ಶನಿವಾರ, ಮಾರ್ಚ್ 6, 2021
21 °C
ಮತ್ತೆ ಬಂದಿದೆ ಶ್ರಾವಣ; ಸೀರೆಗೊಂದು ಕಾರಣ

ಮತ್ತೆ ಬಂದಿದೆ ಶ್ರಾವಣ ಸೀರೆಗೊಂದು ಕಾರಣ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಬಿಡದೇ ಸುರಿವ ಮಳೆ ಹನಿ, ಭರ‍್ರೋ ಎಂದು ಬೀಸುವ ಸುಳಿಗಾಳಿ, ಚಿಗುರೊಡೆಯುವ ಗಿಡ–ಮರ, ಹೂಬಿಡುವ ಬಳ್ಳಿಗಳು... ನಾಚುತ್ತ, ನಸುನಗುತ್ತ, ಮದುಮಗಳಂತೆ ಭೂರಮೆಯ ಅರಮನೆಗೆ ಕಾಲಿಡುತ್ತಾಳೆ ಶ್ರಾವಣಿ. ಶ್ರಾವಣವೆಂದರೆ ಹೆಣ್ಮಕ್ಕಳ ಋತು. ಹೇಳದೆಯೂ ತಿಳಿಯುವ ಕಾರಣ ರೇಷ್ಮೆ ಸೀರೆಯಲ್ಲದೆ ಮತ್ತೇನು!

ಏನೆಲ್ಲಾ ಸಂಭ್ರಮವಿದೆ ಈ ಮಾಸದಲ್ಲಿ! ವ್ರತ, ಪೂಜೆ, ಹಬ್ಬ, ಹುಣ್ಣಿಮೆ... ಹೆಚ್ಚುವ ಕೆಲಸದ ಹೊರೆಯ ಜೊತೆಗೇ ಬೀರುವಿಗೆ ಬಂದು ಸೇರುವ ಹೊಚ್ಚ ಹೊಸ ಸೀರೆಗಳದ್ದೊಂದು ಬೇರೆಯದೇ ಸಡಗರ. 

ಅಷ್ಟಕ್ಕೂ ಸೀರೆ ಅಂದರೆ ಅದು ಬರೀ ಒಂದು ದಿರಿಸಲ್ಲ. ಭಾವ–ಬಂಧನದ ಬೆಸುಗೆ. ವ್ಯಕ್ತಿತ್ವದ ಪ್ರತೀಕ. ಒಂದೊಂದು ಸೀರೆಯ ಹಿಂದೆಯೂ ಒಂದೊಂದು ಕತೆ. ಮಡಚಿ ಬೀರುವಿನಲ್ಲಿಟ್ಟ ಸೀರೆಯಷ್ಟೆ ನೆನಹುಗಳ ರಾಶಿ. ಹೊರಗೆಳೆದಾಗೊಮ್ಮೆ ಹೊಸದೇ ರೀತಿಯಲ್ಲಿ ಅಮರಿಕೊಳ್ಳುವ ಸೀರೆಯೊಂದಿಗಿನ ಭಾವಬೆಸುಗೆಗಳು, ಗರಿಗೆದರುವ ಪುಳಕಗಳು...

ಮಂಗಳ ಗೌರಿ, ಶುಕ್ರಗೌರಿ, ವರಮಹಾಲಕ್ಷ್ಮಿ ಪೂಜೆಗೊ, ದೀಪಾವಳಿ–ಯುಗಾದಿಗೊ... ನೆಪ ಯಾವುದಾದರೇನು, ಸೀರೆ ಯಾವುದೆನ್ನುವುದು ಮುಖ್ಯ. ಕಳೆದ ವರ್ಷ ಆರತಿ, ಕಲ್ಪನಾ ಕಾಲದ ಸೀರೆಗಳಿಗೆಲ್ಲ ಬೇಡಿಕೆ ಹೆಚ್ಚಿತ್ತು. ರವಿಕೆ ವಿನ್ಯಾಸವೂ ಅದೇ ಮಾದರಿಯದು. ಬಾರ್ಡರ್‌ ಇಲ್ಲದ ಅಥವಾ ಸಣ್ಣ ಬಾರ್ಡರ್‌ನ ಸಿಲ್ಕ್‌ ಸೀರೆಗಳಿಗಾಗಿ ತಡಕಾಡಿದವರೂ ಅನೇಕ. ತುಸು ದುಬಾರಿಯಾದರೂ ಸರಿ, ಗ್ರ್ಯಾಂಡ್‌ ಲುಕ್‌ ನೀಡುವ ಸೀರೆಗಳಿಗೆ ಮುಗಿ ಬಿದ್ದಿದ್ದ ನಾರಿಮಣಿಗಳು ಈ ಬಾರಿ ತುಸು ಭಿನ್ನರಾಗದಲ್ಲಿದ್ದಾರೆನ್ನಿಸುತ್ತದೆ.

ರೇಷ್ಮೆ ಬೇಕು: ಭಾರೀ ಸೀರೆ ಬೇಡ

ರೇಷ್ಮೆಯ ಒಲವು ಅಷ್ಟು ಸುಲಭಕ್ಕೆ ಬಿಟ್ಟುಹೋಗುವುದಲ್ಲ. ರೇಷ್ಮೆಯ ಗಾಂಭೀರ್ಯವೇ ಅಂಥದ್ದು. ರೇಷ್ಮೆಯ ಲುಕ್‌ ಬೇಕು, ಆದರೆ ಆ ಭಾರ ಹೊರುವ ಮನಸ್ಸಿಲ್ಲ ಎನ್ನುವವರಿಗೆ ರೇಷ್ಮೆಯಲ್ಲೇ ನೂರಾರು ಪರ್ಯಾಯಗಳಿವೆ– ಕಾಟನ್‌ ಸಿಲ್ಕ್‌, ಟಸ್ಸಾರ್‌ ಸಿಲ್ಕ್, ಚಂದೇರಿ– ಮಹೇಶ್ವರಿ, ಕಾಂಜೀವರಂ, ಧರ್ಮಾವರಂ, ಮೈಸೂರು ಸಿಲ್ಸ್‌, ಮುಗಾ ಸಿಲ್ಕ್, ಮಲ್ಬರಿ ಸಿಲ್ಕ್, ಪ್ರಿಂಟೆಡ್ ಸಿಲ್ಕ್, ಡಿಸೈನರ್ ಸಿಲ್ಕ್, ಜೂಟ್‌ ಸಿಲ್ಕ್, ರಾ ಸಿಲ್ಕ್‌, ಆರ್ಟ್ ಸಿಲ್ಕ್‌, ಫ್ಯಾನ್ಸಿ ಸಿಲ್ಕ್, ಸಾಫ್ಟ್ ಸಿಲ್ಕ್, ಕ್ರೇಪ್ ಸಿಲ್ಕ್, ಇಕ್ಕತ್ ಸಿಲ್ಕ್, ಅಸ್ಸಾಂ ಸಿಲ್ಕ್... ಹೆಸರು ಹಲವಾದರೂ ಇವೆಲ್ಲವುಗಳ ಗುಣ–ಸ್ವಭಾವ ಹೆಚ್ಚೂ ಕಡಿಮೆ ಒಂದೇ. ಮೈಗೆ ಮೃದು, ಕಣ್ಣಿಗೆ ಹಿತ, ತೊಡಲು ಸುಲಭ, ನೋಟದಲ್ಲೂ ಸಾಟಿ ಇಲ್ಲ.

ಪಟೋಲಾ-ಸುಂಗುಡಿ ಟ್ರೈ ಮಾಡಿ

ಅಂದಹಾಗೆ ಈ ’ಪಟೋಲಾ ಸಿಲ್ಕ್’ ನಮ್ಮೂರಿನ ದ್ದೇನಲ್ಲ. ಆಂಧ್ರಪ್ರದೇಶ, ಗುಜರಾತ್, ಒರಿಸ್ಸಾದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಪಟೋಲಾ ಸಿಲ್ಕ್ ಈಗ ನಮ್ಮಲ್ಲೂ ಸದ್ದು ಮಾಡುತ್ತಿದೆ. ತಮಿಳುನಾಡಿನ ಪ್ರಾಚೀನ ಸಾಂಪ್ರದಾಯಿಕ ’ಸುಂಗುಡಿ ಸಿಲ್ಕ್‌’ ಕೂಡ ಉತ್ತಮ ಆಯ್ಕೆ. ಮೊದಲೆಲ್ಲಾ ಹತ್ತಿ ಬಳಸಿ ಈ ಸೀರೆಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಇದೀಗ ಅದಕ್ಕೆ ಭವ್ಯ ನೋಟ ನೀಡುವ ಸಲುವಾಗಿ ನೇಕಾರರು ಬಾರ್ಡರ್‌ ಮತ್ತು ಸೆರಗಿನಲ್ಲಿ ರೇಷ್ಮೆ ಎಳೆಗಳನ್ನು ಬಳಸುತ್ತಿದ್ದಾರೆ. 

ಇನ್ನು ರೇಷ್ಮೆ ಸೀರೆಯ ಆಡಂಬರ, ವೈಭವದಿಂದ ದೂರ ಉಳಿದ ಸೀದಾ–ಸಾದಾ ಆದರೆ ತೊಟ್ಟವರ ಘನತೆಯನ್ನು ಎತ್ತಿ ಹಿಡಿಯುವ ಸೀರೆ ಬೊಮ್‌ಕೈ ಸಿಲ್ಕ್. ಆಧುನಿಕ ಯುವತಿಯರು ಹೆಚ್ಚು ಇಷ್ಟ ಪಡುವ ಹಗುರವಾದ ಸೀರೆ ಇದು. ಬಣ್ಣಗಳೂ ಅಷ್ಟೆ ಸೊಗಸಾಗಿ ಸೌಮ್ಯವಾಗಿರುವುದು ಇದರ ಮತ್ತೊಂದು ವಿಶೇಷತೆ.

ನೋಡಲೆಷ್ಟು ಸುಂದರವೋ ಧರಿಸಲು ಅಷ್ಟೇ ಆಪ್ಯಾಯಮಾನವಾದ ‘ಉಪ್ಪಾಡ ರೇಷ್ಮೆ’ ಸೀರೆ ಉತ್ತಮ ಗುಣಮಟ್ಟಕ್ಕೆ  ಹೆಸರುವಾಸಿ. ಅತಿರಂಜಿತ ಬಣ್ಣಗಳಲ್ಲಿ ಬರುವ ಸೀರೆ, ಗೋಲ್ಡನ್‌ ಎಳೆಗಳಿಂದ ಚೌಕಾಕಾರದ ವಿನ್ಯಾಸ ಹೊಂದಿರುತ್ತದೆ. ಗೋಲ್ಡನ್ ಜರಿ ಇರುವ ಬಾರ್ಡರ್‌ ಭವ್ಯ ನೋಟ ನೀಡುತ್ತದೆ.

ಇಳಕಲ್‌ ಸೀರೆಗೂ ರೇಷ್ಮೆಯ ಸ್ಪರ್ಶ ಸಿಗುತ್ತಿದೆ. ಆಕರ್ಷಕ ಬಣ್ಣಗಳಲ್ಲಿ, ವೈವಿಧ್ಯಮಯ ಚಿತ್ತಾರಗಳಲ್ಲಿ ಬರುವ ರೇಷ್ಮೆ ಇಳಕಲ್‌ ಸೀರೆಗಳಿಗೆ ಈಗ ಭಾರೀ ಬೇಡಿಕೆ. ಮೊದಲೆಲ್ಲಾ ಈ ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಿದ್ದರು. ಈಗ ಶುದ್ಧ ರೇಷ್ಮೆ ನೂಲನ್ನೂ ಬಳಸುವುದರಿಂದ ಇಳಕಲ್‌ ಸೀರೆಯ ಮೌಲ್ಯ ಹೆಚ್ಚಿದೆ.

ಇವೆಲ್ಲವೂ ರೇಷ್ಮೆ ಕುಟುಂಬಕ್ಕೇ ಸೇರಿದವು. ಆದರೆ ಹೊಸ ತಳಿ, ರೂಪ–ವಿನ್ಯಾಸವೂ ಹೊಸದೆ. ಬೆಲೆಯಲ್ಲೇನೂ ಕಡಿಮೆ ಇಲ್ಲ. ಮೂರು ಸಾವಿರದಿಂದ ಮೂವತ್ತು ಸಾವಿರ ರೂಪಾಯಿವರೆಗೆ... ನಿಮ್ಮ ಕೈಯಲ್ಲಿರೊ ಕಾಂಚಾಣಕ್ಕೆ ಅನುಗುಣ.

ಭಾರವಾದ ಸೀರೆಯ ಹೊರುವವರು

ಈ ಹಗೂರ ಸೀರೆಯ ಜಮಾನಾದ ನಡುವೆಯೂ ಭಾರವಾದ ಸಾಂಪ್ರದಾಯಿಕ ಸೀರೆಗೆ ಹಂಬಲಿಸುವವರೂ ಇದ್ದಾರೆ. ಅಂಥವರಿಗೆ ತುಸು ಹೆಚ್ಚೇ ಭಾರವೆನಿಸುವ, ಆದರೆ ತೊಟ್ಟರೆ ರಾಣಿಯ ಲುಕ್‌ ನೀಡುವ ಬನಾರಸಿ ರೇಷ್ಮೆ ಸೀರೆ ಸೂಕ್ತ. ಅಗಲವಾದ ಬಾರ್ಡರ್‌ಗಳಲ್ಲಿ, ಕಣ್ಣು ಕೋರೈಸುವ ಬಣ್ಣಗಳಲ್ಲಿ ಬರುವ ಈ ಸೀರೆಗೆ ಕಸೂತಿ ಕೆಲಸದ ಹೊಸ ನೋಟ ಸಿಕ್ಕಿದೆ ಈಗ. ಸಿಲ್ಕ್‌ ಸೀರೆಗಳಿಗೆ ಕಸೂತಿಯ ಮೆರುಗು ಹೊಸದೇನಲ್ಲ. ಮೊದಲೆಲ್ಲಾ ಸೀರೆಯ ಬಣ್ಣಕ್ಕೆ ವಿರುದ್ಧವಾದ ಬಣ್ಣದ ದಾರದಲ್ಲಿ ಕಸೂತಿ ಮಾಡಿದ ಸೀರೆ ಮನ್ನಣೆ ಪಡೆದಿತ್ತು. ಈಗ ಸೀರೆ ಯಾವ ಬಣ್ಣದ್ದಿದೆಯೊ ಅದೇ ಬಣ್ಣದ ಆದರೆ ತುಸು ಗಾಢಬಣ್ಣದ ದಾರದ ಕಸೂತಿ ಸೀರೆ ಟ್ರೆಂಡ್‌ ನಿರ್ಮಿಸಿದೆ.

ಕಾಪಿಡುವುದು ಹೇಗೆ?

*  ರೇಷ್ಮೆ ಸೀರೆಗಳನ್ನು ಕೊಳ್ಳುವುದು, ತೊಡುವುದಷ್ಟೇ ಅಲ್ಲ; ಹಾಳಾಗದಂತೆ ಕಾಯ್ದಿಡುವುದೂ ಮುಖ್ಯ. ಅದಕ್ಕೆ ಇಲ್ಲಿವೆ ಕೆಲವು ಸಲಹೆಗಳು:

* ರೇಷ್ಮೆ ಸೀರೆಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಇಡಬೇಡಿ ಒಂದು ತೆಳುವಾದ ಕಾಟನ್‌ ಬಟ್ಟೆಯಲ್ಲಿ ಸುತ್ತಿಡಿದೂಳು, ಬೆಳಕು ಬೀಳದಂಥ ಸ್ಥಳದಲ್ಲಿಟ್ಟರೆ ಉತ್ತಮ

* ಕಾರ್ಡ್‌ ಬೋರ್ಡ್‌ ಬಾಕ್ಸ್‌ಗಳೂ ಸಹ ರೇಷ್ಮೆಗೆ ಒಳ್ಳೆಯದಲ್ಲ

* ಆಗಾಗ ಸೀರೆಗಳನ್ನು ನೆರಳಲ್ಲಿ ಗಾಳಿಗೆ ಹಾಕಿ ತೆಗೆಯಿರಿ

* ಆರೋಮ್ಯಾಟಿಕ್ ಹೈಡ್ರೊಕಾರ್ಬನ್ ಉತ್ಪನ್ನಗಳನ್ನು ಬಳಸಬೇಡಿ

* ತೇವಾಂಶ ನಿಯಂತ್ರಣಕ್ಕಾಗಿ ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಬಳಸಬಹುದು

**

"ರೇಷ್ಮೆ ಸೀರೆಯ ಕಡುಮೋಹಿ ನಾನು. ಎಷ್ಟು ಕೊಂಡರೂ ಸಾಕೆನಿಸದು. ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳಿವೆ ನನ್ನ ಬಳಿ. ರೇಷ್ಮೆ ಎಂದರೆ ವೈಭವಕ್ಕೆ ಹೆಸರು. ಅವು ಭಾರವೇ ಇರಬೇಕು, ಭಾರೀನೂ ಇರಬೇಕು. ರೇಷ್ಮೆ ಸೀರೆ ವಿಷಯಕ್ಕೆ ಬಂದಾಗ ಬೆಲೆಯ ಬಗ್ಗೆ ಚಿಂತಿಸಬಾರದು. ಈ ವರ್ಷದ ಮೊದಲ ಹಬ್ಬ ವರಮಹಾಲಕ್ಷ್ಮಿ ಪೂಜೆಗೆ ಚಿನ್ನದ ಜರಿ ಇರುವ ಕಾಂಚಿವರಂ ಮನೆ ಸೇರಿದೆ. ತೊಟ್ಟವರ ಇಮೇಜು ತೊಡುವ ಸೀರೆಯಲ್ಲಿರುತ್ತೆ ಎನ್ನುವುದು ಸತ್ಯ."

 -ನಂದಿನಿ ನಾಗರಾಜ್‌, 
ಫ್ಯಾಷನ್‌ ಕೋಆರ್ಡಿನೇಟರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು