ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

178 ಎಸೆತಗಳಲ್ಲಿ 508, ನಾಟೌಟ್: ದಾಖಲೆ ಬರೆದ ಮಹಾರಾಷ್ಟ್ರದ ಯುವ ಆಟಗಾರ

Last Updated 15 ಜನವರಿ 2023, 11:25 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ 13 ವರ್ಷದ ಉದಯೋನ್ಮುಖ ಕ್ರಿಕೆಟರ್‌ ಯಶ್‌ ಚಾವ್ಡೆ ಎಂಬುವವರು 178 ಎಸೆತಗಳಲ್ಲಿ ಔಟಾಗದೆ 508 ರನ್ ಗಳಿಸುವ ಮೂಲಕ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದಿದ್ದಾರೆ. ಜೊತೆಗೆ ಕ್ರಿಕೆಟ್ ಇತಿಹಾಸದಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ 10ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್‌ನ ಕಿರಿಯರ ಅಂತರ ಶಾಲಾ (14 ವರ್ಷದೊಳಗಿನವರ) ಕ್ರಿಕೆಟ್ ಕಪ್‌ನ ಪಂದ್ಯವೊಂದು ಶುಕ್ರವಾರ ನಾಗ್ಪುರದ ‘ಜುಲೇಲಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮೈದಾನದಲ್ಲಿ ನಡೆಯಿತು. ಸಿದ್ಧೇಶ್ವರ ವಿದ್ಯಾಲಯದ ವಿರುದ್ಧ ಆಡಿದ ಸರಸ್ವತಿ ವಿದ್ಯಾಲಯದ ಆಟಗಾರ ಚಾವ್ಡೆ 81 ಬೌಂಡರಿಗಳು ಮತ್ತು 18 ಸಿಕ್ಸರ್‌ಗಳ ನೆರವಿನೊಂದಿಗೆ ಅಜೇಯ 508 ರನ್ ಗಳಿಸಿದರು. ಈ ಮೂಲಕ ಅಂತರ ಶಾಲಾ ಕ್ರಿಕೆಟ್‌ನಲ್ಲಿ ‘ಸೀಮಿತ ಓವರ್‌’ಗಳಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿ ದಾಖಲೆ ಬರೆದರು.

ಅಂತರ ಶಾಲಾ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಈಗ ಚಾವ್ಡೆ ಅವರೂ ಸೇರಿದ್ದಾರೆ. ಈ ಪ್ರಣವ್ ಧನವಾಡೆ (ಅಜೇಯ 1009), ಪ್ರಿಯಾಂಶು ಮೊಲಿಯಾ (ಅಜೇಯ 556), ಪೃಥ್ವಿ ಶಾ (546) ಮತ್ತು ಡ್ಯಾಡಿ ಹವೇವಾಲಾ (515) ಅವರಿದ್ದಾರೆ.

ಸಹ ಆಟಗಾರ ತಿಲಕ್ ವಾಕೋಡೆ (97 ಎಸೆತಗಳಲ್ಲಿ 127) ಅವರೊಂದಿಗೆ ಜತೆಗೂಡಿ ಚಾವ್ಡೆ 40 ಓವರ್‌ಗಳಲ್ಲಿ 714 ರನ್ ಗಳಿಸುವ ಮೂಲಕ ಅತ್ಯಧಿಕ ಜೊತೆಯಾಟದ ದಾಖಲೆಯನ್ನೂ ಮುರಿದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಚಾವ್ಡೆ ಪಾತ್ರರಾಗಿದ್ದಾರೆ. 2022ರ ಆಗಸ್ಟ್‌ನಲ್ಲಿ ನಡೆದ 15 ವರ್ಷದೊಳಗಿನವರ ಅಂತರ ಶಾಲಾ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಬ್ಯಾಟರ್ ಚಿರತ್ ಸೆಲ್ಲೆಪೆರುಮಾ ಅವರು 553 ರನ್ ಗಳಿಸಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT