ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಚಕಮಕಿ: ವಿರಾಟ್ ಕೊಹ್ಲಿ, ಗೌತಮ್ ಗಂಭೀರ್‌ಗೆ ಪೂರ್ಣ ಪಂದ್ಯ ಶುಲ್ಕ ದಂಡ

Published 2 ಮೇ 2023, 14:19 IST
Last Updated 2 ಮೇ 2023, 14:19 IST
ಅಕ್ಷರ ಗಾತ್ರ

ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರಿಗೆ ದಂಡ ವಿಧಿಸಲಾಗಿದೆ. ಇಬ್ಬರೂ ತಮ್ಮ ಪಂದ್ಯ ಶುಲ್ಕವನ್ನು ಸಂಪೂರ್ಣವಾಗಿ ದಂಡ ರೂಪದಲ್ಲಿ ಭರಿಸಬೇಕಿದೆ.

ಸೋಮವಾರ ರಾತ್ರಿ ಏಕನಾ ಕ್ರೀಡಾಂಗಣದಲ್ಲಿ ಉಭಯ ತಂಡಗಳೂ ಮುಖಾಮುಖಿಯಾಗಿದ್ದವು. ಇದರಲ್ಲಿ ಆರ್‌ಸಿಬಿ ಜಯಗಳಿಸಿತು. ಪಂದ್ಯ ನಂತರ ವಿರಾಟ್ ಹಾಗೂ ಗೌತಮ್ ನಡುವೆ ಜಟಾಪಟಿ ನಡೆದಿತ್ತು. ಮಾತಿನ ಚಕಮಕಿ ತೀವ್ರಗೊಂಡಾಗ ಲಖನೌ ತಂಡದ ನಾಯಕ ಕೆ.ಎಲ್. ರಾಹುಲ್ ಮತ್ತು ಸಹ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಶಾಂತಗೊಳಿಸಲು ಪ್ರಯತ್ನಿಸಿದರು.   

ಪಂದ್ಯದ ನಂತರ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ಸಂದರ್ಭದಲ್ಲಿ ಲಖನೌ ತಂಡದ ನವೀನ್ ಉಲ್ ಹಕ್ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ನವೀನ್‌ಗೂ ಕೂಡ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ಹಾಕಲಾಗಿದೆ.

ಆರ್ಟಿಕಲ್ 2.21ನೇ ನಿಯಮವನ್ನು ಉಲ್ಲಂಘಿಸಿದ್ದರಿಂದ ದಂಡ ವಿಧಿಸಲಾಗಿದೆ. ‌

ದೆಹಲಿಯ ಗಂಭೀರ್ ಮತ್ತು ಕೊಹ್ಲಿ ಇಬ್ಬರೂ ಕೆಲವು ವರ್ಷಗಳ ಹಿಂದೆ ಭಾರತ ತಂಡದಲ್ಲಿ ಜೊತೆಗೆ ಆಡಿದವರು. 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಇಬ್ಬರೂ ಇದ್ದರು.

ಹತ್ತು ವರ್ಷಗಳ ಹಿಂದೆಯೂ ಐಪಿಎಲ್‌ನಲ್ಲಿ ಇವರಿಬ್ಬರಿಗೂ ಜಗಳ ನಡೆದಿತ್ತು. ಆಗ ಗಂಭೀರ್ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಬ್ಬರೂ ಮಾತಿನ ಚಕಮಕಿ ನಡೆಸಿದ್ದರು. 

ಆದರೆ ಈಗ ನಡೆದ ಪ್ರಕರಣಕ್ಕೆ ಹೋದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ  ನಡೆದಿದ್ದ ಘಟನೆಗೆ ಮುಯ್ಯಿ ಥೀರಿಸಿಕೊಳ್ಳಲು ಆರ್‌ಸಿಬಿ ಕಾದಿತ್ತು ಎಂದು ಆರ್‌ಸಿಬಿ ನಿರ್ದೇಶಕ ಮೈಕ್ ಹೆಸನ್ ಅಭಿಪ್ರಾಯಪಟ್ಟಿದ್ದಾರೆ. 

  ಏಪ್ರಿಲ್ 10ರಂದು ಉಭಯ ತಂಡಗಳು ಹಣಾಹಣಿ ನಡೆಸಿದ್ದವು. ಅದರಲ್ಲಿ ಲಖನೌ ರೋಚಕ ಜಯ ಸಾಧಿಸಿತ್ತು. ಆಗ ಪಂದ್ಯದ ನಂತರ ಕ್ರೀಡಾಂಗಣಕ್ಕೆ ಬಂದಿದ್ದ ಗಂಭೀರ್. ಆರ್‌ಸಿಬಿ ಅಭಿಮಾನಿಗಳತ್ತ ‘ಬಾಯಿ ಮುಚ್ಚಿಕೊಂಡಿರಿ’ ಎಂದು ಸಂಜ್ಞೆ ಮಾಡಿದ್ದರು. 

‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವತ್ತು ಆಗಿದ್ದ ಸೋಲು ಮತ್ತು ಘಟನೆಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ನಾವಿದ್ದೆವು.  ಈ ರೀತಿಯಾಗಿರುವುದು ಅದರ ಮುಂದುವರಿದ ಭಾಗವಾಗಿದೆ’ ಎಂದು ಆರ್‌ಸಿಬಿಯ ನಿರ್ದೇಶಕ ಮೈಕ್ ಹೆಸನ್ ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೊದಲ್ಲಿ ಹೇಳಿದ್ದಾರೆ. 

ಕೊಹ್ಲಿಯನ್ನು ಬೆಂಬಲಿಸಿರುವ ನಾಯಕ ಫಫ್ ಡುಪ್ಲೆಸಿ, ‘ವಿರಾಟ್ ಈ ರೀತಿ ಆಕ್ರಮಣಶೀಲರಾಗಿರುವುದನ್ನು ನೋಡಲು ಖುಷಿಯಾಗುತ್ತದೆ. ಅವರ ಅತ್ಯುಥ್ತಮ ಫಾರ್ಮ್ ಇದಾಗಿದೆ’ ಎಂದಿದ್ದಾರೆ. 

ಆದರೆ ಈ ಘಟನೆ ಕುರಿತು ಬೇಸರ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಗ ಅನಿಲ್ ಕುಂಬ್ಳೆ, ‘ಆಟದಲ್ಲಿ ಬಹಳಷ್ಷು ಭಾವಗಳು, ಆವೇಶ ಪ್ರಕಟವಾಗುವುದು ಸಾಮಾನ್ಯ. ಆದರೆ ಅದನ್ನು ಈ ರೀತಿ ತೋರಿಸುವುದು ಸರಿಯಲ್ಲ. ಇದನ್ನು ಒಪ್ಪಲಾಗದು’ ಎಂದಿದ್ದಾರೆ. 

‘ಪಂದ್ಯದಲ್ಲಿ ಪೈಪೋಟಿ ಇರಲಿ. ಆದರೆ ಒಮ್ಮೆ ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿ ಶುಭ ಕೋರಬೇಕು. ವೈಯಕ್ತಿಕ ಸಂಗತಿಗಳನ್ನು ಕ್ರೀಡಾಂಗಣದೊಳಗೆ ತರಬಾರದು. ಈ ನಡೆದಿರುವ ಘಟನೆ ಒಳ್ಳೆಯದಲ್ಲ’ ಎಂದು ಕುಂಬ್ಳೆ ಹೇಳಿದ್ದಾರೆ.

‘ಆರ್‌ಸಿಬಿಯ ವಿರಾಟ್ ಕೊಹ್ಲಿ  ಹಾಗೂ ಲಖನೌ  ಮೆಂಟರ್ ಗೌತಮ್ ಗಂಭೀರ್ ಅವರಿಗೆ  ಆರ್ಟಿಕಲ್ 2.21ರ ನಿಯಮದಲ್ಲಿ ಲೆವೆಲ್ 2 ಅಪರಾಧ ಎಂದು ಪರಿಗಣಿಸಿ ಸಂಪೂರ್ಣ ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ನವೀನ್ ಉಲ್ ಹಕ್ ಅವರದ್ದು ಲೆವೆಲ್ –1 ಅಪರಾಧವೆಂದು ಪರಿಗಣಿಸಿ ಶುಲ್ಕದ ಅರ್ಧಭಾಗ ದಂಡ ಹಾಕಲಾಗಿದೆ’ ಎಂದು ಐಪಿಎಲ್ ಆಡಳಿತ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Cut-off box - ವಿರಾಟ್–ಗೌತಮ ಕಿಡಿನುಡಿಗಳು.. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವಣ  ಕಿಡಿನುಡಿಗಳನ್ನು  ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿಸಂಸ್ಥೆಯ ಮುಂದೆ ಬಹಿರಂಗಪಡಿಸಿದ್ದಾರೆ.  ‘ಟಿವಿಯಲ್ಲಿ ನೀವು ನೋಡಿರಬಹುದು. ಲಖನೌ ತಂಡದ ಕೈಲ್ ಮೇಯರ್ಸ್  ತಮ್ಮನ್ನು  ಗುರಾಯಿಸಿದ್ದು ಯಾಕೆ ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಯಾಗಿ ಕೊಹ್ಲಿ ಕೂಡ ನೀವು ನನ್ನನ್ನು ಯಾಕೆ  ಗುರಾಯಿಸಿದಿರಿ ಎಂದು ಕೇಳಿದ್ದರು. ಇದು ಕಾವೇರುವ ಸಾಧ್ಯತೆಯನ್ನು ಗ್ರಹಿಸಿದ ಗೌತಮ್ ಗಂಭೀರ್ ಮಧ್ಯಪ್ರವೇಶಿಸಿ  ಮೇಯರ್ಸ್ ಅವರನ್ನು ಎಳೆದುಕೊಂಡು ಹೋದರು. ಆಗ ವಿರಾಟ್ ಅವರು ಗಂಭೀರ್‌ಗೆ ಏನೋ ಅಂದರು. ಇದರಿಂದ ಕುಪಿತರಾದ ಗೌತಮ್  ಏನೋ ಹೇಳ್ತಿದ್ದಿಯಲ್ಲ. ಹೇಳು ಅಂದರು’  ಎಂದು ಫ್ರತ್ಯಕ್ಷದರ್ಶಿ ಹೇಳಿದರು.

‘ನಾನು ನಿಮಗೇನೂ ಅಂದೇ ಇಲ್ಲ. ನೀವು ಯಾಕೆ ಮಧ್ಯ ಬರುತ್ತಿರುವಿರಿ’ ಎಂದು ಕೊಹ್ಲಿ ಗಂಭೀರ್ ಅವರನ್ನು ಪ್ರಶ್ನಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಗೌತಮ್ ‘ನನ್ನ ತಂಡದ ಆಟಗಾರನಿಗೆ ನೀನು ಬೈದಿದ್ದಿಯಾ. ಆದ್ದರಿಂದ ನನ್ನ ಕುಟುಂಬಕ್ಕೆ (ತಂಡ) ಬೈಯ್ದಂತೆ’ ಎಂದರು.  ‘ಹಾಗಿದ್ದರೆ ನಿಮ್ಮ ಕುಟುಂಬವನ್ನು ಜೋಪಾನ ಮಾಡಿಕೊಳ್ಳಿ’ ಎಂದು ವಿರಾಟ್ ಜೋರಾಗಿಯೇ ಪ್ರತಿಕ್ರಿಯಿಸಿದರು. ‘ಈಗ ನೀನು ನನಗೆ ಕಲಿಸುತ್ತಿಯಾ ಎಂದು ಗಂಭೀರ್ ಕೇಳಿದರು. ಆಗ ಸಹ ಆಟಗಾರರು ಇಬ್ಬರನ್ನೂ ಶಾಂತಗೊಳಿಸಲು ಪ್ರಯತ್ನಿಸಿ ಬೇರೆ ಕಡೆ  ಕರೆದೊಯ್ದರು.’ ಎಂದು ಪ್ರತ್ಯಕ್ಷದರ್ಶಿ ಹೇಳಿದರು.

‘ಎರಡು ಕಡೆಯಿಂದ ಮಕ್ಕಳ ಜಗಳದಂತೆ ಕಂಡಿತು’ ಎಂದರು. ಕೈಲ್ ಮೇಯರ್ಸ್ ಬ್ಯಾಟಿಂಗ್ ಮಾಡುವಾಗ ವಿರಾಟ್ ಗುರಾಯಿಸಿದ್ದರು. ಆಗಲೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಂಪೈರ್ ಮಧ್ಯಪ್ರವೇಶಿಸಿ ತಿಳಿಗೊಳಿಸಿದ್ದರು. ಲಖನೌ ತಂಡದ ಕೊನೆಯ ಬ್ಯಾಟರ್ ನವೀನ್ ಉಲ್ ಹಕ್ ಆವರನ್ನು ಕೊಹ್ಲಿ ಕೆಣಕಿದಾಗ  ನಾನ್‌ಸ್ಟ್ರೈಕರ್‌ ನಲ್ಲಿದ್ದ ಅಮಿತ್ ಮಿಶ್ರಾ ಅಂಪೈರ್‌ಗೆ ದೂರು ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT