ಗುರುವಾರ , ಜನವರಿ 23, 2020
27 °C
ಆರು ಎಕರೆ ವಿಸ್ತೀರ್ಣದ ಶಿಲ್ಪೋದ್ಯಾನ

ಕಡಲತಡಿಯಲ್ಲಿ ರಾಕ್ ಗಾರ್ಡನ್‌!

ಸದಾಶಿವ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

ಅಲ್ಲಿ ಮೀನುಗಾರರ ಕುಟುಂಬ, ಯಜಮಾನನ ದಿನದ ಗಳಿಕೆಯನ್ನು ಒಟ್ಟಾಗಿ ಸಂಭ್ರಮಿಸುತ್ತಿದೆ. ಜಾನಪದ ಗಾಯಕಿ ಸುಕ್ರಿ ಬೊಮ್ಮುಗೌಡ ಹಾಡುತ್ತ ಸ್ವಾಗತಿಸುತ್ತಾರೆ. ಚಿತ್ತಾಕರ್ಷಕ ವೇಷಭೂಷಣ ಗಲ್ಲಿರುವ ಯಕ್ಷಗಾನದ ಕಲಾವಿದರು ‘ಸೆಲ್ಫಿ’ ತೆಗೆಸಿಕೊಳ್ಳುತ್ತಾರೆ!

ಕಡಲತಡಿಯ ನಗರಿ ಕಾರವಾರದ ‘ರಾಕ್ ಗಾರ್ಡನ್‌’ಗೆ(ಶಿಲ್ಪವನ) ಹೋದಾಗ, ಅಲ್ಲಿರುವ ಶಿಲ್ಪಗಳನ್ನು ಕಂಡು ನನ್ನ ಮನದಲ್ಲಿ ಮೂಡಿದ ಭಾವವಿದು. ಉದ್ಯಾನದಲ್ಲಿರುವ ಆ ಶಿಲ್ಪಗಳಲ್ಲಿ ಅಷ್ಟು ಜೀವಂತಿಕೆ ಕಾಣುತ್ತದೆ!

ಕಾರವಾರ ಎಂದರೆ, ಸುಂದರ ಕಡಲತೀರ, ಅದಕ್ಕೆ ಎದುರಾಗಿರುವ ಬೆಟ್ಟಗುಡ್ಡಗಳು.. ಕಣ್ಣ ಮುಂದೆ ಬರುತ್ತವೆ. ಇಂಥ ಆಕರ್ಷಕ ತಾಣಗಳ ಪಟ್ಟಿಗೆ ಈ ‘ರಾಕ್‌ ಗಾರ್ಡನ್‌’ ಕೂಡ ಸೇರಿದೆ. ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪದಲ್ಲೇ ಈ ಶಿಲ್ಪೋದ್ಯಾನ ನಿರ್ಮಾಣವಾಗಿದೆ. ನಿತ್ಯವೂ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಗಳು, ಇಲ್ಲಿನ ಮೂಲ ಕಲೆ ಹಾಗೂ ಸಂಪ್ರದಾಯಗಳನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಈ ‘ಥೀಮ್ ಪಾರ್ಕ್’ ಸಿದ್ಧಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 66 ಹಾಗೂ ಅರಬ್ಬಿ ಸಮುದ್ರದ ನಡುವಿನ ತೀರದಲ್ಲಿ ಆರು ಎಕರೆ ಜಾಗದಲ್ಲಿ ಮೈಚಾಚಿಕೊಂಡಿದೆ. 2018ರ ಫೆ.25ರಂದು ಉದ್ಘಾಟನೆಯಾದ ಈ ತಾಣ, ಈಗ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ.

ಉತ್ತರಕನ್ನಡದ ಗ್ರಾಮೀಣ ಭಾಗಗಳಲ್ಲಿರುವ ಬುಡಕಟ್ಟು ಜನಾಂಗಗಳ ಸಂಪ್ರದಾಯ, ಜೀವನಶೈಲಿಯನ್ನು ಈ ಉದ್ಯಾನದಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಮೀನುಗಾರರು, ಹಾಲಕ್ಕಿ, ಗೌಳಿ ಹಾಗೂ ಸಿದ್ದಿ ಜನಾಂಗದವರ ಬದುಕಿನ ಚಿತ್ರಣಗಳು ಇಲ್ಲಿ ಕಲಾಕೃತಿಗಳಾಗಿವೆ. ಈ ಸಮುದಾಯಗಳ ಗ್ರಾಮೀಣ ಸೊಗಡಿನ ಮನೆಗಳು, ಪಶುಪಾಲನೆ, ನೀರಾವರಿ ವ್ಯವಸ್ಥೆ, ಜಾನಪದ ನೃತ್ಯ, ಜಾನಪದ ಹಾಡುಗಳು ಇಲ್ಲಿ ಜನರನ್ನು ಆಕರ್ಷಿಸುತ್ತವೆ. ಉದ್ಯಾನದಲ್ಲಿ ವಿಶಾಲವಾದ ಕಾಲುದಾರಿಗಳಿದ್ದು, ಗಾಳಿಮರದ ನೆರಳಿನಲ್ಲಿ ಹೆಜ್ಜೆ ಹಾಕಲು ಅನುಕೂಲವಾಗಿದೆ.

ಖ್ಯಾತ ಕಲಾವಿದರಾದ ಮೋಹನ್ ಸೋನ ಹಾಗೂ ಸುದೇಶ್ ಮಹಾನ್ ಅವರ ಪರಿಕಲ್ಪನೆಯಲ್ಲಿ ಇಲ್ಲಿನ ಕಲಾಕೃತಿಗಳು ಜೀವ ಪಡೆದುಕೊಂಡಿವೆ. ಇದಕ್ಕೆ ಜಿಲ್ಲಾಡಳಿತದಿಂದಲೂ ಸಹಭಾಗಿತ್ವ ನೀಡಲಾಗಿದೆ.

ಮನೆಯ ಯಜಮಾನ, ಸಾಂಪ್ರದಾಯಿಕ ಉಡುಪು ಧರಿಸಿದ ಮಹಿಳೆ, ಆಕೆಯ ಮುಗ್ಧ ನಗು, ಈ ಭಾಗದಲ್ಲಿ ಸಾಮಾನ್ಯವಾಗಿರುವ ಎಲೆ, ಅಡಿಕೆ ತಿಂದು ಕೆಂಪಾದ ಹಲ್ಲುಗಳು, ಎಮ್ಮೆ, ದನಗಳು, ಕೋಳಿ, ನಾಯಿ, ಕತ್ತೆ, ಅಗಸ ಮತ್ತಿತರ ಸಿಮೆಂಟ್ ಶಿಲ್ಪಗಳು ನೈಜವಾಗಿವೆ. ಯಕ್ಷಗಾನ ಕಲಾವಿದರ ಕಲಾಕೃತಿಗಳಂತೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ನೆಚ್ಚಿನ ಫೋಟೊ ಶೂಟ್ ತಾಣವಾಗಿದೆ.

ಮಕ್ಕಳಿಗೂ ಒಂದಿಷ್ಟು ಹೊತ್ತು ಬೇಜಾರಾಗದಂತೆ ಕಾಲ ಕಳೆಯಲು ಅವಕಾಶವಿದೆ. ಬಿದಿರು ಮತ್ತು ಕಟ್ಟಿಗೆಗಳಿಂದ ಜೋಕಾಲಿ, ತಿರುಗಣಿ, ಅಟ್ಟಣಿಕೆ, ಕೆನೊಪಿ ವಾಕ್, ಹಗ್ಗದ ಮೇಲೆ ನಡಿಗೆಗಳು ಸಾಹಸ ಪ್ರವೃತ್ತಿಯನ್ನು ಒರೆಗೆ ಹಚ್ಚುತ್ತವೆ.

ಕಾರವಾರಕ್ಕೆ ಪ್ರವಾಸ ಮಾಡುವವರಿಗೆ ಸಮುದ್ರದ ಜೊತೆಗೆ ರಾಕ್‌ ಗಾರ್ಡನ್ ಕೂಡ ಆಕರ್ಷಣೆಯ ತಾಣವಾಗಿದೆ.

ಸೂರ್ಯಾಸ್ತದ ಸೊಬಗು

ಕಾರವಾರಕ್ಕೆ ಭೇಟಿ ನೀಡಿದ ಪ್ರವಾಸಿಗರು ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಬಂದು ಸೂರ್ಯಾಸ್ತ ವನ್ನು ಕಣ್ತುಂಬಿಕೊಳ್ಳದೇ ಹೋಗುವುದಿಲ್ಲ. ಇದೇ ಸಾಲಿನಲ್ಲಿ ಯುದ್ಧ ನೌಕೆ ಮ್ಯೂಸಿಯಂ, ಮತ್ಸ್ಯಾಲಯದ ಜೊತೆಗೇ ರಾಕ್‌ ಗಾರ್ಡನ್ ಕೂಡ ಇದೆ. ಹಾಗಾಗಿ ಇಲ್ಲಿಗೆ ಬರಲು ಹೊಸಬರಿಗೆ ಯಾವುದೇ ಗೊಂದಲವಾಗದು. 

ರಾಕ್‌ಗಾರ್ಡನ್‌ನಲ್ಲಿ ಸ್ಥಾಪಿಸಲಾಗಿರುವ ಮೀನುಗಾರರ ಕುಟುಂಬದ ಬೃಹತ್ ಪ್ರತಿಮೆಯ ಹಿನ್ನೆಲೆಯಲ್ಲಿ ಸೂರ್ಯನ ಕೆಂಪು ಕಿರಣಗಳು ಮೂಡಿ ಬಂದಾಗ ಬಹಳ ಸುಂದರವಾಗಿ ಗೋಚರಿಸುತ್ತದೆ.

ಇದನ್ನೂ ಓದಿ: ‘ಮಲಪ್ರಭೆ’ ತವರಲ್ಲಿ ವನದೇವಿ ತೇರು!

ರಾಷ್ಟ್ರೀಯ 66ರ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಗುಡ್ಡಗಳನ್ನು ಅಗೆದಾಗ ದೊರೆತ ಬೃಹತ್ ಬಂಡೆಗಲ್ಲುಗಳನ್ನು ಉದ್ಯಾನಕ್ಕೆ ಬಳಸಲಾಗಿದೆ. ಅದರ ಆವರಣ ಗೋಡೆಯನ್ನೂ ಕಲ್ಲುಗಳಿಂದಲೇ ನಿರ್ಮಿಸಲಾಗಿದೆ. ರಸ್ತೆ ಬದಿಯಲ್ಲಿ ಕುಡಿದು ಎಸೆದ ಬಿಯರ್ ಬಾಟಲಿಗಳನ್ನು ಒಳಾಂಗಣದ ಗೋಡೆಗಳಿಗೆ ಬಳಸಿರುವುದು ಮತ್ತೊಂದು ವಿಶೇಷವಾಗಿದೆ. ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಅವರ ವಯೋಮಾನಕ್ಕೆ ಅನುಗುಣವಾಗಿ ಪ್ರವೇಶ ಶುಲ್ಕವಿದೆ. 

ಹೋಗುವುದು ಹೇಗೆ?

ರಾಜ್ಯದ ಬಹುತೇಕ ಎಲ್ಲ ಕಡೆಗಳಿಂದ ಕಾರವಾರಕ್ಕೆ ಬಸ್ ಸೌಲಭ್ಯವಿದೆ. ಬೆಂಗಳೂರು, ಮಂಗಳೂರಿನಿಂದ ಕಾರವಾರಕ್ಕೆ ರೈಲು ಸೌಲಭ್ಯವಿದೆ. ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿ ಕಡಲತೀರದಲ್ಲಿ ರಾಕ್‌ ಗಾರ್ಡನ್ ಇದೆ. ಇಲ್ಲಿಗೆ ಹೋಗಲು ಬಾಡಿಗೆ ಆಟೊ ರಿಕ್ಷಾಗಳು ಸಿಗುತ್ತವೆ. ನಗರದ ಸಮೀಪದಲ್ಲೇ ಇರುವ ಕಾರಣ ಇಲ್ಲಿ ಹೋಟೆಲ್, ಕುಡಿಯುವ ನೀರಿನ ಸಮಸ್ಯೆಯಿಲ್ಲ.

‌ಚಿತ್ರಗಳು: ದಿಲೀಪ ರೇವಣಕರ್

ಪ್ರತಿಕ್ರಿಯಿಸಿ (+)