ಆಂಧ್ರಪ್ರದೇಶದ ಸದ್ಯದ ಸ್ಥಿತಿ ಅಯೋಮಯ. ರಾಜ್ಯ ಒಂದು ರೀತಿಯಲ್ಲಿ `ಕೋಳಿ ಪಂದ್ಯ~ದ ಅಖಾಡದಂತಿದೆ. ಒಂದು ಕಡೆ ಪ್ರತ್ಯೇಕ ರಾಜ್ಯದ ಕೂಗು. ಮತ್ತೊಂದೆಡೆ ಅಖಂಡತೆಯ ಜಪ. ಎದುರು ಪಾಳೆಯದ ಮೇಲೆ ಎರಗಲು ಎರಡೂ ಕಡೆಯವರು ಕಾಲಿಗೆ ಕತ್ತಿ ಕಟ್ಟಿಕೊಂಡು ನಿಂತಿದ್ದಾರೆ. ನಾಲಿಗೆ ಮೇಲೆ ಉರಿಯುವ ಕೆಂಡ ಇಟ್ಟುಕೊಂಡಿದ್ದಾರೆ.

ರಾಜ್ಯ ವಿಭಜನೆಗೆ ಸಂಬಂಧಿಸಿದ ಈ ಬಿಕ್ಕಟ್ಟಿನಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ದೈನಂದಿನ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಅಭಿವೃದ್ಧಿ ಕಾರ್ಯಗಳು ಆದ್ಯತೆಯ ವಿಷಯವಾಗಿ ಉಳಿದಿಲ್ಲ. ಬೇಡಿಕೆ ಈಡೇರಿಕೆಗೆ ವಾರ, ದಿನಗಳ ಲೆಕ್ಕದಲ್ಲಿ ಗಡುವು, ಬೆದರಿಕೆ. ಅದರ ಬೆನ್ನಿಗೇ ಬಂದ್, ರಸ್ತೆ ತಡೆ, ರ‌್ಯಾಲಿ, ಪ್ರತಿಭಟನೆಗಳು.

ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ತೆಲುಗುದೇಶಂ ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳೂ ಅಡ್ಡಡ್ಡ ಸೀಳಿಕೊಂಡಿವೆ.

ಪಕ್ಷದೊಳಗೊಂದು ಉಪಪಕ್ಷ. ಅದಕ್ಕೆ ತೆಲಂಗಾಣ ಹೆಸರಿನಲ್ಲಿ ವೇದಿಕೆ, ಘಟಕ ಎಂಬ ಉಪಶೀರ್ಷಿಕೆಗಳ ಜೋಡಣೆ (ಉದಾ: ಟಿಡಿಪಿ ತೆಲಂಗಾಣ ಫೋರಂ). ಪಕ್ಷಗಳಷ್ಟೇ ಅಲ್ಲ; ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ಹೋರಾಟಗಾರರು ಎಲ್ಲರೂ ಎರಡು ಗುಂಪಾಗಿ ವಿಭಜನೆಗೊಂಡಿದ್ದಾರೆ. ಅಭಿವೃದ್ಧಿ ಹಳಿ ತಪ್ಪಿದೆ. ಜನಸಾಮಾನ್ಯರ ನಿತ್ಯದ ಬದುಕು `ಲಯ~ ಕಳೆದುಕೊಂಡಿದೆ.

ಕಳೆದ ಹನ್ನೊಂದು ದಿನಗಳಿಂದ ತೆಲಂಗಾಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತ. ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ನೀಡಿರುವ ಕರೆ ಮೇರೆಗೆ ಹಮ್ಮಿಕೊಂಡಿರುವ ಅನಿರ್ದಿಷ್ಟ ಅವಧಿಯ `ಸಕಲ ಜನ ಮುಷ್ಕರ~ದ ಬಿಸಿ ಎಲ್ಲರಿಗೂ ತಟ್ಟಿದೆ.

ಈ ಭಾಗದಲ್ಲಿ ರಾಜ್ಯ ರಸ್ತೆ ಸಾರಿಗೆಯ ಹತ್ತು ಸಾವಿರಕ್ಕೂ ಹೆಚ್ಚು ಬಸ್‌ಗಳ ಓಡಾಟ ಸಂಪೂರ್ಣ ಸ್ಥಗಿತವಾಗಿದೆ. ಇವುಗಳನ್ನೇ ನೆಚ್ಚಿಕೊಂಡ ಅಸಂಖ್ಯ ಪ್ರಯಾಣಿಕರು ಅಕ್ಷರಶಃ ಪರದಾಡುತ್ತಿದ್ದಾರೆ.

ಹೈದರಾಬಾದ್ ಒಳಗೊಂಡಂತೆ ಹತ್ತು ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳು, ಅಧ್ಯಾಪಕರು, ವಕೀಲರು, ವೈದ್ಯರು... ಸೇರಿದಂತೆ ಎಲ್ಲ ವರ್ಗಗಳ ಜನರೂ ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಬೀಗ ಬಿದ್ದಿದೆ. ಇದರೊಂದಿಗೆ ಆಟೊ ಮುಷ್ಕರ ಕೂಡ ಸೇರಿಕೊಂಡಿದೆ.

ರೈಲು ತಡೆ ಚಳವಳಿ ಹಿನ್ನೆಲೆಯಲ್ಲಿ 55 ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಸುಮಾರು 380 ರೈಲುಗಳ ಸೇವೆ ಭಾನುವಾರದವರೆಗೂ ರದ್ದಾಗಿವೆ. ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಇದು ಕಳೆದ ಮೂರು ತಿಂಗಳಲ್ಲಿ ನಡೆಯುತ್ತಿರುವ ಎರಡನೇ ರೈಲು ತಡೆ ಚಳವಳಿ.

ಸಿಂಗರೇಣಿ ಗಣಿ ಕಾರ್ಮಿಕರೂ ಮುಷ್ಕರಕ್ಕೆ ಕೈಜೋಡಿಸಿರುವ ಕಾರಣ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ರೈತರ ಬದುಕು ಮರಣ ಮೃದಂಗವಾಗುವ ಅಪಾಯ ಎದುರಾಗಿದೆ. ಅರ್ಚಕರು ಕೂಡಾ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ. ಹೀಗಾಗಿ ತೆಲಂಗಾಣ ಭಾಗದ ದೇವಾಲಯಗಳ ಪೂಜೆ, ಪುನಸ್ಕಾರಗಳಿಗೂ ಮುಷ್ಕರದ ಬಿಸಿ ತಟ್ಟಿದೆ.

ಮುಷ್ಕರದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರು, ಶಿಕ್ಷಕರು, ಕಾರ್ಮಿಕರ ಗೈರುಹಾಜರಿ ಅವಧಿಯ ವೇತನ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಎನ್. ಕಿರಣ್‌ಕುಮಾರ್ ರೆಡ್ಡಿ ಅತ್ತ ಆದೇಶಿಸಿದರೆ, ಇತ್ತ ಟಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ `ಸಂಬಳ ಎಲ್ಲಿಗೂ ಹೋಗುವುದಿಲ್ಲ.

ತೆಲಂಗಾಣ ರಾಜ್ಯ ರಚನೆಯಾದ ಕೂಡಲೇ ಬೋನಸ್‌ನೊಂದಿಗೆ ಭದ್ರವಾಗಿ ನಿಮಗೆ ತಲುಪಿಸುತ್ತೇವೆ~ ಎಂದು ಅಭಯ ನೀಡುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಆದೇಶ ನೌಕರರ ಮೇಲೆ ಎಳ್ಳಷ್ಟೂ ಪ್ರಭಾವ ಬೀರಿಲ್ಲ. ಸೇವೆಗೆ ಹಾಜರಾಗದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 1,355 ಮಂದಿ ಗುತ್ತಿಗೆ ನೌಕರರನ್ನು ವಜಾಗೊಳಿಸುವ ನಿರ್ಧಾರ ಹೊರಬಿದ್ದ ಕೂಡಲೇ ತೆಲಂಗಾಣ ಪರ ಮುಖಂಡರಿಂದ ತೀವ್ರ ವಿರೋಧ. ಕೂಡಲೇ ಸರ್ಕಾರದ ರಾಗ ಬದಲು.

ಕೇಂದ್ರ ಸರ್ಕಾರ ಈಗಿನ ಹೋರಾಟಕ್ಕೂ ಸ್ಪಂದಿಸದಿದ್ದರೆ ಅಕ್ಟೋಬರ್ ಎರಡನೇ ವಾರದಲ್ಲಿ `ಹೈದರಾಬಾದ್ ದಿಗ್ಬಂಧನ~ ಹೆಸರಿನಲ್ಲಿ ಬೃಹತ್ ಚಳವಳಿ ಸಂಘಟಿಸಲು ತೆಲಂಗಾಣ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಅಗತ್ಯ ಬಿದ್ದರೆ ಮತ್ತೆ ನಿರಾಹಾರ ಧೀಕ್ಷೆ ನಡೆಸಲು ಸಿದ್ಧ ಎಂದು ಕೆಸಿಆರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಆಕ್ರಮಣಕಾರಿ ಹೋರಾಟದ ಮಾತುಗಳು ಕ್ರಿಯಾ ಸಮಿತಿ ಸಂಚಾಲಕ ಪ್ರೊ. ಕೋದಂಡರಾಮ್ ಅವರಿಂದ ಹೊರಟಿವೆ. ತೆಲಂಗಾಣ ಪರ ಹೋರಾಟಗಾರರ ಅಬ್ಬರ ತಣ್ಣಗಾಗುವಷ್ಟರಲ್ಲಿ ಸೀಮಾಂಧ್ರ (ರಾಯಲುಸೀಮೆ-ಕರಾವಳಿ) ಮುಖಂಡರು ಏಳುತ್ತಾರೆ. ಎರಡು ವರ್ಷಗಳಿಂದ ರಾಜ್ಯದಲ್ಲಿ ಇದೇ ಪರಿಸ್ಥಿತಿ. ಅನಿಶ್ಚಿತತೆ, ಗೊಂದಲ. ರಾಜಕೀಯ ಸಂಕ್ಷೋಭೆ.

ಈ ನಡುವೆ ಅನಿರ್ದಿಷ್ಟ ಮುಷ್ಕರಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಆಂಧ್ರ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಮುಷ್ಕರಕ್ಕೆ ಕರೆ ಕೊಟ್ಟ ಸಂಘಟನೆಗೆ ನೋಟಿಸ್ ಜಾರಿ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ವೈ.ಎಸ್.ರಾಜಶೇಖರ ರೆಡ್ಡಿ ದುರ್ಮರಣದ ನಂತರ ರಾಜ್ಯ ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಕಾಡತೊಡಗಿದೆ. ಈ ಬಿಕ್ಕಟ್ಟಿಗೆ ಪರಿಹಾರ ಸೂಚಿಸಬಹುದಾದ ನಾಯಕರೇ ಇಲ್ಲವೇನೊ ಎಂಬ ಸ್ಥಿತಿ ಇದೆ. ಎಲ್ಲರೂ ಕೈಚೆಲ್ಲಿ ಕುಳಿತಿದ್ದಾರೆ.

ಎಲ್ಲರ ದೃಷ್ಟಿ ದೆಹಲಿಯತ್ತ. ಹೈಕಮಾಂಡ್ ಏನಾದರೂ ಚಮತ್ಕಾರ ನಡೆಸಬಹುದೆಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ. ಕೆಲವು ಮುಖಂಡರಂತೂ ಸರ್ಕಾರವೇ ಬೇರೆ, ಪಕ್ಷವೇ ಬೇರೆ ಎಂಬಂತೆ ವರ್ತಿಸುತ್ತಿದ್ದಾರೆ. ಎಲ್ಲ ಪಕ್ಷಗಳು ಮತ್ತು ನಾಯಕರು ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಹನ್ನೊಂದು ದಿನಗಳಿಂದ ತೆಲಂಗಾಣದಲ್ಲಿ ಜನಜೀವನ ಸ್ತಬ್ಧಗೊಂಡಿದೆ. ಇತ್ತ ರಾಯಲುಸೀಮೆಯ ತಿರುಪತಿಯಲ್ಲಿ ನಡೆದ ರೈತ ಮಹಿಳಾ ಕಾರ್ಯಕ್ರಮದಲ್ಲಿ ಚುನಾವಣಾ ಪೂರ್ವದಲ್ಲಿ ಘೋಷಿಸುವಂತೆ ಮುಖ್ಯಮಂತ್ರಿಗಳು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

ಬಡವರಿಗೆ ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವುದೂ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆದರೆ, ಈ ನಿರ್ಧಾರಗಳನ್ನು ಅವರ ಸಂಪುಟ ಸದಸ್ಯರೇ ಏಕಪಕ್ಷೀಯ ಎಂದು ಟೀಕಿಸಿ ಮುಖ್ಯಮಂತ್ರಿಗೆ ಮುಜುಗರ ಉಂಟುಮಾಡಿದ್ದಾರೆ.

ಕಾಂಗ್ರೆಸ್ಸಿನ ಆಂಧ್ರದ ಉಸ್ತುವಾರಿ ಗುಲಾಂ ನಬಿ ಆಜಾದ್ ಅವರು ವಿದೇಶ ಪ್ರವಾಸ ಮುಗಿಸಿ ಬರುವುದನ್ನೇ ಕಾಯುತ್ತಿದ್ದಾರೆ ಮುಖಂಡರು. ತೆಲಂಗಾಣ ಕುರಿತು ವಿಸ್ತೃತ ಸಮಾಲೋಚನೆ ಅಗತ್ಯ.

ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗದು ಎಂದು ಹೇಳಿರುವ ಅವರು, ಈ ನಿಟ್ಟಿನಲ್ಲಿ ಮೂರೂ ಪ್ರಾಂತ್ಯದ ಮುಖಂಡರೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ಚರ್ಚೆ ಮುಗಿದ ಬಳಿಕ ಪಕ್ಷದ `ಕೋರ್ ಕಮಿಟಿ~ಗೆ ವರದಿ ಸಲ್ಲಿಸಲಿದ್ದಾರಂತೆ. ಅದರ ಆಧಾರದ ಮೇಲೆ ಏನಾದರೂ ತೀರ್ಮಾನ ಹೊರಬಹುದು ಎಂದು ನಿರೀಕ್ಷಿಸಲಾಗಿದೆ.

ಇದರ ಮಧ್ಯೆ ತೆಲಂಗಾಣ ಭಾಗದ ಸಂಸದರು, ಶಾಸಕರು ಪಕ್ಷಭೇದ ಮರೆತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಆ ರಾಜೀನಾಮೆಗಳು ಇನ್ನೂ ಅಂಗೀಕಾರವಾಗಿಲ್ಲ. ಒತ್ತಡ ಹೇರುವ ತಂತ್ರವಾಗಿ ಅವರೆಲ್ಲ ಪುನಃ ರಾಜೀನಾಮೆಗೆ ಮುಂದಾಗುವ ಸಾಧ್ಯತೆಗಳು ಗೋಚರಿಸುತ್ತಿವೆ.

ಈ ರಾಜಕೀಯ ಮೇಲಾಟ, ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಟ್ಟಿದ್ದ ರಾಜ್ಯದ ಏಳಿಗೆಗೆ ತೊಡರುಗಾಲಾಗಿ ಪರಿಣಮಿಸಿದೆ. ಸಂಘರ್ಷದ ವಾತಾವರಣ, ಬಂಡವಾಳದ ಹರಿವಿನ ಮೇಲೂ ಪರಿಣಾಮ ಬೀರಿದೆ ಎಂದು ವಾಣಿಜ್ಯೋದ್ಯಮ ಸಂಘಟನೆಗಳ ಪ್ರತಿನಿಧಿಗಳು ಅವಕಾಶ ದೊರೆತಾಗೆಲ್ಲ ಹೇಳುತ್ತಲೇ ಬಂದಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಜತೆ ಸ್ಪರ್ಧೆಗಿಳಿದಿದ್ದ ಹೈದರಾಬಾದ್ ನಗರ ಸೈಬರಾಬಾದ್ ಆಗಿ ರೂಪಾಂತರಗೊಂಡಿತ್ತು. ಆದರೆ, ಕಳೆದ ಎರಡು-ಮೂರು ವರ್ಷಗಳ ವಿದ್ಯಮಾನಗಳಿಂದ ನಗರದ `ಬ್ರ್ಯಾಂಡ್ ಇಮೇಜ್~ಗೆ ಧಕ್ಕೆ ಆಗಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

ಹಾಗೆ ನೋಡಿದರೆ ಬಿಕ್ಕಟ್ಟಿಗೆ ಪ್ರಧಾನ ಕಾರಣವೇ ಹೈದರಾಬಾದ್. ತೆಲಂಗಾಣ, ರಾಯಲುಸೀಮೆ ಮತ್ತು ಕರಾವಳಿ ಈ ಮೂರೂ ಭಾಗದ ಪ್ರಭಾವೀ ಮಂದಿ ಇಲ್ಲಿ ಉದ್ಯಮ, ವ್ಯವಹಾರದಲ್ಲಿ ಬಂಡವಾಳ ಹೂಡಿದ್ದಾರೆ.

ಈ ಭಾಗ್ಯನಗರ ಅವರ ಬದುಕಿನ ಭಾಗ್ಯದ ಬಾಗಿಲು ಕೂಡ ಆಗಿದೆ. ಅವರ ಲಾಭ-ನಷ್ಟದ ಲೆಕ್ಕಾಚಾರ ಮತ್ತು ಅದರಿಂದ ಚೋದಕವಾದ ನಿರ್ಣಯಗಳು ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವಂತೆ ಮಾಡಿವೆ ಎಂಬ ಮಾತಿದೆ.

ಔಷಧಿಗಳ ತಯಾರಿಕೆ ವಲಯದಲ್ಲಿ ಆಂಧ್ರ ಮುಂಚೂಣಿಯಲ್ಲಿದೆ. ಪದೇ ಪದೇ ಆಗುತ್ತಿರುವ ಬಂದ್‌ಗಳಿಂದ ಆ ವಲಯದ ಮೇಲೂ ವ್ಯತಿರಿಕ್ತ ಪರಿಣಾಮ ಆಗಿದೆ. ತೆಲಂಗಾಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆ ಆಗಿದೆ.

ಬಂದ್‌ಗಳಿಂದ ಬೇಸತ್ತ ಈ ಭಾಗದ ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಅಭ್ಯಾಸದ ಸಲುವಾಗಿ ಕರಾವಳಿ ಪಟ್ಟಣಗಳ ವಸತಿ ಶಾಲೆಗಳಿಗೆ ಸೇರಿಸಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮ ಹಳ್ಳ ಹಿಡಿದಿದೆ.

ಅದರಲ್ಲಿ ಬಂಡವಾಳ ಹೂಡಿದವರ ನಿದ್ದೆಗೆಡಿಸಿದೆ ತೆಲಂಗಾಣ ಚಳವಳಿ. ನೇಮಕಾತಿಯಿಂದ ನೀರಾವರಿ ಯೋಜನೆಗಳವರೆಗೂ ಎಲ್ಲವೂ ವಿವಾದದ ವಸ್ತು ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.