ಬುಧವಾರ, ಆಗಸ್ಟ್ 10, 2022
25 °C
ಸೂರ್ಯಕುಮಾರ್ ಪದಾರ್ಪಣೆ ಸಾಧ್ಯತೆ

ಭಾರತ–ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯ: ಸರಣಿ ಕೈವಶದತ್ತ ವಿರಾಟ್ ಪಡೆ ಚಿತ್ತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಪುಣೆ: ಇಂಗ್ಲೆಂಡ್ ಎದುರಿನ ಟೆಸ್ಟ್ ಮತ್ತು ಚುಟುಕು ಕ್ರಿಕೆಟ್ ಸರಣಿಗಳನ್ನು ಗೆದ್ದು ಬೀಗುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಈಗ ಏಕದಿನ ಸರಣಿ ಜಯದ ಹೊಸ್ತಿಲಲ್ಲಿ ಇದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ  ಉತ್ತಮ ಬೌಲಿಂಗ್‌  ನೆರವಿನಿಂದ ಆತಿಥೇಯ ತಂಡವು ಜಯಿಸಿತ್ತು. ಆ ಪಂದ್ಯದಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅದರಿಂದಾಗಿ ಮತ್ತೊಬ್ಬ ‘ಮುಂಬೈಕರ್’ ಸೂರ್ಯಕುಮಾರ್ ಯಾದವ್‌ಗೆ ಏಕದಿನ ಕ್ರಿಕೆಟ್‌ ಪದಾರ್ಪಣೆಯ ಅವಕಾಶ ಲಭಿಸುವ ಸಾಧ್ಯತೆ ನಿಚ್ಚಳವಾಗಿದೆ.

ಅಂತರರಾಷ್ಟ್ರೀಯ  ಟಿ20 ಕ್ರಿಕೆಟ್‌ನಲ್ಲಿ ಸೂರ್ಯ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದ್ದರು. ಮಿಂಚಿನ ಅರ್ಧಶತಕ ಕೂಡ ಗಳಿಸಿದ್ದರು. ಇದರಿಂದಾಗಿ ಭಾರತದ ಬ್ಯಾಟಿಂಗ್ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ.

ಪ್ರಥಮ ಪಂದ್ಯದಲ್ಲಿ ರೋಹಿತ್ ಜೊತೆ ಇನಿಂಗ್ಸ್‌ಗೆ ಉತ್ತಮ ಆರಂಭ ಕೊಟ್ಟಿದ್ದ ಶಿಖರ್ ಧವನ್ ಕೇವಲ ಎರಡು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ನಾಯಕ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅರ್ಧಶತಕಗಳನ್ನು ಹೊಡೆದಿದ್ದರು. ಕೃಣಾಲ್ ಪಾಂಡ್ಯ ತಮ್ಮ ಚೊಚ್ಚಲ  ಏಕದಿನ ಪಂದ್ಯದಲ್ಲಿ ಶರವೇಗದ ಅರ್ಧಶತಕ ಗಳಿಸಿದ ದಾಖಲೆ ಬರೆದಿದ್ದರು. ಅದರಿಂದಾಗಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಿತ್ತು.

ಮಧ್ಯಮವೇಗಿ ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್ ಮತ್ತು ಪ್ರಸಿದ್ಧ ಕೃಷ್ಣ ಅವರು ಇಂಗ್ಲೆಂಡ್ ತಂಡದ ಜೊತೆಯಾಟಗಳನ್ನು ಮುರಿದಿದ್ದು ಫಲ ನೀಡಿತು. ಅದರಿಂದಾಗಿ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಜೋಡಿಯು ನೀಡಿದ ಅಮೋಘ ಆರಂಭದ ಲಾಭ ಪಡೆಯುವಲ್ಲಿ ಪ್ರವಾಸಿ ಬಳಗವು ವಿಫಲವಾಯಿತು. ನಿಧಾನಗತಿಯ ಕಟರ್‌ ಮತ್ತು ಪರಿಣಾಮಕಾರಿ ಸ್ವಿಂಗ್‌ಗಳನ್ನು ಬಳಸಿದ ಬೌಲರ್‌ಗಳು ಯಶಸ್ವಿಯಾದರು.

ಬೆನ್ ಸ್ಟೋಕ್ಸ್‌, ಸ್ಯಾಮ್ ಬಿಲಿಂಗ್ಸ್ ಮತ್ತು ನಾಯಕ ಏಯಾನ್ ಮಾರ್ಗನ್ ಅವರ ಬ್ಯಾಟಿಂಗ್ ವೈಫಲ್ಯವು ತಂಡದ ಹಿನ್ನಡೆಗೆ ಕಾರಣವಾಯಿತು. ಮಾರ್ಕ್ ವುಡ್, ಟಾಮ್ ಕರನ್ ಮತ್ತು ಸ್ಯಾಮ್ ಕರನ್ ಅವರ ಎಸೆತಗಳನ್ನು ಭಾರತದ ಬ್ಯಾಟಿಂಗ್ ಪಡೆಯು ದೂಳೀಪಟ ಮಾಡಿತ್ತು. ಆದ್ದರಿಂದ ಇಂಗ್ಲೆಂಡ್   ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. 

ಪಿಚ್‌ ನಿಧಾನಗತಿಯ ಬೌಲಿಂಗ್‌ಗೆ ಹೆಚ್ಚು ನೆರವಾಗುವ ಸಾಧ್ಯತೆ ಇದೆ. ರಾತ್ರಿಯ ಇಬ್ಬನಿಯಲ್ಲಿ ಬೌಲಿಂಗ್ ಮಾಡುವುದು ಕೂಡ ಸವಾಲಾಗಲಿದೆ. ಆದ್ದರಿಂದ ಟಾಸ್ ಗೆದ್ದ ತಂಡವು ಮಾಡುವ ನಿರ್ಣಯವೂ ಪ್ರಮುಖವಾಗಲಿದೆ. 

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್.

ಇಂಗ್ಲೆಂಡ್: ಜೊಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜಾನಿ ಬೆಸ್ಟೊ, ಸ್ಯಾಮ್ ಬಿಲಿಂಗ್ಸ್, ಸ್ಯಾಮ್ ಕರನ್, ಟಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಟ್ ಪಾರ್ಕಿನ್ಸನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಮಾರ್ಕ್ ವುಡ್, ಜೇಕ್ ಬೆಲ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲಾನ್

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು