ಬಹಳಷ್ಟು ಹೊರಗಿನವರ ಕಣ್ಣಲ್ಲಿ ಬಾಂಗ್ಲಾದೇಶ ಎಂದರೆ `ಕಿತ್ತು ತಿನ್ನುವ ಬಡತನ, ನಿಯಮಿತವಾಗಿ ಬಂದೆರಗುವ ಪ್ರಾಕೃತಿಕ ವಿಪತ್ತು~ಗಳ ರಾಷ್ಟ್ರ.

ಆದರೆ ಮಹಿಳೆಯರ ಸ್ಥಾನಮಾನ, ಸಶಕ್ತೀಕರಣದ ವಿಷಯ ಬಂದಾಗ ಮಾತ್ರ ಅದರ ಸಾಧನೆ ಎಂಥವರೂ ಹೆಮ್ಮೆ ಪಡುವಂತೆ ಮಾಡುತ್ತದೆ. ಇತರ ಬಹುಪಾಲು ಮುಸ್ಲಿಂ ದೇಶಗಳಲ್ಲಿ ಊಹಿಸಲೂ ಸಾಧ್ಯವಿಲ್ಲದಷ್ಟು ಪ್ರಗತಿ ಇಲ್ಲಿ ಆಗಿದೆ.

ಬಾಂಗ್ಲಾ ಮಹಿಳೆಯರು ವಿಶ್ವದ ವಿವಿಧೆಡೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲಿ ಕೆಲಸ ಮಾಡಿದ್ದಾರೆ, ಮಹಿಳಾ ರಾಯಭಾರಿಗಳಿದ್ದಾರೆ, ಎಂಜಿನಿಯರ್ಗಳು, ವೈದ್ಯೆಯರು, ವಿಮಾನ ಚಾಲಕಿಯರಿದ್ದಾರೆ. ಅಷ್ಟೇ ಏಕೆ. ಅನೇಕ ವರ್ಷಗಳಿಂದ ದೇಶದ ಅಧಿಕಾರ ಸೂತ್ರ ಇಬ್ಬರು ಪ್ರಭಾವಿ ಮಹಿಳೆಯರಾದ ಹಾಲಿ ಪ್ರಧಾನಿ ಶೇಕ್ ಹಸೀನಾ ಮತ್ತು ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಮಧ್ಯೆ ಕೈ ಬದಲಾಯಿಸುತ್ತಿದೆ.

ಪಾರ್ಲಿಮೆಂಟ್ನಲ್ಲಿ ಮಹಿಳಾ ಸದಸ್ಯರ ಪ್ರಮಾಣ ಶೇ 19.7. ಇದು ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿನ ಮಹಿಳೆಯರ ಪ್ರಮಾಣಕ್ಕಿಂತ (ಶೇ 22.3) ಸ್ವಲ್ಪ ಕಡಿಮೆಯಷ್ಟೆ.
`ಮಹಿಳೆಯರು ಎಲ್ಲ ರಂಗದಲ್ಲಿ ಕ್ರಿಯಾಶೀಲರಾಗಿರುವ ದೇಶ ನಮ್ಮದು~ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ ವಿದೇಶಾಂಗ ಸಚಿವೆ ಡಾ. ದೀಪು ಮೋನಿ.

ಸರ್ಕಾರ ಮತ್ತು ಅಭಿವೃದ್ಧಿ ಸಂಸ್ಥೆಗಳ ನಿರಂತರ ಪ್ರಯತ್ನದ ಫಲವಾಗಿಯೇ ಬಾಂಗ್ಲಾ ಮಹಿಳೆಯರ ಬದುಕಿನಲ್ಲಿ ಗಮನಾರ್ಹ ಸುಧಾರಣೆಯಾಗಿದೆ, ಗ್ರಾಮೀಣ ಭಾಗದಲ್ಲಿ ಕೂಡ ಆರೋಗ್ಯ, ಶಿಕ್ಷಣ ಸೇವೆ ವ್ಯಾಪಕವಾಗಿ ದೊರೆಯುತ್ತಿದೆ.

ದಶಕದಿಂದ ಚಾಲ್ತಿಯಲ್ಲಿ ಇರುವ `ಕಿರು ಹಣಕಾಸು ಸಾಲ ಯೋಜನೆಗಳು~ ಮತ್ತು ಇತ್ತೀಚಿನ ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದಿರುವ ಸಿದ್ಧ ಉಡುಪು ತಯಾರಿಕಾ ಕ್ಷೇತ್ರ ಲಕ್ಷಾಂತರ ಮಹಿಳೆಯರ ಆರ್ಥಿಕ ಅಭ್ಯುದಯಕ್ಕೆ ಕೊಡುಗೆ ನೀಡಿವೆ. ಅವರಿಗೆ `ಸಂಸಾರಕ್ಕಾಗಿ ದುಡಿಯುವ, ಗಳಿಸುವ ಯಜಮಾನತಿ~ ಸ್ಥಾನ ತಂದು ಕೊಟ್ಟಿವೆ.

26 ವರ್ಷದ ನೂರ್ಜಹಾನ್, ಢಾಕಾದಿಂದ 4 ತಾಸು ದೂರದಲ್ಲಿರುವ 1 ಸಾವಿರ ಜನವಸತಿಯ ಗ್ರಾಮ ಸೊಮೇಶ್ಪುರದ ನಿವಾಸಿ. ಆಕೆ ಬಾಂಗ್ಲಾದ ಅನೇಕ ಮಹಿಳೆಯರ ಕಷ್ಟಕರ ಬದುಕಿನ ಚಿತ್ರಣ ನೀಡುತ್ತಾರೆ. ಆದರೆ ಅದರ ಬೆನ್ನಲ್ಲೇ, ಎಷ್ಟೋ ಮಹಿಳೆಯರ ಜೀವನ ಹೇಗೆ ಸುಧಾರಿಸಿದೆ ಎಂಬುದನ್ನೂ ವಿವರಿಸುತ್ತಾರೆ.

10 ವರ್ಷಗಳ ಹಿಂದೆ ಎರಡನೇ ಮಗು ಹೊಟ್ಟೆಯಲ್ಲಿ ಇದ್ದಾಗಲೇ ಗಂಡ ಅವರನ್ನು ಬಿಟ್ಟು ಹೋದ. ಕೈಯಲ್ಲಿ ಕಿಲುಬು ಕಾಸೂ ಇರಲಿಲ್ಲ. ಆದರೂ ಆಕೆ ಎದೆಗುಂದದೆ ತನ್ನನ್ನು ಮತ್ತು ಮಕ್ಕಳನ್ನು ಸಾಕಲು ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಾರೆ. ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲೊಂದು ಎಂಬ ಅಪಕೀರ್ತಿ ಹೊತ್ತ ನೆಲದಲ್ಲಿ ತುತ್ತು ಕೂಳು ಸಂಪಾದಿಸುವುದು ಎಷ್ಟು ಕಷ್ಟ ಎಂದು ಊಹಿಸಲು ಭಾರೀ ಬುದ್ಧಿವಂತಿಕೆಯೇನೂ ಬೇಕಿಲ್ಲ.

ಆದರೆ ಎರಡು ವರ್ಷಗಳ ನಂತರ ಅವರ ಅದೃಷ್ಟ ಖುಲಾಯಿಸುತ್ತದೆ. ವಿಧವೆಯರು ಮತ್ತು ಗಂಡಬಿಟ್ಟ ಮಹಿಳೆಯರಿಗೆ ಸುತ್ತಲಿನ ರಸ್ತೆಗಳ ನಿರ್ವಹಣೆ ನೀಡಿ ಆದಾಯ ಗಳಿಕೆಯ ಮಾರ್ಗ ಕಲ್ಪಿಸುವ ಯೋಜನೆ ಅವರ ಕೈ ಹಿಡಿಯುತ್ತದೆ.

ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಅನುದಾನದಲ್ಲಿ ಸ್ಥಳೀಯ ಸಂಸ್ಥೆಗಳು ಅನುಷ್ಠಾನ ಮಾಡುತ್ತಿರುವ ಈ ಯೋಜನೆ ನೂರ್ಜಹಾನ್ ಅವರಂತಹ ಬಾಂಗ್ಲಾದ 24 ಸಾವಿರ ಮಹಿಳೆಯರಿಗೆ ಗಳಿಕೆಯ ದಾರಿ ತೋರಿಸಿದೆ.

ಇದರಲ್ಲಿ ಈ ಮಹಿಳೆಯರು ಎರಡು ವರ್ಷ ತಮಗೊಪ್ಪಿಸಿದ ರಸ್ತೆಯ ಅಕ್ಕಪಕ್ಕದ ಕುರುಚಲು ಸವರಿ ನಿರ್ವಹಣೆ ಮಾಡಿದರು. ಅದಕ್ಕಾಗಿ ಅವರಿಗೆ ದಿನಕ್ಕೆ 100 ಟಕಾ (ಸುಮಾರು 65 ರೂಪಾಯಿ) ಕೂಲಿ ಸಿಗುತ್ತಿತ್ತು. ಇದರಲ್ಲೇ ಉಳಿಸಿ ಅನೇಕರು ನಿವೇಶನ, ಮನೆ ಮಾಡಿಕೊಂಡರು. ಜತೆಗೆ ಜೀವನ ನಿರ್ವಹಣೆಗಾಗಿ ಸ್ವಯಂ ಉದ್ಯೋಗದ ತರಬೇತಿಯೂ ದೊರೆಯಿತು.

ಅದರ ಪ್ರಯೋಜನ ಪಡೆದ ನೂರ್ಜಹಾನ್ ಈಗ ಕಾಂಪೋಸ್ಟ್ ತಯಾರಿಸಿ ಮಾರುತ್ತಾರೆ, ಒಣ ಮೀನು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಗ್ರಾಮದ ಅನೇಕ ಮಹಿಳೆಯರು ಉರುವಲು, ತಿಂಡಿ, ಬಿಸ್ಕಿಟ್ ಇತ್ಯಾದಿ ಮಾರಿ ಅಲ್ಪಸ್ವಲ್ಪ ಲಾಭ ಗಳಿಸುತ್ತಿದ್ದಾರೆ. ಒಬ್ಬಕೆಯಂತೂ ಮಗ್ಗ ಖರೀದಿಸಿದ್ದಾರೆ. ಇವರೀಗ `ಬಡವರಿರಬಹುದು, ಆದರೆ ನಿರ್ಗತಿಕರಂತೂ ಅಲ್ಲ~. ಮಕ್ಕಳ ಹೊಟ್ಟೆ ತುಂಬಿಸಲು, ಶಾಲೆಗೆ ಕಳಿಸಲು ಇವರಿಗೀಗ ಶಕ್ತಿ ಬಂದಿದೆ.

ನೂರ್ಜಹಾನ್ಗೆ ಸ್ಥಳೀಯ ಪಂಚಾಯ್ತಿ ಚುನಾವಣೆಗೆ ನಿಲ್ಲುವ ಆಸೆ ಇದೆ. `ಈಗಲೇ ಸಹಾಯ ಕೇಳಿ ಅನೇಕರು ನನ್ನ ಬಳಿ ಬರುತ್ತಿದ್ದಾರೆ~ ಎನ್ನುವಾಗ ಅವರ ಮುಖದಲ್ಲಿ ಮಂದಹಾಸ. `ಮೊದಲಾದರೆ ನನ್ನನ್ನೂ ಯಾರೂ ಗಮನಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಅಂದಿನ ದಿನಗಳನ್ನು ನೆನೆಸಿಕೊಂಡರೆ ಅಳು ಬರುತ್ತದೆ. ಆದರೆ ಈಗಿನ ಬದುಕು ನೋಡಿದಾಗ ಅಲ್ಲಿ ಕಣ್ಣೀರಿಲ್ಲ; ನಗುವೇ ಎಲ್ಲ~ ಎನ್ನುತ್ತಾರೆ.

ಈ ಪ್ರಗತಿಯ ಬೀಜಾಂಕುರವಾದದ್ದು ಪಾಕಿಸ್ತಾನದಿಂದ 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರವಾದ ಬಳಿಕ. ಆಗಿನ ಸಂಘರ್ಷದಲ್ಲಿ ಪಾಕ್ ಸೇನೆಯ ದೌರ್ಜನ್ಯಕ್ಕೆ ಸಿಕ್ಕು ವಿಧವೆಯರಾದ ಸಹಸ್ರಾರು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಲು ಆರಂಭವಾದ ಪ್ರಯತ್ನಗಳು ಮುಂದೆ ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿದವು ಎಂದು ನೆನಪಿಸಿಕೊಳ್ಳುತ್ತಾರೆ ಢಾಕಾದಲ್ಲಿನ ಏಷ್ಯನ್ ಅಭಿವೃದ್ಧಿ ಬ್ಯಾಂಕ್ನ ಹಿರಿಯ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಫಿರ್ದೌಸಿ ಸುಲ್ತಾನಾ.

`ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಆದರೆ ಕಳೆದ ಎರಡು ದಶಕಗಳಿಂದತೂ ಗಮನಾರ್ಹ ಪ್ರಗತಿಯಾಗಿದೆ. ಬಾಲಕಿಯರಿಗೆ ಶಿಕ್ಷಣ ಕೊಡಿಸಲೇಬೇಕು ಎಂಬ ಜಾಗೃತಿ ಮೂಡಿದೆ. ಮಹಿಳೆಯರ ಬದುಕಿನಲ್ಲಿ ಸುಧಾರಣೆ ಆಗುತ್ತಿದೆ ಎಂಬುದನ್ನು ಅಂಕಿಅಂಶಗಳೂ ಸಮರ್ಥಿಸುತ್ತಿವೆ.

ಸಣ್ಣ ವಯಸ್ಸಿನಲ್ಲೇ ತಾಯಿಯಾಗುವವರ ಸಂಖ್ಯೆ 2000ನೇ ಇಸ್ವಿಯಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 130.5 ಇತ್ತು. ಅದು 2010ರಲ್ಲಿ 78.9ಕ್ಕೆ ಇಳಿದಿದೆ. ಪಾಶ್ಯಾತ್ಯ ದೇಶಗಳಿಗೆ ಹೋಲಿಸಿದರೆ ಇದು ಹೆಚ್ಚೇ (ಅಮೆರಿಕದಲ್ಲಿ ಸಾವಿರಕ್ಕೆ 41.2). ಆದರೆ ಭಾರತಕ್ಕಿಂತ (ಸಾವಿರಕ್ಕೆ 86.3) ಮೇಲು.

ಅದೇ ರೀತಿ ನವಜಾತ ಶಿಶು ಸಾವಿನ ಪ್ರಮಾಣ (1000 ಜನನಕ್ಕೆ) ಬಾಂಗ್ಲಾದಲ್ಲಿ 52, ಭಾರತದಲ್ಲಿ 66, ಪಾಕಿಸ್ತಾನದಲ್ಲಿ 87. ಜನಸಂಖ್ಯೆ ಏರಿಕೆಯಲ್ಲೂ ಅಷ್ಟೆ. 1980ರ ಹೊತ್ತಿಗೆ ಬಾಂಗ್ಲಾದಲ್ಲಿ ಪ್ರತಿ ತಾಯಿ ಹೆರುತ್ತಿದ್ದ ಮಕ್ಕಳ ಸರಾಸರಿ 5.1 (ಅಂದರೆ 10 ತಾಯಂದಿರಿಗೆ 51). 2009ರ ಹೊತ್ತಿಗೆ ಅದು ಅರ್ಧಕ್ಕೂ ಕಮ್ಮಿಯಾಗಿ 2.3ಗೆ ಬಂದಿತ್ತು. ಆದರೆ ಭಾರತದಲ್ಲಿ ಈ ಪ್ರಮಾಣ 2.7.

ಆದರೆ ಈ ಪ್ರಗತಿ ಸುಲಭವಾಗಿ ಬಂದಿದ್ದಲ್ಲ. ಕಲ್ಲು ಮುಳ್ಳಿನ ಮಾರ್ಗ ದಾಟಿ ಬಂದಿದೆ. ಏಕೆಂದರೆ ವಿಶ್ವದ 187 ದೇಶಗಳ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬಾಂಗ್ಲಾದೇಶ 146ನೇ ಸ್ಥಾನದಲ್ಲಿದೆ. ಇದು ಮ್ಯಾನ್ಮಾರ್, ಆಫ್ರಿಕದ ಅನೇಕ ದೇಶಗಳಿಗೆ ಹೋಲಿಸಿದರೆ ಉತ್ತಮ; ಆದರೆ ಇರಾಕ್ಗಿಂತಲೂ ಹಿಂದಿದೆ. ದೇಶದ ಮೂರನೇ ಒಂದರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ.

ಭ್ರಷ್ಟಾಚಾರ, ಸರ್ಕಾರದಲ್ಲಿ ವಿಳಂಬದ ಹಾವಳಿ, ಮೂಲಸೌಕರ್ಯ ಕೊರತೆ ಜನರ ನಿತ್ಯದ ಬದುಕನ್ನು ಬಾಧಿಸುತ್ತಿದೆ. ಅಮೆರಿಕ ಫ್ಲೋರಿಡಾಕ್ಕಿಂತ ಸಣ್ಣ, ಗ್ರೀಸ್ಗಿಂತ ದೊಡ್ಡ ಪ್ರದೇಶದಲ್ಲಿ 16 ಕೋಟಿ ಜನ ವಾಸವಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ನೀರು, ವಿದ್ಯುತ್ತಿನ ತತ್ವಾರ.

ಶೇ 70ಕ್ಕಿಂತ ಹೆಚ್ಚು ಜನ ಹಳ್ಳಿಗಾಡಲ್ಲಿ ವಾಸಿಸುವ ಬಾಂಗ್ಲಾದೇಶದ ಸಮಾಜದಲ್ಲಿ ಕಂದಾಚಾರ, ಮೂಢನಂಬಿಕೆ ಆಳವಾಗಿ ಬೇರೂರಿದೆ. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯಗಳಂತೂ ಸಾಮಾನ್ಯ. ಉನ್ನತ ಹುದ್ದೆಗಳಿಗೆ ಏರಿದ ಬಹುತೇಕ ಮಹಿಳೆಯರು ಆ ಸ್ಥಾನಕ್ಕೆ ಬರಲು ಅವರ ಕುಟುಂಬಗಳ ಪ್ರಭಾವಿ ಪುರುಷ ಸಂಬಂಧಿಗಳ ಪಾತ್ರವೂ ಇದೆ.
ಅನುಕರಣೀಯ

ಬಹುತೇಕ ಮುಸ್ಲಿಂ ದೇಶಗಳಲ್ಲಿ ಇಸ್ಲಾಮಿಕ್ ಸಂಪ್ರದಾಯವಾದಿಗಳ ಕೈ ಮೇಲಾಗಿ ಮಹಿಳೆಯರ ಹಕ್ಕು, ಸ್ವಾತಂತ್ರ್ಯಕ್ಕೆ ಚ್ಯುತಿ ಬರುತ್ತಿದ್ದರೂ ಬಾಂಗ್ಲಾದೇಶ ಸ್ಥಿತಿ ಅವಕ್ಕಿಂತ ಭಿನ್ನ. ಇಲ್ಲಿ ಭಯೋತ್ಪಾದನೆ ಹಾವಳಿ, ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ಧಾರ್ಮಿಕ ವಿರೋಧ ಅಷ್ಟಾಗಿಲ್ಲ.

ಬಾಂಗ್ಲಾದೇಶದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾದರೂ ಧರ್ಮಾಂಧರಿಗಿಂತ ಉದಾರವಾದಿಗಳೇ ಹೆಚ್ಚಿದ್ದಾರೆ. ಹಿಂದು, ಬೌದ್ಧ ಆಚರಣೆಗಳಿಗೆ ಎಲ್ಲೆಡೆ ಗೌರವವಿದೆ. ಮಹಿಳೆಯರು ಮನೆಯಿಂದ ಹೊರಗೆ ಕೆಲಸ ಮಾಡುವುದು ಸಮಾಜದಲ್ಲಿ ಸ್ವೀಕಾರಾರ್ಹ.

80ರ ದಶಕದಲ್ಲಿ ಅರಂಭವಾದ ಕಿರು ಸಾಲ ಯೋಜನೆ ಅಸಂಖ್ಯಾತ ಮಹಿಳೆಯರಿಗೆ ಸಣ್ಣಪುಟ್ಟ ಉದ್ಯೋಗ ಕೈಗೊಳ್ಳಲು ನೆರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಳೆದಿರುವ ಸಿದ್ಧ ಉಡುಪು ತಯಾರಿಕಾ ಕ್ಷೇತ್ರವಂತೂ ಲಕ್ಷಾಂತರ ಮಹಿಳೆಯರಿಗೆ ಕೆಲಸ ಕೊಟ್ಟಿದೆ.
ಹೀಗಾಗಿ ಬಾಂಗ್ಲಾದ ರಫ್ತಿನಲ್ಲಿ ಸಿದ್ಧ ಉಡುಪು ಕ್ಷೇತ್ರದ ಪಾಲು ಶೇ 33ರಷ್ಟು.

ಬಾಂಗ್ಲಾದ ಈಶಾನ್ಯದ ಬಂದರು ಪಟ್ಟಣ ಚಿತ್ತಗಾಂಗ್ನ ಮುಸ್ತಾಫಾ ಗಾರ್ಮೆಂಟ್ ಕಾರ್ಖಾನೆಗೆ ಹೋದರೆ 20-30ರ ಆಜೂಬಾಜಿನ ಮಹಿಳೆಯರು ಅಮೆರಿಕ, ಯುರೋಪ್ನ ಗ್ರಾಹಕರಿಗೆ ಬೇಕಾದ ಶಾರ್ಟ್ (ಚಡ್ಡಿ) ಹೊಲಿಯುವುದು ಕಣ್ಣಿಗೆ ಬೀಳುತ್ತದೆ. ಇಲ್ಲಿನ ಸುಮಾರು 500 ಕಾರ್ಮಿಕರಲ್ಲಿ ಶೇ 95ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ತಿಂಗಳಿಗೆ ಸರಾಸರಿ 5 ಸಾವಿರ ಟಕಾ (ಸುಮಾರು 3100 ರೂಪಾಯಿ) ಗಳಿಸುತ್ತಾರೆ. ಇದು ಕುಟುಂಬದಲ್ಲಿ ದುಡಿಯುವವಳು ಎಂಬ ಮಾನ್ಯತೆಯನ್ನು ಅವರಿಗೆ ಕೊಟ್ಟಿದೆ.

ಬಾಂಗ್ಲಾದ ಮಹಿಳೆಯರು ಪಾಶ್ಚಾತ್ಯ ದೇಶಗಳಿಂದ ಬರುವ ದೇಣಿಗೆಯ ಫಲಾನುಭವಿಗಳು ಮಾತ್ರವೇ ಅಲ್ಲ; ಸ್ವಸಾಮರ್ಥ್ಯದ ಮೇಲೆ ಆರ್ಥಿಕ ಪ್ರಗತಿಯ ಹರಿಕಾರರೂ ಹೌದು. `ಬಾಂಗ್ಲಾದೇಶ ಈಗ ಕೃಷಿಗಿಂತಲೂ ಉತ್ಪಾದನಾ ಆಧಾರಿತ ಅರ್ಥವ್ಯವಸ್ಥೆಯಾಗಿ ಬದಲಾಗುತ್ತಿದೆ. ಇದರಲ್ಲಿ ಮಹಿಳೆಯರದೇ ನಿರ್ಣಾಯಕ ಪಾತ್ರ~ ಎಂದು ವ್ಯಾಖ್ಯಾನಿಸುತ್ತಾರೆ ಢಾಕಾದಲ್ಲಿನ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕರಾದ ಸ್ಟೆಫನ್ ಪ್ರಿಸ್ನರ್.

ಆದರೆ ಉನ್ನತ ಶಿಕ್ಷಣಕ್ಕೆ ಬಂದರೆ, ಈಗಲೂ ವಿವಿಗಳಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚು. ಇದರ ನಡುವೆಯೂ ಕಾಲೇಜುಗಳಲ್ಲಿ ಹುಡುಗಿಯರ ನೋಂದಣಿ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಮಹಿಳಾ ಉನ್ನತ ಶಿಕ್ಷಣವನ್ನು ಉತ್ತೇಜಿಸಲು 2008ರಲ್ಲಿಯೆ ಚಿತ್ತಗಾಂಗ್ನಲ್ಲಿ ಮಹಿಳಾ ವಿವಿ ಸ್ಥಾಪನೆಯಾಗಿತ್ತು. ಅದೂ ಫಲ ನೀಡಲಾರಂಭಿಸಿದೆ. ಮಹಿಳಾ ಶಿಕ್ಷಣ, ನೌಕರಿಯಲ್ಲಿ ಸಲ್ಲದ ನಿರ್ಬಂಧ ಇಲ್ಲದಿರುವುದರಿಂದ ಬಾಂಗ್ಲಾ ಮುಂದುವರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.