ಶುಕ್ರವಾರ, ಏಪ್ರಿಲ್ 3, 2020
19 °C

ಅಬುದಾಬಿಯ ಲೂಎ ಮ್ಯೂಸಿಯಂ

ಡಾ. ಉಮಾಮಹೇಶ್ವರಿ ಎನ್. Updated:

ಅಕ್ಷರ ಗಾತ್ರ : | |

‘ಅಬುದಾಬಿಯಲ್ಲಿ ಲೂಎ (Louvre) ಮ್ಯೂಸಿಯಂ ಶುರುವಾಯ್ತು’ ಎಂಬ ಸುದ್ದಿ ಅನೇಕ ಮಾಧ್ಯಮಗಳಲ್ಲಿ ನೀವು ನೋಡಿರಬಹುದು, ಓದಿರಬಹುದು ಅಥವಾ ಕೇಳಿರಬಹುದು.  ನಾನು ಈ ಮ್ಯೂಸಿಯಂ ಬಗ್ಗೆ ಕೇಳಿದ್ದೆ. ಆದರೆ, ಇದರ ವಿಶೇಷತೆ ಹೆಗ್ಗಳಿಕೆಗಳೇನು ಎಂಬುದು ಗೊತ್ತಿರಲಿಲ್ಲ. ಕಳೆದ ವರ್ಷ ಪ್ಯಾರಿಸ್‌ ಪ್ರವಾಸಕ್ಕೆ ಹೋದಾಗ ಈ ಮ್ಯೂಸಿಯಂಗೆ ಹೋಗಿ ಬಂದೆ. 

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಲೂಎ ಅರಮನೆಯಲ್ಲಿದೆ ಈ ಮ್ಯೂಸಿಯಂ. ಪ್ರಪಂಚದಲ್ಲೇ ಅತಿ ದೊಡ್ಡ ಪುರಾತನ ವಸ್ತುಗಳ ಸಂಗ್ರಹ ಇಲ್ಲಿದೆ. ಜಗತ್ ಪ್ರಸಿದ್ಧ ಮೊನಾಲಿಸಾಳ ಮೂಲ ಚಿತ್ರವಿರುವುದು ಇಲ್ಲಿಯೇ.

12 ರಿಂದ 13ನೇ ಶತಮಾನದಲ್ಲಿ ಅಗಸ್ಟಸ್ ರಾಜ ಈ ಅರಮನೆಯನ್ನು ನಗರ ರಕ್ಷಣೆಯ ಕೋಟೆಯಾಗಿ ನಿರ್ಮಾಣ ಮಾಡಿದ್ದಾರೆ. ಕಾಲಕ್ರಮೇಣ ಇದು ಹಲವು ಬಾರಿ ಮಾರ್ಪಾಟಾಗಿ, 16 ನೇ ಶತಮಾನದಲ್ಲಿ  ಮೂರನೇ ಫ್ರಾನ್ಸಿಸ್ ರಾಜನ ವಸತಿಗೃಹವಾಯಿತು. 17 ನೇ ಶತಮಾನದಲ್ಲಿ ಲೂಯಿ ಹದಿಮೂರು ಹಾಗೂ ಲೂಯಿ ಹದಿನಾಲ್ಕನೇ ರಾಜರ ಕಾಲದಲ್ಲಿ ವಿಸ್ತಾರಗೊಂಡಿತು. ಪ್ರಸಿದ್ಧ ಕಲಾಕೃತಿಗಳನ್ನು ತನ್ನದಾಗಿಸಿಕೊಂಡಿತು. ನಂತರ ಕಲಾವಿದರ ವಾಸಸ್ಥಾನ ಹಾಗೂ ಕಲೆಗಳ ಪ್ರದರ್ಶನದ ಸ್ಥಳವಾಗಿ ಮಾರ್ಪಟ್ಟಿತು.

1713 ರಲ್ಲಿ ಮೊತ್ತಮೊದಲ ಬಾರಿಗೆ ಇಲ್ಲಿ ವಸ್ತು ಪ್ರದರ್ಶನ ನಡೆಯಿತು. ನೆಪೋಲಿಯನ್ ಕಾಲದಲ್ಲಿ ಇಲ್ಲಿನ ವಸ್ತುಗಳ ಸಂಗ್ರಹ ಪ್ರಮಾಣ ಹೆಚ್ಚಳವಾಯಿತು. ಕಾಲಕಾಲಕ್ಕೆ ವಸ್ತುಗಳನ್ನು ದಾನವಾಗಿ ಪಡೆದುಕೊಂಡು ಅಥವಾ ಖರೀದಿಸಿ ಸಂಗ್ರಹವನ್ನು ವೃದ್ಧಿಸುತ್ತಾ ಬಂದ ಈ ಸಂಗ್ರಹಾಲಯ ಪ್ರಪಂಚದಲ್ಲೇ ಅತಿ ದೊಡ್ಡ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಈ ಮ್ಯೂಸಿಯಂ ಪ್ಯಾರಿಸ್‌ನ ಕೇಂದ್ರ ಭಾಗದಲ್ಲಿ ಸೀನ್‌ ನದಿಯ ದಂಡೆಯಲ್ಲಿದೆ. ಮೂರು ಪ್ರವೇಶದ್ವಾರಗಳಲ್ಲಿ ಯಾವುದಾದರೂ ಒಂದರಿಂದ ಒಳ ಪ್ರವೇಶ ಪಡೆಯಬಹುದು. ಪ್ಯಾರಿಸ್‌ನ ಯಾವುದೇ ಭಾಗದಿಂದ ಇಲ್ಲಿಗೆ ಮೆಟ್ರೊ ರೈಲಿನಲ್ಲಿ ಸುಲಭವಾಗಿ ತಲುಪಬಹುದು. ಮ್ಯೂಸಿಯಂ ಒಳಗೆ ಕ್ಯಾಮೆರಾಗಳನ್ನು ಬಳಕೆ ಮಾಡಬಹುದು. ಆದರೆ ಫ್ಲ್ಯಾಶ್‌ ಉಪಯೋಗಿಸುವಂತಿಲ್ಲ. ಫ್ರಾನ್ಸ್ ಸರ್ಕಾರದ ಅಧೀನದಲ್ಲಿರುವ ಈ ಮ್ಯೂಸಿಯಂ 1990ರ ನಂತರ ಸಾಕಷ್ಟು ಸ್ವಾಯತ್ತತೆಯನ್ನು ಪಡೆದುಕೊಂಡಿದೆ.

1980-90ರಲ್ಲಿ ಸಾಕಷ್ಟು ಮ್ಯೂಸಿಯಂ ಅನ್ನು ಮಾರ್ಪಾಟು ಮಾಡಲಾಯಿತು. ನೆಲಮಾಳಿಗೆಯಲ್ಲಿ ಕಾರ್ಯಾಲಯಗಳು,ಅಂಗಡಿಗಳು ( ಲೂಎ ಮಾಲ್), ಪ್ರದರ್ಶನ ಸ್ಥಳಗಳು, ಬಸ್ ಹಾಗೂ ಮೆಟ್ರೊ ರೈಲು ನಿಲ್ದಾಣಗಳು, ಅರಮನೆಯ ಕೆಳಗೆಯೇ ನಿರ್ಮಾಣವಾದವು. ಮ್ಯೂಸಿಯಂ ಪ್ರವೇಶದ್ವಾರದಲ್ಲಿ ಉಕ್ಕು ಹಾಗೂ ಗಾಜಿನಿಂದ ತಯಾರಾದ ವಿಶೇಷವಾದ ಪಿರಮಿಡ್ ಎದ್ದು ನಿಂತಿತು. ಎರಡು ಸಾವಿರದಷ್ಟು ಜನ ಇಲ್ಲಿನ ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಇಲ್ಲಿ ಮ್ಯೂಸಿಯಂ ನಿರ್ವಹಣೆ, ಪುರಾತನ ವಸ್ತುಗಳ ಸಂಗ್ರಹಣೆ ಹಾಗೂ ಅವುಗಳ ರಕ್ಷಣೆಗಳ ಬಗ್ಗೆ ತರಬೇತಿ ಕೊಡುವ ವಿಭಾಗವೂ ಇದೆ. ಕಲೆ ಹಾಗೂ ಚರಿತ್ರೆಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದೊಂದು ವರದಾನವೇ ಸರಿ. ಶಾಲಾ ಮಕ್ಕಳು ತಮ್ಮ ಶಿಕ್ಷಕರ ಜೊತೆ ಇಲ್ಲಿ ವೀಕ್ಷಣೆಗೆ ಬರುತ್ತಾರೆ.

ಇಲ್ಲಿರುವ ಎಲ್ಲಾ ವಸ್ತುಗಳ ವಿವರವಾದ ಅಧ್ಯಯನ ಮಾಡಲು ದಿನಗಳೇ ಬೇಕಾದೀತು. ಪ್ರದರ್ಶನ ವಸ್ತುಗಳು ಈಜಿಪ್ಟ್‌ ವಿಭಾಗ, ಪೂರ್ವ ವಿಭಾಗ, ಗ್ರೀಕ್ ಮತ್ತು ರೋಮನ್ ವಿಭಾಗ, ಇಸ್ಲಾಮಿಕ್ ಕಲೆ, ಶಿಲ್ಪಕಲೆ, ಅಲಂಕಾರಿಕ ಕಲಾವಸ್ತುಗಳು, ಪೈಂಟಿಂಗ್‌ಗಳು, ಪ್ರಿಂಟ್ ಮತ್ತು ಡ್ರಾಯಿಂಗ್‌ಗಳು ಎಂಬ ಎಂಟು ವಿಭಾಗಗಳಲ್ಲಿ ಹಂಚಿ ಹೋಗಿವೆ. ಇಲ್ಲಿರುವ ಎಲ್ಲಾ ಕಲಾಕೃತಿಗಳನ್ನು ಕ್ರಮಬದ್ಧವಾಗಿ ಅಭ್ಯಸಿಸಲು ಒಂದು ವಾರದಷ್ಟಾದರೂ ಸಮಯ ಬೇಕು.

ಮೊನಾಲಿಸ ಚಿತ್ರ, ಇಲ್ಲಿ ಪ್ರದರ್ಶನಕ್ಕಿರುವ ವಸ್ತುಗಳಲ್ಲಿ ಅತ್ಯಂತ ಪ್ರಸಿದ್ಧ ಕಲಾಕೃತಿ. ಲಿಯೊನಾರ್ಡೊ- ಡಾ ವಿಂಚಿಯಿಂದ 16 ನೇ ಶತಮಾನದ ಮೊದಲ ಭಾಗದಲ್ಲಿ ರಚಿತವಾದ ಈ ಪೇಂಟಿಂಗ್‌ನ ಮೂಲಕೃತಿ ಒಂದು ದೊಡ್ಡದಾದ ಕೊಠಡಿಯಲ್ಲಿ ಗಾಜಿನ ಪೆಟ್ಟಿಗೆಯೊಳಗೆ ಇಡಲಾಗಿದೆ. ಯಾವ ಕೋನದಿಂದ ನೋಡಿದರೂ ಮೊನಾಲಿಸ ಕಣ್ಣುಗಳು ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ತುಟಿಯಲ್ಲಿನ ಮುಗುಳ್ನಗೆ ಹಾಗೂ ಅದಕ್ಕೆ ವ್ಯತಿರಿಕ್ತವಾದ ಕಣ್ಣುಗಳಲ್ಲಿನ ದೈನ್ಯಭಾವ ಈ ಕೃತಿಯ ವಿಶೇಷತೆ. ಜನಜಂಗುಳಿಯ ಮಧ್ಯದಲ್ಲಿ ತೂರಿಕೊಂಡು ಮೊಬೈಲ್ ಉಪಯೋಗಿಸಿ ಫೋಟೊ ಒಂದನ್ನು ಪಡಕೊಳ್ಳುವುದರಲ್ಲಿ ಯಶಸ್ವಿಯಾದೆ.

2012ರಲ್ಲಿ ಉತ್ತರ ಫ್ರಾನ್ಸ್‌ನ ‘ಲೆನ್ಸ್’ ಎಂಬ ಜಾಗದಲ್ಲಿ ಈ ಮ್ಯೂಸಿಯಂ ಶಾಖೆಯೊಂದು ಆರಂಭವಾಯಿತು. ನವೆಂಬರ್ 2017ರಲ್ಲಿ ಅಬುದಾಬಿಯ ಸರ್ಕಾರದ ಜೊತೆ ಜಂಟಿ ಒಡೆತನದಲ್ಲಿ 30 ವರ್ಷಗಳ ಒಪ್ಪಂದದೊಂದಿಗೆ ಇನ್ನೊಂದು ಶಾಖೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಯಿತು. ಇದೇ ಸುದ್ದಿಯನ್ನು ನಾವು ಪತ್ರಿಕೆಗಳಲ್ಲಿ ಓದಿದ್ದು.

ಪುರಾತನ ಕೃತಿಗಳಿಂದ ಹಿಡಿದು 19 ನೇ ಶತಮಾನದ ಮಧ್ಯಭಾಗದವರೆಗಿನ ಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಲೂಎ ಚಿತ್ರ ಕಲೆಗಳ ಸಂಗ್ರಹ ಪ್ರಪಂಚದಲ್ಲೇ ಹಿರಿದು. ಯುರೋಪಿನ ಪುರಾತನ ಚಿತ್ರಗಳೆಲ್ಲವೂ(1848ರ ವರೆಗಿನ) ಇಲ್ಲಿವೆ. ನಂತರದ ಕಲಾಕೃತಿಗಳು ಬೇರೊಂದು ಮ್ಯೂಸಿಯಂನಲ್ಲಿವೆ.

ಟುಲರೀ ಉದ್ಯಾನವನ ಮ್ಯೂಸಿಯಂ ಪಕ್ಕದಲ್ಲೇ ಇದೆ. ಇಲ್ಲಿದ್ದ ಅರಮನೆ 1871ರ ದಂಗೆಯಲ್ಲಿ ಸುಟ್ಟು ಭಸ್ಮವಾಯಿತು. ಇಷ್ಟಾದರೂ, ಉದ್ಯಾನದ ಮೂಲರೂಪವನ್ನು ಕಾಯ್ದಿಡಲಾಗಿದೆ. ಇಲ್ಲಿ ಆಕರ್ಷಕ ವಿನ್ಯಾಸಗಳಲ್ಲಿ ಬೆಳೆಸಿದ ಸಸ್ಯಗಳಿವೆ. ಅಮೃತಶಿಲೆಯ ಕಲಾಕೃತಿಗಳು, ನೀರಿನ ಸರೋವರಗಳು, ಕಾರಂಜಿಗಳು ಕಾಣಸಿಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)