ಮಂಗಳವಾರ, ಏಪ್ರಿಲ್ 7, 2020
19 °C

ಈಶಾನ್ಯ ತುದಿಯಲ್ಲೊಂದು ಕಿರು ವಿಹಾರ

ಬಿ.ಆರ್.ಲಕ್ಷ್ಮಣರಾವ್ Updated:

ಅಕ್ಷರ ಗಾತ್ರ : | |

prajavani

‘ಬೋಗೀಬೀಲ್’ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ, ಮೋಟಾರು ವಾಹನಗಳು ಮತ್ತು ರೈಲು ಎರಡೂ ಸಂಚರಿಸಬಲ್ಲ, ಎರಡಂತಸ್ತಿನ ಸುಮಾರು ಐದು ಕಿಲೋಮೀಟರ್ ಉದ್ದದ ಸೇತುವೆ. ಇದನ್ನು ನಿರ್ಮಿಸಲು ತೆಗೆದುಕೊಂಡ ಕಾಲಾವಧಿ ಸುದೀರ್ಘ ಹದಿನಾರು ವರ್ಷಗಳು. ಇಷ್ಟೊಂದು ನಿಧಾನಗತಿಗೆ ಪ್ರಮುಖ ಕಾರಣ ಈ ಪ್ರದೇಶದಲ್ಲಿ ಸುರಿಯುತ್ತಿದ್ದ ಪ್ರಚಂಡ ಮಳೆ...

ಕ್ಷ್ಮಣರಾವ್, ಅರುಣಾಚಲ ಪ್ರದೇಶಕ್ಕೆ ಬರ್ತೀರೇನ್ರೀ?’ ದೆಹಲಿ ಯಿಂದ ಫೋನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರರಿಂದ.

‘ಏನ್ಸಾರ್ ವಿಶೇಷ?’ ಕೇಳಿದೆ.

‘ಈ ನವೆಂಬರ್‌ 2, 3ರಂದು ಅಲ್ಲಿನ ಪಾಸಿಘಾಟ್ ಅನ್ನೋ ಊರಲ್ಲಿ ಒಂದು ಬಹುಭಾಷಾ ಲೇಖಕರ ಸಮಾವೇಶ ಇದೆ. ಕವಿಗೋಷ್ಠಿಯಲ್ಲಿ ನಿಮ್ಮ ಪದ್ಯಗಳನ್ನು ಓದಬೇಕು. ಬರ್ತೀರಿ ತಾನೆ?’

‘ನನ್ನ ಹೆಂಡತಿನೂ ಕರ್ಕೊಂಡು ಬರಬಹುದಾ, ನನ್ನದೇ ಖರ್ಚಲ್ಲಿ?’ ಕೇಳಿದೆ.

‘ಆಯ್ತು ಬರ‍್ರೀ, ವ್ಯವಸ್ಥೆ ಮಾಡ್ತಾರೆ’ ಅಂದು ಫೋನಿಟ್ಟರು.

ಹೆಂಡತಿ ಗಿರಿಜಾಳಿಗೆ ವಿಷಯ ತಿಳಿಸಿದೆ. ಹೊಸ ಪ್ರದೇಶ, ಹೊಸ ಅನುಭವ ಅಂತ ಅವಳೂ ತನ್ನ ಮೊಣಕಾಲು ನೋವನ್ನು ಕಡೆಗಣಿಸಿ ಬರಲು ಒಪ್ಪಿದಳು. ಆಮೇಲೆ ಪಾಸಿಘಾಟ್ ಬಗ್ಗೆ ಮಾಹಿತಿ ಕಲೆ ಹಾಕಿದೆವು.

ರಾಜಧಾನಿಯಾದ ಇಟಾನಗರವನ್ನು ಬಿಟ್ಟರೆ ಅರುಣಾಚಲಪ್ರದೇಶದ ಅತಿದೊಡ್ಡ ಪಟ್ಟಣ ಈ ಪಾಸಿಘಾಟ್. ಇಟಾನಗರ ಅರುಣಾಚಲಪ್ರದೇಶದ ಪಶ್ಚಿಮದ ತುದಿಯಲ್ಲಿದ್ದರೆ; ಪಾಸಿಘಾಟ್ ಪೂರ್ವದ ತುದಿಯಲ್ಲಿದೆ. ನಮ್ಮ ಬೆಂಗಳೂರು ಮತ್ತು ಬೆಳಗಾವಿ ಇದ್ದ ಹಾಗೆ- ಗಾತ್ರದಲ್ಲಲ್ಲ, ದೂರದಲ್ಲಿ.

ಅರುಣಾಚಲಪ್ರದೇಶ ಭಾರತದ ಈಶಾನ್ಯ ತುದಿಯ ರಾಜ್ಯ. ಇದರ ದಕ್ಷಿಣದಲ್ಲಿ ಅಸ್ಸಾಂ,  ನಾಗಾಲ್ಯಾಂಡ್,  ಪಶ್ಚಿಮದಲ್ಲಿ ಭೂತಾನ್‌, ಪೂರ್ವದಲ್ಲಿ ಮಯನ್ಮಾರ್ ಮತ್ತು ಉತ್ತರದಲ್ಲಿ ಚೀನಾದ ಗಡಿಗಳಿವೆ. ಹೀಗಾಗಿ ಇಲ್ಲಿ ಗಡಿ ಕಾವಲು ಸೈನ್ಯಗಳ ಹಲವು ನೆಲೆಗಳಿವೆ. ಸಮೃದ್ಧ ಮಳೆಯ ಹಿಮಾಲಯದ ತಪ್ಪಲು ಪ್ರದೇಶ ಇದಾದ್ದರಿಂದ ಇದು ನಾಗರಿಕತೆಯಿಂದ ಇನ್ನೂ ಅಷ್ಟಾಗಿ ಹಾಳಾಗದೆ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ. ಹಲವಾರು ಬುಡಕಟ್ಟುಗಳ, ಧರ್ಮ ಮತ್ತು ಉಪಭಾಷೆಗಳ ವೈವಿಧ್ಯಮಯವಾದ ಶ್ರಮಿಕ ಜನರ ನೆಲೆವೀಡಾಗಿದೆ ಈ ರಾಜ್ಯ.

ಪಾಸಿಘಾಟಿನಲ್ಲಿ ಸಾರ್ವಜನಿಕ ವಿಮಾನ ನಿಲ್ದಾಣ ಇಲ್ಲದ್ದರಿಂದ ನಾವು ದೆಹಲಿ ಮಾರ್ಗವಾಗಿ ಅಸ್ಸಾಮಿನ ದಿಬ್ರುಗರ್ ವಿಮಾನ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಕಾರಿನಲ್ಲಿ ಪಾಸಿಘಾಟ್ ತಲುಪುವ ವ್ಯವಸ್ಥೆಯನ್ನು ಸಾಹಿತ್ಯ ಅಕಾಡೆಮಿ ಮಾಡಿತ್ತು. ಮುಂಜಾನೆ ಬೆಂಗಳೂರಿನಿಂದ ಹೊರಟ ನಾವು ದಿಬ್ರುಗರ್ ತಲುಪುವ ವೇಳೆಗೆ ಮಧ್ಯಾಹ್ನ 2:30 ಗಂಟೆ ಆಗಿತ್ತು. ಆದರೆ, ಅಲ್ಲಿ ಸಂಜೆ 4.30ಕ್ಕೆಲ್ಲಾ  ಸೂರ್ಯಾಸ್ತವಾಗುವುದರಿಂದ ಅದು ಅಲ್ಲಿ ಸಂಜೆಯ ಸಮಯ. ಅಲ್ಲಿಂದ ಪಾಸಿಘಾಟಿಗೆ ಕಾರಿನಲ್ಲಿ ಸುಮಾರು ಮೂರು ಗಂಟೆಗಳ ಪ್ರಯಾಣ. ಮಾರ್ಗಮಧ್ಯದಲ್ಲೇ ನಮಗೆ ಬ್ರಹ್ಮಪುತ್ರ ನದಿಯ ದರ್ಶನವಾಯಿತು. ಸಮುದ್ರದಂತೆ ತೋರುವ ಅದರ ಜಲರಾಶಿಯ ಅಗಾಧತೆ ಮತ್ತು ವೈಶಾಲ್ಯ ಬೆರಗಾಗಿಸಿತು. ಅಷ್ಟರಲ್ಲಿ ಅಸ್ಸಾಂ ಮತ್ತು ಅರುಣಾಚಲಪ್ರದೇಶದ ನಡುವೆ ಇರುವ ಪ್ರಖ್ಯಾತ ಬೋಗಿಬೀಲ್ ಸೇತುವೆ ನಮಗೆ ಎದುರಾಯಿತು. ಅದನ್ನು ನೋಡಲೆಂದು ನಾವು ಪ್ರಯಾಣ ನಿಲ್ಲಿಸಿ ಕೆಳಗಿಳಿದು ಬಂದೆವು.

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ, ಮೋಟಾರು ವಾಹನಗಳು ಮತ್ತು ರೈಲು ಎರಡೂ ಸಂಚರಿಸಬಲ್ಲ, ಎರಡಂತಸ್ತಿನ ಸುಮಾರು ಐದು ಕಿಲೋಮೀಟರ್ ಉದ್ದದ ಸೇತುವೆಯಿದು. ಇದನ್ನು ನಿರ್ಮಿಸಲು ತೆಗೆದುಕೊಂಡ ಕಾಲಾವಧಿ ಸುದೀರ್ಘ ಹದಿನಾರು ವರ್ಷಗಳು (2002 -2018). ಇಷ್ಟೊಂದು ನಿಧಾನಗತಿಗೆ ಪ್ರಮುಖ ಕಾರಣ ಈ ಪ್ರದೇಶದ ಪ್ರಚಂಡ ಮಳೆ. ಇದು ಭೂಕಂಪನ ಮಾಮೂಲಾದ ಪ್ರದೇಶವಾದ್ದರಿಂದ ಅದನ್ನು ತಡೆದುಕೊಳ್ಳಲು ಸಮರ್ಥವಾದ ಉಕ್ಕು ಮತ್ತು ಕಾಂಕ್ರಿಟ್‌ ಬಳಸಿ ಈ ಸೇತುವೆ ನಿರ್ಮಿಸಲಾಗಿದೆ.

ನಾವು ಇಲ್ಲಿಗೆ ತಲುಪುವ ವೇಳೆಗಾಗಲೇ ಸಂಜೆಯ ಕಾವಳ ಕವಿಯತೊಡಗಿದ್ದರಿಂದ ಸೇತುವೆಯುದ್ದಕ್ಕೂ ವಿದ್ಯುದ್ದೀಪಗಳು ಪ್ರಜ್ವಲಿಸಿದವು. ಹಸಿರು, ನೀಲಿ, ಕೆಂಪು, ಹಳದಿ ಹೀಗೆ ಹತ್ತು ಸೆಕೆಂಡಿಗೊಮ್ಮೆ ಬದಲಾಗುವ ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದ ಆ ಭವ್ಯ ಸೇತುವೆಯ ದೃಶ್ಯ ನಿಜಕ್ಕೂ ನಯನ ಮನೋಹರವಾಗಿತ್ತು. ಅಲ್ಲಿಂದ ಪ್ರಯಾಣ ಮುಂದುವರಿಸಿ ಪಾಸಿಘಾಟ್ ತಲುಪಿ, ಅಲ್ಲಿನ ಒಂದು ವಸತಿಗೃಹದಲ್ಲಿ ನಮಗಾಗಿ ಕಾದಿರಿಸಲಾಗಿದ್ದ ಕೊಠಡಿಯಲ್ಲಿ ವಿಶ್ರಮಿಸಿದೆವು. ಸಮಾವೇಶ ಏರ್ಪಾಟಾಗಿದ್ದದ್ದು ಪಾಸಿಘಾಟಿನ ಹಸಿರೋ ಹಸಿರಿನ ಅರಣ್ಯ ಮತ್ತು ತೋಟಗಾರಿಕೆ ಕಾಲೇಜಿನ ಭವ್ಯ ಸಭಾಂಗಣದಲ್ಲಿ. ನಾನು ಭಾಗವಹಿಸಬೇಕಾಗಿದ್ದ ಗೋಷ್ಠಿ ಇದ್ದದ್ದು ಮರುದಿನವಾದ್ದರಿಂದ ಕಾರ್ಯಕ್ರಮದ ಉದ್ಘಾಟನೆಯ ನಂತರ ನಾನು ಹೆಂಡತಿಯೊಂದಿಗೆ ಪಾಸಿಘಾಟ್ ನೋಡಿಬರಲು ಹೊರಟೆ. ಮೊದಲು ಕಂಡದ್ದು ಸಿಯಾಂಗ್ ನದಿಯನ್ನು. ಆ ಜೀವನದಿಯೇ ಸುತ್ತಮುತ್ತಲ ಪ್ರದೇಶದ ಜೀವದಾಯಿನಿ ನದಿಯೂ ಹೌದು. ಅದರ ಸ್ಫಟಿಕ ಶುಭ್ರ ತಂಪು ಜಲದಲ್ಲಿ ಕೈಕಾಲು ಮುಖ ತೊಳೆದುಕೊಂಡು, ಅದರ ಹಿನ್ನೆಲೆಗಿದ್ದ ಗಿರಿಶ್ರೇಣಿಗಳ ಚೆಲುವಿನಿಂದ ಕಂಗಳನ್ನು ತೊಳೆದುಕೊಂಡು
ತಂಪಾದೆವು.  ನಂತರ ಆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸುಂದರ ಸೇತುವೆಯನ್ನು ನೋಡಿಕೊಂಡು ಊರನತ್ತ ಹೊರಟೆವು.

ಅದೊಂದು ಚದುರಿದಂತೆ ಬೆಳೆದಿರುವ, ಹಳ್ಳಿಯ ಚಹರೆಯುಳ್ಳ, ವಿರಳ ಜನವಸತಿಯ ಪುಟ್ಟ ಪಟ್ಟಣ- ನಮ್ಮ ಸಾಗರ ಅಥವಾ ಸಕಲೇಶಪುರವನ್ನು ನೆನಪಿಸುವಂತಹ ತಾಣ. ನವೆಂಬರ್ ತಿಂಗಳ ಆರಂಭದ ದಿನವಾದರೂ ಬಿಸಿಲು ಪ್ರಖರವಾಗಿಯೇ ಇತ್ತು. ಅಲ್ಲಿನ ಬಹುತೇಕ ಮಹಿಳೆಯರು ಬಣ್ಣಬಣ್ಣದ ಕೊಡೆಗಳನ್ನು ತಮ್ಮ ತಲೆಯ ಮೇಲೆ ಬಿಚ್ಚಿಹಿಡಿದು ನಡೆದಾಡುತ್ತಿದ್ದರು. ಅದನ್ನು ಕಂಡು ನನ್ನ ಹೆಂಡತಿಯೂ ಅಲ್ಲಿನ ಒಂದು ಅಂಗಡಿಯಲ್ಲಿ ಈ ಪ್ರವಾಸದ ನೆನಪಿಗೆಂದು ಒಂದು ಬಣ್ಣದ ಛತ್ರಿ ಕೊಂಡಳು.

ಅಂದು ಸಂಜೆ ಸಮಾವೇಶದ ಆಯೋಜಕರು ಅತಿಥಿಗಳಾದ ನಮ್ಮನ್ನೆಲ್ಲ ಸಮೀಪದ ಗುಡ್ಡವೊಂದರ ದಟ್ಟ ಕಾಡಿನ ನಡುವೆ ಇದ್ದ ಒಂದು ರೆಸಾರ್ಟ್‌ಗೆ ಔತಣಕೂಟಕ್ಕೆಂದು ಕರೆದೊಯ್ದರು. ಕಗ್ಗತ್ತಲಲ್ಲಿ ಇಕ್ಕಟ್ಟಿನ ಆ ಏರುದಾರಿಯನ್ನು ಜೀಪುಗಳಲ್ಲಿ ತೆವಳುತ್ತ ಸಾಗಿದ ಆ ಪ್ರಯಾಣ ನಿಜಕ್ಕೂ ರುದ್ರರಮಣೀಯವಾಗಿತ್ತು.

ಮೊದಲಿಗೆ ಮರದ ಅಟ್ಟಣಿಗೆಯಲ್ಲಿ ಕೂತ ನಮಗೆಲ್ಲರಿಗೂ ಅಲ್ಲಿನ ವಿಶೇಷ ಪಾನೀಯವಾದ ರೈಸ್ ಬಿಯರ್ ಕುಡಿಯಲು ಕೊಟ್ಟರು. ನಮ್ಮ ಕಡೆ ಕೊಡಗು, ಮಲೆನಾಡಿನಲ್ಲಿ ಅದನ್ನು ಅಕ್ಕಿಬೋಜ ಅಂತ ಕರೀತಾರೆ. ಒಂಥರಾ ಹುಳಿ, ಒಗರು, ಚೆನ್ನಾಗಿರುತ್ತೆ. ಆಮೇಲೆ ಬಗೆ ಬಗೆ ತಿಂಡಿತಿನಿಸು. ಇದರ ನಡುವೆ ಅಲ್ಲಿನ ಯುವಗಾಯಕನೊಬ್ಬ ಗಿಟಾರ್ ನುಡಿಸುತ್ತ, ಸ್ವರಚಿತ ಇಂಗ್ಲಿಷ್ ಗೀತೆಗಳನ್ನು ಸೊಗಸಾಗಿ ಹಾಡಿದ. ನಮಗೂ ಹಾಡಲು ಕರೆ ಬಂತು. ನಾನು ಗಿಟಾರ್ ಹಿಮ್ಮೇಳದಲ್ಲಿ ನನ್ನ ಪಾಶ್ಚಾತ್ಯ ಧಾಟಿಯ ‘ನಿಂಬೆ ಗಿಡ’ ಹಾಡನ್ನು ಹಾಡಿದೆ. ಅದು ಅಲ್ಲಿನ ಎಲ್ಲರ ಮನ ಸೂರೆಗೊಂಡಿತು.

ಮರುದಿನ ಮಧ್ಯಾಹ್ನ ಊಟದ ವೇಳೆಗೆ ಸಾಹಿತ್ಯದ ಗೋಷ್ಠಿಗಳೆಲ್ಲ ಮುಗಿದಿದ್ದವು. ಆಯೋಜಕರು  ನಮ್ಮೆಲ್ಲರನ್ನು ಅಲ್ಲಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದ್ದ, ಆದಿ ಎಂಬ ಬುಡಕಟ್ಟಿನ ಜನರ,  ಸುಲುಕ್ ಎಂಬ ಹಳ್ಳಿಗೆ ಕರೆದೊಯ್ದರು. ಅದು ಕಳೆದ ಶತಮಾನದ ಪ್ರಸಿದ್ಧ ಅಸ್ಸಾಮಿ ಕಾದಂಬರಿಕಾರ ‘ಸಾಹಿತ್ಯ ಸೂರ್ಯ’ ಎಂದು ಬಿರುದಾಂಕಿತರಾಗಿದ್ದ ಲುಮೆರ್ ದೈ ಅವರ ಹುಟ್ಟೂರು. ಅವರ ನೆನಪಿಗಾಗಿ,  ಅವರು ಓದಿದ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಅವರ ಒಂದು ಮೂರ್ತಿಯನ್ನು ಇತ್ತೀಚೆಗೆ ಸ್ಥಾಪಿಸಲಾಗಿದೆ. ಸಂಜೆ ನಮ್ಮ ವಸತಿಗೃಹಕ್ಕೆ ಹಿಂತಿರುಗಿದ ಬಳಿಕ, ಆ ವೇಳೆಗೆ ನನಗೆ ಆತ್ಮೀಯ ಮಿತ್ರರಾಗಿದ್ದ ಗುಜರಾತಿ ಭಾಷೆಯ ಯುವ ಲೇಖಕ ಸೌಮ್ಯ ಜೋಶಿ ನನ್ನನ್ನು ತಮ್ಮ ಕೊಠಡಿಗೆ ಹರಟೆಗೆ ಆಹ್ವಾನಿಸಿದ್ದರು. ಹೋದೆ. ಜೋಶಿ ಯಾಕೋ ಗಲಿಬಿಲಿಗೊಂಡಿದ್ದರು. ‘ಲಕ್ಷ್ಮಣ್ ಜೀ, ಈ ವಿಚಿತ್ರ ನೋಡಿ! ನಾನು ಲಾಡ್ಜಿಗೆ  ಹಿಂತಿರುಗಿದ ಮೇಲೆ ನೋಡಿಕೊಂಡೆ. ನನ್ನ ಎಡಗಾಲಿನ ಕಾಲುಚೀಲ ರಕ್ತದಿಂದ ತೊಯ್ದು ತೊಪ್ಪೆಯಾಗಿದೆ! ಬಿಚ್ಚಿ ನೋಡುತ್ತೇನೆ ಎಲ್ಲೂ ಒಂದು ಚೂರೂ ಗಾಯವಿಲ್ಲ. ಇದೇನೋ ಅಯೋಮಯವಾಗಿದೆ!’ ಎಂದರು.

ನಾನೆಂದೆ, ‘ಓಹೋ ಇದು ಆ ಜಿಗಣೆಯದ್ದೇ ಕೆಲಸ!’ ಅವರಿಗೆ ಹಿಂದಿನ ರಾತ್ರಿಯ ನನ್ನ ಮತ್ತು ‌ಗಿರಿಜಾಳ ಅನುಭವವನ್ನು ಸಾದ್ಯಂತ ವಿವರಿಸಿದೆ. ‘ಇಂದು ಸುಲುಕ್ ಹಳ್ಳಿಯಲ್ಲಿ ನಾವು ನೆಲದ ಮೇಲೆ ಕೂತಿದ್ದೆವಲ್ಲ,  ಆಗ ಜಿಗಣೆ ನಿಮ್ಮ ಕಾಲಿನ ರಕ್ತ ಹೀರಿದೆ. ಅದು ತನ್ನ ಹೀರುಕೊಳವೆಯನ್ನು ನಿಮ್ಮ ಕಾಲಿಗೆ ಚುಚ್ಚಿದ ನಂತರ ಒಂದು ದ್ರವವನ್ನು ಒಳಕ್ಕೆ ಒಸರುತ್ತೆ. ಅದರಿಂದ ಕೆಲವು ನಿಮಿಷಗಳ ಕಾಲ ನಿಮ್ಮ ರಕ್ತ ತನ್ನ ಹೆಪ್ಪುಗಟ್ಟುವ ಶಕ್ತಿಯನ್ನು ಕಳೆದುಕೊಳ್ಳುತ್ತೆ. ಜೊತೆಗೆ ಯಾವ ನೋವಿನ ಅನುಭವವೂ ನಿಮಗೆ ಆಗದಂತೆ ಮಾಡುವ ಅರಿವಳಿಕೆಯೂ ಅದರಲ್ಲಿ ಇರುತ್ತೆ. ಜಿಗಣಿ ತನ್ನ ಚೀಲದ ತುಂಬಾ ನಿಮ್ಮ ರಕ್ತ ಹೀರಿ ಕಳಚಿಕೊಂಡಿದೆ. ನಿಮ್ಮ ರಕ್ತಸ್ರಾವ ಮಾತ್ರ ಮುಂದುವರಿದಿದೆ. ಇದು ವಿಷಯ’

ಜಿಗಣೆ ಬಗ್ಗೆ ಏನೂ ಅರಿಯದ ಗುಜರಾತಿ ಗೆಳೆಯ ಆಶ್ಚರ್ಯಚಕಿತರಾದರು.  ಗೂಗಲ್ಲಿನಲ್ಲಿ ಅದರ ಬಗ್ಗೆ ಓದಿ ನೋಡಿದಾಗಲಷ್ಟೇ ಅವರಿಗೆ ನನ್ನ ಮಾತಲ್ಲಿ ನಂಬಿಕೆ ಮೂಡಿದ್ದು. ‘ಎಂಥಾ ರೂಪಕವಲ್ಲವೇ ಈ ಜಿಗಣೆ?!  ಶತಶತಮಾನಗಳಿಂದ ಹೇಗೆ ಹೀರ್ತಾ ಇದೆ ನೋಡಿ ಇಡೀ ಮನುಕುಲದ ರಕ್ತವನ್ನು ವಿವಿಧ ರೂಪಗಳಲ್ಲಿ,  ಗೊತ್ತೇ ಆಗದ ಹಾಗೆ’ ಎಂದೆ. ಅಹುದಹುದೆಂದು ಜೋಶಿ ತಲೆಯಾಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು