ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚು ಮಳೆಯ ಅವಾಂತರ...

Last Updated 18 ಜುಲೈ 2018, 19:30 IST
ಅಕ್ಷರ ಗಾತ್ರ

ಅಂದು ಆ ಬಡಪಾಯಿಗಳ ಪಾಡನ್ನು ನೋಡಿ ಜೀವ ಮರುಗಿ, ಜೀವನ ಅದೆಷ್ಟು ದುಸ್ತರ ಎನ್ನಿಸಿಬಿಟ್ಟಿತು. ತನ್ನ ಆಪ್ತರನ್ನು ಕಳೆದುಕೊಂಡಾಗ ಆಗುವ ನೋವು ಅದೆಂತಹದು ಎಂದು ಕಳೆದುಕೊಂಡವರಿಗೆ ಮಾತ್ರ ತಿಳಿಯುತ್ತದೆ. ಅಂದಿನ ಆ ಮನೆಯ ಗೋಳು ಜೀವನವನ್ನೇ ಒಮ್ಮೆ ದ್ವೇಷಿಸುವಂತೆ ಮಾಡಿತು.

ಮಲೆನಾಡಿನಲ್ಲಿ ಹುಟ್ಟಿದ ನನಗೆ ಹುಚ್ಚು ಮಳೆ ಸುರಿಯುವುದು ವಿಚಿತ್ರವೆಂದು ಎನ್ನಿಸುವುದಿಲ್ಲ. ಆದರೆ ಅಂದು ಸುರಿದ ಮಳೆ ಮಾತ್ರ ನನ್ನ ಎದೆಯೊಳಗೊಂದು ಚಿರನೆನಪು ಉಳಿಸಿತು. ಜತೆಗೆ ಜೀವನದ ಪಾಠ ಹೇಳಿಹೋಯಿತು.

ನಮ್ಮೂರಿನ ಪಕ್ಕದಲ್ಲೇ ಇರುವ ಊರಿನಲ್ಲಿ ರಸ್ತೆ ಪಕ್ಕದಲ್ಲಿ ಒಂದು ಗುಡಿಸಲಿತ್ತು. ಅದರಲ್ಲಿ ಅಜ್ಜಿ ಮತ್ತು ಆಕೆಯ ಎಂಟು ವರ್ಷದ ಮೊಮ್ಮಗಳು ವಾಸಿಸುತ್ತಿದ್ದರು. ಅಜ್ಜಿ ದಿನವೂ ಕೂಲಿ ಮಾಡಿ, ಅವರಿವರ ಮನೆಯ ಕೆಲಸ ಮಾಡಿ ಮೊಮ್ಮಗಳನ್ನು ಸಾಕುತ್ತಿತ್ತು. ದಾರಿಯಲ್ಲಿ ನಾವು ಓಡಾಡುವಾಗ ಎಷ್ಟೋ ಬಾರಿ ಯಾವ್ಯಾವುದೋ ಹಣ್ಣುಗಳನ್ನೆಲ್ಲ ಕೊಡುತ್ತಾ, ಪ್ರೀತಿಯಿಂದ ಮಾತಾಡಿಸುತ್ತಾ ನಮ್ಮೆಲ್ಲರ ಪ್ರೀತಿಯ ಅಜ್ಜಿಯಾಗಿತ್ತು. ಅವರಿವರನ್ನು ಕಾಡಿ, ಬೇಡಿ ತೋಟಗಳಿಗೆ ಹೋಗಿ ಅಡಕೆ ಸೋಗೆಯನ್ನು ತಂದು, ತನ್ನ ಗುಡಿಸಲಿಗೆ ಹೊದಿಸಿಕೊಂಡು ಮಳೆಗಾಲದಲ್ಲಿ ಗುಡಿಸಲು ಸೋರದಂತೆ ಹರಸಾಹಸಪಟ್ಟು, ಬದುಕು ನಡೆಸುತ್ತಿತ್ತು.

ಆದರೆ ಅಂದು ಸುರಿದ ಆ ಭಾರೀ ಮಳೆ ಆ ಬಡಪಾಯಿ ಅಜ್ಜಿಗೆ ಇನ್ನೆಂದೂ ಇನ್ನೊಂದು ನಾಳೆಯನ್ನು ಕರುಣಿಸದಂತೆ ಮಾಡಿಬಿಟ್ಟಿತ್ತು. ಏನಾಯಿತೆಂದರೆ, ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಬಿರಾಗಳಿ ಸಹಿತ, ಗುಡುಗು-ಸಿಡಿಲು ಮಳೆ ಸುರಿಯಿತು. ಒಂಥರಾ ಹುಚ್ಚು ಮಳೆ ಎನ್ನಿ. ಬಿರುಗಾಳಿಗೆ ಅದೆಷ್ಟೊ ಮನೆಗಳ ಮೇಲಿನ ಅಡಕೆ ಸೋಗೆ ಕಿತ್ತು, ಮಣ್ಣಿನ ಮನೆಗಳು ಉರುಳಿ, ಅಕ್ಕಪಕ್ಕದಲ್ಲಿದ್ದ ಮರಗಳು ಮನೆಗಳ ಮೇಲೆ ಬಿದ್ದು ಅಪಾರ ಹಾನಿಯಾಗಿತ್ತು. ಆ ಅಜ್ಜಿಯೂ ಕೂಡಾ ಎಂದಿನಂತೆ ತನ್ನ ಮೊಮ್ಮಗಳ ಜೊತೆ ಮಣ್ಣಿನ ಗೋಡೆ ಇಲ್ಲದ, ಬಿದಿರು ತಟ್ಟಿಗಳಿಂದ ಮಾಡಿದ, ಮುರುಕಲು ಗುಡಿಸಲಿನಲ್ಲಿ ದೀರ್ಘ ನಿದ್ರೆಯಲ್ಲಿತ್ತು. ಇದ್ದಕ್ಕಿದ್ದಂತೆ ಆರಂಭವಾದ ಮಳೆ-ಬಿರುಗಾಳಿಗೆ ಮನೆಯ ಸೂರು ಹಾರಿ ಹೋಯಿತು. ಇನ್ನೇನಾಗುತ್ತಿದೆ ಎಂದು ಕಣ್ಣು ಬಿಡುವುದರೊಳಗೆ ಪಕ್ಕದಲ್ಲಿ ಅಜ್ಜಿಯೆ ನೆಟ್ಟು, ಬೆಳೆಸಿದ ಮಾವಿನ ಮರ, ಅವರ ಗುಡಿಸಲ ಮೇಲುರುಳಿತು. ಗುಡಿಸಲೊಳಗಿದ್ದ ಅಜ್ಜಿಯ ಪ್ರಾಣಪಕ್ಷಿ ಹಾರಿ ಹೋಯಿತು. ಆ ಘಟನೆಯಲ್ಲಿ ಮೊಮ್ಮಗಳು ಅದು ಹೇಗೋ ಅಪಾಯದಿಂದ ಪಾರಾದಳು. ಆದರೆ, ಮಳೆ ಆಕೆಯನ್ನು ಅನಾಥವಾಗಿ ಮಾಡಿಹೋಗಿತ್ತು.

ಸ್ವಲ್ಪವೂ ಕರುಣೆಯಿರದೆ ಅಜ್ಜಿ-ಮೊಮ್ಮಗಳನ್ನು ಬೇರ್ಪಡಿಸಿದ ಆ ಮಳೆ ನನ್ನೆದೆಯೊಳಗೆ ಎಂದೂ ಮರೆಯದಂತೆ ಬೇರು ಬಿಟ್ಟಿದೆ. ಯಾವಾಗಲಾದರೂ ಆ ರಸ್ತೆಯಲ್ಲಿ ಹೋಗುವಾಗ ಆ ಅಜ್ಜಿಯ ನೆನಪಾಗಿ, ಮನಸ್ಸು ಆರ್ದ್ರಗೊಳ್ಳುತ್ತದೆ. ಮಳೆಯ ಬಗ್ಗೆ ಮುನಿಸು ಹುಟ್ಟುತ್ತದೆ. ತನ್ನವರೆಂದು ಯಾರೂ ಇರದಿದ್ದ ಆ ಚಿಕ್ಕ ಹುಡುಗಿಯ ಅಂದಿನ ಗೋಳು ನೆನಪಾಗಿ ಈಗಲೂ ಮನಸ್ಸಿಗೆ ತೀವ್ರ ಬೇಸರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT