ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಆಯಾಸಕ್ಕೆ ಉಪಚಾರದ ಮದ್ದು

Published 28 ಆಗಸ್ಟ್ 2023, 23:30 IST
Last Updated 28 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ನಾವೆಷ್ಟೇ ಸ್ವಾವಲಂಬಿಗಳಾಗಿದ್ದರೂ, ಏನೇ ಆಗಲಿ ಒಬ್ಬಂಟಿಯಾಗಿ ಹೋರಾಡುವ ಗಟ್ಟಿ ಮನಸ್ಸಿನವರಾಗಿದ್ದರೂ, ಎಷ್ಟೇ ಸಂಪನ್ಮೂಲಗಳನ್ನು ಹೊಂದಿದವರಾಗಿದ್ದರೂ, ಎಷ್ಟೇ ಜೀವನಾನುಭವದಿಂದ ವಿವೇಕವನ್ನು ಗಳಿಸಿದವರಾಗಿದ್ದರೂ ಬದುಕಿನ ಓಟದಲ್ಲಿ ಆಯಾಸಗೊಳ್ಳುವುದು ಅನಿವಾರ್ಯ, ಹಾಗೆ ಆಯಾಸಗೊಂಡಾಗ ನಮ್ಮನ್ನು ಸಂತೈಸಿ, ಉಪಚರಿಸಿ ಮತ್ತೆ ಮುಂದಿನ ಪಯಣಕ್ಕೆ ಬೇಕಾದ ಮಾನಸಿಕ, ದೈಹಿಕ, ಭಾವನಾತ್ಮಕ ಸ್ಟೈರ್ಯ ತುಂಬಿಸುವ ಆತ್ಮೀಯರು ಬೇಕೇ ಬೇಕು.

ನಮ್ಮ ಬದುಕಿನಲ್ಲಿರುವ ಹಲವರಿಗೆ ನಾವೇ ಅಂತಹ ಸಾಂತ್ವನಗೊಳಿಸುವ, ಉಪಚರಿಸುವ ಆತ್ಮೀಯರಾಗಿರುತ್ತೇವೆ; ಕೆಲವರು ತಾವಾಗೇ ಹೇಳಿಕೊಳ್ಳದಿದ್ದರೂ ಅಂತಹ ಭಾವನಾತ್ಮಕ ಆಸರೆಗಾಗಿ ನಮ್ಮನ್ನು ನೆಚ್ಚಿಕೊಂಡಿರುತ್ತಾರೆ. ಹಾಗೆ ಒಬ್ಬರಿಗೊಬ್ಬರು ಉಪಚರಿಸುವುದು, ಸಂತೈಸುವುದು, ಪ್ರೋತ್ಸಾಹಿಸುವುದು ಕೌಟುಂಬಿಕ ಮತ್ತು ಸಾಮಾಜಿಕ ಬದುಕಿನ ಬಹುದೊಡ್ಡ ಮೌಲ್ಯ.

ಜೀವನದ ಎಷ್ಟೋ ಸಂದರ್ಭಗಳಲ್ಲಿ ನಮಗೆ ಇನ್ನೊಂದು ಜೀವಿಯ ಆಸರೆ ಅತ್ಯಗತ್ಯವಾಗಿರುವ ಸಮಯದಲ್ಲೇ ಅದು ದೊರೆಯದೇ ಹೋಗಬಹುದು. ಆಗ ನಮ್ಮನ್ನು ನಾವೇ ಸಂತೈಸಿಕೊಳ್ಳುವ ಸಾಮರ್ಥ್ಯವೂ ನಮ್ಮಲ್ಲೇ ಅಡಗಿರುತ್ತದೆ ಎನ್ನುವುದನ್ನು ಮರೆಯಬಾರದು. ಆದರೆ ಈ ಸ್ವ-ಸಾಂತ್ವನದ ಸಾಮರ್ಥ್ಯವೂ ತನ್ನಿಂದ ತಾನೇ ಉಂಟಾಗುವಂಥದ್ದಲ್ಲ; ಹಿಂದೆ ಎಂದೋ ಯಾರೋ ಇಂತಹ ಸಾಂತ್ವನ ಒದಗಿಸಿದ್ದರಷ್ಟೇ ಅದನ್ನು ಮಾದರಿಯಾಗಿಟ್ಟುಕೊಂಡು ಇಂದು ನಮ್ಮನ್ನು ನಾವು ಉಪಚರಿಸಿಕೊಳ್ಳಬಹುದು. ಹಾಗಾಗಿ ಮತ್ತೊಂದು ವ್ಯಕ್ತಿ ನೀಡುವ ಭಾವನಾತ್ಮಕ ಪೋಷಣೆ ಬಹಳ ಮುಖ್ಯವಾಗುತ್ತದೆ.

ಮಗು ಆಡಿ ದಣಿದು, ಆ ದಣಿವನ್ನು ನೀಗಿಸಿಕೊಳ್ಳುವ ಉಪಾಯ ಕಾಣದೆ ರಗಳೆ ಮಾಡತೊಡಗಿದಾಗ ತಾಯಿ ಹಾಲು ಕುಡಿಸಿ, ಜೋಗುಳ ಹಾಡಿ, ಮುದ್ದು ಮಾಡಿ, ತೊಟ್ಟಿಲು ತೂಗಿ ಮಲಗಿಸುವುದು ಬದುಕಿನ ಪ್ರಾರಂಭಿಕ ಹಂತದಲ್ಲಿನ ಆಯಾಸನಿವಾರಣೆಯ ಪ್ರಬಲ ಅನುಭವ. ಹಾಗೇ ಮುಂದಿನ ಬದುಕಿನಲ್ಲೂ ಆಯಾಸಗೊಂಡಾಗ ಅದನ್ನು ಗುರುತಿಸುವುದು ಹೇಗೆ, ಆಗ ಮಾಡಬೇಕಿರುವುದೇನು ಎನ್ನುವುದಕ್ಕೆ ಮಗು ತಂದೆ, ತಾಯಿ ಆಯಾಸವನ್ನು ಹೇಗೆ ಗುರುತಿಸುತ್ತಾರೆ, ಹೇಗೆ ಸಂತೈಸುತ್ತಾರೆ ಎನ್ನುವುದನ್ನು ಮಾದರಿಯಾಗಿಟ್ಟುಕೊಳ್ಳುತ್ತದೆ.

ಹೌದು, ಆಯಾಸಗೊಂಡಿರುವುದನ್ನು ಗುರುತಿಸಬೇಕಾಗುತ್ತದೆ. ಅದು ಹಲವು ಬಾರಿ ತಾನೇ ತಾನಾಗಿ ಗೊತ್ತಾಗುವುದಿಲ್ಲ. ದಿನನಿತ್ಯದ ಸಾಧಾರಣ ಆಯಾಸವು ನಿದ್ರೆಯಿಂದ ಪರಿಹಾರವಾಗುತ್ತದೆ. ಆದರೆ ನಮ್ಮ ವ್ಯಕ್ತಿತ್ವದಲ್ಲೇ ಆಳವಾಗಿ ಬೇರುಬಿಟ್ಟಿರುವ ಭಾವನಾತ್ಮಕ ಆಯಾಸವನ್ನು ಪತ್ತೆ ಮಾಡುವುದು ಸುಲಭವಲ್ಲ. ಉದಾಹರಣೆಗೆ, ಆಗಾಗ ದೀರ್ಘಕಾಲದ ಆಲಸ್ಯ ಕಾಡುವುದುಂಟು. ಎಷ್ಟೇ ಚುರುಕಾಗಿ ಕೆಲಸ ಮಾಡಬೇಕೆಂದುಕೊಂಡರೂ ಮಾಡಲಾಗದೇ ನಮ್ಮನ್ನು ನಾವೇ ಹೀಗೆಳೆದುಕೊಳ್ಳುವುದೂ ಉಂಟು. ಎಲ್ಲರೊಡನೆ ನಗುನಗುತ್ತಾ ಬೆರೆಯಬೇಕೆಂದುಕೊಂಡರೂ ಬಾಂಧವ್ಯವನ್ನು ಚಿಗುರಿಸಲು, ಬೆಳೆಸಲು ಬೇಕಾದ ಮಾನಸಿಕ ತ್ರಾಣವೇ ಇಲ್ಲದಂತಹ ಅನುಭವವಾಗುತ್ತದೆ. ಆಯಾಸ ಕೆಲವೊಮ್ಮೆ ಆಲಸ್ಯದಂತೆ, ಕೆಲವೊಮ್ಮೆ ಸಿಟ್ಟು-ಕೋಪದಂತೆ, ಕೆಲವೊಮ್ಮೆ ಆತಂಕದಂತೆ ಕಾಣಿಸಿಕೊಳ್ಳುವುದೂ ಉಂಟು. ಆಯಾಸಗೊಂಡಿದ್ದು ಏಕೆ ಎಂದು ತಿಳಿದುಕೊಳ್ಳಲೂ ಆತ್ಮೀಯರ ನೆರವು ಬೇಕಾಗುತ್ತದೆ.

ದೇಹ ಮತ್ತು ಮನಸ್ಸು ಬೇರೆ ಬೇರೆ ಘಟಕಗಳಲ್ಲ, ಅವು ಒಂದೇ ವ್ಯವಸ್ಥೆಯಂತೆ ಕೆಲಸಮಾಡುತ್ತವೆ. ಭಾವನಾತ್ಮಕ ಆಘಾತಗಳಾದಾಗ, ಪ್ರೀತಿಪಾತ್ರರು ದೂರ ಸರಿದಾಗ, ನಂಬಿಕೆ ವಿಶ್ವಾಸ ದ್ರೋಹವಾದಾಗ, ಜೀವನ ಅರ್ಥಹೀನ ಎನಿಸಿದಾಗ, ಪದೇ ಪದೇ ಬಾಂಧವ್ಯದಲ್ಲಿ ಬಿರುಕುಗಳು ಉಂಟಾದಾಗ, ಎಷ್ಟೇ ಬಿಡಿಸಿ ಹೇಳಿದರೂ, ಹೇಗೆ ತಿಳಿಸಿದರೂ ಅರ್ಥಮಾಡಿಕೊಳ್ಳದವರೊಡನೆ ಬಾಳಬೇಕಾದಾಗ, ಕೆಲಸ ಮಾಡಬೇಕಾದಾಗ-ಇನ್ನೂ ಇಂತಹ ಅನೇಕ ಕಗ್ಗಂಟಿನಂತಹ ಸಮಸ್ಯೆಗಳಲ್ಲಿ ಸಿಲುಕಿದಾಗ ಮನಸ್ಸು ನಲುಗುತ್ತದೆ, ದೇಹವೂ ಕುಗ್ಗುತ್ತದೆ. ಆಗ ನಮ್ಮ ಮನಸ್ಸನ್ನು ತೆರೆದಿಡಲು, ಮುಕ್ತವಾಗಿ ಮಾತನಾಡಲು, ಬದುಕಿನಲ್ಲಿ ಆಗುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಒಂದು ಶಾಂತವಾದ, ಸುರಕ್ಷಿತ ಭಾವನಾತ್ಮಕ ನೆಲೆ (emotional space) ಬೇಕಾಗುತ್ತದೆ, ಇಂತಹ ನೆಲೆಯನ್ನು ಒದಗಿಸುವವರೇ ನಮ್ಮ ನಿಜವಾದ ಆತ್ಮೀಯರು. ವಿಶ್ರಾಂತಿಯೆಂದರೆ ಕೇವಲ ಮಲಗಿ ನಿದ್ರಿಸುವುದಲ್ಲ, ನಿದ್ರೆಯಿಂದಲೂ ಪರಿಹಾರವಾಗದ ಆಯಾಸ ಇಂತಹ ಭಾವನಾತ್ಮಕ ನೆಲೆಯಲ್ಲಿ ವಿರಮಿಸುವುದು ಸಾಧ್ಯವಾದಾಗ ಪರಿಹಾರವಾಗುತ್ತದೆ.

ಜೀವನೋತ್ಸಾಹವನ್ನು, ಜೀವನಪ್ರೀತಿಯನ್ನು ಹೀರುವ ಎಲ್ಲದರಿಂದಲೂ ಸ್ವಲ್ಪ ಕಾಲ ದೂರ ನಿಂತು, ವಸ್ತುನಿಷ್ಠವಾಗಿ ಪರಾಮರ್ಶಿಸುವ ಅವಕಾಶವನ್ನು ನೀಡುವ ಆಸರೆಯೇ ನಿಜವಾದ ಆಯಾಸಪರಿಹಾರಕವಾದ ಉಪಚಾರ. ಹೀಗೆ ವಿಶ್ರಾಂತಿಯಲ್ಲಿ ಚೇತರಿಸಿಕೊಂಡು ಮತ್ತೆ ಮುಂದಿನ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗುತ್ತೇವೆ.

ಆಯಾಸಗೊಂಡಿರುವವರನ್ನು ಉಪಚರಿಸುವುದು ಹೇಗೆ, ಆಯಾಸವಾದಾಗ ನಮ್ಮನ್ನು ನಾವೇ ಸಂತೈಸಿಕೊಳ್ಳುವುದು ಹೇಗೆ ಎನ್ನುವ ಬಗೆಗೆ ಕೆಲವು ಸಹಾಯಕವಾಗಬಹುದಾದ ಅಂಶಗಳು ಇಲ್ಲಿವೆ:

1. ಇಡೀ ದಿನದ ಕೆಲಸದಲ್ಲಿ, ಪ್ರಪಂಚದ ಜಂಜಾಟದಲ್ಲಿ ದಣಿದು ಮನೆಗೆ ಬಂದಾಗ ‘ನಮ್ಮ ಮನೆ’ ಎನ್ನುವ ಪರಿಚಿತ ಪರಿಸರ, ‘ನಮ್ಮದು’ ಎನ್ನುವುದಕ್ಕೆ ಮರಳಿಬಂದ ಸಮಾಧಾನ ಆಯಾಸವನ್ನು ಪರಿಹರಿಸುತ್ತದೆ. ‘ನಮ್ಮದು’ ಎನ್ನುವುದಕ್ಕೆ ಮರಳಿ ಬರುವಂತೆ ಮತ್ತು ‘ನಾವು ನಾವಾಗಿ ಇರಬಹುದಾದ’ ವಲಯಗಳನ್ನು ಕಂಡುಕೊಳ್ಳುವಂತೆ ಆತ್ಮೀಯರನ್ನು ಪ್ರೋತ್ಸಾಹಿಸಬಹುದು. ಮನೆಯೆಂದರೆ ಕೇವಲ ಭೌತಿಕ ಮನೆ ಮಾತ್ರ ಅಲ್ಲವಷ್ಟೇ; ಮನೆಯಂತಹದೇ ಬೆಚ್ಚಗಿನ ಭಾವ ನೀಡುವ ಆತ್ಮೀಯರನ್ನು, ಅಭ್ಯಾಸಗಳನ್ನು ಕಂಡುಕೊಳ್ಳುವುದು ಆಯಾಸಕ್ಕೆ ಒಳ್ಳೆಯ ಉಪಚಾರ. ಮೌನವೂ ಧ್ಯಾನವೂ ಕಲೆಯೂ ವ್ಯಾಯಾಮವೂ ಏಕಾಂತವೂ ಸಹೃದಯರ ಸಹವಾಸವೂ ಆಯಾಸಪರಿಹಾರಕವೇ ಹೌದು.

2. ‘ನಿನಗೆ ಆಯಾಸವಾಗಿದೆಯಲ್ಲವೇ, ಸ್ವಲ್ಪ ಸುಧಾರಿಸಿಕೋ’ ಎನ್ನುವ ಮಾತನ್ನು ಕಾಳಜಿಯಿಂದ ಹೇಳಿದಾಗಲಂತೂ ಆಯಾಸವು ಹೊರಟು ಹೋದಂತೆಯೇ ಅನಿಸುತ್ತದೆ. ಒಳ್ಳೆಯ ಮಾತು ಸಿಹಿನೀರಿಗಿಂತಲೂ ತಂಪು. ಪ್ರಾಮಾಣಿಕವಾದ ಸಾಂತ್ವನದ ಮಾತುಗಳಿಗೆ ಇರುವ ಮಾಂತ್ರಿಕ ಶಕ್ತಿ ನಮ್ಮ ಊಹೆಗೂ ಮೀರಿದ್ದು. ಪ್ರೀತಿಯ ಸ್ಪರ್ಶ, ಅಪ್ಪುಗೆ, ತಲೆ ನೇವರಿಸುವುದು ಮುಂತಾದ ಆತ್ಮೀಯತೆಯ ಅಭಿವ್ಯಕ್ತಿಯೂ ಆಯಾಸವನ್ನು ನಿವಾರಿಸುತ್ತದೆ.

3. ಅತಿಯಾದ ಆಲೋಚನೆ, ಅತಿ ಮಾತು-ಜಗಳ, ಅನಗತ್ಯ ಓಡಾಟ, ಅತಿಯಾದ ನಿರೀಕ್ಷೆಗಳು, ಎಲ್ಲವನ್ನೂ ಒಟ್ಟಿಗೇ, ಈಗಲೇ ಮಾಡಿಬಿಡಬೇಕೆನ್ನುವ ಆತುರ ಪ್ರವೃತ್ತಿ, ಅನಗತ್ಯ ಸಾಮಾಜಿಕ ಚಟುವಟಿಕೆಗಳು, ಸಾಮಾಜಿಕ ಜಾಲತಾಣಗಳ ಮಿತಿ ಮೀರಿದ ಬಳಕೆ - ಯಾವುದಾದರೂ ಸರಿ ‘ಅತಿ’, ‘ಅನಗತ್ಯ’ ಎನ್ನುವುದೆಲ್ಲಾ ಆಯಾಸ ತರುತ್ತವೆ. ಆತ್ಮೀಯರು ಹೀಗೆ ಅತಿರೇಕದ ವರ್ತನೆಗಳಲ್ಲಿ ಸಿಲುಕಿಕೊಂಡಾಗ ಅವರನ್ನು ನಯವಾಗಿ ಎಚ್ಚರಿಸುವುದು; ಅದರ ಕುರಿತಾಗಿ ಮಾತನಾಡಿ ಹಿತ ಮಿತದ ಸಮತೋಲನವನ್ನು ಕಂಡುಕೊಳ್ಳುವಂತೆ ಪ್ರೋತ್ಸಾಹಿಸುವುದು; ಕಾಲಕಾಲಕ್ಕೆ ಆಹಾರ, ವಿಹಾರ, ವಿಶ್ರಾಂತಿಯಲ್ಲಿ ತೊಡಗುತ್ತಿದ್ದಾರೆಯೇ ಇಲ್ಲವೇ ಎಂದು ವಿಚಾರಿಸಿಕೊಳ್ಳುವುದು; ವಿರಮಿಸಲು ನಮ್ಮ ಕೈಲಾದ ಸಹಕಾರ ನೀಡುವುದು ಪರಿಣಾಮಕಾರಿ.

4. ಬೇರೆಯವರ ಆಯಾಸಪರಿಹಾರ ಮಾಡಲು ತೊಡಗುವ ಮೊದಲು ನಾವು ಸಾಕಷ್ಟು ದೈಹಿಕ, ಮಾನಸಿಕ ವಿಶ್ರಾಂತಿ ಪಡೆದಿದ್ದೇವೆಯೇ ಎನ್ನುವುದು ಮುಖ್ಯವಾಗುತ್ತದೆ. ತಾನೇ ಆಯಾಸಗೊಂಡ ವ್ಯಕ್ತಿ ಮತ್ತೊಬ್ಬರಿಗೆ ಭಾವನಾತ್ಮಕ ಆಸರೆ ಒದಗಿಸುವುದು ಸಾಧ್ಯವಿಲ್ಲ.

5. ಯಾವುದೇ ಪ್ರಯತ್ನ ಫಲಕಾರಿಯಾದಾಗ ನಮಗೆ ಆ ಕೆಲಸದಿಂದ ಆಯಾಸವಾಗುವುದಿಲ್ಲ. ಪ್ರಯತ್ನಗಳಿಂದ ಪದೇಪದೇ ಸೋಲುಂಟಾಗುತ್ತಿದ್ದರೂ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದೆ ಅಂತಹ ಪ್ರಯತ್ನಗಳನ್ನೇ ಮತ್ತೆಮತ್ತೆ ಮಾಡುತ್ತಲಿರುವುದು; ಪರಿಹಾರವೇ ಇಲ್ಲದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಲೇ ಇರುವುದು, ದೊರೆಯುವುದು ಅಸಾಧ್ಯವಾದ್ದುದ್ದರ ಬಗ್ಗೆ ಚಿಂತಿಸುತ್ತಲಿರುವುದು; ತೆರೆಯದ ಬಾಗಿಲುಗಳನ್ನೇ ಮತ್ತೆ ಮತ್ತೆ ಬಡಿದು ತೆರೆಯಬಹುದೇನೋ ಎಂದು ಕಾಯುತ್ತಲೇ ಇರುವುದು - ಇಂತಹ ಯಾವ ತೃಪ್ತಿಯನ್ನೂ ಸಂತೋಷವನ್ನೂ ನೀಡದ ನಿಷ್ಫಲ ಕ್ರಿಯೆಗಳು ಆಯಾಸಕಾರಿ. ಬದಲಾವಣೆಗಳನ್ನು ನಿರಾಕರಿಸಿ ಅಲ್ಲಲ್ಲೇ ಗಿರಕಿ ಹೊಡೆಯುವ ಮನಸ್ಸಿನ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಆಯಾಸಪರಿಹಾರದ ಪರಿಣಾಮಕಾರಿ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT