ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೊಂಡ ಕ್ರಮ ಏನೆಂಬುದು ಮುಖ್ಯ

Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಎಫ್‌ಐಆರ್‌ ಅನ್ನು ಪೊಲೀಸ್‌ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರಷ್ಟೇ ಸಾಲದು; ಎಫ್‌ಐಆರ್‌ ಆಧಾರದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಹಾಗೂ ಇದರಿಂದ ಯಾರಿಗೆ ಪ್ರಯೋಜನ  ಆಗಲಿದೆ ಎಂಬುದು ಮುಖ್ಯ.

ಎಲ್ಲಾ ರೀತಿಯ ದೂರುಗಳಿಗೂ ಎಫ್‌ಐಆರ್‌ ದಾಖಲಿಸಬೇಕೆಂದು ಕಾನೂನು ಹೇಳುವುದಿಲ್ಲ. ಕಾಗ್ನಿಸಿಬಲ್‌ (ಪೊಲೀಸ್‌ ಅಧಿಕಾರಿ ನ್ಯಾಯಾಲಯದ ಅನುಮತಿ ಇಲ್ಲದೆಯೇ ಆರೋಪಿಯನ್ನು ಬಂಧಿಸಬಹುದಾದ) ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು. ದೂರಿನಲ್ಲಿ ಕಾಗ್ನಿಸಿಬಲ್‌ ಹಾಗೂ  ನಾನ್‌ ಕಾಗ್ನಿಸಿಬಲ್‌  ಅಂಶಗಳೆರಡೂ ಇದ್ದರೂ  ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು.  

ಕಾಣೆಯಾದ ಬಗ್ಗೆ ದೂರು ದಾಖಲಾದಾಗ ಅದನ್ನು ನ್ಯಾಯಾಲಯಕ್ಕೆ ಕಳುಹಿಸುವ ಪರಿಪಾಠ ಇಲ್ಲ. ಇದರ ಮಾಹಿತಿಯನ್ನು ಅಪರಾಧ ದಾಖಲೆ ವಿಭಾಗಕ್ಕೆ ಮಾತ್ರ  ಕಳುಹಿಸಲಾಗುತ್ತಿತ್ತು.

ಕಾಗ್ನಿಸಿಬಲ್‌ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ತಕ್ಷಣ ಎಫ್‌ಐಆರ್ ದಾಖಲಿಸಿಕೊಳ್ಳದಿದ್ದರೆ ಅದು ಪೊಲೀಸರ ತಪ್ಪು. ದೂರಿನಲ್ಲಿ ನಿಜಾಂಶ ಇದೆಯೊ ಇಲ್ಲವೊ ಎಂಬುದನ್ನು ತನಿಖೆ ಮಾಡುವುದು ಮುಂದಿನ ಭಾಗ. ದೂರಿನಲ್ಲಿ ನಿಜಾಂಶವಿದ್ದು, ಆರೋಪಗಳು ಸಾಬೀತುಪಡಿಸುವಂತಿದ್ದರೆ ನ್ಯಾಯಾಲಯಕ್ಕೆ ಎ–ವರದಿ ಸಲ್ಲಿಸಬೇಕಾಗುತ್ತದೆ. ದೂರಿನಲ್ಲಿ ನಿಜಾಂಶ ಇಲ್ಲ, ತಪ್ಪು ತಿಳಿವಳಿಕೆಯಿಂದ ದೂರು ನೀಡಲಾಗಿದೆ ಎಂದು ಕಂಡುಬಂದರೆ ಬಿ–ವರದಿ ಸಲ್ಲಿಸಬಹುದು. ದೀರ್ಘಕಾಲ ಪತ್ತೆ ಆಗದ ಅಥವಾ ಸಾಕ್ಷ್ಯಾಧಾರ ಸಿಗದ  ಪ್ರಕರಣಗಳ ಸಂಬಂಧ ಸಿ–ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಸಿ–ವರದಿ ಸಲ್ಲಿಕೆಯಾದ ಪ್ರಕರಣಗಳ   ತನಿಖೆಯನ್ನು ಯಾವಾಗ ಬೇಕಿದ್ದರೂ ಮತ್ತೆ ಆರಂಭಿಸಬಹುದು.

‘ಕಾನೂನು ತಜ್ಞರ ಅಭಿಪ್ರಾಯ ಪಡೆದು ದೂರು ದಾಖಲಿಸಿಕೊಳ್ಳುತ್ತೇವೆ’ ಎಂಬ ಸಬೂಬು ಹೇಳಿ  ಎಫ್‌ಐಆರ್‌ ದಾಖಲಿಸಲು ಮೀನಮೇಷ ಎಣಿಸಲಾಗುತ್ತದೆ ಎಂಬುದು ಪೊಲೀಸ್‌ ಇಲಾಖೆ ವಿರುದ್ಧ ಹೆಚ್ಚಾಗಿ ಕೇಳಿ ಬರುವ ಆರೋಪ. ಅದರಲ್ಲೂ, ರಾಜಕಾರಣಿಗಳು ಅಥವಾ ಪ್ರಭಾವಿ ವ್ಯಕ್ತಿಗಳ ವಿರುದ್ಧ ದೂರುಗಳು ಬಂದಾಗ ಪೊಲೀಸರು ಇಂತಹ ಧೋರಣೆ ಪ್ರದರ್ಶಿಸುವುದು ಮಾಮೂಲಿ ಎಂಬಂತಾಗಿದೆ. ಇದರಿಂದ ಸಾಕ್ಷ್ಯಾಧಾರ ಸಂಗ್ರಹಿಸುವ ಅಮೂಲ್ಯ ಅವಧಿ ನಷ್ಟವಾಗುತ್ತದೆ.

ಎಫ್‌ಐಆರ್‌ ದಾಖಲಿಸಲು ಮೇಲಧಿಕಾರಿಗಳ ಅಪ್ಪಣೆ ಪಡೆಯಬೇಕೆಂದು ಕಾನೂನಿನಲ್ಲಿ ಎಲ್ಲೂ ಹೇಳಿಲ್ಲ. ಆದರೆ, ಪ್ರಭಾವಿಗಳ ವಿರುದ್ಧ ಎಫ್‌ಐಆರ್‌ ದಾಖಲಾದಾಗ ಮೇಲಧಿಕಾರಿಗಳು, ‘ನನ್ನ ಗಮನಕ್ಕೆ ತಾರದೆಯೇ ಎಫ್‌ಐಆರ್‌ ದಾಖಲಿಸಿಕೊಂಡಿದ್ದು ಏಕೆ’ ಎಂದು ಠಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.  ಇಂತಹ ಪರಿಪಾಠಕ್ಕೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್‌ ನಿರ್ದೇಶನ ಪ್ರಯೋಜನಕ್ಕೆ ಬರಲಿದೆ.
ಪೊಲೀಸರು ಎಫ್‌ಐಆರ್‌ನಲ್ಲಿ ದೂರುದಾರನ ಹೇಳಿಕೆಯನ್ನು ಯಥಾವತ್ತಾಗಿ ದಾಖಲಿಸಿಕೊಳ್ಳುವ ಬದಲು ತಮಗೆ ಬೇಕಾದಂತೆ ದಾಖಲಿಸಿಕೊಳ್ಳುವುದು ಇನ್ನೊಂದು ಆತಂಕಕಾರಿಯಾದ ಅಂಶ.

ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಹೋದಾಗ, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಮಾಂಗಲ್ಯ ಸರವನ್ನು ಕಿತ್ತೊಯ್ದರು. ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅದರ ಒಂದು ಸಣ್ಣ ಎಳೆ ಆಕೆಯ ಕೈಯಲ್ಲಿ ಉಳಿಯಿತು. ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 379 (ಕಳವು) ಅಥವಾ ಸೆಕ್ಷನ್‌ 392 (ದರೋಡೆ) ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು.  ಆದರೆ, ಪೊಲೀಸರು ಮಾಡಿದ್ದೇ ಬೇರೆ.

‘ದೇವಸ್ಥಾನಕ್ಕೆ ಹೋದಾಗ ಸರ  ಆಕಸ್ಮಿಕವಾಗಿ ಕಳಚಿಬಿತ್ತು. ಅದರ ಒಂದು ಎಳೆ ಸಿಕ್ಕಿತು. ಉಳಿದ ಭಾಗ ಹುಡುಕಿದರೂ ಸಿಗಲಿಲ್ಲ’ ಎಂದು ಮಹಿಳೆಯಿಂದ  ದೂರು ಬರೆಸಿಕೊಂಡರು. ಅದರಂತೆ ಎಫ್‌ಐಆರ್‌ ದಾಖಲಿಸಿದರು. ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ, ರಂಗೋಲಿ ಹಾಕುತ್ತಿದ್ದ ಮಹಿಳೆಯ ಕತ್ತಿನಿಂದ ದುಷ್ಕರ್ಮಿಗಳು ಸರವನ್ನು ಕಿತ್ತೊಯ್ದರು. ಈ ಪ್ರಕರಣದಲ್ಲೂ ಸರ ಕಳುವಾಗಿದೆ ಎಂದು ಎಫ್ಐಆರ್‌ ದಾಖಲಿಸಲಾಯಿತು. ಈ ರೀತಿ ಮಾಡುವುದರಿಂದ ಒಂದು ವೇಳೆ ಕಳುವಾದ ಸ್ವತ್ತು ಪತ್ತೆಯಾದರೂ ಅದನ್ನು  ಮಾಲೀಕರಿಗೆ ಒಪ್ಪಿಸಲು ಸಮಸ್ಯೆಯಾಗುತ್ತದೆ.

ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಇವೆ ಎಂದು ಬಿಂಬಿಸಿಕೊಳ್ಳಲು ಹಾಗೂ ಹಿರಿಯ ಅಧಿಕಾರಿಗಳಿಂದ ಬೈಗುಳ ತಪ್ಪಿಸಿಕೊಳ್ಳಲು ಪೊಲೀಸರು ಎಫ್‌ಐಆರ್‌ನಲ್ಲಿ ಕೆಲವು ಅಂಶಗಳನ್ನು ತಿರುಚುತ್ತಾರೆ. ಇದು ಘನಘೋರ ಅನ್ಯಾಯ. ಇಂತಹ ತಪ್ಪುಗಳನ್ನು ತಡೆಯುವ ನಿಟ್ಟಿನಲ್ಲಿ  ಸುಧಾರಣೆಗಳ ಅಗತ್ಯವಿದೆ. ಆಗ ಮಾತ್ರ ಸಂತ್ರಸ್ತರಿಗೆ ನ್ಯಾಯ ಒದಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT