ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೌಂಡರಿ ಕೌಂಟ್‌ ನಿಯಮ ಅಸಂಬದ್ಧ’

ಕಿವೀಸ್‌ಗೆ ದುಬಾರಿಯಾದ ನಿಯಮ; ಐಸಿಸಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ, ಹಾಲಿ ಆಟಗಾರರು
Last Updated 16 ಜುಲೈ 2019, 1:55 IST
ಅಕ್ಷರ ಗಾತ್ರ

ನವದೆಹಲಿ: ರೋಮಾಂಚಕ ಹಣಾಹಣಿಯಲ್ಲಿ ಫೈನಲ್‌ ಪಂದ್ಯ, ಸೂಪರ್‌ ಓವರ್‌ ಕೂಡ ‘ಟೈ’ ಆದ ನಂತರ ಇಂಗ್ಲೆಂಡ್‌ ತಂಡದ ವಿಶ್ವಕಪ್‌ ಗೆಲುವಿಗೆ ನೆರವಾದ ‘ಬೌಂಡರಿಗಳ ಲೆಕ್ಕ’ ನಿಯಮವು ಅಸಂಬದ್ಧ ಎಂದು ಹಾಲಿ, ಮಾಜಿ ಆಟಗಾರರು ಐಸಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾನುವಾರ ಇಳಿ ಸಂಜೆ ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ ಪಂದ್ಯ ರೋಚಕ ಟೈ ಆಗಿತ್ತು. ಸೂಪರ್‌ ಓವರ್‌ನಲ್ಲಿ ಎರಡೂ ತಂಡಗಳು ತಲಾ 15 ರನ್ ಗಳಿಸಿದ ಪರಿಣಾಮ ಫಲಿತಾಂಶ ನಿರ್ಧರಿಸಲು ನಿಯಮದಂತೆ ‘ಬೌಂಡರಿಗಳ ಲೆಕ್ಕ’ ತೆಗೆದುಕೊಳ್ಳಲಾಗಿತ್ತು. ಪಂದ್ಯದಲ್ಲಿ ಇಂಗ್ಲೆಂಡ್‌ 26 ಹಾಗೂ ನ್ಯೂಜಿಲೆಂಡ್‌ 17 ಬೌಂಡರಿಗಳನ್ನು (ಇನ್ನಿಂಗ್ಸ್‌, ಸೂಪರ್‌ ಓವರ್‌ನ ಬೌಂಡರಿಗಳನ್ನು ಸೇರಿಸಿದಂತೆ)ದಾಖಲಿಸಿದ್ದವು. ಅದರಂತೆ ಇಂಗ್ಲೆಂಡ್‌ಗೆ ಜಯ ಒಲಿದಿದೆ.

‘ಕ್ರಿಕೆಟ್‌ನ ಕೆಲವು ನಿಯಮಗಳ ಬಗ್ಗೆ ಗಂಭೀರವಾಗಿ ಅವಲೋಕನ ಮಾಡಬೇಕಿದೆ’ ಎಂದು ಭಾರತ ತಂಡದ ಆರಂಭ ಆಟಗಾರ ರೋಹಿತ್‌ ಶರ್ಮಾ ಸೋಮವಾರ ಟ್ವೀಟ್‌ ಮಾಡಿದ್ದಾರೆ. ಇದೇ ಭಾವನೆಯನ್ನು ಸಂಸದರೂ ಆಗಿರುವ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹಂಚಿಕೊಂಡಿದ್ದಾರೆ.

‘ಐಸಿಸಿ ವಿಶ್ವಕಪ್‌ನ ಫೈನಲ್‌ನಂಥ ಮಹತ್ವದ ಪಂದ್ಯದಲ್ಲಿ ಅಂತಿಮವಾಗಿ ಯಾರು ಅತಿ ಹೆಚ್ಚು ಬೌಂಡರಿ ಬಾರಿಸಿದ್ದಾರೆಂಬ ಆಧಾರದಲ್ಲಿ ವಿಜೇತರನ್ನು ನಿರ್ಧರಿಸುವ ವಿಷಯವೇ ಅರ್ಥವಾಗುವುದಿಲ್ಲ. ಇದು ಐಸಿಸಿಯ ಅಸಂಬಧ್ಧ ನಿಯಮ. ಇದು ಟೈ ಎಂದಾಗಬೇಕಿತ್ತು. ರೋಚಕ ಫೈನಲ್‌ ಆಡಿದ ಕಿವೀಸ್‌ ಮತ್ತು ಇಂಗ್ಲೆಂಡ್‌ ತಂಡಗಳೆರಡಕ್ಕೂ ಅಭಿನಂದನೆಗಳು’ ಎಂದು ಗಂಭೀರ್‌ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಇತ್ತೀಚೆಗೆ ನಿವೃತ್ತಿಯಾದ ಯುವರಾಜ್‌ ಸಿಂಗ್‌ ಕೂಡ ಈ ನಿಯಮ ಒಪ್ಪುವುದು ಕಷ್ಟ ಎಂದಿದ್ದಾರೆ.

ತಮಾಷೆ– ಸ್ಟೈರಿಸ್‌ ವ್ಯಂಗ್ಯ:

ತಂಡದ ಸೋಲಿನಿಂದ ನಿರಾಶರಾಗಿರುವ ನ್ಯೂಜಿಲೆಂಡ್‌ನ ಮಾಜಿ ಆಟಗಾರರು ಈ ನಿಯಮ ‘ಅಸಂಬದ್ಧ ಮತ್ತು ದುರದೃಷ್ಟಕರ’ ಎಂದು ಅಸಮಾಧಾನ ಹೊರಹಾಕಿ ದ್ದಾರೆ.

ಮಾಜಿ ಆಲ್‌ರೌಂಡರ್‌ ಸ್ಕಾಟ್‌ ಸ್ಟೈರಿಸ್‌ ಕೂಡ ಐಸಿಸಿ ವಿರುದ್ಧ ಕಿಡಿಕಾರಿದ್ದಾರೆ. ‘ಒಳ್ಳೆಯ ಕೆಲಸ ಐಸಿಸಿ... ಯೂ ಆರ್‌ ಎ ಜೋಕ್‌’ ಎಂದು ವ್ಯಂಗ್ಯವಾಡಿದ್ದಾರೆ.

ಈ ನಿಯಮ ನ್ಯಾಯೋಚಿತವಲ್ಲ ಎಂದು ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್‌ಮನ್‌ ಡೀನ್‌ ಜೋನ್ಸ್‌ ಟೀಕಿಸಿದ್ದಾರೆ. ‘ಡಕ್‌ವರ್ತ್–ಲೂಯಿಸ್‌ ನಿಯಮ ರನ್ನುಗಳು ಮತ್ತು ಕಳೆದುಕೊಂಡ ವಿಕೆಟ್‌ಗಳ ಆಧಾರದಲ್ಲಿದೆ. ಆದರೆ ಫೈನಲ್‌ ಫಲಿತಾಂಶ ಹೊಡೆದ ಬೌಂಡರಿಗಳ ಮೇಲೆ? ನನ್ನ ಅಭಿಪ್ರಾಯದಲ್ಲಿ ಇದು ಸಮ್ಮತವಲ್ಲ’ ಎಂದು ಹೇಳಿದ್ದಾರೆ.

ಮೊದಲು ಆಡಿದ ನ್ಯೂಜಿಲೆಂಡ್‌ 8 ವಿಕೆಟ್‌ಗೆ 241 ರನ್‌ ಹೊಡೆದಿತ್ತು. ಉತ್ತರವಾಗಿ ಇಂಗ್ಲೆಂಡ್‌ ಕೂಡ 50 ಓವರುಗಳಲ್ಲಿ ಇಷ್ಟೇ ರನ್‌ ಗಳಿಸಿ ಆಲೌಟ್‌ ಆಗಿತ್ತು. ಹೀಗಾಗಿ ವಿಜಯಿಯನ್ನು ನಿರ್ಧರಿಸಲು ಸೂಪರ್‌ ಓವರ್‌ ಆಡಿಸಲಾಗಿತ್ತು. ಸೂಪರ್‌ಓವರ್‌ನಲ್ಲಿ ಇಂಗ್ಲೆಂಡ್‌ ‍ಪರ ಆಡಿ ಬೆನ್‌ ಸ್ಟೋಕ್ಸ್‌– ಜೋಸ್‌ ಬಟ್ಲರ್‌ ಆಡಲಿಳಿದು 15 ರನ್‌ ಗಳಿಸಿದ್ದರು. ನ್ಯೂಜಿಲೆಂಡ್‌, ಒಂದು ವಿಕೆಟ್‌ ಕಳೆದುಕೊಂಡರೂ ಅಷ್ಟೇ ರನ್‌ ಗಳಿಸಿತು. ಹೀಗಾಗಿ ಪೂರ್ವರೂಪಿತ ಬೌಂಡರಿ ನಿಯಮಗಳ ಮೊರೆಹೋದಾಗ ಇಂಗ್ಲೆಂಡ್‌ ವಿಜಯಿಯಾಗಿತ್ತು. ಸ್ಟೋಕ್ಸ್‌ ಇದಕ್ಕೆ ಮೊದಲು, ಚೇಸ್‌ ವೇಳೆ 98 ಎಸೆತಗಳಲ್ಲಿ 84 ರನ್‌ ಹೊಡೆದು ಇಂಗ್ಲೆಂಡ್‌ ನೆರವಿಗೆ ಬಂದಿದ್ದರು.

ಫೈನಲ್‌ ನಂತರ ‘ಸ್ವಲ್ಪ ವಂಚನೆಯ ಭಾವ ಉಂಟಾಗಿದೆ’ ಎಂದಿರುವ ಮಾಜಿ ಆಲ್‌ರೌಂಡರ್‌ ಡಿಯಾನ್‌ ನ್ಯಾಶ್‌ ‘ಈ ನಿಯಮ ಹಾಸ್ಯಾಸ್ಪದ ಮತ್ತು ಅಸಮ್ಮತ. ಇದು ನಾಣ್ಯ ಚಿಮ್ಮುಗೆ ರೀತಿಯಲ್ಲಿ ಫಲಿತಾಂಶ ಹೇಳಿದಂತಿದೆ’ ಎಂದು ನ್ಯೂಜಿಲೆಂಡ್‌ನ ವೆಬ್‌ಸೈಟ್‌ ಒಂದಕ್ಕೆ ಬರೆದಿದ್ದಾರೆ. ‘ಆದರೆ ಈಗ ದೂರಿ ಪ್ರಯೋಜನವಿಲ್ಲ. ಏಕೆಂದರೆ ಈ ನಿಯಮವನ್ನು ಟೂರ್ನಿಗೆ ಬಹಳ ಮೊದಲೇ ರೂಪಿಸಲಾಗಿದೆ’ ಎಂದೂ ಬರೆದಿದ್ದಾರೆ.

2015ರಲ್ಲಿ ಕಿವೀಸ್‌ ತಂಡ ಮೊದಲ ಬಾರಿ ಫೈನಲ್‌ ಆಡಿದಾಗ ತಂಡದಲ್ಲಿದ್ದ ಕೈಲ್‌ ಮಿಲ್ಸ್‌, ‘ಕಳೆದುಕೊಂಡ ವಿಕೆಟ್‌ಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಬೇಕಿತ್ತು. ಆದರೆ ಈಗ ದೂರುವಂತಿಲ್ಲ. ನಿಯಮ ನಿಯಮವೇ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT