ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲ ‘ಬೇಲಿ’, ಸೆಲೆಬ್ರಿಟಿಗಳ ಹಾವಳಿ

Last Updated 6 ನವೆಂಬರ್ 2015, 19:30 IST
ಅಕ್ಷರ ಗಾತ್ರ

‘ರಾಮಾಯಣ’ದಲ್ಲಿ ಜೈಲು ಇತ್ತು. ಸೀತೆಯನ್ನು ರಾವಣ ಇರಿಸಿದ ವ್ಯವಸ್ಥೆ ಅಂಥದ್ದು. ಅಲ್ಲಿಗೆ ಹನುಮನು ಹಾರಿ, ಉಂಗುರ ಕೊಟ್ಟ ಪ್ರಸಂಗದಿಂದಲೇ ಜೈಲಿನೊಳಗೆ ಎಲ್ಲರ ಕಣ್ತಪ್ಪಿಸಿ ವ್ಯಕ್ತಿಯೊಬ್ಬ ಹೋದ ಉದಾಹರಣೆ ಇದೆ. ಕೃಷ್ಣನ ಜನನದ ನಂತರ ‘ಮಹಾಭಾರತ’ದಲ್ಲಿಯೂ ಜೈಲಿನ ಕಥೆಗೆ ಬೇರೆಯದೇ ಆಯಾಮವಿದೆ. ಇಲ್ಲಿ ನಿಯಮೋಲ್ಲಂಘನೆ ಆದದ್ದು ಲೋಕಕಲ್ಯಾಣಕ್ಕೆ. ಈಗ ನಿಯಮೋಲ್ಲಂಘನೆ ಆಗುತ್ತಿರುವುದು ಸಮಾಜಘಾತುಕ ಕೃತ್ಯಗಳ ಮುಂದುವರಿಕೆಗೆ.

ಪುರಾಣದ ಜೈಲುಗಳ ಸಮಾಚಾರ ಇದಾದರೆ, ಇತಿಹಾಸದಲ್ಲಿ ಮೊಘಲರ ಕಾಲದ, ಬ್ರಿಟಿಷರ ಕಾಲದ ಜೈಲುಗಳನ್ನು ನೋಡುತ್ತೇವೆ. ಬ್ರಿಟಿಷರ ಕಾಲದ ಬಂದೀಖಾನೆಗಳಲ್ಲಿ ಅರಳಿದ್ದು ಸ್ವಾತಂತ್ರ್ಯದ ಹೂಗಳು. ಅಲ್ಲಿ ಸಜ್ಜನರು ಜೈಲುಗಳನ್ನು ಹೋರಾಟದ ವೇದಿಕೆಯಾಗಿ ಬಳಸಿಕೊಂಡದ್ದು ದೊಡ್ಡ ರೂಪಕ.
ಆಮೇಲಾಮೇಲೆ ಜೈಲು ಎನ್ನುವುದು ಗುಲಾಮಗಿರಿ, ದರ್ಪದ ವ್ಯವಸ್ಥೆಯಂತೆ ಬೆಳೆಯಿತು. ಶಿಕ್ಷೆ ಕೊಡುವ ಪರಿಪಾಠ ರೂಢಿಗೆ ಬಂತು. ಆಗೆಲ್ಲಾ ಕಠಿಣ ಶಿಕ್ಷೆಗೆ ಗುರಿಯಾದವರಿಂದ ಕಲ್ಲುಗಣಿಗಳಲ್ಲಿ ಕೆಲಸ ಮಾಡಿಸುತ್ತಿದ್ದರು. ವಿಧಾನಸೌಧ ಕಟ್ಟಿದವರೂ ಕೈದಿಗಳೇ. ಎಣ್ಣೆ ಗಾಣಕ್ಕೆ ಹೆಗಲು ಕೊಡುವುದು ಮೊದಲಾದ ಕೆಲಸಗಳನ್ನೂ ಅವರಿಂದ ಮಾಡಿಸುತ್ತಿದ್ದರು.

ಅಂಡಮಾನ್ ಮತ್ತು ನಿಕೊಬಾರ್‌ನ ಸೆಲ್ಯುಲಾರ್ ಜೈಲು ‘ಕಾಲಾಪಾನಿ’ ಶಿಕ್ಷೆಗೆ ಹೆಸರುವಾಸಿಯಾಗಿತ್ತು. ಅಲ್ಲಿನದ್ದು ‘ಸಾಲಿಟರಿ ಕನ್‌ಸೈನ್‌ಮೆಂಟ್’ ಅಥವಾ ‘ಏಕಾಂತ ಬಂದೀಖಾನೆ’. ಅದನ್ನು ‘ಅಂಡಾ ಸೆಲ್’ ಎಂದೂ ಕರೆಯುತ್ತಾರೆ. ಕಠಿಣಾತಿಕಠಿಣ ಶಿಕ್ಷೆ ನೀಡಲಾಗುತ್ತಿದ್ದ ತಾಣ ಅದು. ಆರೋಗ್ಯ ಕ್ಷೀಣಿಸುವಂತೆ ಮಾಡಿ, ಏಕಾಂತವನ್ನೇ ದೊಡ್ಡ ಶಿಕ್ಷೆಯಾಗಿ ನೀಡುವುದು ಮಾನಸಿಕ ಹಿಂಸೆಯೇ ಆಗಿತ್ತು. ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವವರು ದನಿ ಎತ್ತಲಾರಂಭಿಸಿದ ಮೇಲೆ ಜೈಲಿನ ನಿಯಮಗಳಲ್ಲಿ ಸಡಿಲಿಕೆ ಆಯಿತು. ಮನ ಪರಿವರ್ತನೆಯ ಹೊಸ ದಾರಿಗಳು ತೆರೆದುಕೊಂಡವು. ಬೇಕರಿ, ಮರಗೆಲಸ, ಬಟ್ಟೆ ಹೊಲೆಯುವುದು, ನೇಯ್ಗೆ ಮೊದಲಾದ ಕುಶಲತೆ ಬೇಡುವ ಕೆಲಸಗಳನ್ನು ಕೈದಿಗಳಿಗೆ ಕಲಿಸಿ, ಅದನ್ನೇ ಅವರ ವೃತ್ತಿಯಾಗಿಸುವ ಪ್ರಯತ್ನಗಳು ಶುರುವಾದವು. ಬದುಕುವ ಹೊಸ ದಾರಿಗಳನ್ನು ತೋರುವ ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಈಗೀಗ ಅಮಾನುಷ ಕೃತ್ಯಗಳನ್ನು ಎಸಗಿದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸತೊಡಗಿದ್ದಾರೆ. ವೀರಪ್ಪನ್ ಹಾಗೂ ಅಸಂಖ್ಯಾತ ರೌಡಿಗಳೇ ಇದಕ್ಕೆ ಉದಾಹರಣೆ.

ಜೈಲು ಎನ್ನುವುದು ಪುನರ್ವಸತಿ ಕೇಂದ್ರ ಆಗಬೇಕಿತ್ತು. ಶಿಕ್ಷಣ ಕೇಂದ್ರ ಆಗಬೇಕಿತ್ತು. ಅಪರಾಧ ಮನೋಭಾವ ತೊಡೆದುಹಾಕುವ ತಾಣ ಆಗಬೇಕಿತ್ತು. ಆದರೆ, ಅದು ‘ಕ್ರಿಮಿನಲ್ ವರ್ಕ್‌ಶಾಪ್’ ಆಗಿಹೋಯಿತು. ಹಿಂದೆ ಸೈಕಲ್, ಚಪ್ಪಲಿ ಕದ್ದವರು ಜೈಲಿನ ಒಳಗೆ ಇರುತ್ತಿದ್ದರು. ಹೊರಗೆ ಬರುವಾಗ ಅವರಿನ್ನು ಕಳ್ಳತನ ಮಾಡಬಾರದು ಎನ್ನುವ ಭಾವನೆ ಹುಟ್ಟಿರುತ್ತಿತ್ತು. ಈಗ ಅಪರಾಧಿಗಳು ಹೊರಬರುವ ವಿಶ್ವವಿದ್ಯಾಲಯವಾಗಿ ಜೈಲು ಬದಲಾಗಿದೆ.

ಬಹಳ ಹಿಂದೆ ಕೈದಿಗಳ ಸಂಖ್ಯೆ ಕಡಿಮೆ ಇರುತ್ತಿತ್ತು. ಈಗ ಅಪರಾಧವನ್ನೇ ವೃತ್ತಿಯಾಗಿಸಿಕೊಂಡಿರುವ ಹಲವು ಸಮುದಾಯಗಳೇ ಇವೆ. ಜೈಲುಗಳು ತುಂಬಿ ತುಳುಕುತ್ತವೆ. ಅಲ್ಲಿ ಸಿಬ್ಬಂದಿಯ ಕೊರತೆ ಇದೆ. ಜೀವಾವಧಿ ಶಿಕ್ಷೆ ಆದವರಿಗೆ ಬೇರೆಯದೇ ಸಮವಸ್ತ್ರ ಇರುತ್ತದೆ. ವಿಚಾರಣಾಧೀನ ಕೈದಿಗಳ ಸಮವಸ್ತ್ರಕ್ಕಿಂತ ಇದು ಭಿನ್ನ. ಇವರು ಸದಾ ಬಿಳಿ ಟೋಪಿ ಹಾಕಿರಬೇಕು. ಬಟ್ಟೆಯ ಮೇಲೆ ಎದ್ದುಕಾಣುವಂತೆ ಸಂಖ್ಯೆ ಇರುತ್ತದೆ. ಸಿಬ್ಬಂದಿ ಕೊರತೆ ಎಷ್ಟರಮಟ್ಟಿಗೆ ಇದೆ ಎಂದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಇಂಥವರನ್ನೇ ಅನಧಿಕೃತವಾಗಿ ಕೆಲಸಕ್ಕೆ ನಿಯೋಜಿಸಿಕೊಳ್ಳುವ ಪರಿಪಾಠ ಬೆಳೆಯುವಷ್ಟು. ಸಣ್ಣ ಪುಟ್ಟ ಕಾರಕೂನಿಕೆ ಇತ್ಯಾದಿಯನ್ನು ಇಂಥವರು ಮಾಡತೊಡಗಿದರು. ಇವರಲ್ಲಿ ಕೆಲವರು ಹೊರಗಿನ ವಹಿವಾಟು, ವ್ಯವಹಾರಗಳನ್ನು ಒಳಗಿನಿಂದಲೇ ನಿಭಾಯಿಸುವ ಶಕ್ತಿಯನ್ನು ಕ್ರಮೇಣ ಪಡೆದುಕೊಳ್ಳತೊಡಗಿದ್ದು ಸೋಜಿಗ.

ಈಗ ತಾಂತ್ರಿಕ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಹಾಗಿದ್ದರೂ ಜೈಲುಗಳಲ್ಲಿ ಅಗತ್ಯ ಇರುವಷ್ಟು ಸಿ.ಸಿ.ಟಿ.ವಿ. ಕ್ಯಾಮೆರಾಗಳಿಲ್ಲ. ಮೊಬೈಲ್ ಜಾಮರ್ ಹಾಕಿದರೂ, ಆ ಬೇಲಿಯನ್ನೂ ಮೀರಿ ಸಂಭಾಷಣೆ ನಡೆಸುತ್ತಿರುವ ಮೊಬೈಲ್‌ಗಳಿವೆ. ಈ ಕ್ಷಣದಲ್ಲಿ ತಪಾಸಣೆ ನಡೆಸಿದರೂ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಿಗ್ನಲ್ ಇರುವ ಕನಿಷ್ಠ 50 ಮೊಬೈಲ್‌ಗಳು ಸಿಕ್ಕಾವು. ಜಾಮರ್ ಹಾಕಿದರೂ ಅದನ್ನು ಮೀರುವ ‘ಜಾಣ’ರ ಸಂಖ್ಯೆ ಏರುತ್ತಿದೆ. ಇವೆಲ್ಲವನ್ನೂ ವ್ಯವಸ್ಥೆಯ ನಂಬಿಕೆ ದ್ರೋಹದ ಕೆಲಸಗಳು ಎನ್ನಬಹುದು. ಜೈಲಿನಲ್ಲಿ ಇರುವವರು ದಾವೂದ್ ಇಬ್ರಾಹಿಂ ಜೊತೆಗೂ ಸಲೀಸಾಗಿ ಮಾತನಾಡುವ ಕಾಲ ಇದು.

ಮೊಬೈಲ್‌ ಬ್ಯಾಟರಿಗಳನ್ನು ಚಾರ್ಜ್ ಮಾಡಲು ವಿದ್ಯುತ್ ಪೂರೈಕೆ ಆಗದಂತೆ ನಿಗಾ ಮಾಡುವ ವ್ಯವಸ್ಥೆಯೂ ಇದೆ. ವಿದ್ಯುತ್ ಕಡಿತ ಮಾಡಿದರೂ ಅವರ ಮೊಬೈಲ್‌ಗಳನ್ನು ವ್ಯವಸ್ಥೆಯೊಳಗೆ ಇರುವವರೇ ಚಾರ್ಜ್ ಮಾಡಿಕೊಡುತ್ತಾರೆ. ಗಾಂಜಾ, ಮದ್ಯ, ಬೀಡಿ, ಸಿಗರೇಟು ಕಳ್ಳಸಾಗಣೆ ಮಾಡುವವರೂ ಕಡಿಮೆಯೇನಿಲ್ಲ. ದೊಡ್ಡ ಗೋಡೆ, ವಿದ್ಯುತ್ ತಂತಿ ಎಲ್ಲ ಇದ್ದರೂ ಇತ್ತೀಚೆಗೆ ಅತ್ಯಾಚಾರಿಯೊಬ್ಬ ಜೈಲಿನಿಂದ ಪರಾರಿಯಾಗಿದ್ದ ಘಟನೆಯೂ ನಮ್ಮ ಎದುರಲ್ಲಿದೆ.

ಈಗ ಜೈಲು ಸೇರುವ ‘ಅತಿ ಗಣ್ಯ ವ್ಯಕ್ತಿ’ಗಳ ಸಂಖ್ಯೆ ಹೆಚ್ಚಾಗಿದೆ. ಅವರಲ್ಲಿ ರಾಜಕಾರಣಿಗಳೂ ಇದ್ದಾರೆ. ರಾಜಕೀಯದ ಜೊತೆ ಬೆರೆತಂತಿರುವ ರೌಡಿಗಳಿಗೂ ಗಣ್ಯರೆನ್ನುವ ಹಣೆಪಟ್ಟಿ ಅಂಟಿಕೊಂಡಿದೆ. ಜೈಲಿನಲ್ಲಿ ಅವರಿಗೆ ಐಷಾರಾಮಿ ವ್ಯವಸ್ಥೆ ಸಿಗುತ್ತದೆ. ಬೂಟಿನ ಹೀಲ್ಸ್‌ನೊಳಗೆ ಇಟ್ಟು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಗಾಂಜಾ ಕಳ್ಳಸಾಗಣೆ ಮಾಡಿದ್ದು ಡಿಐಜಿ ಬಿ.ಎಸ್‌.ಅಬ್ಬಾಯಿ ಎನ್ನುವವರ ಸೇವಾವಧಿಯಲ್ಲಿ ನಡೆದಿತ್ತು (ಅವರು 2007ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಬೇರೆ ಮಾತು). ಅಷ್ಟೇ ಏಕೆ, ಬಲರಾಮ ಎಂಬ ರೌಡಿಯೊಬ್ಬನ ಕೊಲೆ ಜೈಲಿನಲ್ಲಿ ನಡೆದಾಗ ತನಿಖೆ ನಡೆಸಲಾಯಿತು.  ಮಸಾಲೆ ದೋಸೆಯೊಳಗೆ ಬಟನ್ ಚಾಕು ಇಟ್ಟು ಕಳುಹಿಸಲಾಗಿತ್ತೆನ್ನುವುದು ಆಗ ಗೊತ್ತಾಯಿತು.

ಇನ್ನು ಕೆಲವರು ಓದುವ ಹವ್ಯಾಸದ ನೆಪವೊಡ್ಡಿ ಬೃಹತ್ ಗ್ರಂಥಗಳನ್ನು ಜೈಲಿಗೆ ತರಿಸಿಕೊಳ್ಳುತ್ತಾರೆ. 500-600 ಪುಟಗಳ ದೊಡ್ಡ ಪುಸ್ತಕದ ಮಧ್ಯಭಾಗದ ಕೆಲವು ಹಾಳೆಗಳನ್ನು ಶಸ್ತ್ರಾಸ್ತ್ರಗಳ ಆಕಾರಕ್ಕೆ ತಕ್ಕಂತೆ ಕತ್ತರಿಸಿ, ಅದರೊಳಗೆ ಇಟ್ಟು ಕಳ್ಳಸಾಗಾಣಿಕೆ ಮಾಡಿರುವ ಉದಾಹರಣೆಗಳಿವೆ. ಅಂಥ ಪುಸ್ತಕಗಳ ಒಳಗೆ ಗನ್, ಬಟನ್ ಚಾಕು ಏನನ್ನು ಬೇಕಾದರೂ ಇಡಬಹುದು.

ಜಿಲ್ಲಾ ಮಟ್ಟದ ಜೈಲುಗಳಲ್ಲಿ ಸುರಕ್ಷೆ ಇನ್ನೂ ಕೆಟ್ಟದಾಗಿದೆ. ರಾಮನಗರದ ಜೈಲಿನ ಪಕ್ಕದಲ್ಲಿನ ಮಿನಿ ವಿಧಾನಸೌಧದ ಕಾಮಗಾರಿಯನ್ನು ನಾನು ಗಮನಿಸಿದ್ದೆ. ಆ ಮಿನಿ ವಿಧಾನಸೌಧದ ಮೇಲೆ ನಿಂತರೆ ಇಡೀ ಜೈಲಿನ ಪಕ್ಷಿನೋಟ ಕಾಣುತ್ತದೆ. ಅಲ್ಲಿಂದ ಒಂದು ಟೆನಿಸ್ ಬಾಲ್‌ನೊಳಗೆ ಗಾಂಜಾ ಇಟ್ಟು ಎಸೆದರೆ ಅದು ಜೈಲಿನ ಆವರಣ ತಲುಪುತ್ತದೆ. ಇದು ವ್ಯವಸ್ಥೆಯ ಲೋಪವಲ್ಲದೆ ಇನ್ನೇನು?

ಜೈಲುಗಳಿಗೆ ಸೇರುವ ವಿದ್ಯಾವಂತರು, ವೈಟ್‌ಕಾಲರ್‌ಗಳ ಸಂಖ್ಯೆ ಈಗ ಹೆಚ್ಚಾಗಿದೆ. ಅವರು ಜಾಣತನದಿಂದ ಕೆಲವು ಪ್ರತಿತಂತ್ರಗಳನ್ನು ಹೂಡುತ್ತಾರೆ. ಅವನ್ನು ಮಟ್ಟಹಾಕುವ ತಾಂತ್ರಿಕ ಸಾಮರ್ಥ್ಯ ಕೂಡ ಇಲ್ಲವಾಗಿದೆ. ಜೈಲು ಮಂತ್ರಿಯೇ ಬಂದು ಸೆಲ್‌ನಲ್ಲಿ ಇರುವ ರಾಜಕಾರಣಿಯನ್ನು ವಿಚಾರಿಸಿಕೊಂಡು ಹೋಗುವ ವ್ಯಂಗ್ಯದ ವಾತಾವರಣವಿದೆ. ಅಷ್ಟೇ ಏಕೆ, ಮಠದ ಸ್ವಾಮೀಜಿಗಳು ಕೂಡ ಜೈಲು ಸೇರಿದವರನ್ನು ನೋಡಿಕೊಂಡು ಹೋಗಲು ಬರತೊಡಗಿದ್ದಾರೆ. ಅವರು ಯಾರನ್ನು ನೋಡಲು ಹೋಗುವರೋ, ಅಂಥವರಿಗೆ ಜೈಲಿನಲ್ಲಿ ವಿಶೇಷ ಸ್ಥಾನಮಾನ ಸಿಗುತ್ತದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೊಲೆಗಳನ್ನು ಅವಲೋಕಿಸಿದಾಗ ಜೈಲುಗಳಲ್ಲಿನ ಗುಂಪುಗಾರಿಕೆಯ ತೀವ್ರತೆ ಅರಿವಿಗೆ ಬರುತ್ತದೆ. ಜೈಲಿನ ನಿಯಮಾವಳಿಗಳ ಪ್ರಕಾರ ಆಂತರಿಕ ಭದ್ರತೆ, ರಕ್ಷಣೆಗಾಗಿ ಅನುಮಾನಾಸ್ಪದ ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಅವಕಾಶವಿದೆ. ಸಂಭವನೀಯ ಅನಾಹುತದ ವಾಸನೆ ಬಡಿದಾಕ್ಷಣ ಹೀಗೆ ಮಾಡಿದರೆ ಗುಂಪುಗಾರಿಕೆಯನ್ನು ಮಟ್ಟಹಾಕಬಹುದು. ಹೀಗೆ ಮಾಡದೇ ಇರುವುದನ್ನು ನಿರ್ಲಕ್ಷ್ಯ, ಅಸಡ್ಡೆ ಎನ್ನದೇ ವಿಧಿಯಿಲ್ಲ. ಜೈಲಿಗೆ ಸ್ವತಂತ್ರ ವ್ಯವಸ್ಥೆಯ ಅವಶ್ಯಕತೆ ಇದೆ. ಹೀಗಾದಲ್ಲಿ ಅಲ್ಲಿಗೆ ಸೇರುತ್ತಿರುವ ಬಹುಸಂಖ್ಯಾತ ‘ಸೆಲೆಬ್ರಿಟಿ’ಗಳ ಹಾವಳಿ ತಪ್ಪೀತು.

ನಿರೂಪಣೆ: ವಿಶಾಖ ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT