ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪ್ಪತ್ತು ಗಿರಿಗಿಂತಕಪ್ಪತಗಿರಿ ಮೇಲು!

Last Updated 16 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತಗಿರಿ ನೋಡುವುದು ಮೇಲು’ ಎಂಬ ಮಾತನ್ನು ಜನಪದರು ಹೇಳಿದ್ದಾರೆ. ‘ಉತ್ತರ ಕರ್ನಾಟಕದ ಸಹ್ಯಾದ್ರಿ’ ಎಂದು ಕರೆಸಿಕೊಳ್ಳುವ ಈ ಕಪ್ಪತಗುಡ್ಡದ ಹಿರಿಮೆಯೇ ಅಂಥದ್ದು. ಮಳೆಗಾಲದಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡು, ಪರಿಸರ ಪ್ರೇಮಿಗಳನ್ನು ಮತ್ತು ಯಾತ್ರಾರ್ಥಿಗಳನ್ನು ಕೈ ಬೀಸಿ ಕರೆಯುತ್ತದೆ.

ಔಷಧ ಸಸ್ಯಗಳ ಕಾಶಿ, ಜೀವವೈವಿಧ್ಯದ ತಾಣ, ಪರಿಸರ ಅಧ್ಯಯನದ ಪ್ರಯೋಗಾಲಯ, ಜನಪದ ಕತೆಗಳ ತೊಟ್ಟಿಲು, ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ, ಕಪ್ಪತಮಲ್ಲೇಶ್ವರನ ನೆಲೆವೀಡು... ಹೀಗೆ ಹಲವು ಹಿರಿಮೆಗಳಿಗೆ ಪಾತ್ರವಾಗಿರುವ ಗಿರಿಯೇ ‘ಕಪ್ಪತಗುಡ್ಡ’.

ಬೇಸಿಗೆಯಲ್ಲಿ ಬೋಳುಗುಡ್ಡದಂತೆ ಕಾಣುವ ಈ ಗಿರಿ, ಈಗ ವರ್ಷಧಾರೆಯ ಸ್ಪರ್ಶದಿಂದ ಪುಳಕಗೊಂಡು ಹಸಿರು ಉಡುಗೆಯುಟ್ಟು, ತನ್ನ ರೂಪ–ಲಾವಣ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕಪ್ಪತಗುಡ್ಡವು ಗದಗ ಜಿಲ್ಲೆಯ ಶಿರಹಟ್ಟಿ, ಮುಂಡರಗಿ ಮತ್ತು ಗದಗ ತಾಲ್ಲೂಕುಗಳಲ್ಲಿ ಒಟ್ಟು 33 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಬ್ಬಿರುವ ಗಿರಿಶ್ರೇಣಿ. ಗದಗಿನ ಬಿಂಕದಕಟ್ಟಿ ಗ್ರಾಮದಂಚಿನಿಂದ ಆರಂಭವಾಗಿ, ಮುಂಡರಗಿ ತಾಲ್ಲೂಕಿನ ಸಿಂಗಟಾಲೂರಿನವರೆಗೂ ಚಾಚಿಕೊಂಡಿದೆ. ಈ ಗಿರಿಶ್ರೇಣಿಯು ಒಟ್ಟು 64 ಕಿ.ಮೀ.ಗಳಷ್ಟು ಉದ್ದವಿದೆ. ಪ್ರಕೃತಿಯ ರಮ್ಯ ನಿಗೂಢತೆ, ವನಸಿರಿಯ ಸೊಬಗು, ಪಶು–ಪಕ್ಷಿಗಳ ಸಂಕುಲವನ್ನು ಹೊಂದಿರುವ ಈ ಗುಡ್ಡ ಪರಿಸರ ಪ್ರೇಮಿಗಳಿಗೆ ಮತ್ತು ಯಾತ್ರಾರ್ಥಿಗಳಿಗೆ ಅಚ್ಚುಮೆಚ್ಚಿನ ತಾಣ.

ಈ ಗುಡ್ಡದ ಒಡಲಲ್ಲಿ ಹೆಮಟೈಟ್‌, ಲಿಮೋನೈಟ್‌, ತಾಮ್ರ, ಮ್ಯಾಂಗನೀಸ್‌ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಈ ಸಂಪತ್ತಿನ ಮೇಲೆ ಹಿಂದಿನಿಂದಲೂ ಗಣಿಧಣಿಗಳ ಕಣ್ಣುಬಿದ್ದಿತ್ತು. ಕಪ್ಪತಗುಡ್ಡವನ್ನು ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧ ಸ್ವಾಮೀಜಿಗಳು, ಹೋರಾಟಗಾರರು, ಚಿಂತಕರು, ಪರಿಸರ ಪ್ರೇಮಿಗಳು ಒಗ್ಗೂಡಿ ಹೋರಾಟ ಮಾಡಿದರು. ಇದರ ಫಲವಾಗಿ ಸರ್ಕಾರ ಇದೇ ವರ್ಷ ಮೇ ತಿಂಗಳಲ್ಲಿ ಒಟ್ಟು 24 ಸಾವಿರ ಹೆಕ್ಟೇರ್‌ ಪ್ರದೇಶವನ್ನು ‘ಕಪ್ಪತಗುಡ್ಡ ವನ್ಯಜೀವಿಧಾಮ’ ಎಂದು ಘೋಷಣೆ ಮಾಡುವ ಮೂಲಕ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದೆ.

ಉತ್ತರ ಕರ್ನಾಟಕದ ಸಹ್ಯಾದ್ರಿ

ಕಪ್ಪತಗುಡ್ಡವನ್ನು ‘ಉತ್ತರ ಕರ್ನಾಟಕದ ಸಹ್ಯಾದ್ರಿ’ ಎಂದು ಕರೆಯುತ್ತಾರೆ. ಕಾರಣ, ಬಯಲು ಪ್ರದೇಶದ ಜನರಿಗೆ ಇಲ್ಲಿನ ನಿಸರ್ಗ ಸೌಂದರ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಕಪ್ಪತಮಲ್ಲಯ್ಯ ಮತ್ತು ನಂದಿವೇರಿ ಬಸವಣ್ಣ ಇಲ್ಲಿನ ಅಧಿದೇವತೆಗಳು. ಕಪ್ಪತಗುಡ್ಡದ ತಪ್ಪಲಿನವರೆಗೆ ಮಾತ್ರ ವಾಹನಗಳು ಹೋಗುತ್ತವೆ. ಇಲ್ಲಿಂದ ಒಂದು ಕಿ.ಮೀ.ನಷ್ಟು ಕಾಲ್ನಡಿಗೆಯಲ್ಲೇ ಕಪ್ಪತಮಲ್ಲಯ್ಯನ ದೇವಸ್ಥಾನಕ್ಕೆ ತೆರಳಬೇಕು. ಸಾಗುವ ಹಾದಿಯ ಎರಡೂ ಬದಿಗಳಲ್ಲಿ ಗುಡ್ಡದ ಹಸಿರಿನ ಸಿರಿ ಮೈಮನಗಳಿಗೆ ಪುಳಕವನ್ನುಂಟು ಮಾಡುತ್ತದೆ.

ಕಪ್ಪತಮಲ್ಲೇಶ್ವರನ ದರ್ಶನ ಪಡೆದ ನಂತರ ಉತ್ಸಾಹಿಗಳು, ಚಾರಣಪ್ರಿಯರು ಮಾತ್ರ ಗುಡ್ಡದ ತುದಿಯಲ್ಲಿರುವ ಗಾಳಿಗುಂಡಿ ಬಸವಣ್ಣನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳಲು ಸಜ್ಜಾಗುತ್ತಾರೆ. ಅಲ್ಲಿಂದ ನಿಜವಾದ ಚಾರಣದ ಹಾದಿ ತೆರೆದುಕೊಳ್ಳುತ್ತದೆ. ಕೆಂಪು ಮಿಶ್ರಿತ ಕಲ್ಲು–ಮಣ್ಣಿನಿಂದ ಕೂಡಿದ ಹಾದಿ ಏದುಸಿರು ಬಿಡುವಂತೆ ಮಾಡುತ್ತದೆ. ಆದರೆ ಎತ್ತರಕ್ಕೆ ಹೋದಂತೆ ಬೀಸುವ ತಂಗಾಳಿ, ಮೈ–ಮನದ ದಣಿವಿಗೆ ಸಾಂತ್ವನ ಹೇಳುತ್ತದೆ. ಹಸಿರ ಸಿರಿ ಮತ್ತಷ್ಟು ಎತ್ತರಕ್ಕೆ ಏರಲು ಸ್ಫೂರ್ತಿ ತುಂಬುತ್ತದೆ. ಗುಡ್ಡದ ತುದಿಯಲ್ಲಿ ಗಂಟೆಗೆ 30 ಕಿ.ಮೀ. ವೇಗದಲ್ಲಿ ಭೋರಿಡುವ ಗಾಳಿ, ದೇಹವನ್ನು ಸಣ್ಣಗೆ ಕಂಪಿಸುವಂತೆ ಮಾಡುತ್ತದೆ. ಹೆಚ್ಚು ಗಾಳಿ ಬೀಸುವ ಪ್ರದೇಶವಾದ ಅಲ್ಲಿ ವಿದ್ಯುತ್‌ ತಯಾರಿಕೆಗೆ ಅಳವಡಿಸಿರುವ ಪವನ ಯಂತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಇಷ್ಟಾರ್ಥ ನೆರವೇರಿಸುವ ದೈವ

ಗುಡ್ಡದ ತುತ್ತತುದಿಯಲ್ಲಿ ‌‌‘ಗಾಳಿಗುಂಡಿ ಬಸವಣ್ಣ’ನ ಗುಡಿ ಇದೆ. ಭಕ್ತರು ಬಸವಣ್ಣನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ನೆರೆವೇರಿಸುವಂತೆ ಪ್ರಾರ್ಥಿಸುತ್ತಾರೆ. ‘ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತವರು ಕಪ್ಪತಗಿರಿಯ ನೆತ್ತಿಗೇರಿ, ಗಾಳಿಗುಂಡಿ ಬಸವೇಶ್ವರನ ಮುಂದಿರುವ ಆರಿಮರಕ್ಕೆ ಬಟ್ಟೆಯಿಂದ ತೊಟ್ಟಿಲು ಕಟ್ಟಿ, ಅದರಲ್ಲಿ ಹಣ್ಣು–ಕಾಯಿ ಹಾಕಿ, ಆ ತೊಟ್ಟಿಲನ್ನು ಐದು ಬಾರಿ ತೂಗಿದರೆ ಇಷ್ಟಾರ್ಥ ನೆರವೇರುತ್ತದೆ’ ಎಂದು ಭಕ್ತರು ನಂಬಿದ್ದಾರೆ. ಶ್ರಾವಣ ಮಾಸದಲ್ಲಿ ಕಪ್ಪತಮಲ್ಲೇಶ್ವರ ಹಾಗೂ ಭ್ರಮರಾಂಬದೇವಿ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ.

ವನ್ಯ ಸಂಪತ್ತಿನ ತೊಟ್ಟಿಲು

ಈ ಗಿರಿಶ್ರೇಣಿಯ ಒಡಲು 300ಕ್ಕೂ ಅಧಿಕ ಔಷಧೀಯ ಸಸ್ಯಗಳು ಮತ್ತು ಹಲವಾರು ವನ್ಯಜೀವಿಗಳಿಗೆ ನೆಲೆ ಕಲ್ಪಿಸಿದೆ. ರಕ್ತಚಂದನ, ಸಂಜೀವಿನಿ, ಕಾಡು ಬಾದಾಮಿ, ಕಣಗಲ, ಬಸವನಪಾದ, ಅಮೃತಬಳ್ಳಿ, ಅಜವಾನ, ತೇಗ, ನೆಲ್ಲಿ ಮುಂತಾದ ಸಸ್ಯ ಸಂಪತ್ತು ಆಯುರ್ವೇದ ವಿಜ್ಞಾನದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಸೆಳೆಯುತ್ತದೆ. ಚಿರತೆ, ಕರಡಿ, ತೋಳ, ನರಿ, ಪುನುಗು
ಬೆಕ್ಕು, ಚುಕ್ಕೆಜಿಂಕೆ, ಸಾರಂಗ, ಮುಳ್ಳುಹಂದಿ ಹಾಗೂ ಬ್ಲ್ಯಾಕ್‌ ಡ್ರಾಂಗೋ, ಬುಲ್‌ಬುಲ್‌, ಸನ್‌ಬರ್ಡ್‌, ನವಿಲು, ಮಿಂಚುಳ್ಳಿ ಮುಂತಾದ ವೈವಿಧ್ಯಮಯ ಪಕ್ಷಿಗಳು, ಪರಿಸರ ಪ್ರೇಮಿಗಳು ಮತ್ತು ಛಾಯಾಗ್ರಾಹಕರನ್ನು ಸೆಳೆಯುತ್ತವೆ.

ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ‌‘ಶ್ರೀ ಕಪ್ಪತಮಲ್ಲೇಶ್ವರ ದೈವೀವನ’ದಲ್ಲಿ ಹಲವಾರು ಔಷಧೀಯ ಸಸ್ಯಗಳನ್ನು ಬೆಳೆಸಿದ್ದು, ಪ್ರತಿಯೊಂದು ಗಿಡಕ್ಕೂ ನಾಮಫಲಕ ಹಾಕಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ. ಗಿಡಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಜತೆಗೆ ವಿಶ್ರಾಂತಿ ಪಡೆಯಲು ಅಲಲ್ಲಿ ಬೆಂಚು, ಪರಗೋಲಾಗಳ ವ್ಯವಸ್ಥೆ ಇದೆ. ಅಲ್ಲಿರುವ ಧನ್ವಂತರಿ ಋಷಿಯ ಮೂರ್ತಿ ಗಮನಸೆಳೆಯುತ್ತದೆ.

‘ನನ್ನಿಂದ ಏನೂ ಉಪಯೋಗವಿಲ್ಲ ಎಂದು ಗೊಣಗಬೇಡಿ. ನಾನು ಪ್ರತಿದಿನ 4 ಜನರಿಗೆ ಆಮ್ಲಜನಕವನ್ನು ಪೂರೈಸುತ್ತೇನೆ’ ಎಂದು ಅಲ್ಲಿರುವ ಗಿಡವೊಂದು ಬಂದ ಪ್ರವಾಸಿಗರಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಿತ್ತು.

ಹೋಗುವುದು ಹೇಗೆ..?

ಹುಬ್ಬಳ್ಳಿಯಿಂದ 60 ಕಿ.ಮೀ. ದೂರದಲ್ಲಿರುವ ಗದಗಕ್ಕೆ ರೈಲು ಮತ್ತು ಬಸ್‌ ಸೌಕರ್ಯವಿದೆ. ಗದಗದಿಂದ ಕಪ್ಪತಗುಡ್ಡಕ್ಕೆ ಕದಂಪುರ ಮಾರ್ಗವಾಗಿ 30 ಕಿ.ಮೀ. ದೂರವಿದ್ದು, ಬೆಳಿಗ್ಗೆ 10.30 ಮತ್ತು ಸಂಜೆ 5.30ಕ್ಕೆ ಎರಡು ಸಾರಿಗೆ ಬಸ್‌ಗಳು ಗದಗದಿಂದ ಕಪ್ಪತಗುಡ್ಡಕ್ಕೆ ಹೊರಡುತ್ತವೆ. ರಸ್ತೆ ಮಾರ್ಗ ಉತ್ತಮವಾಗಿದ್ದು, ಖಾಸಗಿ ವಾಹನಗಳಲ್ಲೂ ತೆರಳಬಹುದು.

ಕಡಕೋಳ ಸಮೀಪದ ಕಪ್ಪತಗುಡ್ಡದ ತಪ್ಪಲಲ್ಲಿ ಮಧ್ಯಾಹ್ನ ಉಚಿತ ದಾಸೋಹವಿರುತ್ತದೆ. ಅಲ್ಲಿ ಅಂಗಡಿಗಳ ಸಾಲು ಇದ್ದು, ಪೂಜಾ ಸಾಮಗ್ರಿ ಮತ್ತು ತಿನಿಸುಗಳು ದೊರೆಯುತ್ತವೆ. ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT