ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಕೀರ್ತಿಕುಮಾರಿ ಎಂ.
Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು. ಅರರೆ! ಆ ಆನೆಗಳು ಜನರನ್ನು ಕಂಡು ದಿಕ್ಕಾಪಾಲು ಓಡಲಿಲ್ಲವೆ? ಅವರನ್ನು ಅಟ್ಟಿಸಿಕೊಂಡು ಬರಲಿಲ್ಲವೆ? ಇಂತಹ ಪ್ರಶ್ನೆಗಳು ಮೂಡಿರಲಿಕ್ಕೂ ಸಾಕು. ಅವು ದಿಟದ ಆನೆಗಳಲ್ಲ, ಲಂಟಾನಾ ಆನೆಗಳು!

ಹೌದು, ಅವು ಲಂಟಾನಾ ಆನೆಗಳೇ. ವಿಧಾನಸೌಧ, ಕೆಂಪೇಗೌಡ ಮೆಟ್ರೊ ನಿಲ್ದಾಣ, ಮಹಾತ್ಮಗಾಂಧಿ ಮೆಟ್ರೊ ನಿಲ್ದಾಣ–ಹೀಗೆ ಬೆಂಗಳೂರಿನ ಹತ್ತಾರು ಕಡೆ ಲಂಟಾನಾ ಆನೆಗಳು ಚದುರಿದಂತೆ ಕಂಡು ಬರುತ್ತವೆ. ಈ ಲಂಟಾನಾ ಆನೆಗಳೇಕೆ ದಿಢೀರ್‌ ಪ್ರತ್ಯಕ್ಷವಾದವು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಲಂಟಾನಾ ಆನೆಗಳು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂರ್ಘಷದ ಬದಲು ‘ಸಹಬಾಳ್ವೆ’ ಪಾಠವನ್ನು ಹೇಳಿಕೊಡುವ ಸಲುವಾಗಿಯೇ ಮಹಾನಗರಕ್ಕೆ ಬಂದಿವೆ. ನಗರೀಕರಣ, ಆಧುನೀಕರಣದ ಧಾವಂತದಲ್ಲಿರುವ ನಮಗೆ ಪರಿಸರ ಸಂರಕ್ಷಣೆ, ಮನುಷ್ಯ-ವನ್ಯಜೀವಿಗಳ ಸಹಬಾಳ್ವೆಯ ಅನಿವಾರ್ಯತೆ ಮತ್ತು ಲಂಟಾನಾದಿಂದ ನಿಸರ್ಗಕ್ಕಿರುವ ಅಪಾಯವನ್ನು ತಿಳಿಸಲು ಬಂದಿವೆ. ಇದೇ ಸಂದೇಶ ಹೊತ್ತು ದೇಶ–ವಿದೇಶಗಳಿಗೆ ‘ಮಹಾ ವಲಸೆ’ ಕೂಡ ಹೊರಟಿವೆ.

ಮಾನವನ ಅತಿ ಆಸೆಯು ವನ್ಯಜೀವಿಗಳ ಆವಾಸಸ್ಥಾನ ಮತ್ತು ಆಹಾರವನ್ನು ಆಪೋಷಿಸಿಕೊಳ್ಳುತ್ತಿದೆ. ಕಾಡು ನಾಡಾಗಿ ಪರಿವರ್ತನೆಯಾಗುತ್ತಿದೆ. ಆನೆ, ಹುಲಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳೆಲ್ಲಾ ನಾಡಿಗೆ ಲಗ್ಗೆ ಇಡುತ್ತಿವೆ. ಇಂಥ ಸಂದರ್ಭದಲ್ಲಿ ‘ಸಹಬಾಳ್ವೆ’ ಯೊಂದೇ ಪರಿಹಾರ ಎನ್ನುತ್ತಿವೆ ಈ ಆನೆಗಳು. ಈ ಆನೆಗಳನ್ನು ಸುಂದರ ಕಲಾಕೃತಿಗಳನ್ನಾಗಿ ಮಾತ್ರ ನೋಡದೆ ವನ್ಯಜೀವಿಗಳ ಪ್ರತಿರೂಪವಾಗಿ ನೋಡುತ್ತಾ ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಸಂದೇಶವೂ ಇದೆ.

ಸರ್ಕಾರೇತರ ಸಂಸ್ಥೆಗಳಾದ ‘ರಿಯಲ್ ಎಲಿಫೆಂಟ್ ಕಲೆಕ್ಟಿವ್’ ಮತ್ತು ಬ್ರಿಟನ್‌ನ ‘ಎಲಿಫೆಂಟ್‌ ಫ್ಯಾಮಿಲಿ’ ಸಹಭಾಗಿತ್ವದಲ್ಲಿ ತಮಿಳುನಾಡಿನ ಗುಡಲೂರಿನ ಶೋಲಾ ಟ್ರಸ್ಟ್ ಲಂಟಾನಾದಿಂದ ಆನೆಗಳನ್ನು‌ ರೂಪಿಸುವ ಕೌಶಲವನ್ನು ಆದಿವಾಸಿಗಳಿಗೆ ಪರಿಚಯಿಸಿ, ತರಬೇತಿ ನೀಡುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಜೀವ ವೈವಿಧ್ಯದ ವಿನಾಶಕಾರಿ ಎಂದೇ ಕರೆಯುವ ಸಸ್ಯ ಪ್ರಭೇದ ‘ಲಂಟಾನಾ’ವನ್ನು ಬಡಸಮೇತ ಕಿತ್ತು ಹಾಕುವ ಹೊಸ ಮಾರ್ಗೋಪಾಯವನ್ನೂ ತಿಳಿಸುತ್ತಿದೆ.

ವನ್ಯಜೀವಿಗಳಿಗೆ ಕಂಟಕ, ಅರಣ್ಯ ಇಲಾಖೆಗೆ ತಲೆನೋವಾಗಿರುವ ಲಂಟಾನಾ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ನೀಲಗಿರಿ ಪ್ರದೇಶದಲ್ಲಿ ವಾಸಿಸುವ ಸೋಲಿಗ, ಬೆಟ್ಟ ಕುರುಬ, ಜೇನು ಕುರುಬ ಮತ್ತು ಪಣಿಯನ್‌ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳ ನೈಪುಣ್ಯತೆಯಿಂದ ಆನೆಗಳಾಗಿ ಮಾರ್ಪಟ್ಟು ಕಲಾ ಪ್ರಪಂಚದ ಗಮನ ಸೆಳೆಯುತ್ತಿವೆ. ಈ ಆದಿವಾಸಿಗಳು ಲಂಟಾನಾದಿಂದ ಆನೆ ಮಾತ್ರವಲ್ಲ, ಕುರ್ಚಿ, ಟೇಬಲ್, ಸೋಫಾ, ದಿವಾನಗಳನ್ನೂ ಮಾಡುತ್ತ ಜೀವನೋಪಾಯ ಕಂಡುಕೊಂಡಿದ್ದಾರೆ.

ಈ ಕ್ರಮದಿಂದಾಗಿ ಅರಣ್ಯದಲ್ಲಿ ಲಂಟಾನಾ ವ್ಯಾಪಿಸುವುದನ್ನು ತಡೆಯಲು ಹೊಸ ದಾರಿಯೊಂದನ್ನು ಕಂಡುಕೊಂಡಂತಾಗಿದೆ. ಜೊತೆಗೆ ಆದಿವಾಸಿ ಕುಟುಂಬಗಳಿಗೆ ಉದ್ಯೋಗ ಲಭಿಸಿದೆ. ಜೀವನ ಸಾಗಿಸಲು ಗುಳೆ ಹೊರಡುತ್ತಿದ್ದ ಆದಿವಾಸಿಗಳೀಗ ತಮ್ಮವರೊಂದಿಗೆ ಸೇರಿ ತಾವು ಇದ್ದಲ್ಲಿಯೇ ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಮೂರು ರಾಜ್ಯಗಳ ಸುಮಾರು 150ಕ್ಕೂ ಹೆಚ್ಚು ಆದಿವಾಸಿಗಳು ಲಂಟಾನಾ ಆನೆಗಳು ಮತ್ತು ಇತರ ವಸ್ತುಗಳನ್ನು ತಯಾರಿಕೆಯಲ್ಲಿ ತೊಡಗಿದ್ದಾರೆ. ಕಾಡು ಮತ್ತು ವನ್ಯಜೀವಿಗಳೊಂದಿಗೆ ಅವಿನಾಭಾವ ನಂಟು ಹೊಂದಿರುವ ಅವರು ನೈಜ ಆನೆಗಳ ವೈಶಿಷ್ಟ್ಯಗಳನ್ನು ಗಮನದಲ್ಲಿ ಇಟ್ಟುಕೊಂಡೇ ಲಂಟಾನಾ ಆನೆಗಳನ್ನು ರಚಿಸುತ್ತಾರೆ.

‘ಇಪ್ಪತ್ತೈದು ವರ್ಷಗಳಿಂದ ಲಂಟಾನಾದಿಂದ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಈಗ ಎರಡು ವರ್ಷಗಳಿಂದ ಆನೆಗಳ ಕಲಾಕೃತಿ ರಚನೆ ಮಾಡುತ್ತಿದ್ದೇವೆ. ರಿಯಲ್‌ ಎಲಿಫೆಂಟ್‌ ಸಂಸ್ಥೆಯು ಅಡಿಗಳ ಲೆಕ್ಕದಲ್ಲಿ ಹಣ ನೀಡುತ್ತದೆ. ದೊಡ್ಡ ಗಾತ್ರದ ಆನೆಗೆ ಅಂದಾಜು 65,000 ರೂಪಾಯಿ ಸಿಗುತ್ತದೆ’ ಎನ್ನುತ್ತಾರೆ ಬಿಳಿಗಿರಿ ರಂಗನಾಥ ಬೆಟ್ಟದ ಸೋಲಿಗ ಸಮುದಾಯದ ಕುಶಲಕರ್ಮಿ ಪಾಪಣ್ಣ.

ಮಹಾ ವಲಸೆ

140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ  ಭಾರತ ಅತಿ ಹೆಚ್ಚು ಜೀವವೈವಿಧ್ಯಗಳಿರುವ ಅಪೂರ್ವ ದೇಶ. ಮನಷ್ಯ-ವನ್ಯಜೀವಿ ಸಹಬಾಳ್ವೆಗೆ ಭಾರತ ಅತ್ಯುತ್ತಮ ಉದಾಹರಣೆಯಾಗಿಯೂ ನಿಲ್ಲುತ್ತದೆ. ಇತ್ತೀಚೆಗೆ ಪಶ್ಚಿಮಘಟ್ಟದ ಶೇಕಡ 40ರಷ್ಟು ಪ್ರದೇಶ ಮಾನವನಿಂದ ಅತಿಕ್ರಮಣವಾಗಿದೆ ಎಂದು ಅಂಕಿಅಂಶ ಹೇಳುತ್ತದೆ. ಆದರೂ ಆನೆಗಳಂತಹ ಬೃಹತ್ ಜೀವಿಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಬದುಕುವುದನ್ನು ರೂಢಿಸಿಕೊಂಡಿವೆ. ಇದೇ ರೀತಿ ಅರಣ್ಯಗಳಲ್ಲಿ ಆದಿವಾಸಿಗಳು ವನ್ಯಜೀವಿಗಳ ಬದುಕಿಗೆ ಒಂದಿನಿತೂ ತೊಂದರೆ ಮಾಡದೆ ಸಹಬಾಳ್ವೆಯಿಂದ ಜೀವನ ಸಾಗಿಸುವ ಅನೇಕ ದೃಷ್ಟಾಂತಗಳೂ ಇವೆ. ಈ ಮಾದರಿಯನ್ನು ಜಗತ್ತಿಗೆ ಪರಿಚಯಿಸಲೂ ಈ ಲಂಟಾನಾ ಆನೆಗಳು ಜಗತ್ತಿನಾದ್ಯಂತ ‘ಮಹಾ ವಲಸೆ’ ಹೊರಟಿವೆ. ಈಗಾಗಲೇ ಲಂಡನ್‌, ಕೊಚ್ಚಿ ಸುತ್ತಿರುವ ಈ ಆನೆಗಳು ಮಾರ್ಚ್ 3 ರ ನಂತರ ಅಮೆರಿಕ ಸೇರಿದಂತೆ ವಿವಿಧ ದೇಶಗಳತ್ತ ಮುಖ ಮಾಡಲಿವೆ. ಅಲ್ಲಿ ಕೆಲ ಆನೆಗಳನ್ನು ಹರಾಜು ಮಾಡಲಾಗುತ್ತದೆ. ಈ ಹಣವನ್ನು ಕಾಡುಪ್ರಾಣಿಗಳ ಸಂರಕ್ಷಣೆಗೆ ಮೀಸಲಿಡಲಾಗುತ್ತದೆ.

ಜೀವವೈವಿಧ್ಯ ವಿರೋಧಿ ಲಂಟಾನಾ

ಲಂಟಾನಾ ವರ್ಭಿನೇಶಿಯ ಪ್ರಭೇದಕ್ಕೆ ಸೇರಿದ ಸಸ್ಯವರ್ಗ. ದಕ್ಷಿಣ ಮತ್ತು ಮಧ್ಯ ಅಮೆರಿಕ ಮೂಲದ ಅಲಂಕಾರಿಕ ಗಿಡವಾಗಿ ಭಾರತಕ್ಕೆ ಕಾಲಿಟ್ಟು, ಈಗ ದೇಶದ ಅರಣ್ಯ ಪ್ರದೇಶಕ್ಕೆ ಮಾರಕವಾಗುವಷ್ಟು ಬೆಳೆದಿದೆ. ಇದು ಬೆಳೆಯುವ ಜಾಗದಲ್ಲಿ ಹುಲ್ಲು, ಬಿದಿರಿನ ಬೆಳವಣಿಗೆ ಕುಂಠಿತವಾಗಿ ಆನೆ, ಜಿಂಕೆಗಳಂತಹ ಸಸ್ಯಹಾರಿ ಪ್ರಾಣಿಗಳ ಆಹಾರಕ್ಕೆ ಧಕ್ಕೆ ಉಂಟಾಗುತ್ತದೆ. ಕಾಡಿಗೆ ಸುಲಭವಾಗಿ ಬೆಂಕಿ ವ್ಯಾಪಿಸಲು ಈ ಪೊದೆಗಳೇ ಕಾರಣ. ಇಷ್ಟೇ ಅಲ್ಲದೆ, ಕಾಡಿನಲ್ಲಿ ಲಂಟಾನಾ ಪೊದೆಗಳ ಹಿಂದೆ ಆನೆ ಅಥವಾ ಬೇರಾವುದೇ ವನ್ಯಜೀವಿಗಳು ಇರುವುದು ಮನುಷ್ಯರಿಗೆ ಸುಲಭಕ್ಕೆ ಕಾಣಿಸುವುದಿಲ್ಲ. ಮನುಷ್ಯ ಮತ್ತು ವನ್ಯಜೀವಿ ಹಠಾತ್‌ ಎದುರಾದಾಗ ಅವು ಗಾಬರಿಗೊಂಡು ಮನುಷ್ಯನ ಮೇಲೆ ದಾಳಿ ಮಾಡುತ್ತವೆ. ಇಂಥದ್ದೇ ಕಾರಣಗಳಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ವಿದೇಶದಿಂದ ಬಂದ ಈ ‘ಕಳೆ’ಯನ್ನು ಕೊಲ್ಲುವ ಸಲುವಾಗಿಯೇ ಅದಕ್ಕೆ ‘ಕಲೆ’ಯ ರೂಪವನ್ನು ಕೊಡಲಾಗಿದೆ. ಕಲೆಗೆ ಒಳ್ಳೆಯ ಬೆಲೆ ಬಂದರೆ ಕಳೆ ನಾಶವಾಗುತ್ತದೆ, ಆದಿವಾಸಿಗಳ ಬದುಕು ಸುಧಾರಿಸುತ್ತದೆ. ಮನುಷ್ಯ–ವನ್ಯಜೀವಿಗಳ ಸಹಬಾಳ್ವೆಯೂ ಸಾಧ್ಯವಾಗುತ್ತದೆ. 

–––

ಲಾಲ್ ಬಾಗ್ ಗೆ ಲಗ್ಗೆ ಇಟ್ಟ ಗಜಪಡೆ..!
ಲಂಟನಾದಿಂದ ತಯಾರಾದ ಆನೆ ಕಲಾಕೃತಿಗಳು ಬೆಂಗಳೂರಿನ ಲಾಲ್ ಬಾಗ್ ಆವರಣದಲ್ಲಿ ಶನಿವಾರ ಗಮನಸೆಳೆದವು. ಕಲಾಕೃತಿ ಗಮನಿಸಿದ ನೂರಾರು ಮಂದಿ ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು – ಪ್ರಜಾವಾಣಿ ಚಿತ್ರ/ ರಂಜು ಪಿ
ಲಾಲ್ ಬಾಗ್ ಗೆ ಲಗ್ಗೆ ಇಟ್ಟ ಗಜಪಡೆ..! ಲಂಟನಾದಿಂದ ತಯಾರಾದ ಆನೆ ಕಲಾಕೃತಿಗಳು ಬೆಂಗಳೂರಿನ ಲಾಲ್ ಬಾಗ್ ಆವರಣದಲ್ಲಿ ಶನಿವಾರ ಗಮನಸೆಳೆದವು. ಕಲಾಕೃತಿ ಗಮನಿಸಿದ ನೂರಾರು ಮಂದಿ ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು – ಪ್ರಜಾವಾಣಿ ಚಿತ್ರ/ ರಂಜು ಪಿ
<div class="paragraphs"><p>ಬಿ.ಕೆ ಜರ್ನಾಧನ್</p></div>

ಬಿ.ಕೆ ಜರ್ನಾಧನ್

ಪರಿಸರ ಮತ್ತು ಮಾನವನ ಅಗತ್ಯಗಳ ಸಮತೋಲನ ಈಗಿನ ತುರ್ತು. ಪರಿಸರ ಸಂರಕ್ಷಣೆ ಸಹಬಾಳ್ವೆಯ ಕುರಿತ ಜಾಗೃತಿಗೆ ಲಂಟಾನಾ ಆನೆಗಳು ನೆಪ ಮಾತ್ರ. ಆನೆಗಳ ಬಳಿ ಬಂದ ಜನರಿಗೆ ಲಂಟಾನಾದ ದುಷ್ಪರಿಣಾಮ ಸಹಬಾಳ್ವೆಯ ಸಂದೇಶ ಕುರಿತು  ಅರಿವು ಮೂಡಿಸಲಾಗುತ್ತಿದೆ.
ಸಂದೀಪ್‌ ಹಂಚನಾಳೆ ಪಾರ್ಟನರ್‌ಶಿಫ್‌ ಲೀಡ್‌ ದಿ ರಿಯಲ್‌ ಎಲಿಫೆಂಟ್‌

ಆನೆಗಳ ರಚನೆ ಹೇಗೆ? ಅರಣ್ಯಕ್ಕೆ ತೆರಳಿ ಲಂಟಾನಾದ ಗಿಡಗಳನ್ನು ಕತ್ತರಿಸಿ ತಂದು ದೊಡ್ಡ ಕಡಾಯಿಗಳಲ್ಲಿ ಹಾಕಿ ಐದು ಗಂಟೆ ಬಿಸಿನೀರಿನಲ್ಲಿ ಬೇಯಿಸುತ್ತಾರೆ. ನಂತರ ಲಂಟಾನಾದ ಸಿಪ್ಪೆಯನ್ನು ಬಿಡಿಸಿಟ್ಟುಕೊಳ್ಳುತ್ತಾರೆ.ಆಗ ಲಂಟಾನಾ ಯಾವ ರೀತಿ ಬೇಕಾದರೂ ಬಾಗುತ್ತದೆ. ಎಷ್ಟು ವರ್ಷ ಇಟ್ಟರೂ ಹಾಳಾಗುವುದಿಲ್ಲ. ಆನೆಯ ಆಕೃತಿಗೆ ಬೇಕಾಗುವ ಉದ್ದ–ಅಗಲ ಸೇರಿದಂತೆ ಕಲಾಕೃತಿಯ ಚೌಕಟ್ಟನ್ನು ಕಬ್ಬಿಣದಿಂದ ತಯಾರಿಸಿ ಚೌಕಟ್ಟಿನ ಹೊರಭಾಗದಲ್ಲಿ ಲಂಟಾನಾ ಬಳಸಿ ಕಲಾಕೃತಿ ರೂಪಿಸುತ್ತಾರೆ. ಇದಕ್ಕೆ ವಾರ್ನಿಶ್ ಹೊರತುಪಡಿಸಿ ಯಾವುದೇ ರಾಸಾಯನಿಕವನ್ನು ಬಳಸುವುದಿಲ್ಲ. ಆದಿವಾಸಿಗಳು ಈವರೆಗೆ 300ಕ್ಕೂ ಹೆಚ್ಚು ಆನೆಗಳ ಕಲಾಕೃತಿ ಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT