ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಹು ಗರ್ಭಧಾರಣೆ ಸಮಸ್ಯೆಯೇ?

ಡಾ. ವಿದ್ಯಾ ವಿ ಭಟ್
Published 6 ಜುಲೈ 2024, 4:20 IST
Last Updated 6 ಜುಲೈ 2024, 4:20 IST
ಅಕ್ಷರ ಗಾತ್ರ
ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಎಂಬುದು ಒಂದು ವೈದ್ಯಕೀಯ ಪ್ರಕ್ರಿಯೆಯಾಗಿದ್ದು, ಇದು ಬಂಜೆತನದ ಸಮಸ್ಯೆ ಇರುವವರಿಗೆ ಮಗುವನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಆಧುನಿಕ ವೈದ್ಯಕೀಯ ವಿಜ್ಞಾನದ ಚಮತ್ಕಾರವಾಗಿದೆ,  ಆಗಾಗ್ಗೆ ಬಹು ಗರ್ಭಧಾರಣೆಯ (ಅವಳಿ, ತ್ರಿವಳಿ ಅಥವಾ ಹೆಚ್ಚು) ಸವಾಲನ್ನು ತಂದೊಡ್ಡುತ್ತದೆ.  

IVF ನ ಪ್ರಾಥಮಿಕ ವಿಷಯಗಳು

IVF ಹಲವಾರು ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ:

1. ಅಂಡಾಶಯದ ಪ್ರಚೋದನೆ: ಮಹಿಳೆಯರು ತಮ್ಮ ಅಂಡಾಶಯದಲ್ಲಿ ಬಹು ಅಂಡಾಣುಗಳನ್ನು ಉತ್ಪಾದಿಸಲು ಔಷಧೋಪಚಾರಗಳನ್ನು ತೆಗೆದುಕೊಳ್ಳುತ್ತಾರೆ.

2. ಅಂಡಾಣು ಹಿಂಪಡೆಯುವಿಕೆ: ವೈದ್ಯರು ಅಂಡಾಶಯದಿಂದ ಈ ಅಂಡಾಣುಗಳನ್ನು ಸಂಗ್ರಹಿಸುತ್ತಾರೆ.

3. ಫಲೀಕರಣ: ಭ್ರೂಣಗಳನ್ನು ರಚಿಸಲು ಪ್ರಯೋಗಾಲಯದಲ್ಲಿ ವೀರ್ಯದಿಂದ ಅಂಡಾಣುಗಳನ್ನು ಫಲವತ್ತಾಗಿಸಲಾಗುತ್ತದೆ.

4. ಭ್ರೂಣ ವರ್ಗಾವಣೆ: ಭ್ರೂಣಗಳು ಗರ್ಭಧಾರಣೆಯಾಗಿ ರೂಪುಗೊಳ್ಳುತ್ತವೆಂಬ ಭರವಸೆಯೊಂದಿಗೆ ಮಹಿಳೆಯ ಗರ್ಭಾಶಯದಲ್ಲಿ ಒಂದು ಅಥವಾ ಹೆಚ್ಚಿನ ಭ್ರೂಣಗಳನ್ನು ಇರಿಸಲಾಗುತ್ತದೆ.

IVF ನಲ್ಲಿ ಬಹು ಗರ್ಭಧಾರಣೆ ಏಕೆ ಸಂಭವಿಸುತ್ತದೆ?

1. ಬಹು ಭ್ರೂಣ ವರ್ಗಾವಣೆ

o ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುವುದಕ್ಕಾಗಿ, ವೈದ್ಯರು ಸಾಮಾನ್ಯವಾಗಿ ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು ಭ್ರೂಣಗಳನ್ನು ವರ್ಗಾಯಿಸುತ್ತಾರೆ. ಏಕೆಂದರೆ ಎಲ್ಲ ಭ್ರೂಣಗಳು ಗರ್ಭಾಶಯದಲ್ಲಿ ಯಶಸ್ವಿಯಾಗಿ ಬೆಳವಣಿಗೆಯಾಗುವುದಿಲ್ಲ. ಹಲವು ಭ್ರೂಣಗಳನ್ನು ವರ್ಗಾಯಿಸುವುದರಿಂದ, ಕನಿಷ್ಠ ಪಕ್ಷ ಒಂದಾದರೂ ಭ್ರೂಣವು ನೆಲೆನಿಂತು ಗರ್ಭಧಾರಣೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದಾಗ್ಯೂ, ಈ ರೀತಿ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಭ್ರೂಣಗಳು ಬೆಳವಣಿಗೆಯಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ, ಇದರ ಪರಿಣಾಮವಾಗಿ ಅವಳಿ ಅಥವಾ ಹೆಚ್ಚಿನ ಶಿಶುಗಳು ರೂಪುಗೊಳ್ಳುತ್ತವೆ.

2. ಸೂಪರ್‌ ಓವುಲೇಷನ್

o IVF ಒಂದು ಬಾರಿಗೆ ಅನೇಕ ಅಂಡಾಣುಗಳನ್ನು ಉತ್ಪಾದಿಸುವುದಕ್ಕಾಗಿ ಅಂಡಾಶಯಗಳನ್ನು ಉತ್ತೇಜಿಸಲು ಔಷಧಿಗಳನ್ನು ಬಳಸುತ್ತದೆ. ನೈಸರ್ಗಿಕ ವಿಧಾನದಲ್ಲಿ, ಮಹಿಳೆಯಲ್ಲಿ ಸಾಮಾನ್ಯವಾಗಿ ಕೇವಲ ಒಂದು ಅಂಡಾಣು ಮಾತ್ರ ಉತ್ಪತ್ತಿಯಾಗುತ್ತದೆ. ಹೆಚ್ಚು ಅಂಡಾಣುಗಳು ಎಂದರೆ ಹೆಚ್ಚು ಭ್ರೂಣಗಳು, ಮತ್ತು ಬಹು ಭ್ರೂಣಗಳನ್ನು ವರ್ಗಾವಣೆ ಮಾಡುವುದರಿಂದ ಯಶಸ್ಸಿನ ಸಾಧ್ಯತೆಯು ಹೆಚ್ಚಾಗುತ್ತದೆ ಆದರೆ ಅದರ ಜೊತೆಗೇ ಬಹು ಗರ್ಭಧಾರಣೆಯ ಸಾಧ್ಯತೆಯೂ ಹೆಚ್ಚಾಗುತ್ತದೆ.

ಬಹು ಗರ್ಭಧಾರಣೆಯ ಅಪಾಯಗಳು

ಅವಳಿ ಅಥವಾ ತ್ರಿವಳಿಗಳನ್ನು ಹೊಂದುವುದು ಸಡಗರದ ಭಾವನೆಯನ್ನು ಉಂಟುಮಾಡಿದರೂ, ಇದು ಅಪಾಯಗಳನ್ನೂ ಹೊಂದಿದೆ:

1. ತಾಯಂದಿರಿಗೆ: ಬಹು ಗರ್ಭಧಾರಣೆಗಳು ಅಧಿಕ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ ಮತ್ತು ಅವಧಿಪೂರ್ವ ಪ್ರಸವದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

2. ಶಿಶುಗಳಿಗೆ: ಬಹು ಗರ್ಭಧಾರಣೆಗಳಿಂದ ಜನಿಸುವ ಶಿಶುಗಳು ಸಾಮಾನ್ಯವಾಗಿ ಅವಧಿಪೂರ್ವವಾಗಿ ಜನಿಸಿರುತ್ತವೆ ಮತ್ತು ಕಡಿಮೆ ಜನನ ತೂಕವನ್ನು ಹೊಂದಿರುತ್ತವೆ, ಇದು ವಿಶೇಷ ಆರೈಕೆಯ ಅಗತ್ಯವಿರುವ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬಹು ಗರ್ಭಧಾರಣೆಯ ಅಪಾಯವನ್ನು ಕಡಿಮೆ ಮಾಡುವುದು

1. ಏಕ ಭ್ರೂಣ ವರ್ಗಾವಣೆ (SET)

ಬಹು ಗರ್ಭಧಾರಣೆಯ ಅಪಾಯವನ್ನು ಕಡಿಮೆ ಮಾಡಲು ಇರುವ ಒಂದು ಮಾರ್ಗವೆಂದರೆ ಒಂದು ಬಾರಿಗೆ ಕೇವಲ ಒಂದೇ ಭ್ರೂಣವನ್ನು ವರ್ಗಾಯಿಸುವುದು. ಈ ವಿಧಾನವು ಅವಳಿ ಅಥವಾ ತ್ರಿವಳಿಗಳ ಸಾಧ್ಯತೆಯನ್ನು ಕಡಿಮೆ ಮಾಡುವುದರ ಜೊತೆಗೇ ಯಶಸ್ವಿ ಗರ್ಭಧಾರಣೆಯ ಉತ್ತಮ ಸಾಧ್ಯತೆಯನ್ನು ಒದಗಿಸುವುದರಿಂದ ಹೆಚ್ಚು ಜನಪ್ರಿಯವಾಗುತ್ತಿದೆ .

2. ಉತ್ತಮ ಭ್ರೂಣದ ಆಯ್ಕೆ

o ಈಗ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಗಳು ವೈದ್ಯರಿಗೆ ವರ್ಗಾವಣೆಗಾಗಿ ಉತ್ತಮ ಗುಣಮಟ್ಟದ ಭ್ರೂಣವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಭ್ರೂಣವನ್ನು ಆಯ್ಕೆ ಮಾಡುವುದರಿಂದ, ಕೇವಲ ಒಂದೇ ಭ್ರೂಣವನ್ನು ವರ್ಗಾಯಿಸಿದರೂ, ಅದು ಬೆಳವಣಿಗೆಯಾಗುವ ಮತ್ತು ಆರೋಗ್ಯಕರ ಗರ್ಭಧಾರಣೆಯಾಗಿ ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಯಶೋಗಾಥೆಗಳು ಮತ್ತು ಸವಾಲುಗಳು

ಅನೇಕ ದಂಪತಿಗಳು ಆರೋಗ್ಯಕರ ಶಿಶುಗಳನ್ನು ಹೊಂದಲು ಏಕ ಭ್ರೂಣ ವರ್ಗಾವಣೆಯನ್ನು ಯಶಸ್ವಿಯಾಗಿ ಬಳಸಿದ್ದಾರೆ. ಅನೇಕ ಭ್ರೂಣಗಳನ್ನು ವರ್ಗಾವಣೆ ಮಾಡುವುದರಿಂದ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಭಾವಿಸಲಾಗಿದೆ, ವಿಶೇಷವಾಗಿ ಅವರು ಹಲವು ಬಾರಿ IVF ಪ್ರಯತ್ನಗಳಲ್ಲಿ ವೈಫಲ್ಯವನ್ನು ಅನುಭವಿಸಿದ್ದರೆ, ಅವರಿಗೆ ಇಂತಹ ಭಾವನೆ ಉಂಟಾಗಿರುತ್ತದೆ.

IVF ನ ಭವಿಷ್ಯ

ಸಂಶೋಧಕರು ಮತ್ತು ವೈದ್ಯರು IVF ತಂತ್ರಗಳನ್ನು ಉತ್ತಮಗೊಳಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು, ಬಹು ಭ್ರೂಣ ವರ್ಗಾವಣೆಯ ಅಗತ್ಯವನ್ನು ಕಡಿಮೆ ಮಾಡುವುದು ಮತ್ತು ಬಹು ಗರ್ಭಧಾರಣೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುವುದು ಇದರ ಗುರಿಗಳಾಗಿವೆ.

(ವೈದ್ಯಕೀಯ ನಿರ್ದೇಶಕರು, ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT