ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿವೆ ಇನ್ನಷ್ಟು ಹೊಸ ಕಾರುಗಳು

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೋಂಡಾ ಸಿಟಿ ಡೀಸೆಲ್‌
ಬಿಡುಗಡೆ ದಿನಾಂಕ– ಜನವರಿ 2014
ಅಂದಾಜು ಬೆಲೆ– ರೂ. 7.5ರಿಂದ 11.5 ಲಕ್ಷ

ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಮಾದರಿಯ ಕಾರಿನ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ದೆಹಲಿಯಲ್ಲಿ ನವೆಂಬರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕಾರಿನ ಬಿಡುಗಡೆಯ ಸೂಚನೆಯನ್ನು ಕಂಪೆನಿ ನೀಡಿತ್ತು. ಅದೀಗ ಜನವರಿಯಲ್ಲಿ ನಿಜವಾಗಲಿದೆ. ಈಗಿರುವ ಹೋಂಡಾ ಕಾರಿನ ಒಳ ಹಾಗೂ ಹೊರ ಭಾಗದಲ್ಲಿ ಸಾಕಷ್ಟು ಬದಲಾವಣೆ ತರುವ ಮೂಲಕ ಡೀಸೆಲ್‌ ಮಾದರಿಯ ಹೋಂಡಾ ಸಿಟಿ ಇನ್ನೇನು ಕೆಲವೇ ದಿನಗಳಲ್ಲಿ ಲಭ್ಯ.

ಈ ಬಾರಿ ಬಿಡುಗಡೆ ಮಾಡುತ್ತಿರುವ ಹೋಂಡಾ ಸಿಟಿಯಲ್ಲಿ ಗಮನಾರ್ಹ ಅಂಶವೆಂದರೆ 1.5ಲೀ ಸಾಮರ್ಥ್ಯದ ಐ–ಡಿಟೆಕ್‌ ಡೀಸೆಲ್‌ ಎಂಜಿನ್‌ ಅಳವಡಿಸಲಾಗಿದೆ. ಅಮೇಜ್‌ನಂತೆಯೇ 98 ಬಿಎಚ್‌ಪಿ ಹಾಗೂ 200 ಎನ್‌ಎಂ ಟಾರ್ಕ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಇದಕ್ಕಿರಲಿದೆ. ಡೀಸೆಲ್‌ ಹೋಂಡಾ ಸಿಟಿಯಲ್ಲಿ ಐದು ಸ್ಪೀಡ್‌ನ ಮ್ಯಾನ್ಯುಯಲ್‌ ಗೇರ್‌ಬಾಕ್ಸ್ ಹೊಂದಿದೆ.

ಮತ್ತೊಂದೆಡೆ ಪೆಟ್ರೋಲ್‌ ಎಂಜಿನ್‌ ಸಿಟಿ ಕೂಡಾ ಲಭ್ಯ. ಇದರಲ್ಲಿ 1.5 ಲೀ. ಐ–ವಿಟೆಕ್‌ ಎಂಜಿನ್‌ ಅಳವಡಿಸಲಾಗಿದೆ. 116 ಬಿಎಚ್‌ಪಿ ಹಾಗೂ 146ಎನ್‌ಎಂ ಟಾರ್ಕ್‌ ಉತ್ಪಾದನೆ ಮಾಡುವುದು ಇದರ ಸಾಮರ್ಥ್ಯ. ಪೆಟ್ರೋಲ್‌ ಮಾದರಿಯ ಕಾರಿನಲ್ಲಿ ಐದು ಸ್ಪೀಡ್‌ನ ಮ್ಯಾನ್ಯುಯಲ್‌ ಹಾಗೂ ಆಟೊಮ್ಯಾಟಿಕ್‌ ಗೇರ್‌ಬಾಕ್ಸ್‌ ಲಭ್ಯ. ಹೋಂಡಾ ಸಿಟಿಯಲ್ಲಿ ಈಗಾಗಲೇ ಇ, ಎಸ್‌ ಹಾಗೂ ವಿ ಎಂಬ ಮಾದರಿಗಳಿವೆ. ಆದರೆ ಹೊಸ ಹೋಂಡಾ ಸಿಟಿಯಲ್ಲಿ ವಿಎಕ್ಸ್‌ ಎಂಬ ನೂತನ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಎಂಜಿನ್‌ ಹಾಗೂ ಗೇರ್‌ ಬಾಕ್ಸ್‌ನಲ್ಲಿಯ ಆಯ್ಕೆಗಳೂ ಲಭ್ಯ.

ಹೊಸ ಹೋಂಡಾ ಸಿಟಿಯ ಬುಕ್ಕಿಂಗ್‌ಗಳು ಈಗಾಗಲೇ ಆರಂಭವಾಗಿವೆ ಎಂಬ ಸುದ್ದಿ ಇದೆ. ಈ ಬಾರಿ ಸಿಟಿ ಮಾದರಿ ಕಾರು ಬಹುತೇಕ ಸ್ಥಳೀಯ ಬಿಡಿ ಭಾಗಗಳನ್ನೇ ಬಳಸಿಕೊಂಡು ಸಿದ್ಧವಾಗಿದೆ. ಬೇರೆ ರಾಷ್ಟ್ರಗಳಿಗೂ ಇಲ್ಲಿಂದ ರಫ್ತಾಗಲಿದೆ. ಇದರ ಬೆಲೆ ರೂ. 7.5ಲಕ್ಷದಿಂದ 11.5ಲಕ್ಷದವರೆಗೂ ಇರಲಿದೆ.

ಹೋಂಡಾ ತನ್ನ ಸಿಟಿ ಮಾದರಿಯ ಮೂಲಕ ರಿನಾಲ್ಟ್‌ ಸ್ಕಾಲಾ, ಫೋರ್ಡ್‌ ಫಿಯೆಸ್ಟಾ, ಹ್ಯುಂಡೈ ವರ್ನಾ, ಸ್ಕೊಡಾ ರ್ಯಾಗಪಿಡ್, ಫೋಕ್ಸ್‌ ವ್ಯಾಗನ್‌ ವೆಂಟೊಗೆ ಪ್ರತಿಸ್ಪರ್ಧೆ ನೀಡಲಿದೆ ಎನ್ನುವುದು ಮಾರುಕಟ್ಟೆ ಪಂಡಿತರ ಲೆಕ್ಕಾಚಾರ. ಹೋಂಡಾ ಡೀಸೆಲ್‌ ಎಂಜಿನ್‌ ಇರುವ ಸಿಟಿಯನ್ನು ಎಸ್‌, ವಿ ಹಾಗೂ ವಿಎಕ್ಸ್‌ ಮಾದರಿಯಲ್ಲಿ ಮಾತ್ರ ನೀಡಲಿದೆ. ಇವುಗಳು ಪೆಟ್ರೋಲ್‌ ಎಂಜಿನ್‌ ಕಾರುಗಳಿಗಿಂತ ಒಂದು ಲಕ್ಷ ರೂಪಾಯಿ ದುಬಾರಿಯಾಗಿರಲಿವೆ.

ಡಟ್ಸನ್‌ ಗೊ
ಬಿಡುಗಡೆ ದಿನಾಂಕ– ಫೆಬ್ರುವರಿ 2014
ಅಂದಾಜು ಬೆಲೆ– ರೂ. 2.5ರಿಂದ 5 ಲಕ್ಷ

ಡಟ್ಸನ್‌ ಗೊ ಎಂದರೆ ಹೊಸ ಕಂಪೆನಿ ಎಂದೆನಿಸಬಹುದು. ಆದರೆ ಇದರ ಮೂಲ ನಿಸ್ಸಾನ್‌. ವಿ ಎಂಬ ಮಾದರಿಯ ಮೇಲೆ ನಿರ್ಮಿಸಲಾಗಿರುವ ಡಟ್ಸನ್‌ ಗೊ ಕಾರು ನಿಸ್ಸಾನ್‌ ಮೈಕ್ರಾ ಪುಟ್ಟ ಕಾರನ್ನು ಬಹುವಾಗಿ ಹೋಲುತ್ತದೆ. ಅಚ್ಚರಿಯ ಸಂಗತಿ ಎಂದರೆ ಮೂರು ದಶಕಗಳ ನಂತರ ಮರು ಹುಟ್ಟು ಪಡೆದ ಕಾರು ಇದು.

ಕಡಿಮೆ ಬೆಲೆಯ ಸಣ್ಣ ಕಾರು ಡಟ್ಸನ್‌ ಗೊ ಕಾರು ಮೊದಲ ನೋಟದಲ್ಲೇ ಸೆಳೆಯುವಂತಹ ಕೆಲವೊಂದು ಗುಣಗಳನ್ನು ಹೊಂದಿದ್ದರೂ ವೆಚ್ಚ ಕಡಿತಗೊಳಿಸುವ ಸಲುವಾಗಿ ಬಹಳಷ್ಟು ಹಲವು ಖರ್ಚುಗಳಿಗೆ ಕಡಿವಾಣ ಹಾಕಲಾಗಿದೆ. ಹೆಕ್ಸಾಗನಲ್‌ ಹನಿಕಾಂಬ್‌ ಗ್ರಿಲ್‌, ಇಟಿಯೋಸ್‌ನಂತೆ ಒಂದು ವೈಫರ್‌, ದೇಹದ ಬಣ್ಣದ ಮಿರರ್‌ಗಳು ಇಲ್ಲ, ಫಾಗ್‌ ಲ್ಯಾಂಪ್‌ ಇಲ್ಲ, ಆದರೆ 13 ಇಂಚುಗಳ ಸ್ಟೀಲ್‌ ವೀಲ್‌ ಕಾರಿಗೆ ಕೊಂಚ ಕಡಿಮೆ ಎನಿಸುತ್ತದೆ. ಒಟ್ಟಾರೆಯಾಗಿ ನಿಸ್ಸಾನ್‌ ಮೈಕ್ರಾದಂತೆ ಒಮ್ಮೆ ಎನಿಸಿದರೂ, ಕೆಲವೊಮ್ಮೆ ಸ್ಕೊಡಾ ಫ್ಯಾಬಿಯಾದಂತೆ ಕಂಡು ಅಚ್ಚರಿ ಮೂಡಿಸುತ್ತದೆ. ಹಿಂಬದಿಯಿಂದ ಮಾರುತಿ 800 ನೋಡಿದಂತೆನಿಸುತ್ತದೆ. ಡಟ್ಸನ್‌ ಗೊ ಕಾರಿನಲ್ಲಿ ಮೂರು ಸಿಲಿಂಡರ್‌ ಹೊಂದಿರುವ 1.2 ಲೀ. ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ನಿಂದ ಈ ಕಾರು ಚಲಿಸಲಿದೆ. 76 ಅಶ್ವಶಕ್ತಿ ಹಾಗು 104ಎನ್‌ಎಂ ಟಾರ್ಕ್‌ ಉತ್ಪತ್ತಿ ಮಾಡಲಿರುವ ಈ ಕಾರು ಇಂಧನ ಕ್ಷಮತೆಯಲ್ಲಿ ಮೈಕ್ರಾಗಿಂತ ಉತ್ತಮ ಎಂಬ ಲೆಕ್ಕಾಚಾರವೂ ಇದೆ.

ಮುಂದಿನ ಚಕ್ರಗಳ ಮೂಲಕ ಚಲಿಸುವುದರಿಂದ ಆರಂಭಿಕ ಪಿಕಪ್‌ ಉತ್ತಮವಿರಬಹುದು. ಭಾರತದ ವಾಹನ ಪ್ರಪಂಚದಲ್ಲಿ ರಿನೊ–ನಿಸ್ಸಾನ್‌ನ ಆರಂಭಿಕ ಹಂತದ ಕಾರಾಗಿರುವ ಡಟ್ಸನ್‌ ಗೊ, ಟಾಟಾ ನ್ಯಾನೊ, ಮಾರುತಿ ಸುಜುಕಿ ಆಲ್ಟೊ 800, ಆಲ್ಟೊ ಕೆ10, ಷವರ್ಲೆ ಸ್ಪಾರ್ಕ್‌, ಹ್ಯುಂಡೈ ಇಯಾನ್‌ಗೆ ಸ್ಪರ್ಧೆ ನೀಡಲಿದೆ.

ಹ್ಯುಂಡೈ ಗ್ರ್ಯಾಂಡ್‌ಐ10 ಡೀಸೆಲ್‌ ಎಟಿ
ಬಿಡುಗಡೆ ದಿನಾಂಕ– ಡಿಸೆಂಬರ್‌ 2013
ಅಂದಾಜು ಬೆಲೆ– ರೂ. 6.75ರಿಂದ 7.5 ಲಕ್ಷ

ಕೊರಿಯಾದ ಯಶಸ್ವಿ ಕಾರು ತಯಾರಿಕಾ ಕಂಪೆನಿ ಹ್ಯುಂಡೈ ಇತ್ತೀಚೆಗೆ ಬಿಡುಗಡೆ ಮಾಡಿದ ಗ್ರ್ಯಾಂಡ್ ಐ10 ಕಾರು ಕೇವಲ 20 ದಿನಗಳಲ್ಲಿ ಹತ್ತು ಸಾವಿರ ಬುಕ್ಕಿಂಗ್‌ ಪಡೆದು ದಾಖಲೆ ನಿರ್ಮಿಸಿದೆ. ಐ10 ಹಾಗೂ ಐ20 ಎಂಬ ಎರಡು ಮಾದರಿಯನ್ನು ಹೋಲುವ ಈ ಕಾರಿನೊಳಗೀಗ ಡೀಸೆಲ್‌ ಎಂಜಿನ್‌ ಕೂರಲಿದೆ.

ಹ್ಯುಂಡೈ ಗ್ರ್ಯಾಂಡ್ ಐ10ಎಟಿ 1.1 ಲೀ. ಸಾಮರ್ಥ್ಯದ ಮೂರು ಸಿಲಿಂಡರ್‌ಗಳ ಡೀಸೆಲ್‌ ಎಂಜಿನ್‌ ಅಳವಡಿಸಲಿದೆ. ಇದು 70 ಅಶ್ವಶಕ್ತಿ ಹಾಗೂ 160 ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲದು. ಮುಂಭಾಗದ ಚಕ್ರಗಳ ಮೂಲಕ ಚಲಿಸುವ ಈ ಕಾರಿಗೆ ನಾಲ್ಕು ಗೇರ್‌ಗಳುಳ್ಳ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ರೀತಿಯ ಸೌಲಭ್ಯವನ್ನು ಈಗಾಗಲೇ ಐ10ನಿಂದ ಆರಂಭಿಸಿ ವರ್ನಾ ಡೀಸೆಲ್‌ ಮಾದರಿಯ ಕಾರಿನಲ್ಲೂ ಅಳವಡಿಸಲಾಗಿದೆ. ಗ್ರ್ಯಾಂಡ್ ಐ10 ಕಾರಿನ ಡೀಸೆಲ್‌ ಮಾದರಿಯ ಬೆಲೆ ಪೆಟ್ರೋಲ್‌ ಕಾರಿಗಿಂತ ಅಂದಾಜು ಒಂದು ಲಕ್ಷ ರೂಪಾಯಿಯಷ್ಟು ಹೆಚ್ಚಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದೇ ಮಾದರಿಯನ್ನು ಐ20ಯಲ್ಲೂ ಅಳವಡಿಸುವ ಸಾಧ್ಯತೆ ಇದೆ.

ಜೀಪ್‌ ಗ್ರ್ಯಾಂಡ್ ಚೆರೊಕೀ
ಬಿಡುಗಡೆ ದಿನಾಂಕ– ಮಾರ್ಚ್‌ 2014
ಅಂದಾಜು ಬೆಲೆ– ರೂ. 25ರಿಂದ 30ಲಕ್ಷ

ಜಗತ್ತಿನ ಪ್ರತಿಷ್ಠಿತ ಬ್ರಾಂಡ್‌ಗಳಲ್ಲಿ ಒಂದಾದ ಜೀಪ್‌, ತನ್ನ ಮೊದಲ ಹೆಜ್ಜೆಯನ್ನು ಭಾರತದಲ್ಲಿ ಇಡುತ್ತಿದೆ. ಹಲವು ದಶಕಗಳಿಂದ ಜೀಪ್‌ ಎಂಬ ಬ್ರಾಂಡ್‌ ಹೆಸರು ಸ್ಥಿರವಾಗಿರಲು ಇದರ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯೇ ಕಾರಣ. ಇದೀಗ ಫಿಯೆಟ್‌ ಕಂಪೆನಿ ಜೀಪ್‌ ಮಾದರಿಯ ವಿಲಾಸಿ ಎಸ್‌ಯುವಿಗಳನ್ನು ಭಾರತದಲ್ಲಿ ಪರಿಚಯಿಸುತ್ತಿದೆ. ಅದರ ಹೆಸರೇ ಚೆರೊಕೀ. ಎರಡು ಸಾಲಿನ ಈ ಎಸ್‌ಯುವಿ ಬಿಎಂಡಬ್ಲೂ ಎಕ್ಸ್3, ಆಡಿ ಕ್ಯೂ5 ಹಾಗೂ ಲ್ಯಾಂಡ್‌ ರೋವರ್‌ ಡಿಸ್ಕವರಿ 4ಗೆ ಪ್ರಬಲ ಪ್ರತಿಸ್ಪರ್ಧಿ. ಭಾರತೀಯ ಮಾರುಕಟ್ಟೆಗೆ ಸಕಾಲದಲ್ಲಿ ಕಾಲಿಡುತ್ತಿರುವ ಗ್ರ್ಯಾಂಡ್‌ ಚೆರೊಕೀ 3ಲೀ. ವಿ6 ಡೀಸೆಲ್‌ ಎಂಜಿನ್‌ ಹೊಂದಿದೆ. 237 ಅಶ್ವಶಕ್ತಿ ಹಾಗೂ 549ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲ ಸಾಮರ್ಥ್ಯ ಇದರದ್ದು. ಹೀಗೆ ಉತ್ಪಾದನೆಯಾದ ಶಕ್ತಿಯನ್ನು ನಾಲ್ಕೂ ಚಕ್ರಗಳಿಗೆ ಏಕಕಾಲದಲ್ಲಿ ಪೂರೈಸಲಿದೆ.

ಇದೇ ಮಾದರಿಯಲ್ಲಿ 470 ಅಶ್ವಶಕ್ತಿಯ 6.4 ಲೀ. ಪೆಟ್ರೋಲ್‌ ವಿ8 ಎಂಜಿನ್‌ ಚೆರೊಕೀ ಕೂಡಾ ಲಭ್ಯ. ಎಲೆಕ್ಟ್ರಿಕ್‌ ಸ್ಟಿಯರಿಂಗ್‌ನಂತೆ ಎಲೆಕ್ಟ್ರಿಕ್‌ ಪವರ್‌ ಸಸ್ಪೆನ್ಷನ್‌ ಕೂಡಾ ಅಳವಡಿಸಲಾಗಿದೆ. ಇದರಲ್ಲಿ ಅಳವಡಿಸಿರುವ ತಂತ್ರಾಂಶದಿಂದ ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ಬಗೆಬಗೆಯ ರಸ್ತೆಗಳಿಗೆ ಬೇಕಾದಂತೆ ಕಾರಿನ ಗುಣವನ್ನು ಹೊಂದಿಸಿಕೊಳ್ಳಬಹುದಾಗಿದೆ. ಈ ರೀತಿಯ ವ್ಯವಸ್ಥೆ ಈಗ ಲ್ಯಾಂಡ್‌ ರೊವರ್‌ನಲ್ಲೂ ಟೆರೈನ್‌ ರೆಸ್ಪಾನ್ಸ್‌ ಸಿಸ್ಟಂ ಎಂದಿದೆ.

ಯುರೋಪ್‌ ಮಾರುಕಟ್ಟೆಯಲ್ಲಿ ಎಕ್ಸ್‌ ಶೋರೂಂ ಬೆಲೆ ರೂ. 34 ಲಕ್ಷ ಇದೆ. ಆದರೆ ಇದು ಭಾರತದಲ್ಲಿ ಹೇಗೆ ಬದಲಾಗಲಿದೆ ಎಂದು ಕಾದು ನೋಡಬೇಕಿದೆ. ಇಷ್ಟೆಲ್ಲಾ ಸೌಲಭ್ಯವಿರುವ ಗ್ರ್ಯಾಂಡ್‌ ಚೆರೊಕೀ 2014ರ ಮಾರ್ಚ್‌ ವೇಳೆಗೆ ಭಾರತದ ರಸ್ತೆಗಿಳಿಯಲಿದೆ ಎಂಬ ಸುದ್ದಿ ಇದೆ.

ಫೋರ್ಸ್‌ ಒನ್‌ 4X4
ಬಿಡುಗಡೆ ದಿನಾಂಕ– ಡಿಸೆಂಬರ್‌ 2013
ಅಂದಾಜು ಬೆಲೆ– ರೂ. 12ರಿಂದ 13ಲಕ್ಷ

ಫೋರ್ಸ್‌ ಕಂಪೆನಿ ತನ್ನ ಒನ್‌ ಮಾದರಿಯ ಎಸ್‌ಯುವಿ ಮೇಲೆ ಸಾಕಷ್ಟು ನಂಬಿಕೆ ಇಟ್ಟಂತಿದೆ. ಉತ್ತಮ ಹ್ಯಾಂಡಲಿಂಗ್‌ ಹಾಗೂ ಹೆಚ್ಚು ಆರಾಮ ನೀಡುವ ಒನ್‌ ಮಾದರಿಯನ್ನು ಮೇಲ್ದರ್ಜೆಗೆ ಏರಿಸಿ ಇದೀಗ ಬಿಡುಗಡೆ ಮಾಡುವ ಹೊಸ್ತಿಲಲ್ಲಿದೆ.

ಡ್ಯಾಮ್ಲಿಯರ್‌ (ಬೆಂಜ್‌ ಜತೆ ಸೇರಿಕೊಂಡು ಭಾರತ್‌ ಬೆಂಜ್‌ ಎಂಬ ಟ್ರಕ್‌ ನಿರ್ಮಿಸುತ್ತಿರುವ ಜರ್ಮನ್‌ ಕಂಪೆನಿ) ಕಂಪೆನಿ ಸಿದ್ಧಪಡಿಸಿರುವ 2.2 ಲೀ. ಕಾಮನ್‌ ರೈಲ್‌ ಎಂಜಿನ್‌ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. 141 ಅಶ್ವಶಕ್ತಿ ಉತ್ಪಾದಿಸುವ ಈ ಕಾರು ಅಧಿಕ ಶಕ್ತಿ ಹಾಗೂ ಟಾರ್ಕ್‌ ಉತ್ಪಾದನೆ ಮಾಡಬಲ್ಲದು. ಈ ಹಿಂದೆ ನಾಲ್ಕೂ ಚಕ್ರಗಳ ಮೂಲಕ ಚಲಿಸುವ ಸಾಮರ್ಥ್ಯದ ಕೊರತೆಯನ್ನು ಈಗ ನೀಗಿಸಲಾಗಿದೆ. ಇದಕ್ಕಾಗಿ ಬೋರ್ಗ್‌ ಅಂಡ್‌ ವಾರ್ನೆರ್‌ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಚಾಲಕ ತನ್ನ ಅನುಕೂಲಕ್ಕೆ ತಕ್ಕಂತೆ ನಾಲ್ಕು ಅಥವಾ ಎರಡು ಚಕ್ರಗಳ ಚಲನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರ ಮೂಲಕ ಫೋರ್ಸ್‌ ಒನ್‌ ಪರಿಪೂರ್ಣ 4X4  ಕಾರು ಆಗಲಿದೆ.

ಈ ವರ್ಷಾಂತ್ಯದ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರೀಕ್ಷೆ ಮಾಡಬಹುದಾದ ಫೋರ್ಸ್‌ ಒನ್‌ 4X4 ಕಾರಿನ ಬೆಲೆ ರೂ. 12ರಿಂದ 13ರ ಆಸುಪಾಸಿನಲ್ಲಿ ಇರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT