ಶನಿವಾರ, ಸೆಪ್ಟೆಂಬರ್ 19, 2020
21 °C

ತ್ರಿ–ಡಿ ಕನ್ನಡಕವೂ ರಾಯುಡು ನಿವೃತ್ತಿಯೂ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಕಪ್ ಕ್ರಿಕೆಟ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಬಲಿಷ್ಠ ತಂಡಗಳ ಸವಾಲನ್ನು ಮೆಟ್ಟಿ ನಿಂತಿರುವ ಭಾರತ ಸೆಮಿಫೈನಲ್ ಲಗ್ಗೆ ಇಟ್ಟು ಭರವಸೆ ಮೂಡಿಸಿದೆ. ಆದರೂ ಟೂರ್ನಿಯ ಪ್ರತಿ ಹಂತದಲ್ಲಿ ತಂಡವನ್ನು ಕಾಡಿದ್ದ ಪ್ರಮುಖ ಪ್ರಶ್ನೆ-ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಯಾರು ಎಂಬುದು.

ವಿಶ್ವಕಪ್‌ಗಾಗಿ ಭಾರತ ಬಳಗವನ್ನು ಸಜ್ಜುಗೊಳಿಸುವ ಒಂದು ವರ್ಷದ ಹಿಂದೆಯೇ ‘ನಾಲ್ಕನೇ ಕ್ರಮಾಂಕದ ಸಂಕಟ’ ತಂಡದ ಆಡಳಿತವನ್ನು ಕಾಡಿತ್ತು. ಹಾಗೆ ನೋಡಿದರೆ ಕೆಲವು ವರ್ಷಗಳಿಂದ ಈ ಸಮಸ್ಯೆ ತಂಡಕ್ಕೆ ತಲೆನೋವಾಗಿಯೇ ಇದೆ. 2017ರಿಂದ ಹೆಚ್ಚು ಉಲ್ಬಣವಾಗಿತ್ತು. ಆ ವರ್ಷದ ಆಗಸ್ಟ್‌ನಿಂದ ಮುಂದಿನ ವರ್ಷದ ಸೆಪ್ಟೆಂಬರ್ ವರೆಗೆ ನಡೆದ ವಿವಿಧ ಏಕದಿನ ಸರಣಿಯಲ್ಲಿ ಒಂಬತ್ತು ಬ್ಯಾಟ್ಸ್‌ಮನ್‌ಗಳನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಸಿದ್ದರೂ ತಂಡದ ಆಡಳಿತ ತೃಪ್ತಿಕರವಾದ ಯಶಸ್ಸು ಕಾಣಲಿಲ್ಲ.

ಯುವರಾಜ್ ಸಿಂಗ್, ಕೆ.ಎಲ್.ರಾಹುಲ್, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಮತ್ತು ಅಜಿಂಕ್ಯ ರಹಾನೆ ಅವರೊಂದಿಗೆ ವಿರಾಟ್ ಕೊಹ್ಲಿ ಕೂಡ ಈ ಪ್ರಯೋಗಕ್ಕೆ ಒಳಗಾದವರೇ.

ಆದರೂ ತಂಡದ ಆಡಳಿತ ಅಂಬಟಿ ರಾಯುಡು ಎಂಬ ಪ್ರತಿಭೆಯ ಕಡೆಗೆ ದೃಷ್ಟಿ ಹಾಯಿಸಲಿಲ್ಲ. ಮಧ್ಯಮ ಕ್ರಮಾಂಕದ ಆಧಾರ ಸ್ತಂಬ ಎಂಬುದನ್ನು ಆಗಲೇ ಸಾಬೀತು ಮಾಡಿದ್ದ ರಾಯುಡು ಅವರ ಕಡೆಗಣನೆ ಜಾಣ ಕುರುಡು ಎಂಬ ಟೀಕೆ ಕೇಳಿಬಂದಿತ್ತು. ರಾಯುಡು ಅವರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಾಗ ಇಂಥ ಟೀಕೆಗಳು ಇನ್ನಷ್ಟು ಮೊನಚು ಪಡೆದಿದ್ದವು. ಇದೀಗ ರಾಯುಡು ಅನಿರೀಕ್ಷಿತವಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ; ಟೀಕಾಸ್ತ್ರಗಳು ಸಹಜವಾಗಿ ಹೆಚ್ಚಾಗಿವೆ.

ಸೊಬಗಿನ ಬ್ಯಾಟಿಂಗ್ ಶೈಲಿ ಮತ್ತು ಆಕ್ರಮಣಕಾರಿ ಆಟದ ವೈಖರಿಯ ಮೂಲಕ ಸಣ್ಣ ವಯಸ್ಸಿನಲ್ಲೇ ‘ಕ್ರಿಕೆಟ್ ಪಂಡಿತರ’ ಗಮನ ಸೆಳೆದ ಅಂಬಟಿ ರಾಯುಡು ವೃತ್ತಿ ಜೀವನ ಸದಾ ವಿವಾದದಿಂದ ಕೂಡಿತ್ತು. ನಿಷೇಧಿತ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ಆಡಿದ್ದರಿಂದ ತೊಡಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅಂಪೈರ್ ಜೊತೆ ಜಗಳವಾಡಿದ್ದು ಮತ್ತು ಶಂಕಾಸ್ಪದ ಶೈಲಿಯ ಬೌಲಿಂಗ್ ಮಾಡಿದ ವರೆಗಿನ ಘಟನೆಗಳು ಅವರ ಮೇಲೆ ಬಿಸಿಸಿಐ ಕೆಂಗಣ್ಣು ಬೀರಲು ಕಾರಣವಾಗಿತ್ತು.

ಆದರೆ ಅವರು ಹೆಚ್ಚು ವಿವಾದಕ್ಕೆ ಒಳಗಾದದ್ದು ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಯಾದ ನಂತರ. 2013ರಲ್ಲಿ ಜಿಂಬಾಬ್ವೆ ಎದುರಿನ ಪದಾರ್ಪಣೆ ಪಂದ್ಯದಿಂದ ಶುರುವಾಗಿ ಪ್ರತಿ ಟೂರ್ನಿಯಲ್ಲೂ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್‌ಮನ್ ಎಂದು ಸಾಬೀತು ಮಾಡಿದ್ದ ರಾಯುಡು ನಾಲ್ಕನೇ ಕ್ರಮಾಂಕದ ಗೊಂದಲದ ನಡುವೆಯೂ ವಿಶ್ವಕಪ್‌ಗೆ ಆಯ್ಕೆಯಾದ ತಂಡದಲ್ಲಿ ಇರಲಿಲ್ಲ.

ಬ್ಯಾಟಿಂಗ್ ಹಾಗೂ ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲ ರಾಯುಡು ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂರು ಅಂಶಗಳನ್ನೇ ಮುಂದಿಟ್ಟುಕೊಂಡು ವಿಜಯಶಂಕರ್ ಅವರನ್ನು ಆಯ್ಕೆ ಮಾಡಿದ್ದರಿಂದ ರಾಯುಡು ಕುಪಿತಗೊಂಡಿದ್ದರು. ಆಯ್ಕೆಗಾರರು ಮೂರು ಆಯಾಮದ ಆಟಗಾರ ಎಂಬ ಹೇಳಿಕೆಗೆ ಲೇವಡಿ ಮಾಡಲು ‘ತ್ರಿ–ಡಿ’ ಕನ್ನಡಕದ ಟ್ವೀಟ್ ಮೂಲಕ ಹತಾಶೆ ಹೊರಸೂಸಿದ್ದರು. ವಿಜಯಶಂಕರ್ ಗಾಯಗೊಂಡಾಗ ‘ಬದಲಿ’ ಆಟಗಾರನಾಗಿಯೂ ಪರಿಗಣಿಸದೇ ರಾಯುಡುಗೆ ಆಯ್ಕೆ ಸಮಿತಿ ತಿರುಗೇಟು ನೀಡಿತು. ರಾಯುಡು ಬಳಿ ಕೊನೆಗೆ ಉಳಿದಿದ್ದದ್ದು ನಿವೃತ್ತಿ ಅಸ್ತ್ರ ಮಾತ್ರ.

ವಿವಾದ, ವಾಗ್ವಾದ, ಕಡೆಗಣನೆ ಮತ್ತು ನಿವೃತ್ತಿಯ ಈ ಸರಣಿಯ ಕೊನೆಯಲ್ಲಿ ಭಾರತೀಯ ಕ್ರಿಕೆಟ್‌ ಮತ್ತು ರಾಯುಡು ನಡುವೆ ಅನೇಕ ಪ್ರಶ್ನೆಗಳು ಉಳಿದುಕೊಂಡಿವೆ. ವಿಶ್ವಕಪ್ ಟೂರ್ನಿಯಲ್ಲಿ ಇದಕ್ಕೆ ಪೂರಕ ಉತ್ತರ ಸಿಕ್ಕಿದರೆ ಆಯ್ಕೆ ಸಮಿತಿ ಗೌರವ ಉಳಿಸಿಕೊಳ್ಳಬಹುದು. ಸಣ್ಣ ತಪ್ಪಿನಿಂದಲೂ ಟೂರ್ನಿಯೊಂದರಲ್ಲಿ ಎಡವಿದರೆ ಅದರ ಹೊಣೆಯನ್ನು ಸಮಿತಿಯೇ ಹೊರಬೇಕಾದೀತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು