ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ರಹಾನೆ ಭರ್ಜರಿ ಶತಕ; ಭಾರತ 277ಕ್ಕೆ 5; 82 ರನ್ ಮುನ್ನಡೆ

Last Updated 27 ಡಿಸೆಂಬರ್ 2020, 7:29 IST
ಅಕ್ಷರ ಗಾತ್ರ

ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕದ (104*) ನೆರವಿನಿಂದ ದಿಟ್ಟ ಉತ್ತರ ನೀಡುತ್ತಿರುವ ಟೀಮ್ ಇಂಡಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 91.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ.

ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 82 ನ್‌ಗಳ ಮಹತ್ವದ ಮುನ್ನಡೆ ದಾಖಲಿಸಿದ್ದು, ಮೇಲುಗೈ ಸಾಧಿಸಿದೆ.

ರವೀಂದ್ರ ಜಡೇಜ ಜೊತೆಗೆ ಮುರಿಯದ ಆರನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿರುವ ನಾಯಕ ರಹಾನೆ, ತಂಡವನ್ನು ಉತ್ತಮ ಸ್ಥಿತಿಯತ್ತ ತಲುಪಿಸಿದರು. ಇದು ಟೆಸ್ಟ್ ವೃತ್ತಿ ಜೀವನದಲ್ಲಿ ರಹಾನೆ ಬ್ಯಾಟ್‌ನಿಂದ ಸಿಡಿದ 12ನೇ ಶತಕ ಸಾಧನೆಯಾಗಿದೆ. ಈ ಮೂಲಕ ಮೆಲ್ಬೋರ್ನ್ ಪಂದ್ಯವನ್ನು ಸ್ಮರಣೀಯವಾಗಿಸಿದರು.

ಆಸೀಸ್‌ನ 195 ರನ್‌ಗಳಿಗೆ ಉತ್ತರವಾಗಿ 36/1 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡವನ್ನು ಡೆಬ್ಯು ಓಪನರ್ ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಮುನ್ನಡೆಸಿದರು. ಆಸೀಸ್ ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲುವುದರೊಂದಿಗೆ ಗಿಲ್‌ಗೆ ಅದೃಷ್ಟ ಸಾಥ್ ನೀಡಿತು. ಆದರೆ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ವಿಫಲವಾದರು.

ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ವಿಕೆಟ್ ಕೀಪರ್ ಟಿಮ್ ಪೇನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 65 ಎಸೆತಗಳನ್ನು ಎದುರಿಸಿದ ಗಿಲ್ ಎಂಟು ಬೌಂಡರಿಗಳಿಂದ 45 ರನ್ ಗಳಿಸಿದರು. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿ ಭರವಸೆ ಮೂಡಿಸಿದರು.

ಇದಾದ ಬೆನ್ನಲ್ಲೇ ಅನುಭವಿ ಚೇತೇಶ್ವರ ಪೂಜಾರ ಅವರಿಗೂ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರು. 17 ರನ್ ಗಳಿಸಿದ ಪೂಜಾರಗೆ ಮಗದೊಮ್ಮೆ ನಿರಾಸೆ ಕಾದಿತ್ತು.

ಬಳಿಕ ಜೊತೆಗೂಡಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ತಂಡವನ್ನು ಎಚ್ಚರಿಕೆಯಿಂದ ಮುನ್ನಡೆಸುವ ಪ್ರಯತ್ನ ಮಾಡಿದರು. ಊಟದ ವಿರಾಮದ ಹೊತ್ತಿಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು.

ಉತ್ತಮ ಆರಂಭ ಪಡೆದ ಹನುಮ ವಿಹಾರಿ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಫಲರಾಗಲಿಲ್ಲ. ಆಫ್ ಸ್ಪಿನ್ನರ್ ನಥನ್ ಲಿಯನ್ ದಾಳಿಯಲ್ಲಿ ಸ್ಟೀವನ್ ಸ್ಮಿತ್‌ಗೆ ಕ್ಯಾಚಿತ್ತು ಮರಳಿದರು. 66 ಎಸೆತಗಳನ್ನು ಎದುರಿಸಿದ ವಿಹಾರಿ ಎರಡು ಬೌಂಡರಿಗಳಿಂದ 21 ರನ್ ಗಳಿಸಿದರು.

ಅತ್ತ ನಾಯಕನ ಆಟವಾಡಿದ ಅಜಿಂಕ್ಯ ರಹಾನೆ ತಂಡವನ್ನು ಇನ್ನಿಂಗ್ಸ್ ಮುನ್ನಡೆಯತ್ತ ಮುನ್ನಡೆಸಿದರು. ಇವರಿಗೆ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರಿಂದ ಉತ್ತಮ ಸಾಥ್ ದೊರಕಿತು. ಕೌಂಟರ್ ಅಟ್ಯಾಕ್ ಯೋಜನೆಯೊಂದಿಗೆ ಕ್ರೀಸಿಗಿಳಿದ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ಆದರೆ ಪಂತ್ ಓಟಕ್ಕೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಕಡಿವಾಣ ಹಾಕಿದರು. 40 ಎಸೆತಗಳನ್ನು ಎದುರಿಸಿದ ಪಂತ್ ಮೂರು ಬೌಂಡರಿಗಳಿಂದ 29 ರನ್ ಗಳಿಸಿದರು. ಈ ವೇಳೆಗೆ ಭಾರತ ಐದು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು.

ಇನ್ನೊಂದೆಡೆ ಉತ್ತಮ ಇನ್ನಿಂಗ್ಸ್ ಕಟ್ಟಿದ ರಹಾನೆ, ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಇವರಿಗೆ ಆಲ್‌ರೌಂಡರ್ ರವೀಂದ್ರ ಜಡೇಜ ಸಾಥ್ ನೀಡಿದರು. ಟೀ ವಿರಾಮದ ಹೊತ್ತಿಗೆ ಭಾರತ ಐದು ವಿಕೆಟ್ 189 ರನ್ ಗಳಿಸಿತ್ತು.

ಚಹಾ ವಿರಾಮದ ಬೆನ್ನಲ್ಲೇ ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆ ದಾಖಲಿಸಿತು. ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರಹಾನೆ ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ವಿಕೆಟ್‌ನ ಇನ್ನೊಂದು ತುದಿಯಿಂದ ಜಡೇಜ ಕೂಡಾ ತಾಳ್ಮೆಯ ಪರೀಕ್ಷೆ ನಡೆಸಿದರು.

ಮೊದಲ ಪಂದ್ಯಕ್ಕೆ ವಿರುದ್ಧವಾಗಿ ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರಹಾನೆ, ಎದುರಾಳಿ ಬೌಲರ್‌ಗಳನ್ನು ಬೆವರಿಳಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಾಧನೆ ಮಾಡಿದರು.

ಇದು ಮೆಲ್ಬೋರ್ನ್ ಮೈದಾನದಲ್ಲಿ ರಹಾನೆ ಬ್ಯಾಟ್‌ನಿಂದ ಸಿಡಿದ 12ನೇ ಶತಕ ಕೂಡಾ ಹೌದು. ಹಾಗೆಯೇ ಆಸೀಸ್ ನೆಲದಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ ಕೆಲವೇ ಕೆಲವು ನಾಯಕರುಗಳ ಪಟ್ಟಿಗೆ ಸೇರ್ಪಡೆಯಾದರು.

ರಹಾನೆ ಹಾಗೂ ಜಡೇಜಾ ಮುರಿಯದ ಆರನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಭಾರತ ತಂಡವು ದಿನದಂತ್ಯಕ್ಕೆ 91.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿದೆ. ಈ ಮೂಲಕ 82 ರನ್‌ಗಳ ಮಹತ್ವದ ಮುನ್ನಡೆ ದಾಖಲಿಸಿದೆ.

ಕೊನೆ ಕ್ಷಣದಲ್ಲಿ ಮಳೆ ಸುರಿದ ಪರಿಣಾಮ ಪಂದ್ಯವನ್ನು ಸ್ವಲ್ಪ ಬೇಗನೇ ಕೊನೆಗೊಳಿಸಲಾಯಿತು. 200 ಎಸೆತಗಳನ್ನು ಎದುರಿಸಿದ ರಹಾನೆ 12 ಬೌಂಡರಿಗಳ ನೆರವಿನಿಂದ ಅಜೇಯ 104 ರನ್ ಗಳಿಸಿ ಕ್ರೀಸಿನಲ್ಲಿ ನೆಲೆಯೂರಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಜಡೇಜ, 104 ಎಸೆತಗಳಲ್ಲಿ ಬೌಂಡರಿ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಆದರೆ ಮೊದಲ ಪಂದ್ಯದಲ್ಲಿ ಮಾರಕವಾಗಿ ಕಾಡಿದ್ದ ಜೋಶ್ ಹ್ಯಾಜಲ್‌ವುಡ್ ವಿಕೆಟ್ ಪಡೆಯುವಲ್ಲಿ ವಿಫಲವಾದರು. ಈ ಮಧ್ಯೆ ಕೈಚೆಲ್ಲಿದ್ದ ಕ್ಯಾಚ್‌ಗಳು ಆತಿಥೇಯರಿಗೆ ಮುಳುವಾಗಿ ಪರಿಣಮಿಸಿತು.

ಈ ಮೊದಲು ಮೊದಲ ದಿನದಾಟದಲ್ಲಿ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ (56ಕ್ಕೆ 4), ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (35ಕ್ಕೆ 3) ಹಾಗೂ ಡೆಬ್ಯು ವೇಗದ ಬೌಲರ್ ಮೊಹಮ್ಮದ್ ಸಿರಾಜ್ (40ಕ್ಕೆ 2) ನಿಖರ ದಾಳಿಯ ನೆರವಿನಿಂದ ಟೀಮ್ ಇಂಡಿಯಾವು, ಎದುರಾಳಿ ತಂಡವನ್ನು 195 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆಸೀಸ್ ಪರ ಮಾರ್ನಸ್ ಲಾಬುಷೇನ್ ಗರಿಷ್ಠ 48 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT