ಕೇರಳದ ನಿವೃತ್ತ ಎಸ್ಪಿ ಪುತ್ರ ಡ್ರಗ್ ಡೀಲರ್!

ಬೆಂಗಳೂರು: ತಮ್ಮ ಬಳಿ ಗಾಂಜಾ ಪಡೆಯುವುದನ್ನು ನಿಲ್ಲಿಸಿದ್ದಕ್ಕೆ ಎಸ್.ಎಸ್.ಮಧುಪನ್ (24) ಎಂಬಾತನನ್ನು ಕಾರಿನಲ್ಲಿ ಅಪಹರಿಸಿ, ಆವಲಹಳ್ಳಿ ಬಳಿ ಮುಳ್ಳಿನ ತಂತಿ ಮೇಲೆ ತಳ್ಳಿ ಪರಾರಿಯಾಗಿದ್ದ ಕೇರಳದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ.ವಿ.ಬಾಲಚಂದ್ರನ್ ಅವರ ಪುತ್ರ ಬಿ.ಎಸ್.ನಿಖುಲ್ ಅಲಿಯಾಸ್ ಬಿನ್ನಿ (27) ಹಾಗೂ ಆತನ ಐವರು ಸ್ನೇಹಿತರು ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಮ್ಮನಹಳ್ಳಿಯ ಸ್ಟೀಫನ್ ರಾಜ್ (25), ಹೊಯ್ಸಳನಗರದ ಎಲ್.ವೇಣು ಮಾಧವ್ (22), ಹೊಸಕೋಟೆಯ ಪ್ರೇಮ್ ಮಹದೇವ್ ಅಲಿಯಾಸ್ ಕಿಚ್ಚು (26), ಹೊಯ್ಸಳನಗರದ ಕೆ.ಎ.ಅನುಘೋಷ್ (22), ಎಲೆಕ್ಟ್ರಾನಿಕ್ಸಿಟಿಯ ಎಂ.ಜಿ.ರಾಹುಲ್ ಇತರೆ ಬಂಧಿತರು. ಆರೋಪಿಗಳಿಂದ 5 ಕೆ.ಜಿ ಗಾಂಜಾ ಹಾಗೂ ಅಪಹರಣಕ್ಕೆ ಬಳಸಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿ ಸುಜಿತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಕೋರಮಂಗಲ ಪೊಲೀಸರು ತಿಳಿಸಿದರು.
ವ್ಯವಹಾರದಲ್ಲಿ ವೈಮನಸ್ಸು: ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಉದ್ಯೋಗಿಗಳಿಗೆ ಗಾಂಜಾ ಮಾರುವುದಕ್ಕಾಗಿಯೇ ಪೆಡ್ಲರ್ಗಳ ಗ್ಯಾಂಗ್ ಕಟ್ಟಿದ್ದ ನಿಖುಲ್ ಹಾಗೂ ಸುಜಿತ್, ಪೆಡ್ಲರ್ಗಳಿಗೆ ನಗರದ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆಗಳನ್ನು ಮಾಡಿಕೊಟ್ಟಿದ್ದರು. ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಕೆ.ಜಿ.ಗಟ್ಟಲೇ ಗಾಂಜಾ ತರಿಸಿ, ಅವರಿಗೆ ಹಂಚುತ್ತಿದ್ದರು. ಅವರು ಪರಿಚಿತ ಗ್ರಾಹಕರಿಗೆ ಮಾರಾಟ ಮಾಡಿ ನಿಖುಲ್ ಹಾಗೂ ಸುಜಿತ್ಗೆ ಹಣ ಕಳುಹಿಸಿದ್ದರು.
ಮೊದಲು ಇದೇ ಗ್ಯಾಂಗ್ಗೆ ಕೆಲಸ ಮಾಡುತ್ತಿದ್ದ ಕೋರಮಂಗಲ ನಿವಾಸಿ ಮಧುಪನ್, ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಕೆಲ ದಿನಗಳ ಹಿಂದೆ ಗ್ಯಾಂಗ್ ತೊರೆದಿದ್ದ. ಇದರಿಂದ ಕುಪಿತಗೊಂಡ ನಿಖುಲ್, ಏ.22ರ ಸಂಜೆ 6 ಗಂಟೆ ಸುಮಾರಿಗೆ ಸಹಚರರ ಜತೆ ಮಧುಪನ್ನ ಮನೆಗೆ ನುಗ್ಗಿದ್ದ.
‘ಗಾಂಜಾ ಮಾರಾಟದ ಹಣವನ್ನು ನೀನು ಬಾಕಿ ಉಳಿಸಿಕೊಂಡಿದ್ದೀಯಾ. ಹೀಗಿದ್ದರೂ, ನಮ್ಮ ಗ್ಯಾಂಗ್ ಬಿಟ್ಟು ಬೇರೆ ಡೀಲರ್ಗಳ ಜತೆ ವ್ಯವಹಾರ ಮಾಡುತ್ತಿದ್ದೀಯಾ. ಬಾಕಿ ಹಣ ಕೊಡುವವರೆಗೂ, ನಮ್ಮ ಗ್ಯಾಂಗ್ನಲ್ಲೇ ಇರಬೇಕು’ ಎಂದು ಬೆದರಿಸಿದ್ದ. ಆತ ಒಪ್ಪದಿದ್ದಾಗ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.
ಸೆಲ್ಲೋ ಟೇಪ್ ಸುತ್ತಿ ಅಪಹರಣ: ಮಧುಪನ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದ ಆರೋಪಿಗಳು, ಕೈ–ಕಾಲುಗಳನ್ನು ಕಟ್ಟಿ ಆತನ ಕಣ್ಣಿಗೆ ಸೆಲ್ಲೋ ಟೇಪ್ ಸುತ್ತಿದ್ದರು. ನಂತರ ಕಾರಿನಲ್ಲಿ ಅಪಹರಿಸಿಕೊಂಡು ಕೆ.ಆರ್.ಪುರ, ಆವಲಹಳ್ಳಿ ಕಡೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆ ಹಾಕಿ ಬ್ಯಾಟ್ಗಳಿಂದ ಹೊಡೆದು, ಮುಳ್ಳಿನ ತಂತಿ ಮೇಲೆ ತಳ್ಳಿ ಪರಾರಿಯಾಗಿದ್ದರು.
ಗಸ್ತು ಪೊಲೀಸರು ಮಧುಪನ್ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ತಾನೂ ಡ್ರಗ್ಸ್ ಪೆಡ್ಲರ್ ಆಗಿದ್ದರಿಂದ ಆತ ನಡೆದ ಘಟನೆ ಬಗ್ಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ‘ನಮ್ಮ ಕುಟುಂಬದ ಗಲಾಟೆ. ಈ ಬಗ್ಗೆ ಯಾವುದೇ ದೂರು ನೀಡುವುದಿಲ್ಲ’ ಎಂದು ಹೇಳಿ ಪೊಲೀಸರನ್ನು ಕಳುಹಿಸಿದ್ದ. ಆ ನಂತರ ಸ್ನೇಹಿತರನ್ನು ಕರೆಸಿಕೊಂಡು, ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದ.
ಚಿಕಿತ್ಸೆ ನೀಡಿದ ವೈದ್ಯರು, ಗಂಭೀರ ಗಾಯಗಳಾಗಿದ್ದರಿಂದ ಸ್ಥಳೀಯ ಠಾಣೆಗೆ ಮೆಮೊ ಕಳುಹಿಸಿದ್ದರು. ಪೊಲೀಸರು ಪುನಃ ಆಸ್ಪತ್ರೆಗೆ ಹೋಗಿ ವಿಚಾರಿಸಿದರೂ ಆತ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಈ ನಡೆಯಿಂದ ಅನುಮಾನಗೊಂಡು ತನಿಖೆ ನಡೆಸಿದಾಗ, ಡ್ರಗ್ಸ್ ದಂಧೆಯ ವಾಸನೆ ಪೊಲೀಸರ ಮೂಗಿಗೆ ಬಡಿದಿತ್ತು. ಆನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ನಡೆದ ಘಟನೆ ಹಾಗೂ ಗ್ಯಾಂಗ್ ಮಾಹಿತಿಯನ್ನು ಮಧುಪನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ.
ಮೊಬೈಲ್ಗಳ ಸುಳಿವು: ‘ಅಪಹರಣಾಕಾರರು ಮಧುಪನ್ನ ಮೂರು ಮೊಬೈಲ್ಗಳನ್ನು ತೆಗೆದುಕೊಂಡು ಹೋಗಿದ್ದರು. ಅವುಗಳ ಟವರ್ ಲೊಕೇಷನ್ ಆಧರಿಸಿ ಮೂವರನ್ನು ಕೋರಮಂಗಲದ 1ನೇ ಬ್ಲಾಕ್ನಲ್ಲಿ, ಇನ್ನು ಮೂವರನ್ನು ಹೊರಮಾವು ಬಳಿ ಬಂಧಿಸಲಾಯಿತು. ಮಧುಪನ್ ಕೂಡ ಪೆಡ್ಲರ್ ಆಗಿರುವ ಕಾರಣ ಆತನ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಯಿ–ತಂಗಿ ಕುತ್ತಿಗೆಗೇ ಮಚ್ಚು ಇಟ್ಟಿದ್ದ
2016ರಲ್ಲಿ ತಿರುವನಂತಪುರದ ಪಂಡಿತ್ ಕಾಲೊನಿಯಲ್ಲಿ ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ನಿಖುಲ್, ನಂತರ ಆತನ ಮನೆಗೆ ನುಗ್ಗಿ ಪೋಷಕರಿಗೂ ಜೀವಬೆದರಿಕೆ ಹಾಕಿ ಬಂದಿದ್ದ. ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಲು ಮನೆಗೆ ತೆರಳಿದ್ದಾಗ, ತನ್ನ ತಾಯಿ ಹಾಗೂ ತಂಗಿಯ ಕುತ್ತಿಗೆಗೇ ಮಚ್ಚು ಇಟ್ಟಿದ್ದ. ‘ಯಾರಾದರೂ ಹತ್ತಿರ ಬಂದರೆ ಇವರನ್ನು ಕೊಂದು ಹಾಕುತ್ತೇನೆ’ ಎಂದು ಬೆದರಿಸಿ, ಕಿಟಕಿ ಮೂಲಕವೇ ಜಿಗಿದು ಪರಾರಿಯಾಗಿದ್ದ. ಆತನ ತಂದೆ ನಿವೃತ್ತ ಎಸ್ಪಿ ಎಂಬ ಕಾರಣಕ್ಕೆ ಆ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಆಗಿರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.
ಯುವತಿಗೆ ಬೆದರಿಸಿ ವಿಡಿಯೊ ಮಾಡಿದ್ದರು
ಏ.22ರ ಸಂಜೆ ಅಪಹರಣಾಕಾರರು ಮಧುಪನ್ ಮನೆಗೆ ನುಗ್ಗಿದ್ದಾಗ, ಅಲ್ಲಿ ಯುವತಿ ಕೂಡ ಇದ್ದಳು. ಆಕೆಯ ಕೈಗೆ ಗಾಂಜಾಚೀಲ ಕೊಟ್ಟು ವಿಡಿಯೊ ಮಾಡಿಕೊಂಡ ಅವರು, ‘ಇವನನ್ನು ಅಪಹರಿಸುತ್ತಿರುವ ವಿಚಾರ ಪೊಲೀಸರಿಗೆ ತಿಳಿಸಿದರೆ, ನೀನೂ ಡ್ರಗ್ಸ್ ಪೆಡ್ಲರ್ ಎಂದು ಹೇಳಿ ಜೈಲಿಗೆ ಹಾಕಿಸುತ್ತೇವೆ’ ಎಂದು ಬೆದರಿಸಿದ್ದರು. ಹೀಗಾಗಿ, ಆ ಯುವತಿಯೂ ಪೊಲೀಸ್ ವಿಚಾರಣೆ ವೇಳೆ ಸಳ್ಳು ಮಾಹಿತಿ ಕೊಟ್ಟಿದ್ದಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.