ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಕಾರ್ಯತಂತ್ರ: ವಿಂಡೀಸ್‌ನತ್ತ ಅಗರ್ಕರ್‌

Published 19 ಜುಲೈ 2023, 14:25 IST
Last Updated 19 ಜುಲೈ 2023, 14:25 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಕಾರ್ಯತಂತ್ರ ರೂಪಿಸುವುದಕ್ಕೆ ಸಂಬಂಧಿಸಿದಂತೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಲು ವೆಸ್ಟ್ ಇಂಡೀಸ್‌ಗೆ ತೆರಳಲಿದ್ದಾರೆ.

ಅಕ್ಟೋಬರ್ 5ರಿಂದ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಭಾರತ ತಂಡವು ಅ. 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದೆ. 15ರಂದು ಅಹಮದಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯ ಇದೆ.

‘ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಸಲೀಲ್ ಅಂಕೋಲಾ ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿದ್ದಾರೆ. ಟೆಸ್ಟ್ ಸರಣಿ ಮುಗಿದ ನಂತರ ಅವರು ಹಿಂತಿರುಗುತ್ತಾರೆ. ಸೀಮಿತ ಓವರ್‌ಗಳ ಸರಣಿ ಆರಂಭಕ್ಕೂ ಮೊದಲು ಅಜಿತ್ ಅಗರ್ಕರ್‌ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಗರ್ಕರ್ ಅವರಿಗೆ ತಂಡದ ಆಡಳಿತ ಮಂಡಳಿಯನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ವಿಶ್ವಕಪ್‌ ಟೂರ್ನಿಗೆ ರಣತಂತ್ರ ರೂಪಿಸುವ ಕುರಿತಂತೆ ಅವರ ವೆಸ್ಟ್‌ಇಂಡೀಸ್‌ ಭೇಟಿ ಮಹತ್ವ ಪಡೆದಿದೆ.

ಕೆಲಸದ ಒತ್ತಡ ಮತ್ತು ಫಿಟ್‌ನೆಸ್ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಕಪ್‌ ಟೂರ್ನಿಗಾಗಿ 20 ಆಟಗಾರರನ್ನು ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯು ಸಜ್ಜುಗೊಳಿಸಬೇಕಿದೆ. ರಣತಂತ್ರ, ಯೋಜನೆ ಕುರಿತಂತೆ ಆಯ್ಕೆ ಸಮಿತಿ ಅಧ್ಯಕ್ಷರು ಮತ್ತು ತಂಡದ ಮಂಡಳಿಯು ಚರ್ಚೆ ನಡೆಸಲಿದೆ.

ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಲಗೈ ವೇಗದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಅವರ ಫಿಟ್‌ನೆಸ್ ಸ್ಥಿತಿ ಮತ್ತು ಮೂರು ಪಂದ್ಯಗಳ ಟಿ20 ಸರಣಿಗಾಗಿ ಅವರು ಐರ್ಲೆಂಡ್‌ ಪ್ರವಾಸಕ್ಕೆ ಲಭ್ಯವಾಗುವರೇ ಎಂಬುದರ ಕುರಿತು ಸಮಾಲೋಚನೆ ನಡೆಯಲಿವೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT