ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿಯ ರಾಯಗಡ ಕೋಟೆ | ಬೆಟ್ಟಗಳ ಮೇಲೆ ಇತಿಹಾಸದ ಚಿತ್ತಾರ

Last Updated 19 ಸೆಪ್ಟೆಂಬರ್ 2019, 10:13 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಪುಣೆಯಿಂದ ಹೊರಟು ಮಹಾಡ್‍ ತಲುಪಿದೆವು. ಅಲ್ಲಿಂದ ರಾಯಗಡಕ್ಕೆ ಬಂದಾಗ ನಡು ಮಧ್ಯಾಹ್ನ. ಮಹಿಷಾಸುರನಂತೆ ಮಲಗಿದ ಬೆಟ್ಟಗಳನ್ನು ನೋಡಿದಾಗ ರಾಯಗಡ ಕೋಟೆ ಹತ್ತಲು ಮನಸ್ಸು ಹಿಂದೇಟು ಹಾಕುತ್ತಿತ್ತು. ಹೇಗೂ ರೋಪ್‌ವೇ ಇದೆಯಲ್ಲಾ ಎಂದು ಯೋಚಿಸಿ, ಟ್ರಾಲಿಗಳಲ್ಲಿ ಹತ್ತಿ ಕುಳಿತೆವು. ಟ್ರಾಲಿ, ಹಗ್ಗದ ಮೇಲೆ ಸಾಗುತ್ತಿದ್ದಾಗ ಮೋಡವೊಂದು ನಮ್ಮ ನೆತ್ತಿಯನ್ನು ಸವರಿಕೊಂಡು ಹೋಯಿತು.

ನಮ್ಮ ಟ್ರಾಲಿ ಮೋಡದೊಳಗೆ ಲೀನವಾದಂತೆ ಭಾಸವಾಯಿತು. ಮೋಡಗಳನ್ನು ಸರಿಸಿಕೊಂಡು ಸಾಗಿದ ಟ್ರಾಲಿ ಸೇರಿದ್ದು ರಾಯಗಡವೆಂಬ ರುದ್ರರಮಣೀಯ ಕೋಟೆಯ ನೆತ್ತಿಯ ಮೇಲೆ. ಅಲ್ಲಿದ್ದ ಸುಮಾರು ನೂರು ಎಕರೆಯಲ್ಲಿ ಹರಡಿಕೊಂಡಿದ್ದ ಇತಿಹಾಸದ ಚಿತ್ತಾರ ಕಂಡು ಬೆರಗಾದೆ.

ಇದು ಶಿವಾಜಿಯ ಮಂತ್ರಿ ಹಿರೋಜಿ ಹಿಂದೋಳ್ಕರ್ 14 ವರ್ಷಗಳ ಕಾಲ ಶ್ರಮಪಟ್ಟು ನಿರ್ಮಿಸಿದ ಕೋಟೆ. ಇದು ಶಿವಾಜಿ ಮೆಟ್ಟಿದ ನೆಲವೂ ಹೌದು. ಹಾಗಾಗಿ, ನನಗೆ ಶಿವಾಜಿ ಇಲ್ಲೇ ಎಲ್ಲೋ ನೆಲೆಸಿರಬೇಕೆಂದು ಅನ್ನಿಸುತ್ತಿತ್ತು.

ಕೋಟೆಗೆ ನಾಲ್ಕು ದ್ವಾರಗಳಿವೆ. ಕೋಟೆ ಪ್ರವೇಶಿಸುವ ಪ್ರಮುಖ ದ್ವಾರ. ಉಳಿದಿದ್ದು ಪೂರ್ವದ್ವಾರ, ಹುಲಿದ್ವಾರ. ನಾವು ಪೂರ್ವ ದ್ವಾರದಿಂದ ಕೋಟೆ ಪ್ರವೇಶಿಸಿದೆವು. ಒಳ ಹೊಕ್ಕಾಗ ಸಾಲು ಸಾಲು ರಾಣಿ ನಿವಾಸಗಳು ಕಂಡವು. ಅವುಗಳಿಗೆ ತಾಗಿಕೊಂಡಂತೆ ಶೌಚಾಲಯ ವ್ಯವಸ್ಥೆ, ಅದೂ ಬೆಟ್ಟದ ನೆತ್ತಿಯಲ್ಲಿ. ಅದರ ವಿರುದ್ಧ ದಿಕ್ಕಿಗೆ ಮಂತ್ರಿ ಆವಾಸ ಕಂಡಿತು. ಮುಂದೆ ಬಲಕ್ಕೆ ಹೊರಳಿ ನೇರ ಮುಂದೆ ಹೋದರೆ ಏಳು ಅಂತಸ್ತಿನ ವಿಜಯಸ್ತಂಭ. ಶಿವಾಜಿ, ಪ್ರತಿ ವಿಜಯವನ್ನೂ ಹೊಸ ದೀಪದೊಂದಿಗೆ ಆಚರಿಸುತ್ತಿದ್ದರಂತೆ. ದೀಪ ಉರಿಯುತ್ತಿದ್ದರೆ ಶಿವಾಜಿ ಯಾವುದೋ ಕೋಟೆ ಗೆದ್ದನೆಂದು ಅರ್ಥವಂತೆ.

ಬಲಭಾಗಕ್ಕೆ ಶಿವಾಜಿಯ ವಿಶ್ರಾಂತಿ ಕೊಠಡಿ. ಅಲ್ಲಿಂದ ಮುಂದಕ್ಕೆ ಹೋದರೆ ವಿಶಾಲವಾದ ದರ್ಬಾರ್ ಹಾಲ್. ಇಲ್ಲಿ ಒಂದು ಚಿಟಿಕೆ ಹೊಡೆದರೆ ಶಬ್ದ ತರಂಗಗಳು ಸ್ಪಷ್ಟವಾಗಿ ನಮಗೆ ಕೇಳಿಸಿ ಆಶ್ಚರ್ಯವನ್ನುಂಟು ಮಾಡಿತು. ಯಾವುದೇ ಸ್ಪೀಕರ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಮಾತನಾಡಿದ ಪ್ರತಿ ಶಬ್ದವು ಕೇಳುವ ಹಾಗೆ ಧ್ವನಿ ವ್ಯವಸ್ಥೆ ಮಾಡಿಕೊಂಡಿದ್ದು ಅಂದಿನವರ ತಂತ್ರಜ್ಞಾನ ಕೌಶಲಕ್ಕೆ ಹಿಡಿದ ಕನ್ನಡಿ ಎನ್ನಿಸುತ್ತಿತ್ತು.

ದಾರಿ ಸವೆಸುತ್ತಾ, ಸವೆಸುತ್ತಾ, ಹುಲಿದ್ವಾರವನ್ನು ದಾಟಿದಾಗ ಹೋಲಿ ಮೈದಾನ ತಲುಪಿದೆವು. ಹೋಲಿ ಮೈದಾನದಲ್ಲಿರುವ ಶಿವಾಜಿ ಪ್ರತಿಮೆಗೆ ಸತಾರದಲ್ಲಿರುವ ಶಿವಾಜಿ ವಂಶಸ್ಥರು ಪ್ರತಿದಿನವೂ ಬಂದು ಮಾಲಾರ್ಪಣೆ ಮಾಡಿ ಹೋಗುತ್ತಾರಂತೆ. ಹಾಗೆಂದು ಈ ಬೆಟ್ಟವೇನೂ ಬಹಳ ಚಿಕ್ಕದಿದೆಯಂದು ತಿಳಿಯಬೇಡಿ. ಸಮುದ್ರಮಟ್ಟದಿಂದ ಬರೋಬ್ಬರಿ 1356 ಮೀಟರ್ ಎತ್ತರದಲ್ಲಿದೆ.

ಈ ಕೋಟೆಯ ಎಲ್ಲ ಕಟ್ಟಡಗಳಲ್ಲೂ ಬಿದ್ದ ನೀರು ಹೋಲಿ ಮೈದಾನಕ್ಕೆ ಬಂದು ಹೊರ ಹೋಗುತ್ತೆ. ಬೆಟ್ಟದ ನೆತ್ತಿಯ ಮೇಲೆ 11 ಬೃಹತ್ ಮತ್ತು 100ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಕೆರೆಗಳಿವೆ. ಇವೆಲ್ಲವನ್ನೂ ಗಮನಿಸಿದರೆ, ಆ ಕಾಲದಲ್ಲೇ ಜಲಸಂರಕ್ಷಣಾ ತಂತ್ರಜ್ಞಾನ ಎಷ್ಟು ಅತ್ಯದ್ಭುತವಾಗಿದೆ ಎನ್ನಿಸಿತು.

ಬೆಟ್ಟದ ಮೇಲೆ ಸಿಗುವ ಕಲ್ಲುಗಳಿಂದಲೇ ಕೋಟೆ ದ್ವಾರಗಳನ್ನು, ದೇವಾಲಯಗಳನ್ನು ನಿರ್ಮಿಸಲಾಗಿದೆ. ಹೋಲಿ ಮೈದಾನದೆದುರಿಗೆ ನಿರ್ಮಿಸಿರುವ 1400 ಅಡಿ ಉದ್ದದ ಮಾರುಕಟ್ಟೆಯಂತೂ ನನ್ನನ್ನು ದಂಗುಬಡಿಸಿತು.

ಮಾರುಕಟ್ಟೆಯಿಂದ ಹೊರ ಬರುತ್ತಿದ್ದಂತೆ ಎಡಗಡೆಯ ದಾರಿ ನಿಮ್ಮನ್ನು ಕಮರಿಯ (ಪ್ರಪಾತ) ಕಡೆಗೆ ಕೊಂಡೊಯ್ಯುತ್ತದೆ. ಇದನ್ನು ತಕ್‌ಮಕ್ ಟೊಕ್ ಎನ್ನುತ್ತಾರೆ. ಅಲ್ಲಿ ನಿಲ್ಲಲೂ ಎಂಟೆದೆಯ ಧೈರ್ಯ ಬೇಕು. ಸಹ್ಯಾದ್ರಿಯ ಬೆಡಗನ್ನೆಲ್ಲಾ ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ಈ ಜಾಗ ಸ್ವರ್ಗ ಸದೃಶ. ಅಲ್ಲಿಂದ ಕೋಟೆ ಹಾಗೂ ಅದರ ಪ್ರವೇಶ ದ್ವಾರ ಕಾಣುತ್ತದೆ. ಒಂದೆರಡು ಸಣ್ಣ ಜಲಪಾತಗಳು ಸುಸ್ಪಷ್ಟವಾಗಿ ಕಾಣುತ್ತವೆ. ಇಲ್ಲಿಂದಲೇ ಪೇಶ್ವೆ ಕಾಲದಲ್ಲಿ ಅಪರಾಧಿಗಳನ್ನು ಪ್ರಪಾತಕ್ಕೆ ತಳ್ಳುತ್ತಿದ್ದರಂತೆ. ಇಲ್ಲಿ ಕತ್ತು ಬಗ್ಗಿಸಿ ಕಮರಿಗೆ ಇಣುಕಿದರೆ ಹೃದಯ ಬಾಯಿಗೆ ಬರುತ್ತದೆ.

ಅಲ್ಲೇ ಬಲಕ್ಕೆ ತಿರುಗಿದರೆ ಬಹಳ ಹಿಂದಿನಿಂದಲೂ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ ಎಂಬುವರ ಮನೆ ಇದೆ. ದಣಿದು ಬಂದವರಿಗಾಗಿ ಅವರ ತಾಯಿ ಆದರ ಆತಿಥ್ಯ ಮಾಡುತ್ತಾರೆ. ನಾವೂ ಇಲ್ಲೇ ಬೆಳಗಿನ ಉಪಹಾರವಾಗಿ ಅವಲಕ್ಕಿ ಮತ್ತು ಚಹಾ ಸೇವಿಸಿದೆವು. ಬಹಳ ರುಚಿಯಾಗಿತ್ತು. ಏಳು ತಲೆಮಾರಿನ ಇತಿಹಾಸವನ್ನು ತಿಳಿಯ ಬಯಸುವವರು ಇವರ ಮಣ್ಣಿನ ಮನೆಯಲ್ಲೇ ಉಳಿಯಬಹುದು.

ಇಂಥ ಅದ್ಭುತ ಕೋಟೆಯನ್ನು ಬರೀ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಇದರ ಸೌಂದರ್ಯವನ್ನು ಅನುಭವಿಸಿಯೇ ಅರಿಯಬೇಕು.**

ಹೋಗುವುದು ಹೇಗೆ
* ಪುಣೆಯಿಂದ ರಾಯಗಡಕ್ಕೆ 155 ಕಿ.ಮೀ. ಬಸ್‌ ಸೌಕರ್ಯವಿದೆ. ಮೊದಲು ಮಹಾಡ್‌ ತಲುಪಿ, ಅಲ್ಲಿಂದ ರಾಯಗಡ ಕೋಟೆಗೆ 20 ಕಿ.ಮೀ ದೂರ. ಬಸ್‌, ರಿಕ್ಷಾ, ಟ್ಯಾಕ್ಸಿಗಳು ಸಿಗುತ್ತವೆ.

* ರಾಯಗಡಕೋಟೆ ಪ್ರವೇಶ ಬೆಳಗ್ಗೆ 7 ರಿಂದ ಸಂಜೆ 5.30ವರೆಗೂ ಅವಕಾಶವಿದೆ. ಪ್ರವೇಶ ಶುಲ್ಕವಿದೆ.

* ಟ್ರಾಲಿಯಲ್ಲಿ ಪ್ರಯಾಣಿಸಲು ಪ್ರತಿಯೊಬ್ಬರಿಗೆ ₹ 180. ಶಾಲಾ ಮಕ್ಕಳಿಗೆ ರಿಯಾಯಿತಿ ಇದೆ (7ನೇ ತರಗತಿಯವರಿಗೆ ಒಂದು ದರ. 8 ರಿಂದ 10ನೇ ತರಗತಿವರೆಗೆ ಒಂದು ದರ)

ಊಟ– ವಸತಿ
* ಇಲ್ಲಿ ವಾಸಕ್ಕೆ ಅನೇಕ ಹೋಟೆಲ್‌ಗಳಿವೆ. ಕೋಟೆಯ ಮೇಲೆ ರಾಯಗಡ್‌ ರೋಪ್ ವೇ ಹೋಟೆಲ್ ಇದೆ. ಇಲ್ಲಿ ಊಟಕ್ಕೂ ವ್ಯವಸ್ಥೆ ಇದೆ.

* ಈ ಪ್ರವಾಸಕ್ಕೆ ಕನಿಷ್ಠ ಎರಡು ದಿನ ತೆಗೆದಿಡುವುದು ಉತ್ತಮ. ಇಲ್ಲಿಂದ ಸನಿಹದಲ್ಲಿರುವ ಪ್ರತಾಪಗಡ, ಮಾತೇರನ್‍ ಪ್ರವಾಸಿ ತಾಣಗಳಿಗೂ ಹೋಗಿ ಬರಬಹುದು.

* ಇಲ್ಲಿನ ವಿಶೇಷ ಖಾದ್ಯ ಬಕರಿ(ರೊಟ್ಟಿ), ಮಿಸಳ್ ಬಾಜಿ.

* ಸೆಪ್ಟೆಂಬರ್‌ನಿಂದ ಜನವರಿ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಟ್ರೆಕ್ಕಿಂಗ್‌ಗೆ ಉತ್ತಮ ತಾಣ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT