ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದು, ಜತೆಗೆ ಉತ್ಸಾಹ ಇದ್ದರೆ ಬದುಕಿನಲ್ಲಿ ಗೆಲ್ಲದೇ ಇರಲು ಸಾಧ್ಯವೇ ಇಲ್ಲ ಎಂಬ ಮಾತಿಗೆ ಸಾಕ್ಷಿಯಾಗಿದ್ದವರು ಶಿವಮೊಗ್ಗ ತಾಲ್ಲೂಕು ಹೊಸಹಳ್ಳಿಯ ಲಕ್ಷ್ಮೀಪುರದ ದೇವಂಗಿ ಪ್ರಫುಲ್ಲಚಂದ್ರ ಅವರು.
ಇತ್ತೀಚೆಗೆ ನಿಧನರಾದ ಅವರು ಕೃಷಿಕರಿಗೆ ಗೆಳೆಯ, ಮಾರ್ಗದರ್ಶಿ, ಕೃಷಿ ಮೇಸ್ಟ್ರು – ಎಲ್ಲವೂ ಆಗಿದ್ದರು.

ನಾಲ್ಕು ದಶಕಗಳಿಂದಲೂ ಸಹಜ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದ ಅವರ ಭೂಮಿ ಕೃಷಿ ವಿ.ವಿಯ (ವಿದೇಶಿ ಕೃಷಿ ವಿಜ್ಞಾನಿಗಳಿಗೂ) ಅನೇಕ ವಿಜ್ಞಾನಿಗಳಿಗೆ ಪ್ರಯೋಗ ಶಾಲೆಯಾಗಿತ್ತು. ನಾಡಿನ ಸ್ವಯಂ ಸೇವಾ ಸಂಸ್ಥೆಗಳು, ಸಣ್ಣ ಹಿಡುವಳಿದಾರ ರೈತರು, ದೊಡ್ಡ ದೊಡ್ಡ ಜಮೀನು ಉಳ್ಳವರಿಗೆ ಪ್ರಫುಲ್ಲಚಂದ್ರ ಅವರ ತೋಟ ಮಾದರಿ ಹಾಗೂ ಮಾಹಿತಿ ಪ್ರಸರಣ ಕೇಂದ್ರವಾಗಿತ್ತು. ವರ್ಷದಲ್ಲಿ ಕನಿಷ್ಠ 2 ರಿಂದ 3 ಸಾವಿರದಷ್ಟು ರೈತರು ಇವರ ತೋಟಕ್ಕೆ ಬಂದು, ಪಾಠ ಕೇಳಿಕೊಂಡು ಹೋಗುತ್ತಿದ್ದರು.

‘ಮೊದಲು ನಿಮ್ಮ ಕಕ್ಕಸ್ಸು, ಉಚ್ಚೆಯನ್ನು ಸರಿಯಾಗಿ ಜಮೀನಿಗೆ ಬಳಕೆ ಮಾಡೋದನ್ನು ಕಲೀರಿ. ಆ ಮೇಲೆ ಸಾವಯವ ಗೊಬ್ಬರ ಮಾಡ್ತೀರೋ, ರಸಗೊಬ್ಬರ ಹಾಕ್ತೀರೋ.. ಯೋಚ್ನೆ ಮಾಡೀರ್ವಂತೆ!’

ತಮ್ಮ ಎದುರು ಅರ್ಧವೃತ್ತಾಕಾರದಲ್ಲಿ ಸಾಲಾಗಿ ಕುಳಿತಿದ್ದ ಮೂವತ್ತೈದು ಮಂದಿ ಬಯಲು ಸೀಮೆಯ ರೈತರಿಗೆ ದೇವಂಗಿ ಪ್ರಫುಲ್ಲಚಂದ್ರ ಹೀಗೆ ಪಾಠ ಹೇಳಿದಾಗ ಅವರ ಮಾತಿಗೆ ಅಸಹ್ಯಪಟ್ಟುಕೊಂಡವರಂತೆ ಮುಖ ಮಾಡಿದ ರೈತರನ್ನು ಕಂಡು, ‘ಹಾಗ್ಯಾಕೆ ಮುಖ ಸಿಂಡಿರ್ಸಿಕೊಳ್ತೀರಿ. ಅಲ್ನೋಡಿ, ಆ ಕಬ್ಬಿನ ಬೆಳೆ ಸೊಗಸಾಗಿ ಕಾಣುತ್ತಿದೆಯಲ್ಲಾ, ಅದು ಹಾಗೆ ಬೆಳೆಯಲು ಇದೇ ಕಕ್ಕಸ್ಸು, ಉಚ್ಚೆ ಮಿಶ್ರಿತ ಗೊಬ್ಬರವೇ ಕಾರಣ’ ಎಂದು ಗದರುತ್ತಿದ್ದರು.

ಪ್ರಫುಲ್ಲಚಂದ್ರರ ಮಾತೆಂದರೆ ಹಾಗೆ. ಗುಂಡು ಹೊಡೆದ ಹಾಗೆ. ತೋಟಕ್ಕೆ ಅಧ್ಯಯನ ಪ್ರವಾಸಕ್ಕೆ ಬರುತ್ತಿದ್ದ ರೈತರಿಗೆಲ್ಲ, ಹೀಗೆ ನೇರಾ-ನೇರ, ಮೊನಚು ಮಾತುಗಳಲ್ಲೇ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಸೋಮಾರಿ ಕೃಷಿಕರ ಬಗ್ಗೆ ಸಿಟ್ಟಾಗುತ್ತಿದ್ದ ಅವರು, ಪ್ರಯೋಗಶೀಲತೆ ಮೈಗೂಡಿಸಿಕೊಂಡ ರೈತರಿಂದ ಸಲಹೆಯನ್ನು ಸ್ವೀಕರಿಸುವ ವಿಶಾಲ ಹೃದಯದ ವ್ಯಕ್ತಿಯಾಗಿದ್ದರು.

ಮಲಮೂತ್ರ, ಕೊಟ್ಟಿಗೆ ತ್ಯಾಜ್ಯ ಮಿಶ್ರಿತ ದ್ರವರೂಪಿ ಗೊಬ್ಬರ ಪೂರೈಕೆ ಕುರಿತು ವಿವರಣೆ ನೀಡುವಾಗ, ಪ್ರವಾಸಿ ರೈತರನ್ನು ದನದ ಕೊಟ್ಟಿಗೆ ಹಾಗೂ ತಮ್ಮ ತೋಟದಲ್ಲಿನ ಕಕ್ಕಸು ಗುಂಡಿಗಳಿಂದ ಸಂಗ್ರಹವಾಗುವ ತ್ಯಾಜ್ಯದ ಗುಂಡಿಯತ್ತ ಕರೆದೊಯ್ಯುತ್ತಿದ್ದರು. ಅಲ್ಲಿ ಸಂಗ್ರಹವಾಗುವ ತ್ಯಾಜ್ಯ ಹಾಗೂ ಅದನ್ನು ಕಬ್ಬಿನ ತೋಟಕ್ಕೆ ತುಂತುರು ನೀರಾವರಿ ಮೂಲಕ ಹರಿಸುವ ವಿಧಾನವನ್ನು ಪರಿಚಯಿಸುತ್ತಿದ್ದರು.

ಪ್ರಫುಲ್ಲಚಂದ್ರ ಅವರ ಒರಟು ಮಾತುಗಳು ರೈತರಿಗೆ ಆರಂಭದಲ್ಲಿ ಅವಾಚ್ಯ ಎನಿಸುತ್ತಿದ್ದರೂ, ಅವರ ಜತೆಗೆ ತೋಟವನ್ನು ಸಂಪೂರ್ಣ ಸುತ್ತಾಡಿದ ನಂತರ ಆ ಮಾತುಗಳ ಹಿಂದೆ ರೈತರ ಶ್ರಮ, ಬಂಡವಾಳ ಉಳಿಸುವಂತಹ ತಂತ್ರಜ್ಞಾನವಿದೆ ಎಂದು ಗೊತ್ತಾದಾಗ, ರೈತರು ಹಿಗ್ಗುತ್ತಾ ಪ್ರಫುಲ್ಲಚಂದ್ರರೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು.

ಸಾಧಕ: ಪ್ರಫುಲ್ಲಚಂದ್ರ ಅವರ ಪತ್ನಿ ಎಸ್.ಎಸ್ ಸತ್ಯವತಿ. ಇವರಿಗೆ ಇಬ್ಬರು ಪುತ್ರರು. ಒಬ್ಬ ಸವ್ಯಸಾಚಿ. ಬಿಎಸ್‌ಸಿ ಕೃಷಿ ಪದವೀಧರ. 1980ರಿಂದ ಅಪ್ಪನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡವರು. ಮತ್ತೊಬ್ಬ ಇಕ್ಷುಧರ್ಮ. ತೋಟಗಾರಿಕೆಯ ವಿಷಯದಲ್ಲಿ ಬಿಎಸ್‌ಸಿ ಪದವಿ ಪಡೆದು 1990ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಹದಿನಾರು ವಿವಿಧ ರೀತಿಯ ಪರಿಸರಕ್ಕೆ ಪೂರಕವಾಗಿರುವ ಕೃಷಿ ವಿಧಾನಗಳಿವೆ. ಅವುಗಳನ್ನು ತಮ್ಮ 45 ಎಕರೆ ತೋಟದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರಫುಲ್ಲಚಂದ್ರ ಅಳವಡಿಸಿದ್ದಾರೆ. ಒಂದು ಎಕರೆಯಲ್ಲಿ 121 ತೆಂಗಿನ ಗಿಡಗಳನ್ನು ‘ಜಿಗ್ ಜಾಗ್’ ವಿಧಾನದಲ್ಲಿ ನೆಟ್ಟಿದ್ದಾರೆ. ಕೇವಲ ಸಾಂಪ್ರದಾಯಿಕ ಪದ್ಧತಿಯಿಂದ ವಾಣಿಜ್ಯ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಮನಗಂಡಾಗ, ಆಧುನಿಕ ಕೃಷಿ ಪದ್ಧತಿಗಳನ್ನೂ ಸಾಂಪ್ರದಾಯಿಕ ಕೃಷಿಯೊಂದಿಗೆ ಮಿಳಿತಗೊಳಿಸಿ ಯಶಸ್ಸು ಪಡೆಯುತ್ತಿದ್ದರು.

1968ರಿಂದ ಉಳುಮೆರಹಿತವಾಗಿ ಕೂಳೆಯಿಂದಲೇ ಕಬ್ಬು ಬೆಳೆಸುವ ಪ್ರಯೋಗ ಆರಂಭಿಸಿದರು. ಒಂದು ಬಾರಿ ನಾಟಿ ಮಾಡಿದ ಕಬ್ಬನ್ನು ಕಟಾವು ಮಾಡಿದ ನಂತರ ಉಳಿದ ಕೂಳೆಯಿಂದಲೇ ಪುನಃ ಕಬ್ಬು ಬೆಳೆಸುವ ಪ್ರಕ್ರಿಯೆ ಇದು. ಈ ಪದ್ಧತಿಯಲ್ಲಿ ಸುಮಾರು 40 ಬಾರಿ ಕಬ್ಬು ಬೆಳೆಯುವ ಮೂಲಕ ದಾಖಲೆ ನಿರ್ಮಿಸಿದ ಕೀರ್ತಿ ಪ್ರಫುಲ್ಲಚಂದ್ರರಿಗೆ ಸಲ್ಲುತ್ತದೆ. ಈ ಪ್ರಕ್ರಿಯೆಯಲ್ಲಿ ಕಬ್ಬಿನಿಂದ ಉಳಿಯುವ ಗರಿ ಹಾಗೂ ಇತರ ಕೃಷಿ ತ್ಯಾಜ್ಯಗಳನ್ನು ಗದ್ದೆಯಲ್ಲೇ ಉಳಿಸಿ, ಕಬ್ಬು ಬೆಳೆಸಿದ್ದಾರೆ.

ಸಾವಯವ ಕೃಷಿ ಎನ್ನುತ್ತಾ ಗೊಬ್ಬರ, ಬೀಜ ಈ ಮುಂತಾದ ಒಳಸುರಿಗಳನ್ನು ದುಬಾರಿ ಹಣಕೊಟ್ಟು ಮಾರುಕಟ್ಟೆಯಿಂದ ಖರೀದಿಸಿ ತರುವುದು, ಶೂನ್ಯ, ಸಹಜ ಕೃಷಿಯ ಹೆಸರಿನಲ್ಲಿ ಕೃಷಿಕರು ಸೋಮಾರಿತನ ಪ್ರದರ್ಶಿಸುವುದು– ಇವನ್ನು ಅವರು ವಿರೋಧಿಸುತ್ತಿದ್ದರು. ತೋಟಕ್ಕೆ ಬಂದ ಕೃಷಿಕರ ಪೂರ್ವಾಪರ ವಿಚಾರಿಸದೇ ಅವರೆಂದೂ ತೋಟವನ್ನು ತೋರಿಸುತ್ತಿರಲಿಲ್ಲ.

ಪ್ರಫುಲ್ಲಚಂದ್ರ ಅವರ ತೋಟ ಕೃಷಿಕರಿಗೆ ಯಾತ್ರಾಸ್ಥಳವಿದ್ದಂತೆ. ಮಳೆಗಾಲ ಹೊರತುಪಡಿಸಿ ವರ್ಷಪೂರ್ತಿ ಜಾತ್ರೆಗೆ ಸೇರಿದಂತೆ ಜನ ಸೇರುತ್ತಿದ್ದರು.

‘ರೈತರು ಒಂದೇ ತೆರನಾದ ಬೆಳೆ ಬೆಳೆದರೆ ಉಳಿಗಾಲ ಸಾಧ್ಯವಿಲ್ಲ. ಮಿಶ್ರಬೆಳೆ, ಅಂತರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಮಣ್ಣಿಗೆ ಬೇರುಗಳ ಮೂಲಕ ಜೀವ ತುಂಬುವ ಸಸ್ಯಗಳನ್ನು ಬೆಳೆಸಬೇಕು. ಇದರಿಂದಾಗಿ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ’ ಎನ್ನುತ್ತಲೇ ಪಾಠ ಆರಂಭಿಸುತ್ತಿದ್ದರು.

‘ಸುಮಾರು ಒಂದೂವರೆ ದಶಕದಿಂದ ರೈತರನ್ನು ಇವರಲ್ಲಿಗೆ ಅಧ್ಯಯನ ಪ್ರವಾಸಕ್ಕಾಗಿ ಕರೆದೊಯ್ದಿದ್ದೇನೆ. ಅವರು ಬೈಯ್ದು ಹೇಳುವ ಬುದ್ಧಿವಾದದ ಮಾತಿಗೆ ನಮ್ಮ ಫಲಾನುಭವಿಗಳು ಬದಲಾಗುತ್ತಿದ್ದರು. ಪ್ರವಾಸದಿಂದ ಹಿಂದಿರುಗಿದ ರೈತರು ತಮ್ಮ ಜಮೀನಿನಲ್ಲಿ ಪ್ರಫುಲ್ಲಚಂದ್ರ ಅವರ ವಿಧಾನಗಳನ್ನು ಅಳವಡಿಸಿ ಕೊಳ್ಳುವಷ್ಟರ ಮಟ್ಟಿಗೆ ರೈತರು ಬದಲಾಗುತ್ತಿದ್ದರು. ನಿಜಕ್ಕೂ ಅವರೊಬ್ಬ ಅತ್ಯುತ್ತಮ ಕೃಷಿ ಮೇಷ್ಟ್ರು’ ಎಂದು ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ ನೆನಪಿಸಿಕೊಳ್ಳುತ್ತಾರೆ.

ಶ್ರಮ ಉಳಿತಾಯ: ‘ಮಾನವ ಶ್ರಮ ಉಳಿಸುವುದನ್ನು ರೈತರು ಕಲಿಯಬೇಕು’- ಇದು ಪ್ರಫುಲ್ಲಚಂದ್ರ ಅವರ ಧ್ಯೇಯ ವಾಕ್ಯವಾಗಿತ್ತು. ಈ ಮಾತಿಗೆ ತಕ್ಕಂತೆ ತಮ್ಮ ಕೊಟ್ಟಿಗೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜಮೀನಿಗೆ ರವಾನಿಸಲು ಎಷ್ಟು ದೂರವಾಗುತ್ತದೆ? ಎಷ್ಟು ಸಮಯ ಖರ್ಚಾಗುತ್ತದೆ? ಮಾನವ ಶಕ್ತಿಯ ಬಳಕೆ ಎಷ್ಟು? ಎಂದೆಲ್ಲ ಲೆಕ್ಕ ಹಾಕುತ್ತಿದ್ದರು. ಹೀಗೆ ವ್ಯರ್ಥವಾಗುವ ಹಣ –ಸಮಯ-ಶಕ್ತಿ ಉಳಿಸಲು ಕೊಟ್ಟಿಗೆಯಿಂದಲೇ ನೇರವಾಗಿ ಜಮೀನಿಗೆ ದ್ರವರೂಪದ ತ್ಯಾಜ್ಯ ಹರಿಸುವಂತಹ ತಂತ್ರಜ್ಞಾನವನ್ನು ತೋಟದಲ್ಲಿ ಅಳವಡಿಸಿದ್ದರು.

‘ಕೂಲಿ ಕಾರ್ಮಿಕರ ಕೊರತೆ’ ಎಂಬ ಸೋಗನ್ನು ಒಪ್ಪದ ಪ್ರಫುಲ್ಲಚಂದ್ರ, ತಮ್ಮ ತೋಟದಲ್ಲಿ ಕಾರ್ಮಿಕರಿಲ್ಲದೇ ಆಗುತ್ತಿದ್ದ ಕೆಲಸಗಳನ್ನು ರೈತರಿಗೆ ಪರಿಚಯಿಸುತ್ತಿದ್ದರು.

ಕಾರ್ಮಿಕರ ಬಗ್ಗೆ ಎಲ್ಲಿಲ್ಲದ ಪ್ರೀತಿ: ರೈತರು ಖುಷಿಯಾಗಿರುವಂತೆ, ಕೃಷಿ ಕಾರ್ಮಿಕರು ಸುಖವಾಗಿರಬೇಕು ಎಂಬುದು ಪ್ರಫುಲ್ಲ ಚಂದ್ರ ಅವರ ಉದ್ದೇಶವಾಗಿತ್ತು. ಅದಕ್ಕಾಗಿ ತೋಟದ ಮನೆಯಿಂದ ಅನತಿ ದೂರದಲ್ಲೇ ಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ‘ನಾವು ಮಾತ್ರ ಮಂಚದ ಮೇಲೆ ಮಲಗಬೇಕು. ಶ್ರಮ ಪಡುವ ಕಾರ್ಮಿಕರಿಗೆ ಯಾಕೆ ಆ ಸೌಲಭ್ಯವಿರಬಾರದು’ ಎನ್ನುತ್ತಲೇ, ಕಾರ್ಮಿಕರ ಮನೆಗಳಲ್ಲಿ ಕಡಿಮೆ ವೆಚ್ಚದ ಕಡಪ ಕಲ್ಲಿನ ಕಾಯಂ ಮಂಚವನ್ನೇ ಕಟ್ಟಿಸಿದ್ದರು.

ಕಾರ್ಮಿಕರ ಜೊತೆ ಜೊತೆಗೆ ನಾವು ದುಡಿಯಬೇಕು ಎನ್ನುವುದು ಅವರ ಸಿದ್ಧಾಂತವಾಗಿತ್ತು. ಹಾಗಾಗಿ ಬೆಳಗಿನಿಂದಲೇ ಕಾರ್ಮಿಕರ ಒಟ್ಟಿಗೆ ದುಡಿಮೆಗೆ ನಿಲ್ಲುತ್ತಿದ್ದರು. ಕೃಷಿಯಲ್ಲಿನ ಅನುಭವವನ್ನು ದಾಖಲಿಸುವ ಅಭ್ಯಾಸವಿಟ್ಟುಕೊಂಡಿದ್ದ ಪ್ರಫುಲ್ಲ ಚಂದ್ರ ಅನೇಕ ಪುಸ್ತಕಗಳನ್ನು ಬರೆದಿದ್ದರು. ಬರವಣಿಗೆ, ಅದ್ಭುತ ವಾಕ್ಚಾತುರ್ಯದಿಂದ ಎಲ್ಲ ಜನರ ಜತೆಗೆ ಬೆರೆಯುತ್ತಿದ್ದ ಪ್ರಫುಲ್ಲಚಂದ್ರ 80ರ ಇಳಿವಯಸ್ಸಿನಲ್ಲೂ ದಣಿವರಿಯದೇ ನೆಲದೊಂದಿಗೆ ಒಡನಾಟವಿಟ್ಟುಕೊಂಡಿದ್ದರು.

ದಶಕಗಳ ಕಾಲ ಇಡೀ ಕುಟುಂಬದ ಜೊತೆಗೆ ಕೃಷಿಯೊಂದಿಗೇ ಬದುಕು ಸವೆಸಿ, ಈ ತಿಂಗಳ 11ರ ಮುಂಜಾನೆ ‘ನೆಲದ ಬಂಧ’ವನ್ನು ಬಿಡಿಸಿಕೊಂಡು ಹೊರಟೇ ಬಿಟ್ಟರು. ‘ಕೃಷಿ ಸಂಪದ’ದ ಅಂಗಳದಲ್ಲಿ ತಾವೇ ಸೃಷ್ಟಿಸಿದ ಸಂಶೋಧನೆಗಳನ್ನು ಬಿಟ್ಟು ಹೊರಟರು. ಅವರೇ ಶೋಧಿಸಿದ ಕೃಷಿ ಪದ್ಧತಿಗಳು, ಕೃಷಿ ತಂತ್ರಜ್ಞಾನಗಳು, ಸಾಧನೆಯ ಕಿರೀಟ ತೊಡಿಸಿದ ಕೂಳೆ ಕಬ್ಬು, ತೆಂಗು, ಭತ್ತ ಎಲ್ಲವೂ ಮೌನದೊಂದಿಗೆ ಅವರನ್ನು ಬೀಳ್ಕೊಟ್ಟವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.