ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಪರೀಕ್ಷೆ ಗೆದ್ದ ನಟರಾಜನ್‌

Last Updated 7 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ತಂಗರಸು ನಟರಾಜನ್‌... ಈ ಬಾರಿಯ ಐಪಿಎಲ್‌ಗೂ ಮುನ್ನ ಈ ಹೆಸರು ಕೇಳಿದವರೇ ವಿರಳ. ಆಪ್ತ ವಲಯದಲ್ಲಿ ‘ಯಾರ್ಕರ್‌ ಕಿಂಗ್‌’ ಎಂದೇ ಗುರುತಿಸಿಕೊಂಡಿದ್ದ ಈ ಚತುರ, ಅರಬ್ಬರ ಅಂಗಳದಲ್ಲಿಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಅವರಂತಹ ಘಟಾನುಘಟಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ್ದ.

ಐಪಿಎಲ್‌ ಸಾಮರ್ಥ್ಯದ ಆಧಾರದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ನಟರಾಜನ್‌, ಕಾಂಗರೂ ನಾಡಿನಲ್ಲಿ ಎದುರಾಗಿದ್ದ ಮೊದಲ ‘ಅಗ್ನಿಪರೀಕ್ಷೆ’ಯಲ್ಲಿ ಗೆದ್ದು ತಮ್ಮ ಕ್ರಿಕೆಟ್‌ ಬದುಕನ್ನು ಉಜ್ವಲಗೊಳಿಸಿಕೊಳ್ಳುವತ್ತ ಭರವಸೆಯ ಹೆಜ್ಜೆ ಇಟ್ಟಿದ್ದಾರೆ.

ಹೋದ ತಿಂಗಳ ಅಂತ್ಯದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ಮಧ್ಯಮ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ನವದೀಪ್‌ ಸೈನಿ ಹೆಚ್ಚು ದಂಡನೆಗೆ ಒಳಗಾಗಿದ್ದರು. ಹೀಗಾಗಿ ತಂಡದ ಆಡಳಿತ ಮೂರನೇ ಪಂದ್ಯಕ್ಕೂ ಮುನ್ನ ಕೆಲ ಬದಲಾವಣೆಗಳಿಗೆ ಕೈಹಾಕಿತು. ಸೈನಿ ಅವರನ್ನು ಹೊರಗಿಟ್ಟು ನಟರಾಜನ್‌ಗೆ ಆಡುವ ಬಳಗದಲ್ಲಿ ಅವಕಾಶ ಕಲ್ಪಿಸಿತ್ತು.

ನಾಯಕ ವಿರಾಟ್‌ ಕೊಹ್ಲಿ ಅವರಿಂದ ‘ಕ್ಯಾಪ್‌’ ಸ್ವೀಕರಿಸಿದ್ದ ನಟರಾಜನ್‌, ಪದಾರ್ಪಣೆ ಪಂದ್ಯದಲ್ಲೇ ಎರಡು ವಿಕೆಟ್‌ ಉರುಳಿಸಿ ಸಂಭ್ರಮಿಸಿದ್ದರು. ಹೀಗಾಗಿ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ಗೂ ಅಡಿ ಇಡುವ ಅವಕಾಶ ಅವರನ್ನು ಅರಸಿ ಬಂತು. ಈ ಅವಕಾಶವನ್ನೂ ಅವರು ಚೆನ್ನಾಗಿಯೇ ಬಳಸಿಕೊಂಡರು.

ಮನುಕಾ ಓವಲ್‌ ಅಂಗಳದಲ್ಲಿ ಕಾಂಗರೂ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಅವರು ಮೂರು ವಿಕೆಟ್‌ ಬುಟ್ಟಿಗೆ ಹಾಕಿಕೊಂಡಿದ್ದರು. ಸಿಡ್ನಿ ಮೈದಾನದಲ್ಲಿ ಭಾನುವಾರ (ಡಿ.6) ನಡೆದ ಎರಡನೇ ಹೋರಾಟದಲ್ಲೂ ಎರಡು ವಿಕೆಟ್‌ ಉರುಳಿಸಿ ಮಿಂಚಿದ್ದರು.

ಅಂದಹಾಗೆ ನಟರಾಜನ್‌ ಜನಿಸಿದ್ದು ತಮಿಳುನಾಡಿನ ಸೇಲಂ ಬಳಿಯ ಚಿನ್ನಪ್ಪಾಂಪಟ್ಟಿ ಗ್ರಾಮದಲ್ಲಿ. ಅವರು ಬಾಲ್ಯದಿಂದಲೇ ಬಡತನದ ಬೇಗೆಯಲ್ಲಿ ಬೆಂದವರು. ಐಪಿಎಲ್‌ನಿಂದಾಗಿ ಅವರೀಗ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಹತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯೇ ಬೇರೆ. ಆಗ ಒಂದು ಜೊತೆ ಶೂ ಕೊಳ್ಳಲೂ ಅವರ ಬಳಿ ಕಾಸಿರಲಿಲ್ಲ. ತಾನು ಪ್ರತಿನಿಧಿಸುವ ತಂಡದವರು ಕೊಟ್ಟ ಒಂದು ಜೊತೆ ಶೂ ಅನ್ನೇ ಜತನದಿಂದ ಕಾಪಾಡಿಕೊಂಡು ವರ್ಷಪೂರ್ತಿ ವಿವಿಧ‌ ಟೂರ್ನಿಗಳಲ್ಲಿ ಆಡುತ್ತಿದ್ದರು. ಬಡತನವನ್ನು ಶಾಪವೆಂದು ಭಾವಿಸದೇ ಛಲದಿಂದ ಮುನ್ನುಗ್ಗಿದ ಅವರು ಈಗ ಯಶಸ್ಸಿನ ಶಿಖರದ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ.

ತಾನು ಬೆಳೆದರೆ ಸಾಲದು, ತನ್ನೂರಿನ ಹಾಗೂ ಅಕ್ಕಪಕ್ಕದ ಹಳ್ಳಿಗಳ ಹುಡುಗರೂ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡಬೇಕು ಎಂಬುದು ಅವರ ಮಹದಾಸೆ.ಅದಕ್ಕಾಗಿ ಊರಲ್ಲೇ ಕ್ರಿಕೆಟ್‌ ಅಕಾಡೆಮಿ ಕೂಡ ಆರಂಭಿಸಿದ್ದಾರೆ. ಅಲ್ಲಿ 50–60 ಹುಡುಗರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT