ಕಟ್ಟಡಗಳು, ಎಡಕ್ಕೆ ಸರೋವರ. ಆದರೆ ಇವು ಬರಿಯ ಕಟ್ಟಡಗಳಲ್ಲ. ವೈವಿಧ್ಯದಲ್ಲಿ ಬೆರಗು ಹುಟ್ಟಿಸುವಂತಹವು. ಹಾಗೇ ಸಾಗುವಾಗ ಬಲಭಾಗದಲ್ಲಿ ಅರಮನೆಯಂಥ ಹೋಟೆಲ್ ಕಂಡಾಗ ‘ವಾವ್.. ಎಷ್ಟು ಚಂದ ಇದೆ..’ ಎನ್ನಿಸಿತು. ಹಾಗೆನ್ನುವಾಗಲೇ ನಮ್ಮ ಬಸ್ ಆ ಹೋಟೆಲ್ ಕಾಂಪೌಂಡ್ ಒಳಹೊಕ್ಕಿತ್ತು. ಅಷ್ಟೇ ಅಲ್ಲ, ‌ನಮ್ಮ ವಾಸ್ತವ್ಯ ಇದೇ ಹೋಟೆಲ್‍ನಲ್ಲಿತ್ತು ಎಂದು ಕೇಳಿದಾಗ ಖುಷಿಯಾಯಿತು.

ಈ ಊರಿನ ಇತಿಹಾಸ....

ಮ್ಯಾಗ್ಗಿಯೋರ್ ಎಂಬ ಸರೋವರದ ದಡದಲ್ಲಿದೆ ಸ್ಟ್ರೇಸಾ. ಈ ಸರೋವರದ ಒಂದು ಭಾಗ ಸ್ವಿಟ್ಜರ್‌ಲೆಂಡ್‌ಗೂ ಚಾಚಿಕೊಂಡಿದೆ. ಸ್ಟ್ರೇಸಾ ಎಂದರೆ ‘ಎ ಸ್ಟ್ರಿಪ್ ಆಫ್ ಲ್ಯಾಂಡ್’ ಎಂಬ ಅರ್ಥವಿದೆ. ಹೆಸರಿಗೆ ತಕ್ಕಂತೆ ಈ ಊರಿನಲ್ಲಿರುವುದು ಹದಿಮೂರು ಮೈಲಿ ಉದ್ದದ ಒಂದೇ ಒಂದು ರಸ್ತೆ. ಒಂದು ಬದಿಗೆ ಅಂಗಡಿ, ಹೋಟೆಲ್‌, ಮನೆಗಳು. ಇದರಲ್ಲಿ ಸರ್ಕಾರಿ ಸಂಬಂಧಿತ ಕಚೇರಿಗಳ ಜತೆಗೆ ಎಲ್ಲ ರೀತಿಯ ಕಟ್ಟಡಗಳೂ ಇವೆ. ಎದುರಿನ ಬದಿಯಲ್ಲಿ ಸಾಗರದಂತೆ ಕಾಣುವ ಸರೋವರವಿದೆ. ಅದರಲ್ಲಿ ಬೊರೋಮಿಯಂ, ಇಸೋಲಾಬೆಲ್ಲಾ, ಇಸೋಲಾಮಾಂಡ್ರೆ ಎಂಬ ಸುಂದರವಾದ ದ್ವೀಪಗಳಿವೆ. ಹಿಂದಕ್ಕೆ ಸುತ್ತಲೂ ಪರ್ವತರಾಶಿ ಇದ್ದು ಈ ಊರಿಗೆ ರಕ್ಷಣಾಗೋಡೆಯಂತಿದೆ. ಇಲ್ಲಿರುವ ದೊಡ್ಡದೊಡ್ಡ ಗ್ಲೇಸಿಯರ್‌ಗಳಿಂದ ಹರಿದುಬರುವ ನೀರಿನಿಂದ ಈ ಮ್ಯಾಗ್ಗಿಯೋರ್ ಸರೋವರ ಯಾವಾಗಲೂ ಭರ್ತಿಯಾಗಿ ಹರಿಯುತ್ತಿರುತ್ತದೆ. ಈ ಊರಿನ ಎಲ್ಲ ಕಟ್ಟಡಗಳು, ಅದರ ಎದುರಿನ ಮರಗಳಲ್ಲಿ ಬಣ್ಣ ಬಣ್ಣದ ಹೂವುಗಳನ್ನು ತುಂಬಿಕೊಂಡು, ದೂರದಿಂದ ನೋಡಿದರೆ ಹೂವಿನಬೊಕೆಯಂತೆ ಕಾಣುತ್ತದೆ.

ಒಂದಾನೊಂದು ಕಾಲದಲ್ಲಿ ಸಣ್ಣ ಸಮುದಾಯದ ರೈತರು, ಮೀನುಗಾರರು ಹೊಟ್ಟೆಪಾಡಿಗೆ ಜೀವಿಸುತ್ತಿದ್ದ ಹಳ್ಳಿಯಾಗಿತ್ತು ಸ್ಟ್ರೇಸಾ. ನಂತರದ ನೂರಿನ್ನೂರು ವರ್ಷಗಳಲ್ಲಿ ಮಿಲಾನ್‌ನ ಬೊರೊಮಿಯೊ ಎಂಬ ಗಣ್ಯ ಕುಟುಂಬವೊಂದು ಇಲ್ಲಿಯ ಜಾಗದ ಒಡೆತನ ಪಡೆದು ಈ ಹಳ್ಳಿಯನ್ನು ಸುಂದರ ಊರಾಗಿಸುವ ಕಾರ್ಯದಲ್ಲಿ ತೊಡಗಿತು. ಇದರ ಫಲವಾಗಿ 14ನೇ ಶತಮಾನದ ಕೊನೆಯ ಹೊತ್ತಿಗೆ ಇದೊಂದು ಸುಂದರ ಸುಸಜ್ಜಿತ ಹಳ್ಳಿ ಎನ್ನಿಸಿಕೊಂಡಿತು. 16– 17ನೇ ಶತಮಾನದಲ್ಲಿ, ಈ ಸರೋವರದ ಬೆಲ್ಲಾ ಮತ್ತು ಮಾಡ್ರೆ ದ್ವೀಪಗಳಲ್ಲಿ ಸುಂದರವಾದ ಅರಮನೆ ಕಟ್ಟಿಸಿದರು. 18ನೇ ಶತಮಾನದ ಕೊನೆಗೆ ರೈಲು, ಬಸ್ ಮಾರ್ಗಗಳ ರಚನೆಯಾಯಿತು. ಆಲ್ಫ್ಸ್‌ ಪರ್ವತ ಕೊರೆದು ‘ಸಿಂಪ್ಲನ್‍ಪಾಸ್ ಟನಲ್’ ನಿರ್ಮಾಣವಾಯಿತು. ಇದಾದ ಮೇಲೆ ಪ್ರವಾಸಿಗರು, ಅದರಲ್ಲೂ ಯೂರೋಪಿಯನ್ನರು ಹೆಚ್ಚುಹೆಚ್ಚಾಗಿ ಬರಲಾರಂಭಿಸಿದರು. ಈ ಸುರಂಗ ಆಚೀಚಿನ ದೇಶಗಳಿಗೆ ಹಾದುಹೋಗುವ ರಹದಾರಿಯೂ ಆಗಿರುವುದರಿಂದ, ಸ್ಟ್ರೇಸಾ ಎಲ್ಲರ ಮೆಚ್ಚಿನ ಪ್ರವಾಸಿ ತಾಣವಾಯ್ತು. ಈ ಊರಿನ ಸೌಂದರ್ಯ, ಪ್ರಶಾಂತತೆಗೆ ಮರುಳಾಗಿ ಇಲ್ಲಿಗೆ ಆಗಾಗ ಬಂದು ವಿಶ್ರಾಂತಿ, ವಿಹಾರ ಬಯಸುತ್ತಿದ್ದವರಲ್ಲಿ ಬರ್ನಾರ್ಡ್‌ ಷಾ , ರಾಕ್‍ ಫೆಲ್ಲರ್, ಹೆಮಿಂಗ್‍ವೇ, ಚಾರ್ಲಿ ಚಾಪ್ಲಿನ್ ಮುಂತಾದ ಗಣ್ಯರೂ ಇದ್ದರು.

ಇಲ್ಲಿಯ ವೈಶಿಷ್ಟ್ಯ...

ಈ ಊರಿನ ಬಲಭಾಗದಲ್ಲಿ ಅಂಗಡಿಸಾಲು, ಐವತ್ತಕ್ಕೂ ಹೆಚ್ಚು ಹೋಟೆಲ್‍ಗಳಿವೆ. ಭವ್ಯವಾದ ವಿಲ್ಲಾಗಳಿವೆ. ಆರ್ಟ್ ಗ್ಯಾಲರಿಗಳು, ಚರ್ಚ್, ಕೆಫೆ ರೆಸ್ಟೊರೆಂಟ್‌ಗಳಿವೆ. ಇಡೀ ಊರನ್ನೇ ಉದ್ಯಾನದಂತೆ ವಿನ್ಯಾಸಗೊಳಿಸಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲೆಂದೇ ಇಲ್ಲಿ ಪ್ರತಿವರ್ಷ ‘ಸಾತೆಮಾನೆ ಮ್ಯುಸಿಕಾ’ ಎಂಬ ಅಂತರರಾಷ್ಟ್ರೀಯ ಸಂಗೀತ ಉತ್ಸವ ನಡೆಯುತ್ತದೆ.

ಇದಲ್ಲದೆ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳೂ, ಸಂಗೀತ ಕಚೇರಿಗಳೂ ನಡೆಯುತ್ತಿರುತ್ತವೆ.
ಮ್ಯಾಗ್ಗಿಯೋರ್ ಸರೋವರದಲ್ಲಿರುವ ದ್ವೀಪಗಳು, ಅದರ ಹಿಂದಿರುವ ಪರ್ವತಗಳಲ್ಲಿ ಹೋಟೆಲ್, ಗಾರ್ಡನ್‍ಗಳಿವೆ. ಬೇಸಿಗೆಯ ವಿಲ್ಲಾಗಳಿವೆ. ಇಲ್ಲಿಗೆಲ್ಲಾ ಕರೆದೊಯ್ಯಲು ಕೇಬಲ್‍ಕಾರ್ ವ್ಯವಸ್ಥೆ ಇದೆ. ಈ ದ್ವೀಪಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

ಒಟ್ಟಿನಲ್ಲಿ ನಿಸರ್ಗಸಿರಿಯ ವೈವಿಧ್ಯ ಇಲ್ಲಿ ಚೆಲ್ಲಾಡಿದೆ. ಆ ಕಾರಣಕ್ಕಾಗಿ, ಇಲ್ಲಿ ನಡೆಯುವ ಹಬ್ಬ, ಉತ್ಸವಗಳಿಗಾಗಿ ಹೆಚ್ಚು ಪ್ರವಾಸಿಗರು ಸ್ಟ್ರೇಸಾಕ್ಕೆ ಬರುತ್ತಾರೆ. ಇಲ್ಲಿ ನಾವು ಭೇಟಿಯಿತ್ತ ದ್ವೀಪ ‘ಬೊರೊಮಿಯನ್ ಐಲ್ಯಾಂಡ್’.

ಬೊರೊಮಿಯನ್ ಐಲ್ಯಾಂಡ್ ....

ಸ್ಟ್ರೇಸಾದ ಸರೋವರದಲ್ಲಿರುವ ದ್ವೀಪಸಮೂಹಕ್ಕೆ ಬೊರೊಮಿಯನ್ ಐಲ್ಯಾಂಡ್ ಎಂದು ಹೆಸರು. ಈ ದ್ವೀಪಕ್ಕೇ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಕಾರಣ ಇಲ್ಲಿರುವ ಅರಮನೆ, ಗಾರ್ಡನ್‍ಗಳ ವಿನ್ಯಾಸ, ಅಪರೂಪದ ಬಿಳಿಯ ನವಿಲು, ಮನಸೂರೆಗೊಳ್ಳುವ ತರಹೇವಾರಿ ಹೂವುಗಳು ಕಾರಣ.

ಹೋಟೆಲ್, ಹಾದಿ ಹೀಗೆ ಎಲ್ಲಿ ಕುಳಿತರೂ ಎದುರಿಗೇ ಈ ದ್ವೀಪ, ಅರಮನೆ ಎಲ್ಲರ ಗಮನ ಸೆಳೆದುಬಿಡುತ್ತದೆ. ಬೋಟ್‌ನಲ್ಲಿ ಕುಳಿತು ಆ ದ್ವೀಪಕ್ಕೆ ತಲುಪಲು ಬೇಕಾಗುವ ಹದಿನೈದು ನಿಮಿಷಗಳ ನೀರ ಮೇಲಿನ ಯಾನ ನಿಜಕ್ಕೂ ಮೈಮರೆಸಿಬಿಡುವಂಥದ್ದು. ಸುತ್ತಮುತ್ತಲಿನ ಪರ್ವತಗಳಿಂದ ಬೀಸುವ ತಂಗಾಳಿ, ಕಣ್ತುಂಬುವ ಹಸಿರು, ನೀಲಾಗಸ, ತೇಲುವ ಬೆಳ್ಳಿಯಮೋಡ ಆಹಾ! ಎನ್ನುವಂಥಹ ಪಿಕ್‍ನಿಕ್. ಬೋಟ್‌ನಿಂದ ಇಳಿದು ಮುಂದೆ ಆ ಕ್ಯಾಸಲ್ ತನಕ ನಡೆಯಲು ಸೇತುವೆಯಂಥ ಹಾದಿಯೊಂದನ್ನು ನಿರ್ಮಿಸಿದ್ದಾರೆ. ಇಲ್ಲಿ ನಿಂತು ಎದುರಿನ ಕ್ಯಾಸಲ್ ನೋಡುವುದು ಮರುಳುಗೊಳಿಸುವ ಅನುಭವ.

1630ರಲ್ಲಿ ಅರಿಸ್ಟೋಕ್ರಾಟ್ ಫ್ಯಾಮಿಲಿಯ ‘ಕಾರ್ಲೋ ನೇಬೊರೋಮಿಯೋ’ ಈ ದ್ವೀಪಕ್ಕೆ ಮತ್ತಷ್ಟು ಹೊಸರೂಪ ಕೊಟ್ಟರು. ಅರಮನೆ, ವಿನೂತನ ಗಾರ್ಡನ್ ನಿರ್ಮಿಸಿ ತನ್ನ ಪತ್ನಿ ‘ಇಸಾಬೆಲ್ಲಾ’ಳ ಹೆಸರನ್ನೇ ಈ ಅರಮನೆಗೆ ಇಟ್ಟರು. ಹಾಗಾಗಿ ಈ ಕ್ಯಾಸೆಲ್ ‘ಇಸೋಲಾಬೆಲ್ಲಾ ಪ್ಯಾಲೇಸ್’ ಎಂದೂ, ಈ ದ್ವೀಪ ‘ಇಸೋಲಾಬೆಲ್ಲಾ ಐಲ್ಯಾಂಡ್‌’ ಎಂದೇ ಖ್ಯಾತಿಯಾಗಿದೆ.

ಕ್ಯಾಸೆಲ್‍ನ ಒಳಹೊಕ್ಕಾಗ.....

ಇಲ್ಲಿಯ ಕೋಣೆಗಳು, ಪಡಸಾಲೆಗಳು, ಪೀಠೋಪಕರಣಗಳು ವಿಶಿಷ್ಟ ವಿನ್ಯಾಸದ್ದಾಗಿವೆ. ಒಂದೇ ಒಂದು ಬೇಸರವೆಂದರೆ ಇಲ್ಲಿ ಫೋಟೊಗ್ರಫಿ ನಿಷಿದ್ಧ.

ಇಲ್ಲಿಯ ಅಸೀಮ ಚೆಲುವಿನ ಉದ್ಯಾನವನ್ನು ಹತ್ತು ಅಂತಸ್ತುಗಳಲ್ಲಿ ನಿರ್ಮಿಸಿದ್ದಾರೆ. ಹತ್ತನೆಯ ಮಾಳಿಗೆಯಲ್ಲಿ ಪೂರ್ಣಪ್ರಮಾಣದ ಉದ್ಯಾನ, ಶಿಲ್ಪಗಳು, ಅಪರೂಪದ ಹೂವುಗಳ ತರಹೇವಾರಿ ಮರಗಿಡಗಳಿವೆ. ವಿನ್ಯಾಸದ ತುತ್ತತುದಿಯಲ್ಲಿ ಬೊರೋಮಿಯನ್ನರ ಚಿಹ್ನೆ ಏಕ ಕೊಂಬಿನ ಕುದುರೆಯಾಕಾರದ ಪ್ರಾಣಿ ಶಿಲ್ಪವನ್ನು ಕಾಣಬಹುದು.  ಈ ಸೌಂದರ್ಯದ ಜೊತೆಗೆ ಇಲ್ಲೆಲ್ಲಾ ಸೂರ್ಯಾಸ್ತ ತಡವಾಗಿಯಾದ್ದರಿಂದ ಅಕ್ಷರಶಃ ನಮಗೆ ಸಮಯ ಜಾರುವುದು ಅರಿವಿಗೆ ಬರುವುದೇ ಇಲ್ಲ.

ಇಟಲಿಯ ಆಲ್ಫ್ಸ್‌ ಪರ್ವತ ಶ್ರೇಣಿಯ ಮಡಿಲಲ್ಲಿರುವ ಸ್ಟ್ರೇಸಾ ಎಂಬ ಈ ಪುಟ್ಟ ಊರು ನಿಸರ್ಗಸಿರಿಯಲ್ಲಿ ಅನನ್ಯವೆನ್ನಿಸಿಕೊಂಡಿದೆ.

ಇದನ್ನೂ ಓದಿ: ಪೆರುವಿನ ಪವಿತ್ರ ಕಣಿವೆಯಲ್ಲಿ

ಚಿತ್ರಗಳು: ಲೇಖಕರವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು