ಸಮಾನ ಉದ್ಯೋಗಾವಕಾಶಗಳು, ರಾಜಕಾರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ, ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳು- ಇವೆಲ್ಲವನ್ನೂ ಪುರುಷರಿಗೆ ಸರಿಸಮನಾಗಿ ಮಹಿಳೆಯರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳು ಮತ್ತು ಚಳವಳಿಗಳಿಗೆ ಒಂದು ತಾತ್ವಿಕ ರೂಪವನ್ನು `ಸ್ತ್ರೀವಾದ~ ನೀಡುತ್ತದೆ. ಆದರೆ, ಈಚಿನ ದಿನಗಳಲ್ಲಿ ಸ್ತ್ರೀವಾದ ಎನ್ನುವುದು ಕ್ಲೀಷೆಯಾಗಿದೆಯೇ? ಅದೊಂದು ತೋರಿಕೆಯ ಒಣ ಸಿದ್ಧಾಂತವಾಗಿ ಬದಲಾಗಿದೆಯೇ? ಕೆಲವೇ ಮಹಿಳೆಯರ ಬೌದ್ಧಿಕ ಪ್ರದರ್ಶನಕ್ಕದು ಒಂದು ಆಭರಣವಾಗಿ ಪರಿಣಮಿಸಿದೆಯೇ?

ಸಾಮಾಜಿಕ ಅಸಮಾನತೆ ವ್ಯಾಪಕವಾಗಿದ್ದ ಸಂದರ್ಭದಲ್ಲಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸ್ತ್ರೀವಾದ ಅಗತ್ಯವಾಗಿತ್ತು ನಿಜ. ಆದರೆ, ಕಾಲದ ಬದಲಾವಣೆಗಳಿಗೆ ತಕ್ಕಂತ ಸ್ತ್ರೀವಾದದಲ್ಲಿ ಎಷ್ಟರಮಟ್ಟಿಗೆ ಬದಲಾವಣೆಗಳಾಗಿದೆ ಎನ್ನುವುದನ್ನು ಸ್ತ್ರೀವಾದದ ಮೀಮಾಂಸಕರು ಗಮನಿಸಲಿಕ್ಕೆ ಹೋದಂತಿಲ್ಲ. ಹಾಗೆ ನೋಡಿದರೆ ಹೊಸ ತಲೆಮಾರಿನ ಜಾಣೆಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಈ ವಯ್ಯಾಕರಣಿಗಳು ಯಾವುದೇ ಪ್ರಯತ್ನ ನಡೆಸಿಲ್ಲ. ಯಾವುದೇ ಸಿದ್ಧಾಂತ ಕಾಲಕಾಲಕ್ಕೆ ಪರಿಷ್ಕಾರಕ್ಕೆ ಒಳಗಾಗದೇ ಹೋದಲ್ಲಿ ಅದು ತುಕ್ಕುಹಿಡಿಯುವುದು ಪ್ರಕೃತಿಧರ್ಮ. ಇದಕ್ಕೆ ಸ್ತ್ರೀವಾದವೂ ಹೊರತಲ್ಲ.

ಸ್ತ್ರೀವಾದದ ಕುರಿತೇನು ಕಡಿಮೆ ಟೀಕೆಗಳಿವೆಯೇ? `ಅನಾಕರ್ಷಕ ಮಹಿಳೆಯರನ್ನು ಮುಖ್ಯವಾಹಿನಿಯಲ್ಲಿ ಹೆಚ್ಚು ಚಲಾವಣೆಗೆ ತರುತ್ತದೆ~ ಎನ್ನುತ್ತದೊಂದು ಟೀಕು. `ಸ್ತ್ರೀವಾದ ಎನ್ನುವುದು ಮಹಿಳೆಯರು ತಮ್ಮ ಗಂಡಂದಿರನ್ನು ತೊರೆಯಲು, ಮಕ್ಕಳನ್ನು ಕೊಲ್ಲಲು, ಮಾಟಗಾರಿಕೆಯನ್ನು ಕಲಿಯಲು ಹಾಗೂ ಸಲಿಂಗಿಗಳಾಗಲು ಉತ್ತೇಜಿಸುತ್ತದೆ~ ಎನ್ನುವುದು ಮತ್ತೊಂದು ವ್ಯಾಖ್ಯಾನ.

ಇಂಥ ಟೀಕೆ ಟಿಪ್ಪಣಿಗಳನ್ನು ಪುರುಷರ ಚಿತಾವಣೆ ಎಂದು ತಳ್ಳಿಹಾಕಲಿಕ್ಕೆ ಸಾಧ್ಯವಿಲ್ಲ. ಸ್ತ್ರೀವಾದದ ಒಂದು ಭಾಗವಾಗಿ ಪುರುಷರನ್ನು ಗುಮಾನಿಯಿಂದ ನೋಡುವುದು `ಸ್ತ್ರೀವಾದ~ದ ಒಂದು ಭಾಗವಷ್ಟೇ; ಆದರಿಂದು `ಸ್ತ್ರೀವಾದ~ವನ್ನೇ ಒಂದು ಬಗೆಯ ಗುಮಾನಿಯಿಂದ ನೋಡಲಾಗುತ್ತಿದೆ. `ನಾನು ಸ್ತ್ರೀವಾದಿ~ ಎಂದು ಹೇಳಿಕೊಳ್ಳುವವರನ್ನು ವಿಚಿತ್ರ ಅನುಕಂಪದಿಂದ ನೋಡುವ ಮಹಿಳೆಯರೂ ಇದ್ದಾರೆ. ಹಾಗಾಗಿಯೇ, ಸ್ತ್ರೀವಾದದ ಕುರಿತು ಮರು ಪರಿಶೀಲನೆಗಿದು ತಕ್ಕ ಸಮಯ.

`ಸ್ತ್ರೀವಾದ~ದ ಮರು ಪರಿಶೀಲನೆಯ ಸಂದರ್ಭದಲ್ಲಿ, `ಸ್ತ್ರೀವಾದ~ ಎನ್ನುವ ಪದ ಬಳಕೆಯೇ ಒಂದು ಸಮಸ್ಯೆಯಂತೆ ಕಾಣಿಸುತ್ತದೆ. ಆ ಶಬ್ದದಲ್ಲಿಯೇ ಒಂದು ಬಗೆಯ ಕಾಠಿಣ್ಯವಿದೆ. ನಾವು ಹೆಣ್ಣುಮಕ್ಕಳು ಏಳು ಮಲ್ಲಿಗೆ ತೂಕದವರಲ್ಲವಾದರೂ, ಕೋಮಲೆಯರು ಎನ್ನಲಿಕ್ಕಡ್ಡಿಯಿಲ್ಲ. ಮಾನಸಿಕವಾಗಿ ಕೂಡ ನಾವು ಮೃದು ಮನಸಿನವರು. ಹೀಗಿರುವಾಗ, ನಮ್ಮ ವಿಚಾರಗಳ ಪ್ರತಿಪಾದನೆಗೆ `ಸ್ತ್ರೀವಾದ~ ಎನ್ನುವುದು ತಕ್ಕ ಹೆಸರು ಅಲ್ಲವೇನೋ? ಹಾಗಿದ್ದರೆ, ಪರ್ಯಾಯವಾದರೂ ಯಾವುದು? ಈ ನಿಟ್ಟಿನಲ್ಲಿ ನಾವು, `ಲಲನಾವಾದ~ ಎನ್ನುವ ಪದವನ್ನು ಪರಿಶೀಲಿಸಬಹುದು.

ಸ್ತ್ರೀವಾದದಲ್ಲೊಂದು ಗಾಂಭೀರ್ಯವಿದೆ, ನಿಜ. ಆದರೆ ಆ ಗಾಂಭೀರ್ಯವೇ `ಸ್ತ್ರೀವಾದ~ಕ್ಕೊಂದು ತೊಡಕೂ ಆಗಿ ಪರಿಣಮಿಸಿದೆ. `ಲಲನಾವಾದ~ ಹಾಗಲ್ಲ. ಈ ಪದದಲ್ಲಿ ಅಗತ್ಯಕ್ಕೆ ತಕ್ಕಷ್ಟು ಗಾಂಭೀರ್ಯವಿದೆ. ಮುಖ್ಯವಾಗಿ, `ಸ್ತ್ರೀವಾದ~ ಪ್ರಯೋಗದಲ್ಲಿಲ್ಲದ ಒಂದು ಸಡಗರ `ಲಲನಾವಾದ~ ಪದದಲ್ಲಿದೆ. `ಲಲನಾವಾದ~ದ ವ್ಯತ್ಪತ್ತಿ `ಲಾಲಿತ್ಯ~ದಲ್ಲಿ ಇರುವುದರಿಂದ, ಈ ಪ್ರಯೋಗ ಹೆಣ್ಣುಮಕ್ಕಳ ಕೋಮಲತೆಯನ್ನು ಸೂಚಿಸುವ ನಿಟ್ಟಿನಲ್ಲಿ ಅತ್ಯಂತ ಸೂಕ್ತ ಎನಿಸುತ್ತದೆ. `ಸ್ತ್ರೀವಾದ~ದ ಸೋಂಕು ಈ ಕಾಲದ್ದೇನೂ ಅಲ್ಲ. ಕುಮಾರವ್ಯಾಸ `ಸ್ತ್ರೀಮತವನುತ್ತಸಿರಲಾಗದೆ...~ ಎಂದ. ಹಾಗೆ ನೋಡಿದರೆ ಆತ ಹೆಂಗರುಳಿನ ಕವಿ. ಛಂದಸ್ಸಿನ ಹಂಗಿಗೆ ಬಿದ್ದ ಕವಿ ಸ್ತ್ರೀಮತವನುತ್ತಸಿರಲಾಗದೆ... ಎಂದು ಉದ್ಗರಿಸಿರಬಹುದೇ ಹೊರತು, ಅನ್ಯಥಾ ಅಲ್ಲವೆಂದು ಭಾವಿಸೋಣ. ಆದರೆ, ನಮ್ಮ ಹೊಸಗಾಲದ ಮೀಮಾಂಸಕರೂ ಸ್ತ್ರೀಮತದ ಸೆರಗು ಹಿಡಿಯುತ್ತಾರೆಂದರೆ ಏನು ಹೇಳುವುದು? `ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ~ ಎಂದು ಮುದ್ದಣನನ್ನು ಛೇಡಿಸಿದಳಲ್ಲ, ಆ ಮನೋರಮೆ ನಮ್ಮ ಪಾಲಿನ ಮೊದಲ ಲಲನಾವಾದಿ.

ಅಂದಹಾಗೆ, `ಲಲನಾವಾದ~ದಿಂದ ಕೆಲವು ಲಾಭಗಳೂ ಇವೆ. ಅವುಗಳಲ್ಲಿ ಮುಖ್ಯವಾದುದು- `ಸ್ತ್ರೀವಾದದಿಂದ ಮುಕ್ತಿ~. ಇದೊಂದು ಬಗೆಯಲ್ಲಿ ಶಾಪ ವಿಮೋಚನೆಯ ಮಾರ್ಗವೂ ಹೌದು. ಶೋಷಿತರು, ಚಳವಳಿಯ ಹುಮ್ಮಸ್ಸಿನವರು ಹಾಗೂ ಕವಿತೆ ಕಟ್ಟುವವರು ಸ್ತ್ರೀವಾದದ ನೆರವಿಯಲ್ಲಿದ್ದಾರಷ್ಟೇ; ಇದೊಂದು ಸೀಮಿತ ಚೌಕಟ್ಟು. ಇದರ ಪರಿಧಿ `ಲಲನಾವಾದ~ದಿಂದ ದೊಡ್ಡದಾಗುತ್ತದೆ. ಸಂಪ್ರದಾಯವಾದಿಗಳಿಗೆ ಮಾತ್ರವಲ್ಲದೆ, ಜೀನ್ಸು ಜಾಣೆಯರಿಗೂ `ಲಲನಾವಾದ~ ಹೆಚ್ಚು ಆಕರ್ಷಕವಾಗಿದೆ. ಹೊಸಗಾಲದ ನಾವು ತೊಡುವ ಜೀನ್ಸು ಒರಟಾದರೂ, ಅದರೊಳಗಿನ ಮಯ್ಯಿ ಮತ್ತು ಮಯ್ಯ್ಳಗಿನ ಮನಸ್ಸು ಕೋಮಲವೇ ಎಂದು ವಾದಿಸುವವರು `ಲಲನಾವಾದ~ದ ತೆಕ್ಕೆಗೆ ಬರಲೇಬೇಕು.

`ಲಲನಾವಾದ~, `ಲಲನತ್ವ~, `ಲಲನಶೀಲತೆ~- ಇವು ಈ ಕಾಲದ ಮಂತ್ರಗಳು. ಎಲ್ಲ ತರಳೆಯರ ಪ್ರಾತಿನಿಧ್ಯದಿಂದ ಸ್ತ್ರೀವಾದದ ಬಾವಿ ನದಿಯಾಗಿ ಚಲನಶೀಲಗೊಳ್ಳುತ್ತದೆ.
ಹಾಗೆ ನೋಡಿದರೆ, ಸ್ತ್ರೀವಾದವನ್ನು ಮಾತ್ರವಲ್ಲ, `ಸ್ತ್ರೀ~ ಎನ್ನುವ ಪದಬಳಕೆಯ ಔಚಿತ್ಯದ ಬಗ್ಗೆಯೇ ನಾವು ಮರುಪರಿಶೀಲನೆ ನಡೆಸಬೇಕಾಗಿದೆ. ಇವತ್ತು ಸ್ತ್ರೀ ಸಂಬಂಧಿತ ಪದಗಳೆಲ್ಲ ಒಂದು ರೀತಿಯಲ್ಲಿ ವ್ಯಂಗ್ಯದಿಂದಲೇ ಬಳಕೆಯಾಗುತ್ತಿವೆ. ಸ್ತ್ರೀವಾದಿ, ಸ್ತ್ರೀ ಲೇಖಕಿ, ಸ್ತ್ರೀ ಸಾಹಿತಿ, ಶ್ರೀಮತಿ- ಸಾಕು ಸ್ವಾಮಿ ಈ ಸ್ತ್ರೀ ಸಹವಾಸ. ಸದ್ಯಕ್ಕಂತೂ, `ಲಲನೆ~ಗೆ, `ಲಲನಾವಾದ~ಕ್ಕೆ ಅಂಥ ಸಮಸ್ಯೆಯಿಲ್ಲ.

ಸ್ತ್ರೀ ಎಂದಕೂಡಲೇ ಅದಕ್ಕೆ ವಿರುದ್ಧ ಪದವಾಗಿ ಪುರುಷ ನೆನಪಾಗುತ್ತಾನೆ. ಹಾಗಾಗಿ ಸ್ತ್ರೀವಾದ ಎಂದಕೂಡಲೇ ಪುರುಷವಾದಕ್ಕೊಂದು ಅಸ್ತಿತ್ವ ಒದಗಿಸಿದಂತಾಗುತ್ತದೆ ಹಾಗೂ ಪುರುಷವಾದವನ್ನು ವಿರೋಧಿಸುವುದೇ ಸ್ತ್ರೀವಾದ ಎನ್ನುವಂತಾಗುತ್ತದೆ. `ಲಲನಾವಾದ~ ಹಾಗಲ್ಲ. ಲಲನೆ ಅಥವಾ ಲಲನಾ ಪದಗಳಿಗೆ ವಿರುದ್ಧ ಪದಗಳಿಲ್ಲ. ಆ ಕಾರಣದಿಂದಲೇ `ಲಲನಾವಾದ~ ಅನನ್ಯವಾದುದು. ಇದು ನಮ್ಮದೇ ವಾದ, ನಮ್ಮದೇ ಲೋಕ. ನಮ್ಮ ಅಸ್ಮಿತೆಯಿದು.

ಸ್ತ್ರೀವಾದದಿಂದ ಬೌದ್ಧಿಕ ಸಂಕೋಚ ಉಂಟಾಗುತ್ತದೆ. ಸ್ತ್ರೀವಾದ ಎನ್ನುವುದು ಒಂದು ಸಿದ್ಧಾಂತ, ಸರಿಯಷ್ಟೇ. ಸಿದ್ಧಾಂತ ಎಂದಮೇಲೆ ಅದು ವಾಸ್ತವದಿಂದ ದೂರ ಎಂದೇ ಅರ್ಥ. `ಲಲನಾವಾದ~ ಹಾಗಲ್ಲ. ಅದು ವಸ್ತುನಿಷ್ಠ. ಈ ಶತಮಾನದ ಮಾದರಿ ಹೆಣ್ಣುಗಳ ಬದುಕಿನ ರೀತಿಯೂ ನೀತಿಯೂ.

`ಲಲನಾವಾದ ಯಾಕೆ ಬೇಕು? ಸ್ತ್ರೀವಾದ ಬೇಡವಾದರೆ ಮಹಿಳಾವಾದ ಎನ್ನೋಣ~ ಎಂದು ಕೆಲವರು ಹೇಳಬಹುದು. ಆದರೆ, ಇವೆರಡಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಸ್ತ್ರೀವಾದ ಎನ್ನುವುದು ಕರ್ಣ ಕಠೋರ ಹಾಗೂ ಜಿಡ್ಡುಗಟ್ಟಿದ ಕನ್ನಡಿಯಾದರೆ, ಮಹಿಳಾವಾದ ಎನ್ನುವುದು ಮಡಿಕೋಲಿನ ಅಜ್ಜಿಯಂತೆ. ಮಾಹಿತಿ ತಂತ್ರಜ್ಞಾನದ ನಮ್ಮ ಕಾಲಕ್ಕೆ ಎರಡೂ ಹೊಂದುವುದಿಲ್ಲ.

ಹಾಂ, ಒಂದು ವಿಷಯವನ್ನಿಲ್ಲಿ ಸ್ಪಷ್ಟಪಡಿಸಬೇಕು. `ಲಲನಾವಾದ~ದ ಪ್ರತಿಪಾದನೆ ಎಂದರೆ ಅದು ಸ್ತ್ರೀವಾದದ ಅಥವಾ ಸ್ತ್ರೀವಾದಿಗಳ ನಿರಾಕರಣೆ ಅಲ್ಲ. ಇದು `ಸ್ತ್ರೀವಾದ~ದ ಪರಿಷ್ಕರಣೆಯ ಒಂದು ಚಿಂತನೆ. ಹೆಣ್ಣುಮಕ್ಕಳ ವ್ಯಕ್ತಿತ್ವದ ಲಾಲಿತ್ಯವನ್ನು ಸಿದ್ಧಾಂತರೂಪಕ್ಕೂ ತರುವ ಪ್ರಯತ್ನವಿದು. ಅಂದಹಾಗೆ, `ಲಲನಾವಾದ~ದ ಕುರಿತು ಇಲ್ಲಿರುವುದು ಆರಂಭಿಕ ಚಿಂತನೆಯ ಟಿಪ್ಪಣಿಯಷ್ಟೇ. ಈ ಚಿಂತನೆಯನ್ನು ಮುಂದುವರಿಸುವ ಮತ್ತು ಇದಕ್ಕೊಂದು ತಾತ್ವಿಕ ಸ್ವರೂಪ ನೀಡುವ ನಿಟ್ಟಿನಲ್ಲಿ ನಮ್ಮ ಸ್ತ್ರೀವಾದಿ ಮೀಮಾಂಸಕಿಯರು ಗಮನಹರಿಸುತ್ತಾರೆ ಹಾಗೂ ಈ ಪ್ರಯತ್ನದಲ್ಲಿ ಅವರೆಲ್ಲ `ಲಲನಾವಾದಿ~ಗಳಾಗಿ ಬದಲಾಗುತ್ತಾರೆ ಎನ್ನುವುದು ನನ್ನ ನಿರೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.