ಇಟಲಿಯ ಕ್ರೆಮೊನಾ ಪ್ರಾಂತ ಕೃಷಿ ಮತ್ತು ಹೈನು ಉದ್ಯಮಕ್ಕೆ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಬದಲಾವಣೆ ಗೋಚರಿಸುತ್ತಿದೆ. ಸ್ಥಳೀಯ ಟೆಲಿಫೋನ್ ಡಿರೆಕ್ಟರಿಯಲ್ಲಿ ಸಾಮಾನ್ಯ ಇಟಾಲಿಯನ್ ಅಡ್ಡ ಹೆಸರುಗಳಾದ `ಫೆರಾರಿ ಮತ್ತು ಗಲ್ಲಿ~ಗಳ ಜತೆಗೆ ಈಗ ಗಣನೀಯ ಪ್ರಮಾಣದಲ್ಲಿ `ಸಿಂಗ್~ಗಳನ್ನು ಕಾಣಬಹುದು.

ಕಳೆದ ಎರಡು ದಶಕಗಳಲ್ಲಿ ಇಟಾಲಿಯನ್ ಕೃಷಿಯ ಹೃದಯ ಭಾಗವೆಂದೇ ಪರಿಗಣಿಸಲಾಗುವ ಈ ಪ್ರಾಂತದ ಕೃಷಿ ಕ್ಷೇತ್ರದಲ್ಲಿ ಪಂಜಾಬಿ ವಲಸೆಗಾರರು `ಬರ್ಗ್‌ಮಿನಿ~ಗಳಾಗಿ (ಸ್ಥಳೀಯ ಭಾಷೆಯಲ್ಲಿ ಪಶುಪಾಲನಾ ಡೇರಿ ಉದ್ಯೋಗಿಗಳು) ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.

ಇಲ್ಲಿನ ಪೊ ಕಣಿವೆ ಇಡೀ ಇಟಲಿಯಲ್ಲೇ ವಿಶಿಷ್ಟವಾದ ಮತ್ತು ಬಹು ಬೇಡಿಕೆಯ `ಗ್ರಾನಾ ಪಡಾನೊ~ (ಸ್ಪಗೆಟ್ಟಿ ಖಾದ್ಯದ ಮೇಲೆ ಹಚ್ಚುವ ಗಟ್ಟಿಯಾದ ಟಾಪರ್) ಉತ್ಪಾದನೆಗೆ ಹೆಸರುವಾಸಿ. ಪಂಜಾಬಿ ವಲಸೆ ನೌಕರರೇನಾದರೂ ಮುಷ್ಕರ ಮಾಡಿದರೆ ಗ್ರಾನಾ ಪಡಾನೊ ತಯಾರಿಕೆಯನ್ನೇ ನಿಲ್ಲಿಸಬೇಕಾದೀತು ಎಂದು ಹೇಳುವಷ್ಟರಮಟ್ಟಿಗೆ ಅವರು ಇಲ್ಲಿ ಅನಿವಾರ್ಯ.

ಈ ಮಾತನ್ನು ಇಟಲಿಯ ಅತಿ ದೊಡ್ಡ ಕೃಷಿ ಸಂಸ್ಥೆ `ಕೋಲ್ಡಿರೆಟಿ~ಯ ಕ್ರೆಮೊನಾ ಘಟಕದ ಅಧ್ಯಕ್ಷ ಸೈಮನ್ ಸೊಫ್ನೆಲ್ಲಿ ಕೂಡ ಒಪ್ಪುತ್ತಾರೆ. `ಅವರಿಲ್ಲದೆ ನಮ್ಮ ಕೃಷಿ ಮತ್ತು ಹೈನುಗಾರಿಕೆ ಮುಂದೆ ಸಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಅವರನ್ನು ನಾವು ಅವಲಂಬಿಸಿದ್ದೇವೆ~ ಎಂದು ಹೇಳುತ್ತಾರೆ. ಈ ಪ್ರಾಂತದಲ್ಲಿ ಇಡೀ ಇಟಲಿಯ ಶೇ 10 ರಷ್ಟು ಅಂದರೆ ಪ್ರತಿ ವರ್ಷ 10 ಲಕ್ಷ ಟನ್ ಹಾಲು ಉತ್ಪಾದನೆಯಾಗುತ್ತದೆ.

ಭಾರತೀಯರು ಅದರಲ್ಲೂ ಬಹುಪಾಲು ಪಂಜಾಬಿ ವಲಸೆಗಾರರು ಮೊದಲು ಇಟಲಿಗೆ ಬಂದದ್ದು ಡೇರಿ ಉದ್ಯಮದಲ್ಲಿನ ಸ್ಥಳೀಯ ನೌಕರರು ನಿವೃತ್ತಿಯಾಗುತ್ತಿದ್ದ ಸಂದರ್ಭದಲ್ಲಿ. `ವಲಸೆಗಾರರು ಬಂದು ನಮ್ಮ ಅರ್ಥ ವ್ಯವಸ್ಥೆ ಕಾಪಾಡಿದರು. ಇಲ್ಲದೆ ಹೋದರೆ ನಮ್ಮದು ನಾಯಿಪಾಡಾಗುತ್ತಿತ್ತು. ಏಕೆಂದರೆ ನಮ್ಮ ಯುವಕರು ಹಸುಗಳ ಆರೈಕೆ, ಹೈನುಗಾರಿಕೆ ಕೆಲಸ ಮಾಡಲು ತಯಾರಿಲ್ಲ~ ಎಂದು ನೆನಪಿಸಿಕೊಳ್ಳುತ್ತಾರೆ ಪ್ರೆಸಿನಾ ಕ್ರೆಮಾನೀಸ್ ಪಟ್ಟಣದ ಮೇಯರ್ ಡಲಿಡೊ ಮಲಾಗ್ಗಿ.

`ಇಲ್ಲಿ ಡೇರಿ ಉದ್ಯಮದ ಬಹುಭಾಗ ಈಗ ಯಂತ್ರಗಳಿಂದಲೇ ನಡೆದರೂ ವರ್ಷದ 365 ದಿನವೂ ಕಾರ್ಮಿಕರ ಅಗತ್ಯ ಇದ್ದೇ ಇದೆ. ದಿನಕ್ಕೆ ತಲಾ ನಾಲ್ಕು ತಾಸುಗಳ ಎರಡು ಪ್ರತ್ಯೇಕ ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಮಯಕ್ಕೆ ಹೊಂದಿಕೊಳ್ಳಲು ನಮ್ಮ ಯುವಜನ ತಯಾರಿಲ್ಲ.

ನಮ್ಮವರಿಗೆ ಏನಿದ್ದರೂ ವಾರಾಂತ್ಯ ರಜೆ, ಸಂಜೆ ಹೊತ್ತು ಆರಾಮವಾಗಿರುವ ಫ್ಯಾಕ್ಟರಿ ಕೆಲಸವೇ ಬೇಕು. ಇದು ವಲಸೆಗಾರರಿಗೂ ಗೊತ್ತು. ಅದಕ್ಕಾಗಿಯೇ ನಮ್ಮ ಯುವಕರು ಒಲ್ಲದ ಕೆಲಸವನ್ನು ಅವರು ಮಾಡುತ್ತಿದ್ದಾರೆ~ ಎನ್ನುತ್ತಾರೆ ಡಲಿಡೊ.

ಇಪ್ಪತ್ತೈದು ವರ್ಷಗಳ ಹಿಂದೆ ಇಟಲಿಗೆ ವಲಸೆ ಬಂದ ಜಸವಿಂದರ್ ದುಹ್ರಾ ಅವರನ್ನು ಪ್ರಶ್ನಿಸಿದರೆ `ಹೌದು ಇದು ಹೈನುಗಾರಿಕೆ ನಾಡು. ನಾವೆಲ್ಲ ಭಾರತದ ನಮ್ಮ ಮನೆಯಲ್ಲಿ ಹಸು ಕರು ಸಾಕಿ ಹೈನುಗಾರಿಕೆ ಮಾಡಿದವರೇ. ಹೀಗಾಗಿ ಇಲ್ಲಿ ಈ ಕೆಲಸ ನಮಗೇನೂ ಅಪರಿಚಿತ ಎನಿಸಿಲ್ಲ~ ಎಂದು ಹೇಳುತ್ತಾರೆ. ಅವರು ಬಂದ ಆರಂಭದಲ್ಲಿ `ಬರ್ಗ್‌ಮಿನಿ~ ಆಗಿದ್ದರು. ಈಗ ಇಟಲಿಯ ಪ್ರಸಿದ್ಧ ಚೀಸ್ ತಯಾರಿಕಾ ಕಂಪೆನಿಯಲ್ಲಿ ಕೆಲಸಗಾರ.

ಈ ಪ್ರಾಂತದ ಡೇರಿಗಳಲ್ಲಿ ಕೆಲಸ ಮಾಡುವ ಭಾರತೀಯ ವಲಸೆಗಾರರ ಅಧಿಕೃತ ಅಂಕಿಸಂಖ್ಯೆ ಲಭ್ಯವಿಲ್ಲ. ಆದರೆ ಇಲ್ಲಿನ ಹೊಲ ಗದ್ದೆಗಳಲ್ಲಿ ದುಡಿಯುವ ಸುಮಾರು ಮೂರು ಸಾವಿರ ಕೃಷಿ ಕಾರ್ಮಿಕರಲ್ಲಿ ಒಂದು ಸಾವಿರದಷ್ಟು ಭಾರತೀಯರು.

ಗುರುದ್ವಾರ ಮತ್ತು ತಕರಾರು
ಕಳೆದ ತಿಂಗಳು ಇಲ್ಲಿ ಶ್ರೀ ಕಲಗಿದಾರ್ ಸಾಹೀಬ್ ಗುರುದ್ವಾರ ಆರಂಭವಾಯಿತು. ಇದು 600 ಭಕ್ತರು ಹಿಡಿಸುವಷ್ಟು ವಿಶಾಲವಾಗಿದೆ. ಆದರೆ ಅಂದು ವಾಸ್ತವವಾಗಿ ಇದರ ಆರು ಪಟ್ಟು ಜನ ಪೂಜೆ ಯಲ್ಲಿ ಭಾಗವಹಿಸಿದ್ದರು.

ಯುರೋಪ್‌ನ ಈ ಭಾಗದಲ್ಲಿ ಅತ್ಯಂತ ದೊಡ್ಡ ಗುರುದ್ವಾರ ಎಂಬ ಕೀರ್ತಿಯೂ ಇದಕ್ಕೆ ಪ್ರಾಪ್ತವಾಗಿದೆ. ಇದರ ಹೊರತಾಗಿ ದೊಡ್ಡ ದೊಡ್ಡ ಕೋಳಿ ಸಾಕಣೆ ಕೇಂದ್ರಗಳು, ಗೋದಾಮುಗಳು ಇರುವಲ್ಲೆಲ್ಲ ಸಿಖ್ ಮಂದಿರಗಳನ್ನು ಕಾಣಬಹುದು.

ಬಿಳಿ ಬಣ್ಣದ ಗುರುದ್ವಾರ ನಿರ್ಮಾಣದ ಹಾದಿ ಸುಲಭವಾಗಿರಲಿಲ್ಲ. ಪಕ್ಕದ ಮುನಿಸಿಪಾಲಿಟಿ ಮೊದಲು ಪರವಾನಗಿ ನೀಡಿ ನಂತರ ವಾಪಸ್ ಪಡೆದಿತ್ತು.

ಗುರುದ್ವಾರ ನಿರ್ಮಾಣ ವಿಷಯ ರಾಜಕೀಯ ವಿವಾದಕ್ಕೆ ತಿರುಗಿದ್ದೇ ಇದಕ್ಕೆ ಕಾರಣ. ನಂತರ ಇನ್ನೊಂದು ಸ್ಥಳವನ್ನು ಗುರುತಿಸಲಾಯಿತು. `ಒಂದು ದಶಕಕ್ಕೂ ಹೆಚ್ಚು ಕಾಲ ನೌಕರಶಾಹಿ ಸಿಖ್ ಭಕ್ತರನ್ನು ಸತಾಯಿಸಿತು. ಅದೆಲ್ಲವನ್ನೂ ಪರಿಹರಿಸಿಕೊಂಡು ಚಂದಾ ಸಂಗ್ರಹಿಸಿ, ಕಡಿಮೆ ಬಿದ್ದ ಹಣಕ್ಕೆ ಬ್ಯಾಂಕ್‌ನಲ್ಲಿ ಸಾಲ ಎತ್ತಿ ಸುಮಾರು 30 ಲಕ್ಷ ಯುರೋ ಕೊಟ್ಟು ಈ ಜಾಗ ಕೊಂಡುಕೊಳ್ಳಲಾಯಿತು.

ಗುರುದ್ವಾರದ ಎದುರು ಇರಬೇಕಾದ ಕಾರಂಜಿ ನಿರ್ಮಾಣ ಸಾಧ್ಯವಾಗಿಲ್ಲ. ಚಿನ್ನದ ತಗಡಿನ ವಿಶಿಷ್ಟ ಗೋಪುರಗಳೂ ಇಲ್ಲ. ಇಲ್ಲಿನ ಮಂಜಿನ ಹವಾಮಾನ ಇದಕ್ಕೆ ಕಾರಣ. ಆದರೂ ಪರ್ಯಾಯ ನಿರ್ಮಾಣ ಸಾಮಗ್ರಿಗಳ ಬಳಕೆ ಸಾಧ್ಯವೇ ಎಂಬ ಪರಿಶೀಲನೆ ನಡೆದಿದೆ ಎನ್ನುತ್ತಾರೆ ಮೇಯರ್ ಮಲಾಗ್ಗಿ.

ಗುರುದ್ವಾರ ನಿರ್ಮಾಣಕ್ಕೆ ಮೇಯರ್ ಅವರ ಬಲವಾದ ಬೆಂಬಲ ಇತ್ತು. ಪ್ರೆಸಿನಾ ಕ್ರೆಮಾನೀಸ್ ಪಟ್ಟಣ ಪ್ರವೇಶಿಸುವ ಸ್ಥಳದಲ್ಲೇ `ಇಲ್ಲಿ ಜನಾಂಗೀಯ ಭೇದಭಾವ ಇಲ್ಲ~ ಎಂಬ ದೊಡ್ಡ ಫಲಕ ಸ್ವಾಗತಿಸುತ್ತದೆ. ಆದರೆ ಸ್ಥಳೀಯ ರಾಜಕಾರಣಿಗಳ ತಕರಾರಂತೂ ಇದ್ದೇ ಇತ್ತು.

ವಲಸೆ ವಿರೋಧಿ ಸಂಘಟನೆಗಳಿಗೆ ಹೆಚ್ಚು ಹತ್ತಿರವಾದ ನಾರ್ದನ್ ಲೀಗ್ ಪಕ್ಷದವರು ಬಹಳಷ್ಟು ವಿರೋಧ ಮಾಡಿದರು. ಕಟ್ಟಾ ಬಲಪಂಥೀಯ `ಫೋರ್ಜಾ ನೊವಾ~ ಪಾರ್ಟಿ ಕಾರ್ಯಕರ್ತರ ಒಂದು ಸಣ್ಣ ಗುಂಪು ಗುರುದ್ವಾರ ಆರಂಭೋತ್ಸವದ ಹೊತ್ತಿನಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿತ್ತು.

ಗುರುದ್ವಾರ ನಿರ್ಮಾಣಕ್ಕೆ ವಿನಾಕಾರಣ ಪದೇಪದೇ ಅಡ್ಡಿ ಮಾಡಿದವರಲ್ಲಿ ಕ್ರೆಮೊನಾ ಪ್ರಾಂತೀಯ ಮಂಡಳಿಯ ನಾರ್ದನ್ ಲೀಗ್ ಪಾರ್ಟಿ ಸದಸ್ಯ ಮ್ಯಾನುವಲ್ ಗೆಲ್ಮಿನಿ ಮುಖ್ಯ ವ್ಯಕ್ತಿ. `ಸಂಪ್ರದಾಯವಾದಿ ಸಿಖ್ ಹಿರಿಯರು ಕೈಯಲ್ಲಿ ಸದಾ ಹಿಡಿದು ಕೊಂಡು ಸಂಚರಿಸುವ ಕಿರ್ಪಾನ್ (ಧಾರ್ಮಿಕ ಖಡ್ಗ) ಬಗ್ಗೆ ನನ್ನ ತಕರಾರಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಅದೊಂದು ಆಯುಧ. ಅದನ್ನು ಇಟ್ಟುಕೊಂಡು ಮುಕ್ತವಾಗಿ ತಿರುಗಾಡಲು ಬಿಡಬಾರದು~ ಎಂಬುದು ಅವರ ವಾದ.

ಮಂದಿರದಲ್ಲಿ ಪಂಜಾಬಿ ಭಾಷೆ ಬಳಕೆಗೂ ಅವರ ತಕರಾರಿದೆ. `ವಲಸೆಗಾರರು ಇರುವುದು ಲೊಂಬಾರ್ಡಿ ಪಟ್ಟಣದಲ್ಲಿ. ಸಾರ್ವಜನಿಕ ಸ್ಥಳದಲ್ಲಿ ಅವರ ಭಾಷೆಯಲ್ಲೇ ಮಾತನಾಡಲು ಅವರಿಗೆ ಅವಕಾಶ ಕೊಟ್ಟರೆ ಭಾವೈಕ್ಯತೆ ಮೂಡುವುದಾದರೂ ಹೇಗೆ~ ಎಂದು ಗೆಲ್ಮಿನಿ ಪ್ರಶ್ನಿಸುತ್ತಾರೆ.

ಆದರೂ ವಲಸೆ ಬಂದ ಭಾರತೀಯರು ಬರ್ಗಮನಿಗಳಾಗಿ ಕೆಲಸ ಮಾಡುವುದನ್ನು ನಾರ್ದನ್ ಲೀಗ್ ಪಾರ್ಟಿ ಬಹಿರಂಗವಾಗಿ ಯಂತೂ ವಿರೋಧಿಸುತ್ತಿಲ್ಲ. `ನಮ್ಮ ಕಾಯ್ದೆಗಳಿವೆ ಗೌರವಕೊಟ್ಟು ಕಾನೂನಿನ ಪ್ರಕಾರ ಇಲ್ಲಿದ್ದರೆ ಮತ್ತು ಇಟಾಲಿಯನ್ ಭಾಷೆ ಕಲಿತರೆ ನಮ್ಮದೇನೂ ತಕರಾರಿಲ್ಲ~ ಎಂದು ಅವರು ಹೇಳುತ್ತಾರೆ.

ಹನ್ನೆರಡು ವರ್ಷಗಳ ಹಿಂದೆ ಇಟಲಿಯಲ್ಲಿ ಕಾಲಿಟ್ಟಾಗ ದಿಲ್ಬಾಗ್ ಸಿಂಗ್‌ಗೆ 14ರ ಹರೆಯ. ಆತ ಮಾಂಟುವಾ ಸಮೀಪದ ನೊಗಾರಾದ ನಿವಾಸಿ. ಸ್ಥಳೀಯ ಭಾಷೆಯನ್ನು ಅದೇ ಉಚ್ಚರಣೆ ಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾನೆ. `ನಾವು ಇಲ್ಲಿ ಕೆಲಸಕ್ಕೆ ಬಂದವರು. ಶಾಂತಿ ಸೌಹಾರ್ದದಿಂದ ಬದುಕಲು ಬಯಸುತ್ತೇವೆ~ ಎನ್ನುವ ಆತ `ಭಾರತೀಯ ವಲಸೆಗಾರರ ಬಗ್ಗೆ ಇಟಾಲಿಯನ್ನರು ತಿಳಿದುಕೊಳ್ಳಲಿ~ ಎಂಬ ಮಹದಾಸೆಯಿಂದ ಇಟಲಿ ಸಿಖ್‌ರ ಕುರಿತ ವೆಬ್‌ಸೈಟ್ ನಡೆಸುತ್ತಿದ್ದಾನೆ.

ಇಟಲಿಯ ವ್ಯವಸಾಯ ಕ್ಷೇತ್ರದಲ್ಲಿ ಸುಮಾರು 16 ಸಾವಿರ ಭಾರತೀಯರು ಕಾಯ್ದೆಬದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಲ್ಯಾಟಿಯಂ ಪ್ರಾಂತ ಕೂಡ ಅವರನ್ನು ಆಕರ್ಷಿಸುತ್ತಿದೆ. ಇಲ್ಲಿ ಕೃಷಿ ಹಂಗಾಮಿನಲ್ಲಿ ಬಂದು ದುಡಿಯತೊಡಗಿದ್ದಾರೆ.

ಶೋಷಣೆ
ರೋಮ್‌ನಿಂದ ಬರೀ 100 ಕಿಮಿ ಒಳಗೆ ಹೋದರೂ ಸಾಕು. ಬಹಳಷ್ಟು ಜನರಿಗೆ ಅಪರಿಚಿತವಾದ ಇನ್ನೊಂದು ಲೋಕವೇ ನಿಮ್ಮೆದುರು ತೆರೆದುಕೊಳ್ಳುತ್ತದೆ ಎಂಬುದು ಹೆಸರಾಂತ ಸಾಕ್ಷ್ಯಚಿತ್ರ ನಿರ್ಮಾಪಕಿ ಪೆಟ್ರಿಷಿಯಾ ಸಂಟನ್‌ಗೆಲಿ ಹೇಳುವ ಕಿವಿಮಾತು.
ಲಾಟಿನಾ ಪ್ರಾಂತದಲ್ಲಿನ ಸಿಖ್ ವಲಸೆಗಾರರ ಬಗ್ಗೆ ಅವರು ತೆಗೆದ ಚಿತ್ರ `ವಿಸಿಟ್ ಇಂಡಿಯಾ~ ಮುಂದಿನ ತಿಂಗಳು ತೆರೆ ಕಾಣಲಿದೆ. ವಲಸೆ ಬಂದವರು ಅನುಭವಿಸುತ್ತಿರುವ ತೊಂದರೆ, ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಇದರಲ್ಲಿ ವಿವರಗಳಿವೆ.

`ಮನೆಯಿಲ್ಲದ ನಿರಾಶ್ರಿತರಂತೆ ಅನೇಕ ಸಲ ಅವರನ್ನು ಸಣ್ಣ ಕ್ಯಾಂಪ್‌ಗಳಲ್ಲಿ ಇಟ್ಟು ದುಡಿಸಿಕೊಳ್ಳಲಾಗುತ್ತದೆ. ಕೊಡುವ ಸಂಬಳವೂ ಕಡಿಮೆ. 12 ತಾಸಿನ ಕೆಲಸಕ್ಕೆ ಪ್ರತಿ ತಾಸಿಗೆ 2 ರಿಂದ 4 ಯುರೊ ಮಾತ್ರ. ಆದರೆ ನನ್ನ ಮನ ಕಲಕಿದ ಸಂಗತಿಯೆಂದರೆ ಇಷ್ಟೆಲ್ಲ ಕಷ್ಟಗಳ ನಡುವೆಯೂ ಅವರಿಗೆ ಬದುಕಿನ ಬಗ್ಗೆ ಆಶಾಭಾವನೆಯಿದೆ, ಭವಿಷ್ಯ ಉಜ್ವಲವಾಗುವ ಭರವಸೆಯಿದೆ~ ಎಂದಾಕೆ ಹೇಳುತ್ತಾರೆ.

ದೇಶದ ಉತ್ತರ ಭಾಗದಲ್ಲಿ ಪರವಾಗಿಲ್ಲ. ಅಲ್ಲಿನ ವಲಸೆಗಾರರಿಗೆ ಇಷ್ಟೊಂದು ತೊಂದರೆ ಮೇಲ್ನೋಟಕ್ಕಂತೂ ಇಲ್ಲ. ಅನೇಕರು ಇಟಾಲಿಯನ್ ಪೌರತ್ವ ಪಡೆದಿದ್ದಾರೆ. ಮನೆ ಮಾಡಿದ್ದಾರೆ. ಕುಟುಂಬ ವರ್ಗವನ್ನು ಊರಿಂದ ಕರೆಸಿಕೊಂಡಿದ್ದಾರೆ.

ರಾಷ್ಟ್ರೀಯ ಅಂಕಿಸಂಖ್ಯಾ ಏಜೆನ್ಸಿಯ ಮಾಹಿತಿ ಪ್ರಕಾರ ಭಾರತೀಯ ವಲಸೆಗಾರರಲ್ಲಿ ಶೇ 40ರಷ್ಟು ಮಹಿಳೆಯರು. ಆದರೆ ಇವರಲ್ಲಿ ಕೆಲಸ ಇರುವವರ ಸಂಖ್ಯೆ ತುಂಬ ಕಡಿಮೆ. ಅವರನ್ನೂ ಮುಖ್ಯವಾಹಿನಿಗೆ ತರಲು ಕಾರ್ಮಿಕ ಸಂಘಗಳು ಅವರಿಗೆ ವಿವಿಧ ಪಟ್ಟಣಗಳಲ್ಲಿ ಭಾಷೆ, ಉದ್ಯೋಗ ತರಬೇತಿ ಆಯೋಜಿಸುತ್ತಿವೆ.

ಅನೇಕ ವಲಸೆ ಕುಟುಂಬಗಳಿಗೆ ಇಲ್ಲಿಯೇ ಮಕ್ಕಳಾಗಿವೆ. `ಆ ಮಕ್ಕಳು ಕಷ್ಟಪಟ್ಟು ಓದುತ್ತಾರೆ. ನಮ್ಮ ಮಕ್ಕಳಂತೆ ಪಡಪೋಸಿಗಳಲ್ಲ. ಆದರೆ ಅವಕ್ಕೆ ಅವರ ಅಪ್ಪ ಅಮ್ಮನಂತೆ ಹೊಲದಲ್ಲಿ, ಡೇರಿಯಲ್ಲಿ ಕಾರ್ಮಿಕರಾಗಿ ದುಡಿಯುವ ಉದ್ದೇಶ ಇಲ್ಲ.

ಉನ್ನತ ವ್ಯಾಸಂಗ ಮಾಡಿ ಮುಂದೆ ಸಾಗಲು ಬಯಸುತ್ತಾರೆ~ ಎಂದು ಮೆಚ್ಚುಗೆಯಿಂದ ಹೇಳುತ್ತಾರೆ 1700 ಆಕಳುಗಳ ಡೇರಿ ಮಾಲೀಕ ಗಿಯಾನ್‌ಲುಗಿ ಫಿಯಾಮೆನಿ. ಅವರ ಹತ್ತಿರ ಏಳು ಭಾರತೀಯ ಕೆಲಸಗಾರರಿದ್ದಾರೆ.

ಅಲ್ಲಿ ಕೆಲಸ ಮಾಡುವ ಪ್ರೇಮ್‌ಸಿಂಗ್ ಇಟಲಿಗೆ ಬಂದದ್ದು 1995ರಲ್ಲಿ. ನಂತರ ಆತನ ಅನೇಕ ಸಂಬಂಧಿಗಳೂ ಬಂದರು. ಈ ದಂಪತಿಗೆ ಮೂವರು ಮಕ್ಕಳು. ಶಾಲೆಯಲ್ಲಿ ಓದುತ್ತಿದ್ದಾರೆ. `ಅವರು ಇಟಲಿಯವರೇ ಆಗಿಬಿಟ್ಟಿದ್ದಾರೆ.

ನನಗಂತೂ ವಾಪಸ್ ಭಾರತದಲ್ಲಿನ ನನ್ನೂರಿಗೆ ಹೋಗುವ ಆಲೋಚನೆ ಇಲ್ಲ. ನಾವು ಇಲ್ಲಿ ಬದುಕು ಕಂಡುಕೊಂಡಿದ್ದೇವೆ. ಇದೇ ನಮ್ಮ ಮನೆ~ ಎನ್ನುವ ಅವರ ಮಾತು ಬಹುಪಾಲು ಭಾರತೀಯ ವಲಸೆಗಾರರ ಅಭಿಪ್ರಾಯವನ್ನೇ ಧ್ವನಿಸುತ್ತದೆ.
ದಿ ನ್ಯೂಯಾರ್ಕ್ ಟೈಂಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.