ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮವಿಹಾರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್

Published 28 ಮಾರ್ಚ್ 2024, 16:23 IST
Last Updated 28 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರ್ ಹನುಮವಿಹಾರಿ ಅವರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆಯು  (ಎಸಿಎ) ಶೋಕಾಸ್ ನೋಟಿಸ್ ನೀಡಿದೆ. 

ಹೋದ ತಿಂಗಳು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಹನುಮವಿಹಾರಿ ತಮ್ಮನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದನ್ನು ಟೀಕಿಸಿದ್ದರು. 

ಇದರಿಂದ ಅಸಮಾಧಾನಗೊಂಡಿದ್ದ ಎಸಿಎ ಪದಾಧಿಕಾರಿಗಳೂ ಕೆಲವು ದಿನಗಳ ಹಿಂದೆ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಿದ್ದರು.

‘ಹನುಮವಿಹಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ’ ಎಂದು ಎಸಿಎ ಮೂಲಗಳು ತಿಳಿಸಿವೆ. 

‘ಅವರು ಈ ರೀತಿ ಹೇಳಿಕೆ ನೀಡಲು ಕಾರಣಗಳೇನು ಎಂಬುದನ್ನು ತಿಳಿಯುವುದಷ್ಟೇ ನಮ್ಮ ಉದ್ದೇಶ. ನಾವು ವಿಹಾರಿ ಅವರು ಕ್ರಿಕೆಟ್‌ಗೆ ನೀಡಿರುವ ಕಾಣಿಕೆಯನ್ನು ಗೌರವಿಸುತ್ತೇವೆ. ರಾಜ್ಯದ ಕ್ರಿಕೆಟ್ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಆಂಧ್ರ ತಂಡವು ಪ್ರಗತಿ ಸಾಧಿಸುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಹನುಮ ಅವರು ನಾಯಕರಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆಗ ಹನುಮ ಅವರೇ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ನಾಯಕತ್ವವನ್ನು ಬಿಟ್ಟುಕೊಡುತ್ತಿರುವುದಾಗಿ ಹೇಳಿದ್ದರು. ಟೂರ್ನಿ ಮುಗಿದ ನಂತರ ಅವರು ಇನ್ಸ್ಟಾಗ್ರಾಮ್‌ನಲ್ಲಿ, ‘ನಾನು ಆಂಧ್ರ ತಂಡದಲ್ಲಿ ಮುಂದೆಂದೂ ಆಡುವುದಿಲ್ಲ. ಇಲ್ಲಿ ನನ್ನ ಆತ್ಮಗೌರವಕ್ಕೆ ಧಕ್ಕೆ ಆಗಿದೆ’ ಎಂದು ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದರು. 

ಪ್ರಭಾವಿ ರಾಜಕಾರಣಿಯೊಬ್ಬರ ಮಗ ತಂಡದಲ್ಲಿ 17ನೇ ಆಟಗಾರನಾಗಿದ್ದ.  ಪಂದ್ಯದ ಸಂದರ್ಭದಲ್ಲಿ ಆತನಿಗೆ ಹನುಮವಿಹಾರಿ ಜೋರು ಮಾಡಿದ್ದರು. ಇದರಿಂದಾಗಿ ಆಟಗಾರನ ತಂದೆಯು ಎಸಿಎ ಮೇಲೆ ಪ್ರಭಾವ ಬೀರಿ ತಮ್ಮನ್ನು ನಾಯಕತ್ವದಿಂದ ಇಳಿಸುವಲ್ಲಿ ಸಫಲರಾಗಿದ್ದಾರೆ ಎಂದೂ ಆರೋಪಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ್ದ ತಂಡದ 17ನೇ ಆಟಗಾರ ಕೆ.ಎನ್. ಪೃದ್ವಿರಾಜ್, ‘ವೈಯಕ್ತಿಕ ನಿಂದನೆ ಮತ್ತು ಅವಾಚ್ಯ ಪದಗಳನ್ನು ಸಹಿಸುವುದಿಲ್ಲ. ನಿಜವಾಗಿ ನಡೆದಿರುವುದು  ಏನೆಂದು  ತಂಡದಲ್ಲಿರುವ ಎಲ್ಲರಿಗೂ ಗೊತ್ತಿದೆ’ ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದರು. ‌

ಹನುಮವಿಹಾರಿ ಅವರು 16 ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT