ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಮೆಯ ಹಲವು ಮುಖಗಳು

Last Updated 6 ಮೇ 2019, 20:01 IST
ಅಕ್ಷರ ಗಾತ್ರ

ಕೆಲವರಿಗೆ ಅಂಚೆಚೀಟಿ ಸಂಗ್ರಹಿಸುವುದು ಹವ್ಯಾಸವಾದರೆ, ಮತ್ತೆ ಕೆಲವರಿಗೆ ಹಳೆಯ ನಾಣ್ಯಗಳು, ನೋಟುಗಳು, ಅಪರೂಪದ ಪೆನ್ನುಗಳನ್ನು ಸಂಗ್ರಹಿಸುವ ಹವ್ಯಾಸ. ಹೀಗೆ ವಿಶಿಷ್ಟ ವಸ್ತುಗಳನ್ನು ಸಂಗ್ರಹಿಸುವ ಉತ್ಸಾಹಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕಾಗಿ ಆಗಾಗ್ಗೆ ಪ್ರದರ್ಶನಗಳನ್ನೂ ಏರ್ಪಡಿಸುತ್ತಿರುತ್ತಾರೆ. ಅಂತಹ ‘ಉತ್ಸಾಹಿ ಹವ್ಯಾಸಿ’ಗಳ ಸಾಲಿಗೆ ಸೇರುತ್ತಾರೆ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವೃತ್ತ ಸಹಾಯಕ ನಿರ್ದೇಶಕ (ಉದ್ಯೋಗ ವಿನಿಮಯ ಕೇಂದ್ರ) ಯು.ಎಂ.ಸಿರ್ಸೀಕರ್.

ಸಿರ್ಸೀಕರ್ ಹವ್ಯಾಸವೇ ವಿಶಿಷ್ಟವಾಗಿದೆ. ಏಕೆಂದರೆ, ಅವರು ತಮ್ಮ ವೃತ್ತಿಜೀವನದ ಆರಂಭದಿಂದ ನಿವೃತ್ತಿಯಾಗುವವರೆಗೂ ಕಂಡಂತಹ ದುಡಿಯುವ ಮಾರ್ಗಗಳ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಆ ಚಿತ್ರಗಳ ಸಂಖ್ಯೆ 6 ಸಾವಿರ! ಎಲ್ಲ ಚಿತ್ರಗಳನ್ನೂ ಲ್ಯಾಮಿನೇಷನ್ ಮಾಡಿಸಿದ್ದಾರೆ. ವಿಭಾಗೀಯವಾರು ಜೋಡಿಸಿದ್ದಾರೆ. ಹಸಿವು ನೀಗಿಸಿಕೊಳ್ಳುವ ಚಿತ್ರಗಳು, ವಿದೇಶದಲ್ಲಿನ ಉದ್ಯೋಗಗಳು, ಶಿಲಾಯುಗದ ವೃತ್ತಿಗಳು, ನಿಷೇಧಿತ ವೃತ್ತಿಗಳು.. ಹೀಗೆ ಒಟ್ಟು 43 ವಿಭಾಗಗಳಿವೆ. ಅದರಲ್ಲಿ ಹಸಿವು ನೀಗಿಸಿಕೊಳ್ಳಲು ಮಾಡುವ ಉದ್ಯೋಗ ಹಲವು ಮುಖಗಳ ಚಿತ್ರಗಳನ್ನು ನೋಡಿದಾಗ ಕಣ್ಣಂಚು ಒದ್ದೆ ಯಾಗದಿರದು. ಇನ್ನು ಕೆಲವು ಉದ್ಯೋಗಗಳನ್ನು ಸೂಚಿಸುವ ಚಿತ್ರಗಳನ್ನು ಕಂಡಾಗ ‘ಹೌದಾ, ಹೀಗೂ ದುಡಿಮೆಯ ಮಾರ್ಗವಿದೆಯೇ’ ಎಂದು ನಿಬ್ಬೆರಗಾಗಿಸುತ್ತವೆ. ಕೆಲವು ಚಿತ್ರಗಳಂತೂ ‘ಇದನ್ನು ನಂಬುವುದಕ್ಕೆ ಸಾಧ್ಯವೇ ಇಲ್ಲಪ್ಪ’ ಎಂದೆನಿಸುತ್ತವೆ. ಇಷ್ಟೆಲ್ಲ ಚಿತ್ರಗಳನ್ನು ಸಂಗ್ರಹಿಸಿ, ಲ್ಯಾಮಿನೇಷನ್ ಮಾಡಿಸಲು ತಮ್ಮ ಸ್ವಂತ ಹಣವನ್ನು ಬಳಸಿದ್ದಾರೆ ಸಿರ್ಸೀಕರ್.

ಉದ್ಯೋಗಕ್ಕೆ ಎಷ್ಟೆಲ್ಲ ಮುಖಗಳಿವೆ ಎಂಬುದನ್ನು ಅರಿಯಬೇಕೆಂದರೆ ಸಿರ್ಸೀಕರ್ ಅವರ ಛಾಯಾಚಿತ್ರ ಪ್ರದರ್ಶನ ನೋಡಬೇಕು ಎನ್ನುತ್ತಾರೆ ಚಿತ್ರ ಪ್ರದರ್ಶನ ವೀಕ್ಷಿಸಿದವರು. ಈ ಚಿತ್ರಗಳು ನಮ್ಮ ದೇಶ, ರಾಜ್ಯದ್ದಷ್ಟೇ ಅಲ್ಲದೇ, ದೇಶ, ವಿದೇಶಗಳಲ್ಲಿನ ಉದ್ಯೋಗ ಸಾಧ್ಯತೆ ಗಳನ್ನು ತೆರೆದಿಡುತ್ತದೆ.

‘ವಿದ್ಯಾಭ್ಯಾಸದ ನಂತರ ಮುಂದೇನು’ ಎಂದು ಯೋಚಿಸುವ ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಕರಿಗೂ ಈ ಚಿತ್ರಗಳಲ್ಲಿ ಉದ್ಯೋಗ ಮಾಡುವ ಐಡಿಯಾ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ. ಅದೇ ಕಾರಣಕ್ಕೆ ಸಿರ್ಸೀಕರ್ ಅವರು ಶಾಲಾ– ಕಾಲೇಜುಗಳ ಆವರಣದಲ್ಲಿ ಈ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಾರೆ.

‘ಪ್ರಪಂಚದಲ್ಲಿ ಯಾರೂ ನಿರುದ್ಯೋಗಿಯಾಗ ಬಾರದು. ಅನ್ನ ಸಂಪಾದನೆಯಲ್ಲಿ ತೊಡಗಿಕೊಳ್ಳ ಬೇಕು. ನನ್ನ ಕೆಲಸ ಮುಂದಿನ ಪೀಳಿಗೆಗೆ ಒಂದು ಪ್ರೇರಣೆಯಾಗಬೇಕು. ಇದರಿಂದ ಉತ್ತೇಜನ ಪಡೆಯಬೇಕು. ಪ್ರತಿಯೊಬ್ಬರೂ ದುಡಿಯುವ ದಾರಿಗಳನ್ನು ಹುಡುಕಿಕೊಳ್ಳಬೇಕು ಎಂಬುದುನನ್ನ ಛಾಯಾಚಿತ್ರಗಳ ಮೂಲ ಉದ್ದೇಶ’ ಎನ್ನುತ್ತಾರೆ ಸಿರ್ಸೀಕರ್.

ಅಂದ ಹಾಗೆ, ಸಿರ್ಸೀಕರ್ ಅವರ ಚಿತ್ರ ಪ್ರದರ್ಶನ ರಾಜ್ಯದ ಗಡಿ ದಾಟಿ, ಹೊರರಾಜ್ಯಗಳ ಅನೇಕ ಶಾಲಾ ಕಾಲೇಜುಗಳಲ್ಲೂ ಅನಾವರಣಗೊಂಡಿದೆ. ಸಿರ್ಸೀಕರ್ ಅವರ ಈ ಪ್ರಯತ್ನಕ್ಕೆ ಇನ್ನಷ್ಟು ಬೆಂಬಲ ಸಿಕ್ಕರೆ, ಅವರು ಮತ್ತಷ್ಟು ಪರಿಣಾಮಕಾರಿಯಾಗಿ, ಉದ್ಯೋಗದ ಮುಖಗಳನ್ನು ಜನರಿಗೆ ಪರಿಚಯಿಸಲು ಸಾಧ್ಯವಿದೆ. ಸಿರ್ಸೀಕರ್ ಅವರ ಸಂಪರ್ಕ ಸಂಖ್ಯೆ : 08388-232697/ 9481276460

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT