2018ರಲ್ಲಿ ಸಹಜ ಸಮೃದ್ಧ ಸಂಸ್ಥೆಯ ಬೆಂಬಲದೊಂದಿಗೆ ಆರಂಭವಾದ ಸಂಸ್ಥೆ ಕೃಷಿಕಲಾ. ಸಾಂಪ್ರದಾಯಿಕ ತಳಿಗಳನ್ನು ಉಳಿಸುವುದರೊಂದಿಗೆ ಅವುಗಳಿಗೆ ಹೊಸ ರೂಪ ನೀಡಲು ಇದು ಶ್ರಮಿಸುತ್ತಿದೆ. ವಿನಾಶದ ಅಂಚಿನಲ್ಲಿರುವ 45 ಸೋರೆ ತಳಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದೆ. ಸೋರೆ ಬುರುಡೆಗಳನ್ನು ಬಳಸಿ, ವಿಭಿನ್ನ ಕಲಾಕೃತಿಗಳನ್ನಾಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಿಕೊಟ್ಟಿದ್ದಕ್ಕಾಗಿ ಕೃಷಿಕಲಾಕ್ಕೆ ದೆಹಲಿಯ ಸಮಾಜ ಕಲ್ಯಾಣ ಸಂಸ್ಥೆಯಾದ ಎಂ3ಎಂ ಪ್ರತಿಷ್ಠಾನದ ಪ್ರತಿಷ್ಠಿತ ತ್ರಿವೇಣಿ ಪ್ರಶಸ್ತಿಯೂ ಲಭಿಸಿದೆ. ಪ್ರಶಸ್ತಿಯು ₹ 7 ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
‘ಮುಂದಿನ ದಿನಗಳಲ್ಲಿ ಬೀಜಗಳನ್ನು ಬಳಸಿ ಮ್ಯಾಚಿಂಗ್ ಆಭರಣಗಳನ್ನು ತಯಾರಿಸುವ ಯೋಜನೆಯಿದೆ’ ಎನ್ನುತ್ತಾರೆ ಸೀಮಾ ಪ್ರಸಾದ್. ಬೀಜಗಳನ್ನು ಸಂರಕ್ಷಿಸುವುದರೊಂದಿಗೆ ಗ್ರಾಮೀಣ ಮಹಿಳೆಯರ ಬದುಕಿಗೆ ಸ್ವಾವಲಂಬನೆ ಒದಗಿಸುವುದು ಕೃಷಿಕಲಾದ ಉದ್ದೇಶವಾಗಿದೆ.