ಭಾನುವಾರ, ಸೆಪ್ಟೆಂಬರ್ 20, 2020
23 °C
ಎಬಿ ಡಿವಿಲಿಯರ್ಸ್‌–ಅಲಿ ಅರ್ಧಶತಕಗಳು ವ್ಯರ್ಥ; ನಾಲ್ಕು ವಿಕೆಟ್‌ ಪಡೆದ ಲಸಿತ್‌ ಮಾಲಿಂಗ

ಆರ್‌ಸಿಬಿಗೆ ಮತ್ತೆ ಸೋಲು; ಮುಂಬೈ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಖುಷಿಯಲ್ಲಿರುವ ಹಾರ್ದಿಕ್ ಪಾಂಡ್ಯ ಸೋಮವಾರ ರಾತ್ರಿ  ಮುಂಬೈ ಇಂಡಿಯನ್ಸ್‌ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಇದರಿಂದಾಗಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 5 ವಿಕೆಟ್‌ಗಳಿಂದ ಸೋತಿತು. ಟೂರ್ನಿಯಲ್ಲಿ ಆರ್‌ಸಿಬಿಗೆ ಇದು ಏಳನೇ ಸೋಲು. ಹೋದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ಮೋಹಾಲಿಯಲ್ಲಿ ಗೆದ್ದಿತ್ತು.

ಇಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿ ಆಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಎಬಿ ಡಿವಿಲಿಯರ್ಸ್‌ (75; 51ಎಸೆತ, 6ಬೌಂಡರಿ, 4ಸಿಕ್ಸರ್) ಮತ್ತು ಮೊಯಿನ್ ಅಲಿ (50; 32ಎಸೆತ, 1ಬೌಂಡರಿ, 5ಸಿಕ್ಸರ್) ಅವರ ಆಟದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 171 ರನ್ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ ತಂಡವು 19 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 172 ರನ್‌ ಗಳಿಸಿ ಗೆದ್ದಿತು.

ಆದರೆ, ಮುಂಬೈನ ಯಾವುದೇ ಬ್ಯಾಟ್ಸ್‌ಮನ್‌ಗಳು ಅರ್ಧಶತಕವನ್ನೂ ಹೊಡೆಯಲಿಲ್ಲ. ಆದರೆ, ಎಲ್ಲರೂ ಹೋರಾಟದ ಮನೋಭಾವದಿಂದ ಆಡಿದ್ದು ಮಹತ್ವದ ಕಾಣಿಕೆ ಕೊಟ್ಟಿದ್ದು ಜಯಕ್ಕೆ ಕಾರಣವಾಯಿತು.  ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ (40 ರನ್) ಮತ್ತು ರೋಹಿತ್ ಶರ್ಮಾ (28 ರನ್) ಮೊದಲ ವಿಕೆಟ್‌ಗೆ ಏಳು ಓವರ್‌ಗಳಲ್ಲಿ 70 ರನ್‌ ಸೇರಿಸಿದರು.

ಅವರ ನಂತರ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಕೂಡ ಉತ್ತಮವಾಗಿ ಆಡಿದರು. ಆಧರೆ, 16ನೇ ಓವರ್‌ನಲ್ಲಿ ತಂಡವು ನಾಲ್ಕು ವಿಕೆಟ್‌ಕಳೆದುಕೊಂಡು 129 ರನ್‌ ಗಳಿಸಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ (37; 16ಎ, 5ಬೌಂಡರಿ,  2ಸಿಕ್ಸರ್) ಆರ್‌ಸಿಬಿಯ ಗೆಲುವಿನ ಆಸೆಯನ್ನು ಕಿತ್ತುಕೊಂಡರು. 

ಎಬಿಡಿ – ಅಲಿ ಮಿಂಚು:  ಎಬಿಡಿ  ಮತ್ತು ಮೊಯಿನ್ ಅಲಿ   ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 94 ರನ್‌ ಗಳಿಸಿದರು. 

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್‌ ತಂಡವು ಆರಂಭದಲ್ಲಿಯೇ ಯಶಸ್ಸು ಕಂಡಿತು. ಮೂರನೇ ಓವರ್‌ನಲ್ಲಿಯೇ  ವಿರಾಟ್ ಕೊಹ್ಲಿ ಔಟಾದರು. ಅಗ ಕ್ರೀಸ್‌ಗೆ ಬಂದ ಎಬಿಡಿ ಬೀಸಾಟ ಆರಂಭಿಸಿದರು. ಇನ್ನೊಂದೆಡೆ ಚೆನ್ನಾಗಿ ಆಡುತ್ತಿದ್ದ ಪಾರ್ಥಿವ್ ಪಟೇಲ್ (28; 20 ಎಸೆತ, 4ಬೌಂಡರಿ, 1ಸಿಕ್ಸರ್) ಕೂಡ ಉತ್ತಮ ಜೊತೆ ನೀಡಿದರು.  ಆದರೆ ಏಳನೇ ಓವರ್‌ನಲ್ಲಿ ಪಾರ್ಥಿವ್ ಔಟಾದರು. ಎಬಿಡಿ ಜೊತೆಗೂಡಿದ ಮೊಯಿನಿ ಅಲಿ ಬೌಲರ್‌ಗಳಿಗೆ ಸವಾಲೊಡ್ಡಿದರು. ವಿಕೆಟ್‌ ಪತನ ತಡೆದರು.

ಎಬಿಡಿ ಈ ಟೂರ್ನಿಯಲ್ಲಿ ಗಳಿಸಿದ ನಾಲ್ಕನೇ ಅರ್ಧಶತಕ ಇದಾಗಿದೆ.  ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿಯೂ ಅವರು ಅಜೇಯ 70 ರನ್‌ ಗಳಿಸಿದ್ದರು. ಕೋಲ್ಕತ್ತ ನೈಟ್ ರೈಡರ್ಸ್‌ ಎದುರೂ ಅರ್ಧಶತಕ ಹೊಡೆದಿದ್ದರು. ಈಚೆಗೆ ಮೊಹಾಲಿಯಲ್ಲಿ  ಕಿಂಗ್ಸ್‌ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಅಜೇಯ 59 ರನ್‌ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು. ಆರ್‌ಸಿಬಿಯು  ಪಂಜಾಬ್‌ ಎದುರು ಮಾತ್ರ ಗೆದ್ದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು