ಅವರು ಕನ್ನಡದ ಮಹಾಕವಿ. ಸಾಮಾನ್ಯರನ್ನು ಶ್ರೀಸಾಮಾನ್ಯ ಎಂದು ಕರೆದು ಗೌರವ ಕೊಟ್ಟವರು.
ಇವರು ಶ್ರೀಸಾಮಾನ್ಯರ ವೈದ್ಯ ಎಂದೇ ಪ್ರಸಿದ್ಧರಾದವರು. ಇಬ್ಬರಿಗೂ ಅವಿನಾಭಾವ ಸಂಬಂಧ.
ಅದು ವೈದ್ಯ ಮತ್ತು ರೋಗಿಯ ಸಂಬಂಧ ಅಲ್ಲ. ವೈದ್ಯ ಇಲ್ಲಿ ರೋಗಿಯ ವಿದ್ಯಾರ್ಥಿಯೂ ಹೌದು. ರೋಗಿ ವೈದ್ಯನ ದಾರ್ಶನಿಕ ಗುರುವೂ ಹೌದು.

ಇದು ರಾಷ್ಟ್ರಕವಿ ಕುವೆಂಪು ಮತ್ತು ಡಾ.ಲಕ್ಷ್ಮೀನಾರಾಯಣ್್ ಅವರ ನಡುವಿನ ಸಂಬಂಧ. ಡಾ.ಲಕ್ಮೀನಾರಾಯಣ್ ಕೋಲಾರ ಜಿಲ್ಲೆಯವರು. ಆದರೆ ಮೈಸೂರಿನಲ್ಲಿ ‘ಕಾಮನ್ ಮ್ಯಾನ್್ಸ ಡಾಕ್ಟರ್’ ಎಂದು ಪ್ರಸಿದ್ಧರಾದವರು. ಕುವೆಂಪು ಅವರನ್ನು ಕೊನೆಯ ಕಾಲದಲ್ಲಿ ನೋಡಿಕೊಂಡವರೂ ಅವರೇ.

ಕುವೆಂಪು ಅವರಿಗೆ ವಯೋಸಹಜ ಕಾಯಿಲೆಗಳಿದ್ದವೇ ವಿನಾ ಹೆಚ್ಚಿನ ಆರೋಗ್ಯದ ಸಮಸ್ಯೆ ಇರಲಿಲ್ಲ. ಅವರು ತಮ್ಮ ಜೀವಿತದ ಅವಧಿಯಲ್ಲಿ ಆಸ್ಪತ್ರೆಗೆ ಹೋಗಿದ್ದು ಕಡಿಮೆ. ಒಮ್ಮೆ ಮಾತ್ರ ಅವರನ್ನು ಒತ್ತಾಯಪೂರ್ವಕವಾಗಿ ಲಕ್ಷ್ಮೀನಾರಾಯಣ್ ಅವರೇ ಸ್ಕ್ಯಾನಿಂಗ್ ಮಾಡಿಸುವುದಕ್ಕಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅದು ಬಿಟ್ಟರೆ ಅವರ ವೈದ್ಯೋಪಚಾರ ನಡೆಯುತ್ತಿದ್ದುದು ಉದಯ ರವಿಯಲ್ಲಿಯೆ.

ಕುವೆಂಪು ಅವರಿಗೆ ವಯಸ್ಸಾದಂತೆ ಮರೆವು ಕಾಡುತ್ತಿತ್ತು. ಅದಕ್ಕೇ ಅವರ ಮಿದುಳನ್ನು ಒಮ್ಮೆ ಸ್ಕ್ಯಾನ್ ಮಾಡಿಸಲು ಲಕ್ಷ್ಮೀನಾರಾಯಣ್ ನಿರ್ಧರಿಸಿದರು. ಆಗ ಮೈಸೂರಿನ ಹೆಬ್ಬಾಳದ ನೀಲಗಿರಿ ಡಯಾಗ್ನಸ್ಟಿಕ್ ಸೆಂಟರ್ನಲ್ಲಿ ಮಾತ್ರ ಸ್ಕ್ಯಾನ್ ಯಂತ್ರ ಇತ್ತು. ಕುವೆಂಪು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲೇಬೇಕಿತ್ತು. ಅಂತೂ ಅವರ ಮನವೊಲಿಸಿ ಕರೆದುಕೊಂಡು ಸ್ಕ್ಯಾನ್ ಮಾಡಿಸಿಕೊಂಡು ಬಂದುದು ಸಾಹಸದ ಅನುಭವ ಎಂದು ಲಕ್ಷ್ಮೀನಾರಾಯಣ್ ವಿವರಿಸುತ್ತಾರೆ.

ಕುವೆಂಪು ಅವರ ದೃಷ್ಟಿಯಲ್ಲಿ ವೈದ್ಯನೊಬ್ಬ ತತ್ವಜ್ಞಾನಿಯಾಗಿರಬೇಕು. ಸಾಮಾಜಿಕ ಬದ್ಧತೆ ಕೂಡ ಇರಬೇಕು. ಕೇವಲ ದೇಹವನ್ನು ಪರೀಕ್ಷಿಸಿ ಔಷಧ ಕೊಟ್ಟು ಕಳುಹಿಸಿದರೆ ಅವನೆಂತಹ ವೈದ್ಯ ಎಂದು ಅವರು ಪ್ರಶ್ನಿಸುತ್ತಿದ್ದರು.

‘ಕುವೆಂಪು ಪುತ್ರಿ ತಾರಿಣಿ ಅವರಿಂದಾಗಿ ನನಗೆ ಕುವೆಂಪು ಅವರ ಪರಿಚಯ. ಆದರೆ ನನ್ನನ್ನೂ ಅವರು ವೈದ್ಯ ಎಂದು ಸ್ವೀಕರಿಸಲು 6 ತಿಂಗಳ ಸಮಯ ತೆಗೆದುಕೊಂಡರು. ಮೊದಮೊದಲು ನಾನು ಅವರ ಚಿಕಿತ್ಸೆಗೆಂದು ಉದಯರವಿಗೆ ಹೋದರೆ ಅವರು ನನ್ನೊಡನೆ ಮಾತನಾಡುತ್ತಲೇ ಇರಲಿಲ್ಲ’ ಎಂದು ಲಕ್ಷ್ಮೀನಾರಾಯಣ್ ಹೇಳುತ್ತಾರೆ.

ಕುವೆಂಪು ಅವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಸುಮಾರು 80 ವರ್ಷ ಆದಾಗಿನಿಂದಲೂ ಅವರ ಆರೋಗ್ಯದ ಮೇಲ್ವಿಚಾರಣೆ ಲಕ್ಷ್ಮೀನಾರಾಯಣ್ ಅವರದ್ದೇ ಆಗಿತ್ತು. ಕುವೆಂಪು ಅವರಿಗೆ ಕೊನೆಯ ಕಾಲದಲ್ಲಿಯೂ ಮಧುಮೇಹ ಇರಲಿಲ್ಲ. ಬಿ.ಪಿ. ಮತ್ತು ಮಲಬದ್ಧತೆ ಇತ್ತು. ಅವರಿಗೆ ಮಧು ಮೋಹ ಕೂಡ ಇರಲಿಲ್ಲ. ಆಹಾರದಲ್ಲಿ ಅವರ ಆಯ್ಕೆ ಎನ್ನುವುದೇ ಇರಲಿಲ್ಲ. ಮಗಳು ತಾರಿಣಿ ಏನು ಕೊಡುತ್ತಾರೋ ಅದನ್ನು ಅವರು ಸ್ವೀಕರಿಸುತ್ತಿದ್ದರು. ಕೊನೆಯ ಕಾಲದಲ್ಲಿ ತಾರಿಣಿ ಅವರು ಅನ್ನ, ಸಾರು, ತರಕಾರಿ ಎಲ್ಲವನ್ನೂ ಸೇರಿಸಿ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದರು. ಅದನ್ನು ಕುವೆಂಪು ಸೇವಿಸುತ್ತಿದ್ದರು. ಕುವೆಂಪು ಪಾಲಿಗೆ ತಾರಿಣಿ ಮಗಳು, ತಾಯಿ ಎಲ್ಲವೂ. ಅಪ್ಪಟ ವೃತ್ತಿನಿರತ ಶುಶ್ರೂಷಕಿಯಂತೆ ಅವರು ಕುವೆಂಪು ಅವರನ್ನು ನೋಡಿಕೊಂಡರು. ಅದಕ್ಕೇ ಕುವೆಂಪು ಅವರಿಗೆ ಆಸ್ಪತ್ರೆಗೆ ಹೋಗುವ ತಾಪತ್ರಯವೇ ಬರಲಿಲ್ಲ ಎಂದು ಲಕ್ಷ್ಮೀನಾರಾಯಣ್ ನೆನಪಿಸಿಕೊಳ್ಳುತ್ತಾರೆ.

ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಕುವೆಂಪು ಮಾತು ಕಡಿಮೆ ಮಾಡಿದ್ದರು. ತಮ್ಮ ಬಳಿಗೆ ಬರುವ ಜನರಿಗೆ ವಿಶ್ವ ಮಾನವ ಸಂದೇಶದ ಪುಸ್ತಿಕೆಯ ಪ್ರತಿಯನ್ನು ಕೊಟ್ಟು ಕಳುಹಿಸುತ್ತಿದ್ದರು. ಕಡೆಗೆ ಅದನ್ನೂ ಬಿಟ್ಟು ಬಿಟ್ಟರು; ಮಾತನ್ನೂ ಬಿಟ್ಟರು.

ಕುವೆಂಪು ಮಾತನಾಡುವುದನ್ನು ಬಿಟ್ಟಿದ್ದರಿಂದ ಬಹುತೇಕ ಎಲ್ಲರೂ ಅವರಿಗೆ ಮಾತು ನಿಂತು ಹೋಗಿದೆ ಎಂದೇ ಭಾವಿಸಿದ್ದರು. ಆದರೆ ಅವರು ಉದ್ದೇಶಪೂರ್ವಕವಾಗಿಯೇ ಮಾತನ್ನು ಬಿಟ್ಟಿದ್ದರು.

ಹೀಗೆ ಮಾತು ಬಿಟ್ಟ ಸಂದರ್ಭದಲ್ಲಿಯೇ ಒಮ್ಮೆ ಕುವೆಂಪು ಅವರು ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಆಗ ತಾರಿಣಿ ಅವರು ಕುವೆಂಪು ಅವರನ್ನು ಚೆನ್ನಾಗಿ ಉಪಚರಿಸಿದರು. ಹೀಗೆ ಉಪಚರಿಸುವಾಗ ತಂದೆ ಪಡುತ್ತಿದ್ದ ಕಷ್ಟವನ್ನು ನೋಡಿ ಅವರ ಕಣ್ಣಲ್ಲಿ ನೀರು ಬಂತು. ಆಗ ಕುವೆಂಪು ‘ಯಾಕಮ್ಮ ಅಳುತ್ತೀಯಾ? ನನಗೆ ಏನಾಗಿದೆ’ ಎಂದು ಪ್ರಶ್ನೆ ಮಾಡಿ ಮಗಳ ತಲೆಯ ಮೇಲೆ ಕೈ ಇಟ್ಟರು. ಮಗಳಿಗೆ ಅಪ್ಪ ಮಾತನಾಡಿದ ಸಂತೋಷ.

ಬಂಗಾರಪ್ಪ ಸರ್ಕಾರ ಕುವೆಂಪು ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಉದಯರವಿಯಲ್ಲಿಯೇ ಪ್ರಶಸ್ತಿ ಸಮಾರಂಭ. ಆಗ ಅಲ್ಲಿ ಫೋಟೊಗ್ರಾಫರ್ಗಳ ಹಾವಳಿ. ಕುವೆಂಪು ಅವರ ಜೊತೆಗೆ ಫೋಟೊ ತೆಗೆಸಿಕೊಳ್ಳುವವರ ಪೈಪೋಟಿ. ಕ್ಯಾಮೆರಾದ ಫ್ಲ್ಯಾಶ್ನಿಂದ ಅವರ ಕಣ್ಣಿಗೆ ತೊಂದರೆಯಾಗುತ್ತಿತ್ತು. ಅದನ್ನು ತಪ್ಪಿಸಿ ಕುವೆಂಪು ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದು ಭಾರೀ ಕಷ್ಟವಾಯಿತು. ಎಲ್ಲರೂ ನನ್ನನ್ನು ಬೈದುಕೊಂಡರು. ಆಗಲೇ ಅವರು ಮಾತನಾಡುವುದನ್ನು ಬಿಟ್ಟಿದ್ದರು ಎಂದು ಲಕ್ಷ್ಮೀನಾರಾಯಣ್ ನೊಂದು ನುಡಿಯುತ್ತಾರೆ.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರನ್ನು ನೋಡಿಕೊಳ್ಳಲು 4 ತಜ್ಞ ವೈದ್ಯರು ಹಾಗೂ ದಾದಿಯರನ್ನು ನೇಮಿಸಿತು. ಆಗ ಕುವೆಂಪು ಅವರು ‘ಅಯ್ಯೋ ಲಕ್ಷ್ಮೀನಾರಾಯಣ್ ಇರುವಾಗ ಮತ್ತೆ ಬೇರೆ ವೈದ್ಯರು ಯಾಕೆ?’ ಎಂದು ಪ್ರಶ್ನೆ ಮಾಡಿದ್ದರಂತೆ.

‘ರಾಜ್ಯ ಸರ್ಕಾರ ವೈದ್ಯರು ಮತ್ತು ದಾದಿಯರನ್ನು ನೇಮಿಸಿರುವ ವಿಷಯವನ್ನು ತಾರಿಣಿ ಅವರು ನನಗೆ ತಿಳಿಸಿದಾಗ ಸರ್ಕಾರ ಕೊಟ್ಟ ಸೌಲಭ್ಯವನ್ನು ತಿರಸ್ಕರಿಸುವುದು ಬೇಡ. ಆದರೆ ವೈದ್ಯರು ದಿನಾ ಬಂದು ಪರೀಕ್ಷಿಸುವ ಅಗತ್ಯವಿಲ್ಲ. ದಾದಿಯರು ಮಾತ್ರ ಹಗಲು ಮತ್ತು ರಾತ್ರಿ ಪಾಳಿಗೆ ಬರಲಿ ಎಂದು ನಾನು ಸಲಹೆ ಮಾಡಿದೆ. ಯಾಕೆಂದರೆ ನನಗೆ ಕುವೆಂಪು ಅವರಿಗಿಂತ ತಾರಿಣಿ ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಿತ್ತು’ ಎಂದು ಹೇಳುತ್ತಾರೆ ಲಕ್ಷ್ಮೀನಾರಾಯಣ್.

ಕುವೆಂಪು ಅವರಿಗೆ ಕೊನೆಯ ಕಾಲದಲ್ಲಿ ಕವಿಶೈಲಕ್ಕೆ ಒಮ್ಮೆ ಹೋಗಿಬರುವ ಮನಸ್ಸಾಯಿತು. ಅದಕ್ಕೆ ರಾಜ್ಯ ಸರ್ಕಾರ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿತು. ಮೈಸೂರಿನ ಲಲಿತ್ಮಹಲ್ ಹೆಲಿಪ್ಯಾಡಿಗೆ ಬೆಳಿಗ್ಗೆ 9ಕ್ಕೆ ಹೆಲಿಕಾಪ್ಟರ್ ಬರುತ್ತದೆ ಎಂದು ತಿಳಿಸಲಾಗಿತ್ತು.

ಅದರಂತೆ ಕುವೆಂಪು, ಅವರ ಅಳಿಯ ಚಿದಾನಂದ ಗೌಡ ಮತ್ತು ಡಾ.ಲಕ್ಷ್ಮೀನಾರಾಯಣ್ ಅವರು ಹೆಲಿಪ್ಯಾಡಿಗೆ ಹೋದರೆ ಅಲ್ಲಿ ಹೆಲಿಕಾಪ್ಟರ್ ಬಂದೇ ಇಲ್ಲ. ಎಲ್ಲರೂ ಉದಯರವಿಗೆ ವಾಪಸಾದರು. ಮತ್ತೆ 12 ಗಂಟೆಗೆ ಹೆಲಿಕಾಪ್ಟರ್ ಬರುತ್ತದೆ ಎಂಬ ಸುದ್ದಿ ಬಂತು.

ಆಗ ಕುವೆಂಪು ಅವರು ‘ಅಯ್ಯೋ ನಿಮಗೆ ಎಷ್ಟು ತೊಂದರೆಯಾಯಿತು. ನೀವು ಸುಮ್ಮನೆ ಇಲ್ಲಿ ಕಾಯಬೇಕಾಯಿತು. ಆಸ್ಪತ್ರೆಯಲ್ಲಿ ಇದ್ದಿದ್ದರೆ ಎಷ್ಟೊಂದು ರೋಗಿಗಳನ್ನು ನೋಡಬಹುದಾಗಿತ್ತು. ಸುಮ್ಮನೆ ನನ್ನನ್ನು ಕಾಯುವುದೇ ಆಯಿತು’ ಎಂದು ಹೇಳಿದ್ದರು ಎನ್ನುವುದನ್ನು ನೆನಪಿಸಿಕೊಳ್ಳುವಾಗ ವೈದ್ಯರ ಮುಖದಲ್ಲಿ ಧನ್ಯತೆಯ ಭಾವ.

ಕುವೆಂಪು ಅವರಿಗೆ ಕೊನೆಯ ಕಾಲದಲ್ಲಿ ನ್ಯುಮೋನಿಯ ಆಗಿತ್ತು. ಎದೆಯಲ್ಲಿ ಕಫ ಕಟ್ಟಿಕೊಂಡಿತ್ತು. ರಾತ್ರಿ 2 ಗಂಟೆಯ ವೇಳೆಗೆ ಅವರು ದೇಹ ತ್ಯಜಿಸಿದರು ಎಂದು ವಿವರಿಸಿದ ಲಕ್ಷ್ಮೀನಾರಾಯಣ್ ಕೆಲಕಾಲ ಸುಮ್ಮನಾದರು. ಒತ್ತಟ್ಟಿ ಬಂದ ದುಃಖವನ್ನು ತಹಬದಿಗೆ ತಂದುಕೊಂಡು ‘ಅವರು ಸಾಯಲಿಲ್ಲ. ದೇಹತ್ಯಾಗ ಮಾಡಿದರು. ಅವರಿಗೆ ಪುನರ್ ಜನ್ಮದ ಬಗ್ಗೆ ಬಲವಾದ ನಂಬಿಕೆ ಇತ್ತು. ಓ ನನ್ನ ಚೇತನ ಪದ್ಯ ಬರೆದ ಮಹಾಕವಿ ಮತ್ತೆ ಹುಟ್ಟಿ ಬರುತ್ತಾರೆ’ ಎಂದು ವೈದ್ಯರು ಮತ್ತೆ ಮೌನಕ್ಕೆ ಶರಣಾದರು.

ಕುವೆಂಪು ಅವರನ್ನು ನೆನಪಿಸಿಕೊಳ್ಳುವುದು ಎಂದರೆ ಲಕ್ಷ್ಮೀನಾರಾಯಣ್ ಅವರಿಗೆ ಹಬ್ಬ. ಮುಖದ ತುಂಬ ಸಂತಸವನ್ನು ಉಕ್ಕಿಸುತ್ತಾ ಮಾತನಾಡುತ್ತಾರೆ ಅವರು. ‘ನಾನು ಹೈಸ್ಕೂಲ್ನಲ್ಲಿದ್ದಾಗಲೇ ಕುವೆಂಪು ಅವರ ಟುವ್ವಿ ಟುವ್ವಿ ಹಾಡಿತ್ತು. ಆಗಲೇ ನಾನು ಈ ಪದ್ಯ ಬರೆದ ಮಹಾನುಭಾವನನ್ನು ಒಮ್ಮೆಯಾದರೂ ನೋಡಬೇಕು ಎಂದುಕೊಂಡಿದ್ದೆ. ನಾನು ಕಾಲೇಜು ಓದಲು ಮೈಸೂರಿಗೆ ಬಂದಾಗ ಅದು ಸಾಧ್ಯವಾಯಿತು. ಕುವೆಂಪು ಅವರಿಗೆ 60 ವರ್ಷ ತುಂಬಿದಾಗ ಬನುಮಯ್ಯ ಕಾಲೇಜಿನಲ್ಲಿ ಸಮಾರಂಭ ಏರ್ಪಡಿಸಿದ್ದರು. ಅದಕ್ಕೆ ಕುವೆಂಪು ಬರುತ್ತಾರೆ ಎಂದು ಅವರನ್ನು ನೋಡುವುದಕ್ಕಾಗಿಯೇ ನಾನು ಅಲ್ಲಿಗೆ ಹೋಗಿದ್ದೆ’ ಎಂದು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಾರೆ.

‘ನನಗೆ ಮೊದಲಿನಿಂದಲೂ ವೈದ್ಯನಾಗುವ ಮನಸ್ಸು ಇತ್ತು. ಅದಕ್ಕಾಗಿಯೇ ನಾನು ಕಾಲೇಜಿನಲ್ಲಿ ಪಿಸಿಬಿ ತೆಗೆದುಕೊಂಡಿದ್ದೆ. ಆದರೆ ಕಾಲೇಜಿಗೆ ಹೋದಾಗ ನನಗೆ ಅಚ್ಚರಿ ಕಾಡಿತ್ತು. ನನ್ನನ್ನು ಪಿಸಿಬಿ ಬದಲಾಗಿ ಪಿಸಿಎಂಗೆ ಹಾಕಿದ್ದರು. ನನಗೆ ಏನು ಮಾಡಬೇಕು ಎನ್ನುವುದೇ ಗೊತ್ತಾಗಲಿಲ್ಲ. ಸುಮಾರು 3 ತಿಂಗಳು ಹೀಗೆಯೇ ಕಳೆದು ಹೋಯಿತು. ಕೊನೆಗೆ ಒಂದು ದಿನ ಪ್ರಾಂಶುಪಾಲರಾದ ಡಾ.ಕೇಶವ ಹೆಗ್ಡೆ ಅವರನ್ನು ಕಂಡೆ. ಅವರು ಮೊದಲು ಬೈದರು. ಆದರೂ ನನ್ನನ್ನು ಪಿಸಿಬಿಗೆ ವರ್ಗಾಯಿಸಿದರು. ಇದರಿಂದಾಗಿ ನಾನು ವೈದ್ಯನಾಗಲು ಸಾಧ್ಯವಾಯಿತು. ಇದಾಗಿ ಎಷ್ಟೇ ವರ್ಷಗಳ ನಂತರ ಕುವೆಂಪು ಅವರ ಮನೆಯಲ್ಲಿ ಡಾ.ಕೇಶವ ಹೆಗ್ಡೆ ಅವರ ಫೋಟೊ ನೋಡಿದೆ. ಈ ಫೋಟೊ ಇಲ್ಲಿ ಯಾಕೆ ಇದೆ ಎಂದು ತಾರಿಣಿ ಅವರನ್ನು ಕೇಳಿದೆ. ಆಗಲೇ ನನಗೆ ಗೊತ್ತಾಗಿದ್ದು ಕೇಶವ ಹೆಗ್ಡೆ ಅವರು ಕುವೆಂಪು ಅವರ ಕೋಬ್ರದರ್ ಎಂದು. ನಾನು ವೈದ್ಯನಾಗಲು ಸಹಕರಿಸಿದ ಕೇಶವ ಹೆಗ್ಡೆ ಅವರ ಸಂಬಂಧಿಯೇ ಈ ಮಹಾಕವಿ ಎಂದಾಗ ನಾನು ನಿಜಕ್ಕೂ ಭಾವುಕನಾಗಿದ್ದೆ’ ಎಂದು ಅವರು ಮತ್ತೊಮ್ಮೆ ಭಾವುಕರಾದರು.

‘ನಾನು ಕುವೆಂಪು ಅವರ ಮನೆಗೆ ಹೋಗುವಾಗಲೆಲ್ಲಾ ನನ್ನ ಪತ್ನಿ ನನ್ನ ಜೊತೆಗೆ ಬರುತ್ತಿದ್ದಳು. ಹೀಗೆ ಒಮ್ಮೆ ಕುವೆಂಪು ಅವರು ತಮ್ಮ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನನ್ನ ಪತ್ನಿಗೆ ಆಶೀರ್ವಾದಪೂರ್ವಕವಾಗಿ ಕೊಟ್ಟು ಇದನ್ನು ನಿನ್ನ ಗಂಡನಿಗೆ ಓದಿ ಹೇಳಮ್ಮ. ಅವರಿಗೆ ಸಮಯ ಸಿಗುವುದಿಲ್ಲ. ಆದರೆ ನೀನು ಬಿಡಬೇಡ ಎಂದರು. ಸಿಕ್ಕಿದ್ದೇ ಚಾನ್ಸು ಎಂದು ನನ್ನ ಪತ್ನಿ ನಾನು ಊಟ ಮಾಡುವಾಗ, ತಿಂಡಿ ತಿನ್ನುವಾಗ ಕಾದಂಬರಿಯನ್ನು ಓದಿ ಹೇಳುತ್ತಿದ್ದಳು.

ನಾವಿಬ್ಬರೂ ಏಕಾಂತದಲ್ಲಿದ್ದಾಗಲೂ ಕುವೆಂಪು ಅವರ ಕುರಿತೇ ಮಾತುಕತೆ ಯಾಗುತ್ತಿತ್ತು. ನನ್ನ ಮನೆ ಮಾತು ತೆಲುಗು. ಆದರೆ ಮಾತೃಭಾಷೆ ಕನ್ನಡ. ಆದರೂ ನಾನು ಕನ್ನಡದಲ್ಲಿ ಬರವಣಿಗೆ ಮಾಡುವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಕುವೆಂಪು ಅವರನ್ನು ಓದಿಕೊಂಡ ನಂತರ ನಾನು ಕನ್ನಡದಲ್ಲಿ ಬರೆಯಲು ಆರಂಭಿಸಿದೆ. ವೈದ್ಯ ಸಾಹಿತ್ಯಕ್ಕೆ ನನ್ನದೇ ಆದ ಕೊಡುಗೆ ನೀಡಲು ತೊಡಗಿದೆ. ನಂತರ ನನ್ನ ಮನೆ ಮಾತು ಮತ್ತು ಮಾತೃಭಾಷೆ ಎರಡೂ ಕನ್ನಡವೇ ಆಯಿತು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

‘ಯಾವುದನ್ನೂ ಅವೈಜ್ಞಾನಿಕವಾಗಿ ನೋಡಬೇಡಿ. ವಿಜ್ಞಾನ ಓದಿದ್ದೇವೆ ಎಂದು ತತ್ವ ಬಿಡಬೇಡಿ ಎಂದು ಕುವೆಂಪು ಹೇಳುತ್ತಿದ್ದರು. ಅದನ್ನು ನಾನು ಈಗಲೂ ಪಾಲಿಸುತ್ತಿದ್ದೇನೆ. ಕುವೆಂಪು ಅವರಿಗೆ ಕೊನೆಯ ಕಾಲದಲ್ಲಿ ನಾನು ವೈದ್ಯ. ಆದರೆ ಅವರು ನನಗೆ ಯಾವಾಗಲೂ ಗುರು’ ಎಂದು ಧನ್ಯತೆಯನ್ನು ಹೊಂದುತ್ತಾರೆ ಅವರು.

ಒಮ್ಮೆ ನನ್ನ ಪತ್ನಿ ಕುವೆಂಪು ಅವರನ್ನು ಈಗ ಏನು ಬರೆಯುತ್ತಿದ್ದೀರಿ ಎಂದು ಕೇಳಿದಳು. ‘ಇಲ್ಲಮ್ಮ. ಇನ್ನು ನಾನು ಬರೆಯುವುದಿಲ್ಲ. ಈ ಜನ್ಮದಲ್ಲಿ ಇಷ್ಟು ಸಾಕು ಎಂದು ತಾಯಿಯ ಆಜ್ಞೆ ಆಗಿದೆ. ‘ಓ ನನ್ನ ಚೇತನ’ ಬರೆದ ಮೇಲೆ ಇನ್ನೇನು ಬರೆಯಬೇಕಮ್ಮ ಎಂದು ಪ್ರಶ್ನೆ ಮಾಡಿದ್ದರು ಎಂದು ಲಕ್ಷ್ಮೀನಾರಾಯಣ್ ಭಾವಲೋಕಕ್ಕೆ ಜಾರಿದರು.

ಅಂದ ಹಾಗೆ ಈ ವರ್ಷ ಡಾ.ಲಕ್ಷ್ಮೀನಾರಾಯಣ್ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.