ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೂ ಗಾಂಧಿಯಾಗಿದ್ದೆ!

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಾನು ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು  ಕಾರ್ಯಕ್ರಮ ಏರ್ಪಡಿಸಿದ್ದರು. ಪುರಾಣ ಪ್ರಸಿದ್ಧಿಯಾದ ಶ್ರೀಕೃಷ್ಣನ ಪಾತ್ರದಿಂದ ಮೊದಲು ಮಾಡಿ ಆಧುನಿಕ ಯುಗದ ಡಾ. ರಾಜ್‌ಕುಮಾರ್‌ವರೆಗಿನ ಮಹಾನ್‌ ಸಾಧಕ ವ್ಯಕ್ತಿತ್ವಗಳ ಪಾತ್ರಗಳನ್ನು ವೇದಿಕೆ ಮೇಲೆ ಪರಿಚಯಿಸುವುದಾಗಿತ್ತು. ಅಂತಹ ಕಾರ್ಯಕ್ರಮದಲ್ಲಿ ನನಗೆ ಸಿಕ್ಕ ಪಾತ್ರ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರದ್ದಾಗಿತ್ತು.

ಆ ಸಂದರ್ಭದಲ್ಲಿ ನನಗಾದ ಖುಷಿ ಅಷ್ಟಿಷ್ಟಲ್ಲ! ಪಾತ್ರ ಸಿಕ್ಕಿದ್ದಕ್ಕಲ್ಲ, ‘ನಿನ್ನ ಮುಖ ಗಾಂಧೀಜಿ ಮುಖ ಇದ್ದಹಾಗೆ ಇದೆ. ಅದ್ಕೇ ನೀ ಗಾಂಧೀಜಿ ಪಾತ್ರ ಮಾಡು’ ಎಂಬ ನನ್ನ ಮುಖಲಕ್ಷಣದ ವಿಶೇಷತೆ ಬಗ್ಗೆ ನಮ್ಮ ಮುಖ್ಯ ಗುರುಗಳು ಹೇಳಿದ ವಿಶೇಷೋಕ್ತಿಗೆ! ಆವರೆಗೂ ಅಂತಹ ವಿಶೇಷ ಲಕ್ಷಣವನ್ನು ನನ್ನ ಮುಖದಲ್ಲಿ ಗುರುತಿಸದ ನಾನು, ಮನೆಗೆ ಬಂದು ಹತ್ತಾರು ಬಾರಿ ಕನ್ನಡಿ ನೋಡಿ ತುಲನಾ ಪರೀಕ್ಷೆ ನಡೆಸಿದ್ದೆ. ಗಾಂಧೀಜಿಯವರ ಇಳಿವಯಸ್ಸಿನ ಭಾವಚಿತ್ರವೊಂದರ ಮುಖಚಹರೆಯನ್ನು ನೋಡಿ, ನಮ್ಮ ಮುಖ್ಯ ಗುರುಗಳು ಆಡಿದ ನನ್ನ ಬಗೆಗಿನ ವಿಶೇಷತೆಯನ್ನು ನನ್ನೊಳಗೆ ಸಮರ್ಥಿಸಿಕೊಂಡಿದ್ದೆ.

ವೇದಿಕೆಯಲ್ಲಿ, ಗಾಂಧೀಜಿಯವರ ವೇಷಧಾರಿಯಾಗಿ ಅವರ ಒಂದು ಸಂಭಾಷಣೆಯನ್ನು ಅಭಿನಯಿಸುತ್ತ ಹೇಳಬೇಕಿತ್ತು. ಆ ಸಂಭಾಷಣೆ ಹೀಗಿತ್ತು, ‘ಒಂದು ಲೋಟ ನೀರು ಕೊಟ್ಟವರಿಗೆ, ಒಂದ್ಹೊತ್ತು ಊಟ ಕೊಡು. ಒಂದ್ಹೊತ್ತು ಊಟ ಕೊಟ್ಟವರಿಗೆ, ಒಂದು ದಿನ ಆಶ್ರಯ ಕೊಡು. ಒಂದು ದಿನ ಆಶ್ರಯ ಕೊಟ್ಟವರಿಗೆ, ಕೊನೆಯವರೆಗೂ ನಿನ್ನ ಹೃದಯದಲ್ಲಿ ಜಾಗ ಕೊಡು’ ಈ ಸಂಭಾಷಣೆಯಲ್ಲಿನ, ಗಾಂಧೀ ಹೇಳಿದ ಉಪಕಾರಕ್ಕೆ ಪ್ರತ್ಯುಪಕಾರದ ತತ್ವ ಮತ್ತು ಉಪಕಾರಿಯ ಕೃತಜ್ಞತಾಭಾವದ ಸಂದೇಶಗಳ ಸಮ್ಮಿಳತೆ ಆ ಪಾತ್ರಾಭಿನಯಕ್ಕೆ ಮಾತ್ರ ಸೀಮಿತವಾಗಲಿಲ್ಲ. ನನ್ನ ಹೃದಯಾಂತರಾಳದ ವ್ಯಕ್ತಿತ್ವಕ್ಕೂ ವ್ಯಾಪಿಸಿತು.

ಗಾಂಧೀಜಿಯವರು ಸಮಯಕ್ಕೆ ತುಂಬಾ ಪ್ರಾಶಸ್ತ್ಯ ಕೊಡುತ್ತಿದ್ದರು. ಅದಕ್ಕೆ ಪೂರಕವಾಗಿಯೇ ಅವರು ನಡೆಯುವಾಗ ತುಂಬಾ ವೇಗವಾಗಿ ನಡೆಯುತ್ತಿ ದ್ದರು ಎಂದು ಅವರ ಚುರುಕುತನದ ಬಗೆಗಿನ ವಿಚಾರಗಳನ್ನು ತಿಳಿಯಪಡಿಸಿದ್ದರು. ಅಲ್ಲದೇ ‘ನೀನು ಕೂಡಾ ಗಾಂಧೀಜಿ ಪಾತ್ರದ ಪಕ್ವತೆಗೆ ಈ ಅಂಶವನ್ನು ಅಭಿನಯದಲ್ಲಿ ಅಚ್ಚುಕಟ್ಟಾಗಿ ಅನುಸರಿಸಲೇಬೇಕು’ ಎಂಬ ಆಜ್ಞೆ ವಿಧಿಸಿದ್ದರು. ತಾಲೀಮು ನಡೆಸುವಾಗ ಒನ್‌ಮೋರ್‌ ಟೇಕ್‌ಗಳ ನಂತರ ಪ್ರಯಾಸಪಟ್ಟು ತಯಾರಾಗಿ, ಒಂದು ಮಟ್ಟಿಗೆ ಅಭಿನಯಿಸಿದ್ದೆ.

ಅಹಿಂಸಾ ತತ್ವದ ಪ್ರತಿಪಾದಕರಾಗಿ, ಸತ್ಯಾನ್ವೇಷಣೆಯ ಪರಿಪಾಲಕರಾಗಿ, ತಮ್ಮ ಉನ್ನತ ವಿಚಾರಧಾರೆಗಳಿಂದ ಬಾಳಿ, ಇಡೀ ವಿಶ್ವವೇ ಅವರೆಡೆಗೆ ನೋಡುವ ಹಾಗೆ ಮಾಡಿದ ಮಹಾತ್ಮಗಾಂಧಿ ಬಗ್ಗೆ ತುಂಬಿದ ಹೆಮ್ಮೆ ನನ್ನದು! ಆದರೆ ಆ ನನ್ನ ಪಾತ್ರಾಭಿನಯದ ತಯಾರಿಯಲ್ಲಿ ಅವರ ನಡಿಗೆಯನ್ನು ಅನುಕರಿಸಲು ನಾ ಪಟ್ಟ ಪ್ರಯಾಸದಂತೆ, ಆ ಮಹಾತ್ಮ ಸಾರಿ ಹೋದ ಉದಾತ್ತ ತತ್ವಗಳು, ಆದರ್ಶ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅನುಸರಿಸುವಲ್ಲಿ ತುಂಬಾ ಪ್ರಯಾಸಪಡುತ್ತಿರುವುದು, ಅದು ಜನಕ್ಕೂ ಅನ್ವಯಿಸುವುದು ಶೋಚನೀಯ! ಆ ಮಹಾತ್ಮನ ಗ್ರಾಮ ಸ್ವರಾಜ್ಯದ ‘ಕನಸಿನ ಭಾರತ’ ನಿರ್ಮಾಣದ ನನಸಿನ ಯಾತ್ರೆ, ಮಂದಗತಿಯಲ್ಲಿ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT