ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಪಕ್ಕದಲ್ಲೇ ಇದೆ ಏಕತಾನತೆಗೆ ಮದ್ದು!

Last Updated 9 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಳೆದ ಆರೇಳು ತಿಂಗಳಿಂದ ಪ್ರವಾಸ ಹೋಗಿಲ್ಲ ಎಂಬ ಬೇಸರ ಬಿಟ್ಟುಬಿಡಿ. ನೀವಿರುವ ಜಾಗದಲ್ಲೇ ಅಕ್ಕಪಕ್ಕ ಏನೇನು ಪ್ರವಾಸಿ ತಾಣಗಳಿವೆ ಎಂದು ಪಟ್ಟಿ ಮಾಡಿಕೊಂಡು ನೋಡಲು ಹೊರಡಬಹುದು. ಆದರೆ, ಸುರಕ್ಷಿತ ಕ್ರಮಗಳನ್ನು ಅನುಸರಿಸುವುದನ್ನು ಮಾತ್ರ ಮರೆಯಬೇಡಿ..

‘ಆರು ತಿಂಗಳಿಂದ ಎಲ್ಲಿಗೂ ಪ್ರವಾಸ ಹೋಗದೆ ಮನಸ್ಸೆಲ್ಲ ಜಡ್ಡುಗಟ್ಟಿ ಹೋಗಿದೆ. ನಾಲ್ಕಾರು ದಿನ ಹೊರಗಡೆ ಹೋಗೋಣವೆಂದರೆ ಕೊರೊನಾ ಭಯ. ವಾಪಸ್ಸು ಬಂದ ಮೇಲೆ ಕ್ವಾರಂಟೈನ್‌ ಆಗಬೇಕು ಎಂದುಬಿಟ್ಟರೆ..’ ಎನ್ನುವ ಬೆಂಗಳೂರಿನ ಜಾಹೀರಾತು ಕಂಪನಿಯೊಂದರ ಕಂಟೆಂಟ್‌ ಪ್ರೊವೈಡರ್‌ ನೀಲಿಮಾ ಸಹದೇವ್‌, ‘ಬಸವನಗುಡಿಯನ್ನು ಸರಿಯಾಗಿ ನೋಡಿರಲಿಲ್ಲ. ದೊಡ್ಡ ಗಣಪತಿ ದೇವಸ್ಥಾನ, ಬ್ಯೂಗಲ್‌ ರಾಕ್‌.. ಹೀಗೆ ಆ ಪ್ರದೇಶದಲ್ಲಿ ಹುಷಾರಾಗಿ ಸುತ್ತಿ ಬಂದೆ. ಮನಸ್ಸೆಲ್ಲ ನಿರಾಳವಾಗಿ ಮತ್ತೆ ಕೆಲಸ ಮಾಡುವ ಹುಮ್ಮಸ್ಸು ಬಂದಿದೆ’ ಎಂದಾಗ ಕೆಲವೇ ನಿಮಿಷಗಳ ಹಾದಿಯನ್ನೂ ಸುತ್ತಿ ಬರದೇ ಪ್ರವಾಸವೆಂದರೆ ದೂರದ ಲಂಡನ್‌, ರೋಮ್‌ ಎಂದು ಹಪಹಪಿಸುತ್ತಿದ್ದೇವಲ್ಲ ಎನಿಸಿದ್ದು ಸುಳ್ಳಲ್ಲ.

ಕೋವಿಡ್‌–19 ಸಂದರ್ಭದಲ್ಲಿ ಏಕತಾನತೆಯನ್ನು ಮನದಿಂದ ಕಿತ್ತು ಹಾಕಲು ಏನೆಲ್ಲ ಕಸರತ್ತುಗಳು ನಡೆಯುತ್ತಿವೆ. ಕಡಲ ತೀರ, ಗಿರಿಧಾಮಗಳಿಗೆ ಸ್ವಂತ ವಾಹನದಲ್ಲೇ ಹೋಗಿ ವಾರ ಕಾಲ ಇದ್ದು ಕಚೇರಿಯ ಕೆಲಸದ ಜೊತೆಗೆ ಪ್ರವಾಸದ ಸವಿಯನ್ನೂ ಉಣಬಡಿಸುವ ‘ವರ್ಕೇಶನ್‌’ಗಳಾದವು. ಈಗ ನಮ್ಮ ನಗರದಲ್ಲೇ ಇರುವ, ನಮ್ಮ ಸುತ್ತಮುತ್ತ ಇರುವ ತಾಣಗಳಿಗೆ ಹೋಗಿ ಕೆಲ ಸಮಯ ಕಾಲ ಕಳೆಯುವುದು ಈ ಏಕತಾನತೆಗೆ ಮದ್ದಾಗಬಹುದು.

ನಾವು ಇದ್ದ ತಾಣಗಳ ನೋಟವನ್ನೇ ಹೊಸ ರೀತಿಯಲ್ಲಿ ಸವಿಯಬಹುದು. ಕಾಲ್ನಡಿಗೆಯಲ್ಲೇ ನಮಗೆ ಸಮೀಪದ ಪ್ರವಾಸಿ ತಾಣಗಳನ್ನು ಸುತ್ತಬಹುದು. ಕಟ್ಟಡದ ವಾಸ್ತುಶಿಲ್ಪ, ಸಮೀಪದ ಪಾರ್ಕ್‌ಗಳ ಸೌಂದರ್ಯವನ್ನು ಮನದುಂಬಿಕೊಳ್ಳಬಹುದು.

ಕೆಲಸದ ಒತ್ತಡದ ಮಧ್ಯೆ ತಮ್ಮ ಅಕ್ಕಪಕ್ಕದ ಬೀದಿಗಳಲ್ಲಿ ಏನೇನಿವೆ ಎಂಬುದನ್ನೇ ಎಷ್ಟೋ ಮಂದಿ ನೋಡಿರುವುದಿಲ್ಲ. ಈಗ ನಿಧಾನವಾಗಿ ಒಂದೊಂದೇ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತ, ಎಲ್ಲವನ್ನೂ ಗಮನಿಸುತ್ತ ಸಾಗಬಹುದು.

ದೊಡ್ಡ ನಗರಗಳು ಬೇಡ, ಸಣ್ಣ ಊರಿನಲ್ಲೂ ಅಷ್ಟೇ, ಸುತ್ತಮುತ್ತ ಇರುವ ಆಕರ್ಷಣೀಯ ಪ್ರವಾಸಿ ತಾಣಗಳನ್ನು ಎಷ್ಟು ಮಂದಿ ನೋಡಿರುತ್ತಾರೆ? ಹೇಗಿದ್ದರೂ ಇಲ್ಲೇ ಇರುತ್ತೇವಲ್ಲ, ನೋಡಿದರಾಯಿತು ಎಂಬ ಉದಾಸೀನ. ಆದರೆ ಈ ಸಂದರ್ಭದಲ್ಲಿ ದೂರದ ತಾಣಗಳಿಗೆ ಓಡಾಡುವುದು ಅಷ್ಟು ಸುರಕ್ಷಿತವಲ್ಲ. ಹೀಗಾಗಿ ಒಂದೊಂದೇ ಸ್ಥಳಗಳನ್ನು ಪಟ್ಟಿ ಮಾಡುತ್ತ ಹೋಗಿ. ನಿಮ್ಮ ಊರಿಗೆ ಪ್ರವಾಸಿಗರು ಅಥವಾ ಬಂಧುಗಳು ಮೊದಲ ಬಾರಿಗೆ ಬಂದಾಗ ಯಾವ್ಯಾವ ಜಾಗಗಳನ್ನು ನೋಡಲು ಹೋಗುತ್ತಿದ್ದರು ಎಂದು ನೆನಪಿಸಿಕೊಳ್ಳಿ. ನೀವೂ ಪ್ರವಾಸಿಗರೇ ಎಂದು ಒಂದು ಕ್ಷಣ ಅಂದುಕೊಂಡು ವೀಕ್ಷಣೆಗೆ ಹೊರಡಿ. ಸಮೀಪದಲ್ಲಿ ಒಳ್ಳೆಯ ಹೋಟೆಲ್‌ ಇದ್ದರೆ ರುಚಿಯಾದ ತಿನಿಸುಗಳನ್ನು ಪಾರ್ಸೆಲ್‌ ಮಾಡಿಸಿಕೊಂಡು ಬಂದು ತಿನ್ನಿ.

ಹಾಗೆಯೇ ಅಕ್ಕಪಕ್ಕದ ಊರುಗಳಿಗೂ ಹೋಗಿ ತಿರುಗಾಡಿಕೊಂಡು ಬರಬಹುದು. ಇಂತಹ ಪ್ರವಾಸಕ್ಕೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಆದರೆ ಮನಸ್ಸು ಬೇಕು. ನಿತ್ಯದ ಮಾಮೂಲು ಕೆಲಸಕಾರ್ಯಗಳ ಮಧ್ಯೆ ಇದೊಂದು ವಿಭಿನ್ನ ಅನುಭವ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT