ಭಾನುವಾರ, ಮಾರ್ಚ್ 29, 2020
19 °C

ವೆರೋನಾ ನೋಡೋಣ…ಇಟಲಿಯ ಸುಂದರ ತಾಣ

ಗೊರೂರು ಶ್ರೀನಿವಾಸನ್ Updated:

ಅಕ್ಷರ ಗಾತ್ರ : | |

ವೆನಿಸ್‌ ಪಕ್ಕದ ವೆರೋನಾದ ವಿಶೇಷವೆಂದರೆ ತೆರೆದ ಬಾನಿನ ಆಂಫಿಥಿಯೇಟರ್. ಇದು ಮೊದಲನೆಯ ಶತಮಾನದಲ್ಲಿ ನಿರ್ಮಾಣವಾಗಿದ್ದು, ಪಿಂಕ್ ಮತ್ತು ಬಿಳಿ ಕಲ್ಲುಗಳಿಂದ ಕಟ್ಟಲಾಗಿದೆ.

ನಾವು ಕಳೆದ ಬೇಸಿಗೆಯಲ್ಲಿ ಜರ್ಮನಿಗೆ ಹೋಗಿದ್ದೆವು. ಅಲ್ಲಿದ್ದ ಮೂರು ತಿಂಗಳಲ್ಲಿ ಸುತ್ತಲಿನ ನಾಲ್ಕಾರು ದೇಶಗಳನ್ನು ಸುತ್ತಾಡಿದೆವು. ಹತ್ತಾರು ಸುಂದರ ತಾಣಗಳನ್ನು ನೋಡಿದೆವು. ಇವುಗಳಲ್ಲಿ ನಮ್ಮನ್ನು ಆಕರ್ಷಿಸಿದ ವಿಶಿಷ್ಟ ತಾಣ ಇಟಲಿಯ ವೆರೋನಾ.

ನಾವು ದಕ್ಷಿಣ ಜರ್ಮನಿಯ ಮ್ಯೂನಿಕ್ ನಗರದಲ್ಲಿದ್ದೆವು. ಅಲ್ಲಿಂದ ಕೇವಲ ಒಂದೂವರೆ ಗಂಟೆ ಅವಧಿಯ ಪ್ರಯಾಣ ಮಾಡಿದರೆ ಜರ್ಮನಿಯ ಗಡಿ ದಾಟಿ ಆಸ್ಟ್ರಿಯಾ ದೇಶ ಪ್ರವೇಶಿಸಬಹುದು; ಆಸ್ಟ್ರಿಯದ ಇನ್ಸ್‌ಬ್ರೂಕ್ ಪಟ್ಟಣದ ಮೂಲಕ ಮತ್ತೆರಡು ಗಂಟೆ ದಕ್ಷಿಣಕ್ಕೆ ಪ್ರಯಾಣಿಸಿದರೆ, ಇಟಲಿ ತಲುಪಬಹುದು.

ಯೂರೋಪಿನಲ್ಲಿ ಎಲ್ಲಿಗೇ ಪ್ರವಾಸ ಹೊರಟರೂ, ಮೊದಲು ಹವಾಮಾನದ ಮುನ್ಸೂಚನೆ ನೋಡುತ್ತಾರೆ. ಮಳೆ, ಮೋಡ ಇಲ್ಲದೆ, ಆಕಾಶ ಸ್ವಚ್ಛವಾಗಿದ್ದರೆ ಮಾತ್ರ ಪ್ರಯಾಣ ಆರಂಭಿಸುತ್ತಾರೆ; ಬಿಸಿಲು ಇದ್ದರಂತೂ ಬೋನಸ್ ಇದ್ದಹಾಗೆ.

ಅಂತಹ ಒಂದು ಎಳೆ ಬಿಸಿಲು ಇದ್ದ ಬೆಳಗಿನಲ್ಲಿ, ನಾವು ಜರ್ಮನಿಯ ಗಡಿ ದಾಟಿ, ಕಾರಿನಲ್ಲಿ ಇನ್ಸ್‌ಬ್ರೂಕ್ ಮೂಲಕ ಒಟ್ಟು ಆರು ಗಂಟೆ ಪ್ರಯಾಣ ಮಾಡಿ ಇಟಲಿಯ ವೆನಿಸ್ ನಗರ ತಲುಪಿದೆವು. ವೆನಿಸ್ ಎರಡು ಕಾರಣಗಳಿಗೆ ವಿಶೇಷವೆನಿಸುತ್ತದೆ: ಮೊದಲನೆಯದು, ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್‌ನ ನಾಟಕ ‘ಮರ್ಚೆಂಟ್ ಆಫ್ ವೆನಿಸ್’ ಗೆ ರಂಗಸ್ಥಳವಾಗಿರುವುದು; ಮತ್ತೊಂದು, ‘ವೆನಿಸ್ ಚಲನ ಚಿತ್ರೋತ್ಸವ’ ವಿಶ್ವದ ಚಲನಚಿತ್ರೋತ್ಸವಗಳಲ್ಲಿಯೇ ಅತ್ಯಂತ ಪ್ರಮುಖವಾಗಿರುವುದು.

ಆದರೆ, ನಾನಿಲ್ಲಿ ಹೇಳಹೊರಟಿರುವುದು ವೆನಿಸ್ ಬಗ್ಗೆ ಅಲ್ಲ, ವೆನಿಸ್‌ನಿಂದ ಸುಮಾರು ಒಂದು ಗಂಟೆ ದೂರದಲ್ಲಿರುವ ವೆರೋನಾದ ಬಗ್ಗೆ. ವೆರೋನಾ ಉತ್ತರ ಇಟಲಿಯ ವೆನಿಟ್ಟೊ ಪ್ರಾಂತ್ಯದ ಒಂದು ಮುಖ್ಯ ಪಟ್ಟಣ. ಇದು ಅಡಿಗೆ ನದಿಯ ದಡದಲ್ಲಿದೆ. ಈ ಊರಿನ ಜನಸಂಖ್ಯೆ ಸುಮಾರು 2.65 ಲಕ್ಷ. ಇದೊಂದು ಪ್ರಮುಖ ಪ್ರವಾಸಿಕೇಂದ್ರ.


ಆಂಪಿಥಿಯೇಟರ್ ಒಳಾಂಗಣ

ಈ ಪುಟ್ಟ ಪಟ್ಟಣ ಎರಡು ಕಾರಣಗಳಿಗೆ ಪ್ರಖ್ಯಾತವಾಗಿದೆ. ಮೊದಲಿಗೆ, ಶೇಕ್ಸ್‌ಪಿಯರ್ ಈ ಊರನ್ನು ಅಜರಾಮರಗೊಳಿಸಿದ್ದಾನೆ. ಅವನ ನಾಟಕ, ‘ರೋಮಿಯೊ ಮತ್ತು ಜೂಲಿಯೆಟ್’ ಗೆ ಈ ಊರು ರಂಗಸ್ಥಳವಾಗಿದೆ. 14ನೇ ಶತಮಾನದ ಒಂದು ಪುಟ್ಟ ಮನೆ, ಅದರ ಬಾಲ್ಕನಿಯೊಂದಿಗೆ ಜೂಲಿಯೆಟ್‌ನ ಮನೆ ಎಂದು ಖ್ಯಾತವಾಗಿದೆ. ಇದರಿಂದ ವೆರೋನಾಗೆ ಒಂದು ರೋಮ್ಯಾಂಟಿಕ್ ಕಳೆ ಬಂದಿದೆ. ಈ ಮನೆಯಲ್ಲಿ ಜೂಲಿಯೆಟ್‌ ಕುಟುಂಬ ವಾಸವಿದ್ದು, ಅದರ ಬಾಲ್ಕನಿಯಲ್ಲಿ ಜೂಲಿಯೆಟ್‌ಳನ್ನು ರೋಮಿಯೊ ಪ್ರತಿ ದಿನ ಭೇಟಿ ಮಾಡುತ್ತಿದ್ದನಂತೆ. ಮುಂದೆ, ಅವರ ಪ್ರೇಮ ಕಥೆ ದುರಂತ ಅಂತ್ಯ ಕಂಡು, ಜೂಲಿಯೆಟ್ ಮೃತಪಟ್ಟು, ಅವಳನ್ನು ಹುಗಿದ ಸ್ಥಳವನ್ನು ಜೂಲಿಯೆಟ್‌ ಸಮಾಧಿ ಎಂದು ಗುರುತಿಸಲಾಗುತ್ತಿದೆ. ಪ್ರವಾಸಕ್ಕೆ ಬರುವ ಪ್ರೇಮಿಗಳು ಇಲ್ಲಿ ಫೋಟೊ ತೆಗೆಸಿಕೊಳ್ಳುತ್ತಾರೆ. ಜೂಲಿಯೆಟ್ ಬಾಲ್ಕನಿಯನ್ನು ವೀಕ್ಷಿಸಲು ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಇದನ್ನೂ ಓದಿ: ಸುಂದರ ಜರ್ಮನಿ

ವೆರೋನಾದ ಮತ್ತೊಂದು ಆಕರ್ಷಣೆಯಂದರೆ ‘ವೆರೋನಾ ಅರೇನಾ’ ಅಥವಾ ತೆರದ ಬಾನಿನ ಆಂಫಿ ಥಿಯೇಟರ್. ಇದು ಮೊದಲನೆಯ ಶತಮಾನದಲ್ಲಿ ನಿರ್ಮಾಣವಾಗಿದ್ದು, ಪಿಂಕ್ ಮತ್ತು ಬಿಳಿ ಕಲ್ಲುಗಳಿಂದ ಕಟ್ಟಲಾಗಿದೆ. ಎರಡು ಸುತ್ತುಗಳನ್ನು ಹೊಂದಿದ್ದು, ಇದರ ಮೆಟ್ಟಿಲುಗಳ ಮೇಲೆ ಸುಮಾರು ಇಪ್ಪತ್ತು ಸಾವಿರ ಜನರು ಕೂತು, ರಂಗಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

ಮೂಲದಲ್ಲಿ, ರಕ್ತದೋಕುಳಿ ಹರಿಸುವ ಬುಲ್ ಫೈಟಿಂಗ್ ಮತ್ತು ಗ್ಲಾಡಿಯೇಟರ್ ಮಾದರಿಯ ಕಾಳಗಗಳು ನಡೆಯುತಿದ್ದವು. ಇಂತಹ ಕ್ರೂರ ಕ್ರೀಡೆಗಳು ನಡಿಯುತ್ತಿದ್ದುದರ ಬಗ್ಗೆ 1590ರಿಂದಲೇ ದಾಖಲೆಗಳು ದೊರೆಯುತ್ತವೆ. ಈಗ ಇಲ್ಲಿ ಬೇಸಿಗೆಯಲ್ಲಿ ವಿಶ್ವದ ಪ್ರಸಿದ್ಧ ಸಂಗೀತಗಾರರು ಮತ್ತು ಕಲಾವಿದರನ್ನು ಕರೆಸಿ ಇಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇತ್ತೀಚಿನ ಬಾಲಿವುಡ್ ಸಿನಿಮಾ ರಾಕ್ ಸ್ಟಾರ್‌ನ ಕೆಲವು ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಒಟ್ಟಿನಲ್ಲಿ, ವಿಶ್ವಪಾರಂಪರಿಕ ತಾಣವಾಗಿ ಗುರ್ತಿಸಲ್ಪಟ್ಟಿರುವ ವೆರೋನಾ ಜರ್ಮನಿಯಲ್ಲಿ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾಗಿದೆ.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಜರ್ಮನಿಯ ಫ್ರಾಂಕ್ ಫರ್ಟ್ ಗೆ ಅಥವಾ ಮ್ಯುನಿಕ್‌ಗೆ ನೇರ ವಿಮಾನ ಸೌಲಭ್ಯವಿದೆ. ಫ್ರಾಂಕ್‌ಫರ್ಟ್ ನಿಂದ ವೆರೋನಾಗೂ ಸಹ ವಿಮಾನದಲ್ಲಿ ತಲುಪಬಹುದು. ಇನ್ನೊಂದು ದಾರಿ ಎಂದರೆ, ದುಬೈ ಮೂಲಕ ವೆನಿಸ್‌ಗೆ ಪ್ರಯಾಣಿಸಿ, ಅಲ್ಲಿಂದ ಒಂದು ಗಂಟೆ ರಸ್ತೆ ಮೂಲಕ ಸಂಚರಿಸಿ ವೆರೋನಾ ತಲುಪಬಹುದು. ವೆನಿಸ್‌ನಿಂದ ಗಂಟೆಗೊಂದರಂತೆ, 22 ರೈಲುಗಳು ಪ್ರತಿ ದಿನ ವೆರೋನಾಗೆ ಸಂಚರಿಸುತ್ತವೆ. ಪ್ರವಾಸಿಗರು ಅದರ ಉಪಯೋಗ ಪಡೆಯಬಹುದು.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು