‘ಬಾ ರೋ ಬಾರೋ ಮಳೆರಾಯಾ’ ಎಂಬ ಚಿಣ್ಣರ ಪದ್ಯ ಮಣ್ಣಿನ ಮಕ್ಕಳ ಆರ್ತನಾದವಾಗಿ ಕೇಳಿಸುತ್ತಿರುವ ಹೊತ್ತಿದು. ಅಸ್ಥಿರ ಮುಂಗಾರು, ಬತ್ತಿದ ಕೆರೆ, ಕಟ್ಟೆ, ಬಾವಿಗಳು, ಅಮ್ಮನ ಒಡೆದ ಹಿಮ್ಮಡಿಯನ್ನು ನೆನಪಿಸುವ ಹಾಗೆ ಒಣಗಿ ಬಾಯ್ಬಿಟ್ಟ ನೆಲ ಎಲ್ಲವೂ ನಾಳಿನ, ನೀರು–ನೆರಳಿಲ್ಲದ ಕ್ರೂರ ಬರಗಾಲದ ಸೂಚನೆಗಳಾಗಿ ಭಯ ಹುಟ್ಟಿಸುತ್ತಿವೆ.

ಈ ಛಿದ್ರ ಚಿತ್ರಗಳನ್ನು ಕಂಡು ಬೆಚ್ಚುತ್ತಿರುವಾಗಲೇ ಅಲ್ಲಲ್ಲಿ ಮಳೆಯಾದ ಸುದ್ದಿ ಬರುತ್ತಿವೆ. ನಂಬಿಕೆಯ ಪಸೆಯೊಡೆಯುತ್ತಿದೆ. ಮುಂಗಾರಿಗೆ ಕಾಯುವುದು, ಮಳೆ ಬಿದ್ದು ಹದಗೊಂಡ ನೆಲವನ್ನು ಉತ್ತು ಬಿತ್ತುವುದು, ಅನುದಿನ ನೀರುಣಿಸಿ ಬೆಳೆಗಾಗಿ ಕಾಯುವುದು ಇವೆಲ್ಲವೂ ರೈತನ ಕೃಷಿಯ ಪಾಡಾಯಿತು. ಆದರೆ ಪ್ರಕೃತಿಗೆ ಇಂಥ ಪೋಷಣೆಯ ಹಂಗೆಲ್ಲಿದೆ? ಯಾವುದೋ ಗಾಳಿಗೆ ಹಾರಿ, ಯಾವುದೋ ಮಣ್ಣಲ್ಲಿ ಊರಿ ಮುಗಿಲಿಂದ ಉದುರಿದ ಹನಿಯೊಂದು ಮೈಮೇಲೆ ಬಿದ್ದ ಹಾಗೆ ಬೇರು ಇಳಿಸಿ, ಚಿಗುರು ಗಳಿಸಿ ಅರಳಿಕೊಳ್ಳುವ ಕಾಡ ಸಸಿಗಳಿಗೆ ಉತ್ತಿ ಬಿತ್ತುವ, ಕೆಡದಂತೆ ಕಾಯುವ ಮನುಷ್ಯನ ಹಂಗಿಲ್ಲ. ಬಿದ್ದ ಅಲ್ಪ ಮಳೆಗೆ ನಿಸರ್ಗದ ಒಡಲು ಹೇಗೆ ಬಗೆಬಗೆಯಾಗಿ ಚಿಗುರೊಡೆಯುತ್ತದೆ ನೋಡಿ.

ಮೋಡ ಕಟ್ಟಿದ ಸುದ್ದಿ ಗೊತ್ತಾದಂತೆ ದಿಗ್ಗನೆಂದು ಮಣ್ಣು, ಬಿದ್ದು ಪುಡಿಗಟ್ಟುತ್ತಿರುವ ಮರದ ಬೊಡ್ಡೆ, ದಪ್ಪ ಬೇರು, ಬಂಡೆ ಸಂಧಿ ಹೀಗೆ ಎಲ್ಲೆಂದರಲ್ಲಿ ಹಗುರ ಬೇರು ಊರಿ ಅಷ್ಟೇ ಹಗುರವಾಗಿ ತಲೆಯೆತ್ತುವ ಬಗೆಬಗೆ ಅಣಬೆಗಳಂತೂ ಕೊಡೆಯ ಮಿನಿಯೇಚರ್ಗಳಂತೆಯೇ ಕಾಣುತ್ತವೆ. ಎಷ್ಟೊಂದು ಬಣ್ಣ, ಗಾತ್ರ, ಆಕಾರ, ವಿನ್ಯಾಸಗಳು! ಎಲ್ಲಿ, ಯಾವ ಅಣುವಿನಲ್ಲಿ ಬಚ್ಚಿಕೊಂಡಿತ್ತು ಇವೆಲ್ಲ ಕೆಲದಿನಗಳ ಹಿಂದೆ? ಯಾವ ಗುರು ಹೇಳಿಕೊಟ್ಟ ಇವುಗಳಿಗೆ ಹೀಗೆ ಮಹತ್ತಿನ ಅಡಿಯಲ್ಲಿಯೇ ಗತ್ತಿನಲ್ಲಿ ತಲೆಯೆತ್ತುವ ಬಗೆಯನ್ನು? ಸುಟಿಯಾದ ಸೊಂಟವನ್ನೇ ನೆಚ್ಚಿ ನಿಂತು ಮಳೆಯಲ್ಲಿ ಮಿಂದು ಹೊಳೆಯುವುದನ್ನು?

ಇಡೀ ಮುಗಿಲನ್ನೇ ಬಾಚಿ ತಬ್ಬುವ ಹಾಗೆ ಪಕಳೆ ಬಿಡಿಸಿ ನಿಂತಿರುವ ಕೆಂಪಾನು ಕೆಂಪ ಹೂವಿಗಂತೂ ಮೊಗ್ಗಿಗೆ ಜೋತುಬಿದ್ದ ಹನಿಯೊಳಗೆ ತನ್ನ ಗಂಧವನ್ನೂ, ಬೆಳಕಿನ ಬಿಂಬವನ್ನೂ ತುಂಬಿ ಕಳಿಸುವ ಸಂಭ್ರಮ. ಬಿರಿದ ಹೂವಿನ ಸುತ್ತ ಮತ್ತಿಷ್ಟು ಮೊಗ್ಗುಗಳು ಅರಳುವುದೋ ಬಿಡುವುದೋ ಎಂಬ ಸಿಗ್ಗಿನಲ್ಲಿಯೇ ಇದ್ದಂತಿದೆ. ಬಾಯರಳಿಸಿ ನಿಂತಿರುವ ಬೆಳ್ಳಗಿನ ಹೂವಿಗೆ ಮಳೆಹನಿಯೊಂದಿಗೆ ತುಟಿಮುತ್ತನು ಹಂಚಿಕೊಳ್ಳುವ ಆಸೆಯಿರಬಹುದೇ? ಅಥವಾ ಹನಿಯ ನುಂಗಿ ಮುತ್ತಾಗಿಸಿಕೊಳ್ಳುವ ವ್ಯಾಮೋಹವೇ?

ಕೃತಕ ಕೊಳದಲ್ಲಿ ಮೈಹಾಸಿ ನಿಂತ ಪದ್ಮಪತ್ರೆಗಳಿಗಂತೂ ಮಳೆಗಾಲವೂ ಒಂದೆ ಬಿರುಬೇಸಿಗೆಯೂ ಒಂದೆ. ಆದರೆ ದಿನದಿನ ತುಂಬಿಸುವ ನೀರಲ್ಲಿ ತೇಲುತ್ತ ಬೆಳೆದ ಎಲೆಗಳಿಗೆ ಆಕಾಶದಿಂದ ಉದುರಿದ ಹನಿಗಳು ಮೈಮೇಲೆ ತಾಕಿಯೂ ತಾಕದಂತೆ, ರೌಂಡು ರೌಂಡು ಮುತ್ತುಗಳ ಹಾಗೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ಕಚಗುಳಿ ಇಡುವಾಗ ಆಗುವ ಸಂಭ್ರಮಕ್ಕೆ ಕಟ್ಟು ಹಾಕಿದ ನೀರು ಸಮವಾಗಬಹುದೇ?

ಮಳೆಗಾಲ ಬಂತೆಂದರೆ ಗಿಡದ ತುದಿ ಚಿಗುರ ನಡುವಷ್ಟೇ ಹೂವರಳುವುದಿಲ್ಲ; ಕಾಂಡದ ಗುಂಟ ಸಾಲಾಗಿ ನಿಂತ ಹನಿ ಹನಿಗಳೂ ಎಳೆಬಿಸಿಲಿಗೆ ಹೊಳೆಯುವಾಗ ಅವೂ ಹೂವೆಂದು ಭಾವಿಸಿ ಜೇನ ಹೀರಲು ಹೊರಟ ದುಂಬಿಗಳು ಮೋಸ ಹೋಗುತ್ತಿವೆ. ಹಳದಿ ಹೂವಿನ ಎದೆಯೊಳಗೆ ಇಳಿದ ದುಂಬಿಯೂ ಹೂವಿನದೇ ಭಾವವಾಗಿ ಕಾಣಿಸುತ್ತಿದೆ. ಅದರ ರೆಕ್ಕೆಪಡಿತ ಹೂವಿನ ಎದೆಬಡಿತದಂತೆ ಕೇಳಿಸುತ್ತಿದೆ. ಈ ಅನೂಹ್ಯ ಬಂಧಕ್ಕೆ ಹೆಸರಿಡಲಾಗದೆ ಇಡೀ ಜಗ ಸೋಜಿಗದಲ್ಲಿ ಮೈಮರೆತಂತಿದೆ.

ಮಳೆಯೆಂಬ ಮಾಯಾವಿ ಬಿಡಿಸುವ ಜೀವಂತ ಚಿತ್ರಗಳಿಗೆ ಎಷ್ಟೊಂದು ವರ್ಣಗಳು, ಎಷ್ಟೊಂದು ಅರ್ಥಗಳು! ಚಿತ್ತ ಭಿತ್ತಿಯ ಮೇಲೆ ತಂತಾನೆಯೇ ನಗೆಯ ಹೂವರಳಿಸುವ ಈ ಚಿತ್ರಗಳು ಪ್ರಕೃತಿಯ ಜೀವಂತಿಕೆಯ ವಿವಿಧ ಮುಖಗಳನ್ನು ಅದರ ಸ್ನಿಗ್ಧ ಸೌಂದರ್ಯದೊಟ್ಟಿಗೇ ತೋರಿಸುತ್ತಿವೆ. ನಮ್ಮಲ್ಲಿ ಧನ್ಯತೆಯ ಗಾಳಿ–ಗಂಧವನ್ನು ಉದ್ದೀಪಿಸುವಂಥ ಈ ಹೂಗಳು ನಗುಮುಖದ ಹಿಂದೆ, ಮನುಷ್ಯ ಪ್ರಕೃತಿಯ ಮೇಲೆ ಎಸಗುತ್ತಿರುವ ಕ್ರೌರ್ಯವನ್ನು ಕೊನೆಗೊಳಿಸುವ ಪ್ರಾರ್ಥನೆಯೂ ಇದ್ದಿರಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.