ಶನಿವಾರ, ಜನವರಿ 23, 2021
21 °C

ಫಾಲ್ಕನ್ ಕ್ಲಬ್‌ ಟಿ20: ಅಮೇಯ, ಶೀನ್ ತಂಡಗಳಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೇಯ ಸ್ಪೋರ್ಟ್ಸ್ ಮತ್ತು ಶೀನ್‌ ಸ್ಪೋರ್ಟ್ಸ್ ತಂಡಗಳು ಫಾಲ್ಕನ್ ಸ್ಪೋರ್ಟ್ಸ್‌ ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಸೋಮವಾರ ಆರಂಭವಾದ ಮಹಿಳೆಯರ ಟಿ20 ಟೂರ್ನಿಯಲ್ಲಿ ಜಯ ಗಳಿಸಿದವು. ನಾಲ್ವರು ರಾಷ್ಟ್ರೀಯ ಆಟಗಾರ್ತಿಯರನ್ನು ಹೊಂದಿರುವ ಅಮೇಯ ತಂಡ ನಾಲ್ಕು ವಿಕೆಟ್‌ಗಳಿಂದ ಹೆರಾನ್ಸ್ ವಿರುದ್ಧ ಜಯ ಗಳಿಸಿದರೆ, ಶೀನ್ ತಂಡ 22 ರನ್‌ಗಳಿಂದ ಕಿಣಿ ಆರ್‌ ಎದುರು ಜಯ ಗಳಿಸಿತು.

ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೆರಾನ್ಸ್‌ ಆರಂಭದಲ್ಲಿ ಆಘಾತಕ್ಕೆ ಒಳಗಾಯಿತು. ಆದರೆ ದಿವ್ಯಜ್ಞಾನಾನಂದ ಮತ್ತು ಮಿನ್ನು ಮಣಿ ಅವರ ಉತ್ತಮ ಜೊತೆಯಾಟದ ಮೂಲಕ ತಂಡ ಚೇತರಿಕೆ ಕಂಡಿತು. ಮೂರು ಸಿಕ್ಸರ್ ಮತ್ತು 11 ಬೌಂಡರಿಗಳೊಂದಿಗೆ 55 ಎಸೆತಗಳಲ್ಲಿ 87 ರನ್ ಕಲೆ ಹಾಕಿದ ದಿವ್ಯಜ್ಞಾನಾನಂದ ಎರಡನೇ ವಿಕೆಟ್‌ಗೆ ಮಿನ್ನು ಮಣಿ ಜೊತೆಗೂಡಿ 95 ರನ್ ಸೇರಿಸಿದರು. ಹೀಗಾಗಿ ತಂಡ ಎರಡು ವಿಕೆಟ್‌ಗಳಿಗೆ 144 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. 

ಅಮೇಯ ತಂಡದ ಆರಂಭವೂ ಕಳಪೆಯಾಗಿತ್ತು. ಒಂಬತ್ತು ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಪ್ರೇರಣ ಮತ್ತು ಅನುಭವಿ ಬ್ಯಾಟರ್ ತಿರುಷಕಾಮಿನಿ ವಾಪಸಾಗಿದ್ದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ನಾಯಕಿ ವೇದಾ ಕೃಷ್ಣಮೂರ್ತಿ ಮತ್ತು ನಿಕ್ಕಿ ಪ್ರಸಾದ್ ತಂಡದ ರಕ್ಷಣೆಗೆ ನಿಂತರು. ವೇದಾ 35 ಎಸೆತಗಳಲ್ಲಿ 39 ರನ್ ಕಲೆ ಹಾಕಿದರೆ ನಿಕಿ 46 ಎಸೆತಗಳಲ್ಲಿ 61 ರನ್ ಗಳಿಸಿದರು. ಆದರೂ ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ ಆರು ರನ್ ಬೇಕಾಗಿದ್ದವು. ಹೀಗಾಗಿ ಪಂದ್ಯ ರೋಚಕ ಅಂತ್ಯ ಕಂಡಿತು. ಅನುಜಾ ಪಾಟೀಲ್ ದಿಟ್ಟ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಹೆರಾನ್ಸ್ ಸ್ಪೋರ್ಟ್ಸ್‌: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 144 (ದಿವ್ಯಜ್ಞಾನಾನಂದ ಔಟಾಗದೆ 87, ಮಿನ್ನು ಮಣಿ 35; ಆಕಾಂಕ್ಷಾ ಕೊಹ್ಲಿ 29ಕ್ಕೆ1, ಅನುಜಾ ಪಾಟೀಲ್ 26ಕ್ಕೆ1); ಅಮೇಯ ಸ್ಪೋರ್ಟ್ಸ್‌: 19.4 ಓವರ್‌ಗಳಲ್ಲಿ 6ಕ್ಕೆ 146 (ನಿಕ್ಕಿ ಪ್ರಸಾದ್ 61, ವೇದಾ ಕೃಷ್ಣಮೂರ್ತಿ 39; ಮೋನಿಕಾ ಪಟೇಲ್ 12ಕ್ಕೆ2, ಆಶಾ 24ಕ್ಕೆ1, ಅಕ್ಷಯ 21ಕ್ಕೆ1). ಫಲಿತಾಂಶ: ಅಮೇಯ ಸ್ಪೋರ್ಟ್ಸ್‌ಗೆ 4 ವಿಕೆಟ್‌ಗಳ ಜಯ. ಪಂದ್ಯದ ಶ್ರೇಷ್ಠ ಆಟಗಾರ್ತಿ: ದಿವ್ಯಜ್ಞಾನಾನಂದ.

ಜೆಮಿಮಾ, ದೀಪ್ತಿ ಮಿಂಚು

ಎರಡನೇ ಪಂದ್ಯದಲ್ಲಿ ರಾಷ್ಟ್ರೀಯ ತಂಡದ ಆಟಗಾರ್ತಿಯರಾದ ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಮಿಂಚಿದರು. ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡ ಶೀನ್ ತಂಡಕ್ಕೆ ಆರಂಭಿಕ ಬ್ಯಾಟರ್ ಜೆಮಿಮಾ (53; 44 ಎಸೆತ, 2 ಸಿಕ್ಸರ್‌, 5 ಬೌಂಡರಿ) ಬಲ ತುಂಬಿದರು. ಅವರಿಗೆ ಉತ್ತಮ ಸಹಕಾರ ನೀಡಿದ ನಾಲ್ಕನೇ ಕ್ರಮಾಂಕದ ದೀಪ್ತಿ ಶರ್ಮಾ (45; 34 ಎ, 1 ಸಿ, 6 ಬೌಂ) ತಂಡ 135 ರನ್ ಗಳಿಸಲು ನೆರವಾದರು. ಗುರಿ ಬೆನ್ನತ್ತಿದ ಕಿಣಿ ಆರ್‌.ಆರ್ ತಂಡ ಖಾತೆ ತೆರೆಯುವ ಮೊದಲೇ ಮಾಜಿ ರಾಷ್ಟ್ರೀಯ ಆಟಗಾರ್ತಿ ವಿ.ಆರ್‌.ವನಿತಾ ಅವರ ವಿಕೆಟ್ ಕಳೆದುಕೊಂಡಿತು. ನುಶತ್ ಪರ್ವೀನ್ 31 ಎಸೆತಗಳಲ್ಲಿ 31 ರನ್ ಗಳಿಸಿದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಶೀನ್ ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 4ಕ್ಕೆ 135 (ಜೆಮಿಮಾ ರಾಡ್ರಿಗಸ್ 53, ದೀಪ್ತಿ ಶರ್ಮಾ ಔಟಾಗದೆ 45; ಅರುಂಧತಿ ರೆಡ್ಡಿ 27ಕ್ಕೆ2); ಕಿಣಿ ಆರ್‌.ಆರ್: 20 ಓವರ್‌ಗಳಲ್ಲಿ 9ಕ್ಕೆ 113 (ನುಶತ್ ಪರ್ವೀನ್ 31, ಸೌಮ್ಯ ಗೌಡ ಔಟಾಗದೆ 20; ನಿರಂಜನ 22ಕ್ಕೆ2, ದೀಪ್ತಿ ಶರ್ಮಾ 6ಕ್ಕೆ1, ರಾಜೇಶ್ವರಿ 24ಕ್ಕೆ1, ಸಿಮ್ರನ್ 9ಕ್ಕೆ2, ಜೆಮಿಮಾ ರಾಡ್ರಿಗಸ್ 23ಕ್ಕೆ1, ರಕ್ಷಿತಾ 14ಕ್ಕೆ1). ಫಲಿತಾಂಶ: ಶೀನ್ ಸ್ಪೋರ್ಟ್ಸ್ ತಂಡಕ್ಕೆ 22 ರನ್‌ಗಳ ಜಯ. ಪಂದ್ಯದ ಶ್ರೇಷ್ಠ ಆಟಗಾರ್ತಿ: ದೀಪ್ತಿ ಶರ್ಮಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.